ಒಂದು ವೇಳೆ ವಿವಾದಿತ ಮಸೂದೆಯ ಅಂಗೀಕಾರಕ್ಕೆ ಟಿಡಿಪಿ ಹಾಗೂ ಜೆಡಿಯು ಬೆಂಬಲಿಸಿದರೆ ಮುಸ್ಲಿಂ ಸಮುದಾಯ ಎರಡೂ ಪಕ್ಷಗಳಿಂದ ಬಹುತೇಕ ದೂರವಾಗಲಿದೆ. ಈ ಅಪಾಯಕಾರಿ ಮಸೂದೆಯನ್ನು ವಿರೋಧಿಸದಿದ್ದರೆ ದೇಶದ ಮುಸ್ಲಿಂ ಸಮುದಾಯ ಇಬ್ಬರು ನಾಯಕರನ್ನು ಎಂದಿಗೂ ಕ್ಷಮಿಸುವುದಿಲ್ಲ. ಜೊತೆಗೆ ಭವಿಷ್ಯತ್ತಿನಲ್ಲಿ ಎರಡು ಪಕ್ಷಗಳ ಮೇಲೆ ವಿಶ್ವಾಸ ಇಡುವುದಿಲ್ಲ
ರಂಜಾನ್ ಹಬ್ಬದ ನಂತರ ಕೇಂದ್ರ ಸರ್ಕಾರ ವಿವಾದಿತ ಹಾಗೂ ಮುಸ್ಲಿಂ ಸಮುದಾಯಕ್ಕೆ ಮಾರಕ ಎಂದು ಹೇಳಲಾಗುತ್ತಿರುವ ವಕ್ಫ್ ತಿದ್ದುಪಡಿ ಮಸೂದೆ-2024 ಅನ್ನು ಸಂಸತ್ತಿನಲ್ಲಿ ಅಂಗೀಕರಿಸಲಿದೆ. ಬಿಜೆಪಿ ಪಕ್ಷಕ್ಕಿಂತ ಭಿನ್ನ ನಿಲುವು ಹೊಂದಿರುವ, ಅಧಿಕಾರಕ್ಕಾಗಿ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಪಕ್ಷಗಳ ಜೊತೆ ಹಾವು ಏಣಿ ಆಟವಾಡುವ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥರಾಗಿರುವ ಎನ್ ಚಂದ್ರಬಾಬು ನಾಯ್ಡು, ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯು ಅಧ್ಯಕ್ಷರಾಗಿರುವ ನಿತೀಶ್ ಕುಮಾರ್ ಅವರು ವಕ್ಫ್ ತಿದ್ದುಪಡಿ ಮಸೂದೆಗೆ ಯಾವ ನಿಲುವು ತೆಗೆದುಕೊಳ್ಳುತ್ತಾರೆ ಎಂಬುದು ದೇಶದ ರಾಜಕೀಯದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಈ ಬಗ್ಗೆ ಇಬ್ಬರು ನಾಯಕರಿಂದ ಬಹಿರಂಗ ಹೇಳಿಕೆ ಬರದಿದ್ದರೂ ವಿವಾದಿತ ಮಸೂದೆಗೆ ಬೆಂಬಲಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಟಿಡಿಪಿಯ 16 ಹಾಗೂ ಜೆಡಿಯುನ 12 ಲೋಕಸಭಾ ಸ್ಥಾನಗಳು ಮಸೂದೆ ಅಂಗೀಕಾರಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ.
ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಅವರು ಮುಸ್ಲಿಂ ಸಮುದಾಯಕ್ಕೆ ವಿರೋಧಕಾರಿಯಾಗಿರುವ ಹಲವು ಕಾನೂನುಗಳು ಇರುವುದರಿಂದ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸುವಂತೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಸೇರಿದಂತೆ ದೇಶದ ಬಹುತೇಕ ರಾಜಕೀಯ ನಾಯಕರು ಹಾಗೂ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಮಂಡಳಿ ಒಳಗೊಂಡು ಹಲವಾರು ಸಂಘಸಂಸ್ಥೆಗಳು ಮನವಿ ಮಾಡಿದ್ದವು. ಆದರೆ ಇವರ ಯಾರ ಮೊರೆಗೂ ಇಬ್ಬರೂ ನಾಯಕರು ಕಿವಿಗೊಟ್ಟಿಲ್ಲ.
ಬಿಜೆಪಿಯ ರಾಜಕೀಯ ಸಿದ್ಧಾಂತಕ್ಕೆ ಹೋಲಿಕೆ ಮಾಡಿದರೆ ಟಿಡಿಪಿ ಹಾಗೂ ಜೆಡಿಯು ಮುಸ್ಲಿಂ ಸಮುದಾಯದೊಂದಿಗೆ ಹೆಚ್ಚು ದೂರವಾಗಿಲ್ಲ. ಎರಡೂ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಒಂದು ವರ್ಗದ ಮುಸ್ಲಿಂ ಮತದಾರರು ಈ ನಾಯಕರ ಕೈಹಿಡಿದಿದ್ದಾರೆ. ನಾಯ್ಡು ಮತ್ತು ನಿತೀಶ್ ಮುಖ್ಯಮಂತ್ರಿಯಾದಾಗಲೆಲ್ಲ ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಎರಡೂ ನಾಯಕರ ಪಕ್ಷಗಳನ್ನು ಬೆಂಬಲಿಸಿದ್ದಾರೆ. ರಾಜಕೀಯ ಸಭೆಗಳಲ್ಲಿ ಕೂಡ ತಮ್ಮ ಪಕ್ಷ ನಿಮ್ಮೊಟ್ಟಿಗೆ ಇರುತ್ತದೆಂದು ಈ ನಾಯಕರು ಸದಾ ಹೇಳುತ್ತಲೇ ಇರುತ್ತಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ತಮ್ಮ ಪಕ್ಷಗಳಿಂದ 28 ಸಂಸದರ ಬೆಂಬಲ ನೀಡಿ ಸರ್ಕಾರದ ಕೀಲಿಕೈಯನ್ನು ಹಿಡಿದುಕೊಂಡಿರುವ ಇಬ್ಬರೂ ನಾಯಕರು ಈಗ ಮುಸ್ಲಿಂ ಸಮುದಾಯಕ್ಕೆ ಆಪತ್ತು ಒದಗಿಸುವ ವಕ್ಫ್ ವಿವಾದಿತ ಮಸೂದೆಗೆ ಖಂಡಿತಾವಾಗಿ ವಿರೋಧ ವ್ಯಕ್ತಪಡಿಸಿ ಸಮುದಾಯದ ಜೊತೆ ನಿಲ್ಲಬೇಕಿದೆ. ಆದರೆ ಇತ್ತೀಚಿಗೆ ನಡೆಯುತ್ತಿರುವ ಪರಿಸ್ಥಿತಿಗಳನ್ನು ಗಮನಿಸಿದರೆ ಮಸೂದೆಗೆ ಬೆಂಬಲ ವ್ಯಕ್ತಪಡಿಸುವ ಸಾಧ್ಯತೆ ಹೆಚ್ಚಾಗಿದೆ.
ಒಂದು ವೇಳೆ ವಿವಾದಿತ ಮಸೂದೆಯ ಅಂಗೀಕಾರಕ್ಕೆ ಟಿಡಿಪಿ ಹಾಗೂ ಜೆಡಿಯು ಬೆಂಬಲಿಸಿದರೆ ಮುಸ್ಲಿಂ ಸಮುದಾಯ ಎರಡೂ ಪಕ್ಷಗಳಿಂದ ಬಹುತೇಕ ದೂರವಾಗಲಿದೆ. ಈ ಅಪಾಯಕಾರಿ ಮಸೂದೆಯನ್ನು ವಿರೋಧಿಸದಿದ್ದರೆ ದೇಶದ ಮುಸ್ಲಿಂ ಸಮುದಾಯ ಇಬ್ಬರು ನಾಯಕರನ್ನು ಎಂದಿಗೂ ಕ್ಷಮಿಸುವುದಿಲ್ಲ. ಜೊತೆಗೆ ಭವಿಷ್ಯತ್ತಿನಲ್ಲಿ ಎರಡು ಪಕ್ಷಗಳ ಮೇಲೆ ವಿಶ್ವಾಸ ಇಡುವುದಿಲ್ಲ. ಈ ದೇಶದ ಬಹುತೇಕ ಮುಸ್ಲಿಮೇತರರು ಮುಸ್ಲಿಂ ಸಮುದಾಯದ ಜೊತೆ ಸೌಹಾರ್ದ, ಸಹಬಾಳ್ವೆ ಬಯಸುತ್ತಾರೆ. ಆದರೆ ವಿವಾದಿತ ವಕ್ಫ್ ಮಸೂದೆ ಮುಸಲ್ಮಾನರನ್ನು ಗುರಿಯಾಗಿಸಿ ಜಾರಿಗೊಳಿಸಲಾಗುತ್ತಿದೆ ಎಂಬುದನ್ನು ಈ ದೇಶದ ಸರ್ವಧರ್ಮೀಯ ಜನರು ಅರಿತುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಮಗ್ರ ವರದಿ | ವಕ್ಫ್ ಬಗ್ಗೆ ಬಿಜೆಪಿ ಬಿತ್ತಿದ ಭಯಾನಕ ಸುಳ್ಳುಗಳು!
ಮುಸ್ಲಿಂ ಸಮುದಾಯವನ್ನು ಬೇರ್ಪಡಿಸುವ ಸಂಚು ಬಿಟ್ಟರೆ ಸಮುದಾಯಕ್ಕೆ ಯಾವುದೇ ಅನುಕೂಲವಾಗುವ ಅಂಶಗಳು ವಿವಾದಿತ ಮಸೂದೆಯಲ್ಲಿಲ್ಲ. ದೇಶಾದ್ಯಂತ ವಕ್ಫ್ ಒಡೆತನದ ಆಸ್ತಿಗಳ ಸುಧಾರಣೆ ಎಂದು ಹೇಳಲಾಗುತ್ತಿರುವ ಮಸೂದೆಯ ನಿಜವಾದ ಉದ್ದೇಶ ವಕ್ಫ್ ಕಾಯ್ದೆಯ ಅಡಿಪಾಯವನ್ನೇ ಹಾಳು ಮಾಡುವುದಾಗಿದೆ. ಪ್ರತಿಯೊಂದು ಪ್ರಸ್ತಾವಿತ ತಿದ್ದುಪಡಿಯು ಮುಸ್ಲಿಂ ಸಮುದಾಯದ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಮಾತ್ರವಲ್ಲದೆ ನಮ್ಮ ಸಂವಿಧಾನವು ಖಾತರಿಪಡಿಸಿದ ಮೂಲಭೂತ ಹಕ್ಕುಗಳ ಮೇಲೆ ನೇರ ದಾಳಿಯಾಗಿದೆ.
ಕಳೆದ ಒಂದು ದಶಕದಿಂದ ಸರ್ಕಾರ ನಡೆಸುತ್ತಿರುವ ಕೇಂದ್ರ ಸರ್ಕಾರ ಮುಸ್ಲಿಮರನ್ನು ವ್ಯವಸ್ಥಿತವಾಗಿ ಅವರ ಹಕ್ಕುಗಳಿಂದ ವಂಚಿತಗೊಳಿಸುತ್ತಿದೆ. ಅವರ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ. ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ವಂಚಿಸಲಾಗಿರುವ ಈ ಸಮಯದಲ್ಲೆ ಪ್ರಸ್ತಾವಿತ ವಕ್ಫ್ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಲು ಸರ್ವಪ್ರಯತ್ನ ನಡೆಸಲಾಗುತ್ತಿದೆ. ಜಂಟಿ ಸಂಸದೀಯ ಸಮಿತಿಗೆ ಸಲ್ಲಿಸಲಾದ ಭಿನ್ನಾಭಿಪ್ರಾಯದ ಟಿಪ್ಪಣಿಗಳ ರೂಪದಲ್ಲಿ ವಿರೋಧ ಪಕ್ಷಗಳು ಎತ್ತಿರುವ ಅನುಮಾನಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.
ಕೇಂದ್ರ ಸರ್ಕಾರವು ಪರಿಪೂರ್ಣ ಬಹುಮತವಿಲ್ಲದೆ ಎನ್‌ಡಿಎ ಮೈತ್ರೀಕೂಟದ ಪಕ್ಷಗಳ ಸಹಾಯದಿಂದ ಊರುಗೋಲು ಹಾಕಿಕೊಂಡು ನಡೆಯುತ್ತಿದೆ. ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬೆಂಬಲದಿಂದ ವಕ್ಫ್ ತಿದ್ದಿಪಡಿ ಕಾಯ್ದೆ ಅಂಗೀಕಾರವಾದರೆ ಅದರ ಪರಿಣಾಮವನ್ನು ಬಿಜೆಪಿ ಜೊತೆಗೆ ಎರಡೂ ಪಕ್ಷಗಳು ಅನುಭವಿಸಬೇಕಾಗುತ್ತದೆ. ಸಂಯುಕ್ತ ಜನತಾದಳ ಹಾಗೂ ತೆಲುಗು ದೇಶಂ ಪಕ್ಷಗಳು ಆಪತ್ತಿನಲ್ಲಿರುವ ಸಮುದಾಯವನ್ನು ಕೈಬಿಟ್ಟರೆ ಮುಂದೆಂದು ಇವರ ಬೆಂಬಲ ಸಿಗುವುದನ್ನು ಶಾಶ್ವತವಾಗಿ ಮರೆಯಬೇಕಿದೆ.
ಮಸೂದೆಯಲ್ಲಿರುವ ವಿವಾದಿತ ಅಂಶಗಳು
ತಿದ್ದುಪಡಿ ಮಸೂದೆಯನ್ವಯ ಯಾವುದೇ ಭೂಮಿಯನ್ನು ವಕ್ಫ್ ಆಸ್ತಿ ಅಥವಾ ಸರ್ಕಾರಿ ಭೂಮಿ ಎಂದು ನಿರ್ಧರಿಸುವ ಅಧಿಕಾರವನ್ನು ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಕೈಗೆ ನೀಡಬೇಕು. ಈ ಮೂಲಕ ವಕ್ಫ್ ನ್ಯಾಯಾಧಿಕರಣದಿಂದ ಅಧಿಕಾರವು ಜಿಲ್ಲಾಧಿಕಾರಿಗೆ ಹಸ್ತಾಂತರವಾಗಲಿದೆ. ಈ ರೀತಿ ಅಧಿಕಾರ ಹಸ್ತಾಂತರವಾದರೆ ವಕ್ಫ್ ಮಂಡಳಿ ಆಸ್ತಿಗಳ ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಗೆಯೇ ರಾಜ್ಯಗಳ ವಕ್ಫ್ ಮಂಡಳಿ ಜೊತೆಯಲ್ಲೇ ಕೇಂದ್ರೀಯ ವಕ್ಫ್ ಸಮಿತಿ ರಚನೆ, ಮುಸ್ಲಿಮೇತರ ಸದಸ್ಯರ ನೇಮಕ ಮಾಡಬೇಕೆಂದು ತಿದ್ದುಪಡಿ ಮಸೂದೆ ಹೇಳುತ್ತದೆ.ಈ ಅಂಶಕ್ಕೂ ಭಾರಿ ವಿರೋಧ ವ್ಯಕ್ತವಾಗುತ್ತದೆ.
ವಿವಾದಿದ ನಿಯಮಗಳಿಂದ ಮುಸ್ಲಿಮರಿಂದ ಮಸೀದಿಗಳು, ದರ್ಗಾಗಳು ಮತ್ತು ಸಮಾಧಿಗಳನ್ನು ಕಸಿದುಕೊಳ್ಳುವುದು ಈ ಮಸೂದೆಯ ಉದ್ದೇಶವಾಗಿದೆ. ದೇಗುಲ ಹಾಗೂ ಇತರ ಧರ್ಮಗಳ ಟ್ರಸ್ಟ್‌ಗಳು ಮುಖ್ಯವಾಗಿ ಆಯಾ ಧರ್ಮದವರ ನೇತೃತ್ವದಲ್ಲಿ ನಡೆಯುತ್ತವೆ. ಬೇರೆ ಧರ್ಮದವರಿಗೆ ಅಲ್ಲಿ ಪ್ರವೇಶವಿರುವುದಿಲ್ಲ. ವಕ್ಫ್ ಮಂಡಳಿಯಲ್ಲಿ ಏಕೆ ಬೇರೆಯವರ ಪ್ರವೇಶವೆಂಬುದು ಸಮುದಾಯದ ನಾಯಕರ ಆಕ್ಷೇಪವಾಗಿದೆ. ಈ ಅಂಶಗಳ ಜೊತೆಗೆ ಮುಸ್ಲಿಂ ಸಮುದಾಯದಿಂದ ವಕ್ಫ್ ಮಂಡಳಿಯ ಅಧಿಕಾರ ಕಿತ್ತುಕೊಳ್ಳುವ ಹಲವು ಕಾನೂನುಗಳನ್ನು ಸೇರಿಸಿರುವುದರಿಂದ ಸಮುದಾಯದ ನಾಯಕರು ವಿರೋಧಿಸಿದ್ದಾರೆ.
