ವಿಡಿಯೋ ನೋಡಿದ ಕೆಲವರು ಒತ್ತಡ ಮತ್ತು ಶಕ್ತಿಯ ಕೊರತೆಯಿಂದಾಗಿ ಈ ಅವಘಡ ಸಂಭವಿಸಿರಬಹುದು ಎಂದಿದ್ದಾರೆ. ಈಗಾಗಲೇ ವಿಮಾನದಲ್ಲಿರುವ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದ್ದು ಅದರ ಸಂಕೀರ್ಣ ತನಿಖೆ ನಡೆಯಲಿದೆ.
ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತದ ಬಗ್ಗೆ ಈಗಾಗಲೇ ಹಲವು ಸಂಸ್ಥೆಗಳು ತನಿಖೆ ಆರಂಭಿಸಿದೆ. 260ಕ್ಕೂ ಅಧಿಕ ಮಂದಿಯ ದಾರುಣ ಸಾವಿಗೆ ಕಾರಣವಾದ ಈ ದುರಂತಕ್ಕೆ ನೈಜ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಒಂದೆಡೆ ಬೋಯಿಂಗ್ 787ಯಲ್ಲಿದ್ದ ಸಮಸ್ಯೆಗಳ ಕುರಿತು ಚರ್ಚೆ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಈ ಅವಘಡಕ್ಕೆ ಪೈಲಟ್ ಮಾಡಿರುವ ಒಂದು ತಪ್ಪು ಕಾರಣವಾಗಿರಬಹುದು ಎಂಬ ಊಹೆಗಳಿವೆ. ತಜ್ಞರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಂತೆಯೇ ಹಲವು ಪ್ರಶ್ನೆಗಳು ಎದ್ದಿವೆ.
ಬ್ಲಾಕ್ ಬಾಕ್ಸ್ ಪತ್ತೆಯಾಗಿದ್ದು, ಅದರ ಪರಿಶೀಲನೆ ನಡೆಯಲಿದೆ. ಈ ನಡುವೆ ಇಂಜಿನ್ ದೋಷ, ಪೈಲಟ್-ಸಹ ಪೈಲಟ್ ಮಾಡಿದ ತಪ್ಪು, ಕಲ್ಮಶಗೊಂಡ ಇಂಧನ, ಹೀಗೆ ಹತ್ತು ಹಲವು ಕಾರಣಗಳು ಇರುವ ಸಾಧ್ಯತೆಯಿದೆ ಎಂಬುದು ತಜ್ಞರುಗಳ ಅಭಿಪ್ರಾಯ. ಕೆಲವು ಊಹಾಪೋಹಗಳೂ ತಲೆ-ಬಾಲ ಇಲ್ಲದೆ ಹರಿದಾಡುತ್ತಿದೆ. ಯಾವುದೋ ಹಳೆಯ ವಿಡಿಯೋಗಳನ್ನು ಈ ದುರಂತಕ್ಕೆ ತಳುಕು ಹಾಕಿ ವೈರಲ್ ಮಾಡಲಾಗುತ್ತಿದೆ.
ಇದನ್ನು ಓದಿದ್ದೀರಾ? ಬೋಯಿಂಗ್ 787 ವಿಮಾನಗಳ ತಾಂತ್ರಿಕ ದೋಷಗಳ ಬಗ್ಗೆ ಎಚ್ಚರಿಸಿದ್ದ ಎಂಜಿನಿಯರ್ ನಿಗೂಢ ಸಾವು; ಮತ್ತೆ ಮುನ್ನೆಲೆಗೆ
ಹೀಗೆ ಹಲವು ಸುಳ್ಳು ಸುದ್ದಿಗಳ ನಡುವೆಯೂ ನೈಜತೆಗೆ ಹತ್ತಿರವಿರುವ ಕೆಲವು ಪ್ರಶ್ನೆಗಳು ಎದ್ದಿವೆ. ತಜ್ಞರು ಅದನ್ನು ತಮ್ಮ ಅನುಭವದ ಆಧಾರದಲ್ಲಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಬೋಯಿಂಗ್ ವಿಮಾನವು ಟೇಕ್ ಆಫ್ ಆದ ಕೆಲವೇ ಕೆಲವು ಸೆಕೆಂಡುಗಳಲ್ಲಿ, ಅಂದರೆ ಬರೀ 1.5 ಕಿಲೋ ಮೀಟರ್ ಸಾಗುವಾಗಲೇ ಮೇಲೇರಲಾಗದೆ ಕೆಳಕ್ಕೆ ಪತನಗೊಂಡಿದೆ. ಈ ಬಗ್ಗೆ ಕೆಲವು ಮಾಧ್ಯಮಗಳು ತಜ್ಞರನ್ನು ಸಂಪರ್ಕಿಸಿದೆ. ಭಿನ್ನ ವಿಭಿನ್ನ ಅಭಿಪ್ರಾಯಗಳು ಕೇಳಿಬಂದಿದೆ.
ಎತ್ತರಕ್ಕೆ ಹಾರದಿರಲು ಕಾರಣವೇನು?
ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನದ ಪೈಲೆಟ್ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಮತ್ತು ಸಹ ಪೈಲೆಟ್ ಕ್ಲಿವ್ ಕುಂದರ್. ಇಬ್ಬರೂ ನುರಿತ ಪೈಲೆಟ್‌ಗಳಾಗಿದ್ದು, 22 ವರ್ಷ ಅನುಭವ ಹೊಂದಿದ್ದವರು ಮತ್ತು ಎಂಟು ಸಾವಿರಕ್ಕೂ ಅಧಿಕ ಅವಧಿ ವಿಮಾನ ಹಾರಾಟ ನಡೆಸಿದ್ದವರು. ಹಾಗಾಗಿ ಅವರ ತಪ್ಪು ಬೊಟ್ಟು ಮಾಡುವುದು ಕೊಂಚ ಕಷ್ಟ. ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳುವಂತೆ ವಿಮಾನವು ಅಹಮದಾಬಾದ್‌ನಿಂದ ಹೊರಟಾಗ 100 ಟನ್ ಇಂಧನವನ್ನು ಹೊಂದಿತ್ತು. ಹಾಗಾಗಿ ಇಂಧನ ಕೊರತೆ ಪ್ರಶ್ನೆ ಇಲ್ಲ.
ಟೇಕ್ ಆಫ್ ಆದ ತಕ್ಷಣ ವಿಮಾನ ಚಾಲನಾ ಕೊಠಡಿ(cockpit) ಮೇಡೇ ಕರೆ ಬಂದಿದೆ ಎಂದು ವಾಯುಯಾನ ನಿಯಂತ್ರಕ ತಿಳಿಸಿದೆ. ಅದಾದ ನಂತರ ವಿಮಾನದಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಅಷ್ಟರಲ್ಲೇ ವಿಮಾನ ಪತನವಾಗಿದೆ. ಮೇಡೇ ಕರೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಮೇಡೇ ಎಂಬುದು ಫ್ರೆಂಚ್ ಮೂಲದ ಪದವಾಗಿದ್ದು, 1920ರ ದಶಕದ ಆರಂಭದಲ್ಲಿ ಬಳಕೆಗೆ ತರಲಾಗಿತ್ತು. ಮೇಡೇ ಎಂಬ ಪದವು ಫ್ರೆಂಚ್ ಪದಗುಚ್ಛವಾದ ಮೈಡರ್(ನನಗೆ ಸಹಾಯ ಮಾಡಿ)ನಿಂದ ಬಂದಿದೆ. ಸಹಾಯ ಕೋರಿ ಮೇಡೇ ಕರೆ ಬಂದಿದೆ. ಆದರೆ ಈವರೆಗೂ ವಿಮಾನ ಎತ್ತರಕ್ಕೆ ಹಾರದಿರಲು ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.
ಡಬಲ್ ಎಂಜಿನ್ ವೈಫಲ್ಯವೆಂಬ ಊಹಾಪೋಹ
“ಎರಡೂ ಎಂಜಿನ್‌ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿರಬಹುದು. ಇದರಿಂದಾಗಿ ಕೆಲವೇ ಸೆಕೆಂಡುಗಳಲ್ಲಿ ಅವಘಡ ನಡೆದುಬಿಟ್ಟಿದೆ” ಎಂಬುದು ಪೈಲಟ್ ಒಬ್ಬರ ಅಭಿಪ್ರಾಯ. ಆದರೆ ಈ ರೀತಿ ನಡೆಯುವುದು ಅತಿ ಅಪರೂಪ ಎನ್ನಬಹುದು. ಆದರೆ ಬರೀ ವಿಡಿಯೋ ನೋಡಿಯೇ ಖಚಿತ ಕಾರಣ ಹೇಳುವುದು ಅಸಾಧ್ಯ ಎನ್ನುತ್ತಾರೆ ಇನ್ನೂ ಕೆಲವು ತಜ್ಞರು. ಆದರೆ ವಿಡಿಯೋ ನೋಡಿದ ಕೆಲವರು ಒತ್ತಡ ಮತ್ತು ಶಕ್ತಿಯ ಕೊರತೆಯಿಂದಾಗಿ ಈ ಅವಘಡ ಸಂಭವಿಸಿರಬಹುದು ಎಂದಿದ್ದಾರೆ. ಈಗಾಗಲೇ ವಿಮಾನದಲ್ಲಿರುವ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದ್ದು ಅದರ ಸಂಕೀರ್ಣ ತನಿಖೆ ನಡೆಯಲಿದೆ.
ಇದನ್ನು ಓದಿದ್ದೀರಾ? ಅಹಮದಾಬಾದ್ ವಿಮಾನ ದುರಂತಕ್ಕೆ ಇದೇ ಮುಖ್ಯ ಕಾರಣ: ಕ್ಯಾಪ್ಟನ್ ಸ್ಟೀವ್ ವಿವರಣೆ
ಕೆಲವು ತಜ್ಞರು ಡಬಲ್ ಎಂಜಿನ್ ವೈಫಲ್ಯದಂತಹ ಅತಿ ಅಪರೂಪದ ಕಾರಣದೆಡೆ ಬೊಟ್ಟು ಮಾಡಿದ್ದಾರೆ. ಹಾಗೆಂದು ಈ ಸಮಸ್ಯೆ ಎಂದಿಗೂ ಕಾಣಿಸಿಕೊಂಡಿಲ್ಲ ಎಂದಲ್ಲ. 2009ರ ‘ಮಿರಾಕಲ್ ಆನ್ ದಿ ಹಡ್ಸನ್’ ಯುಎಸ್ ಏರ್‌ವೇಸ್ ಏರ್‌ಬಸ್ A320 ನ್ಯೂಯಾರ್ಕ್‌ನ ಲಾಗ್ವಾರ್ಡಿಯಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪಕ್ಷಿ ಡಿಕ್ಕಿ ಹೊಡೆದು ಎರಡೂ ಎಂಜಿನ್‌ಗಳು ವೈಫಲ್ಯವಾಗಿತ್ತು, ಆದರೆ ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತು.
ಈ ಬಗ್ಗೆ ಬಿಬಿಸಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಎಂಜನಿಯರ್ ಒಬ್ಬರು ಇಂಧನ ಮಾಲಿನ್ಯ ಅಥವಾ ಅಡಚಣೆಯಿಂದಾಗಿ ಡಬಲ್ ಎಂಜಿನ್ ವೈಫಲ್ಯ ಉಂಟಾಗಿರಬಹುದು ಎಂದು ಅಭಿಪ್ರಾಯಿಸಿದ್ದಾರೆ. ಆದರೆ ಮಾಜಿ ಪೈಲಟ್ ಮಾರ್ಕೊ ಚಾನ್, “ವಿಡಿಯೋ ನೋಡಿದಾಗ ಡಬಲ್ ಎಂಜಿನ್ ವೈಫಲ್ಯವನ್ನು ಸೂಚಿಸುವ ಯಾವುದೇ ಪುರಾವೆಗಳಿಲ್ಲ” ಎಂದಿದ್ದಾರೆ. ಡಬಲ್ ಎಂಜಿನ್ ವೈಫಲ್ಯವು ‘ಬಹಳ ಅಪರೂಪ’ ಎನ್ನುತ್ತಾರೆ ವಿಮಾನಯಾನ ತಜ್ಞ ಮೋಹನ್ ರಂಗನಾಥನ್.
ಪಕ್ಷಿ ಡಿಕ್ಕಿ ಹೊಡೆದಿರುವ ಸಾಧ್ಯತೆ
ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡದ ಕಾರಣ ಈ ಅಪಘಾತ ಸಂಭವಿಸಿರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. 2024ರ ಡಿಸೆಂಬರ್ 29ರಂದು ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೆಜು ಏರ್ ಅಂತಾರಾಷ್ಟ್ರೀಯ ವಿಮಾನ 7C2216 ಅಪಘಾತಕ್ಕೀಡಾಗಿದ್ದು, ಎಲ್ಲಾ 175 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಗಳಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಇದು ದಕ್ಷಿಣ ಕೊರಿಯಾದ ನೆಲದಲ್ಲಿ ನಡೆದ ಅತ್ಯಂತ ಭೀಕರ ವಿಮಾನ ದುರಂತವಾಗಿದೆ. ಇದು ಅಪಘಾತವು ಪಕ್ಷಿ ಡಿಕ್ಕಿ ಹೊಡೆದು ಸಂಭವಿಸಿದೆ.
ಅಹಮದಾಬಾದ್ ವಿಮಾನ ನಿಲ್ದಾಣದ ಬಗ್ಗೆ ತಿಳಿದಿರುವವರ ಪ್ರಕಾರ ಈ ಪ್ರದೇಶದಲ್ಲಿ ಪಕ್ಷಿಗಳ ಹಾರಾಟ ಅಧಿಕವಾಗಿದೆ. ವಿಮಾನಯಾನ ತಜ್ಞ ಮೋಹನ್ ರಂಗನಾಥನ್ ಹೇಳುವಂತೆ ಈ ಪ್ರದೇಶದಲ್ಲಿ ಹೆಚ್ಚಾಗಿ ಪಕ್ಷಿಗಳು ಹಾರಾಟ ನಡೆಸುತ್ತದೆ. ಒಂದು ವೇಳೆ ಹಕ್ಕಿ ಡಿಕ್ಕಿಯಾಗಿ ಎರಡು ಎಂಜಿನ್‌ಗಳು ವೈಫಲ್ಯವಾಗಿದ್ದರೆ ಇದು ಅತೀ ವಿರಳವಾದ ಅಪಘಾತವಾಗಲಿದೆ ಎನ್ನುತ್ತಾರೆ ಹಿರಿಯ ಪೈಲಟ್‌ಗಳು.
2024: Just before “committing suicide”, Boeing whistleblower John Barnett warned of major quality issues in the company's 787 aircraft that could lead to a fatal crash. 👀
— James Li (@5149jamesli) June 12, 2025
Today: Air India Boeing 787 bound for London crashes shortly after takeoff killing 242 people.
RIP 😢 pic.twitter.com/NwGtpqpKLR
2023ರ ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ನಾಗರಿಕ ವಿಮಾನಯಾನ ಸಚಿವಾಲಯದ ದತ್ತಾಂಶದ ಪ್ರಕಾರ, ಗುಜರಾತ್‌ನಲ್ಲಿ ಐದು ವರ್ಷಗಳಲ್ಲಿ ವಿಮಾನಗಳಿಗೆ ಪಕ್ಷಿ ಡಿಕ್ಕಿ ಹೊಡೆದ 462 ಘಟನೆಗಳು ನಡೆದಿದೆ. ಈ ಪೈಕಿ ಹೆಚ್ಚಿನವು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿವೆ.
ವಿಮಾನಯಾನ ತಜ್ಞ ಮತ್ತು ಅನುಭವಿ ಪೈಲಟ್ ಕ್ಯಾಪ್ಟನ್ ಸ್ಟೀವ್ ಅವರು ತಾಂತ್ರಿಕವಾಗಿ ಯಾವೆಲ್ಲ ದೋಷಗಳು ಕಾರಣವಾದವು ಎಂಬುದರ ಬಗ್ಗೆ ವಿವರಿಸಿದ್ದಾರೆ. ಅಪಘಾತಕ್ಕೆ ಎಂಜಿನ್ ವೈಫಲ್ಯಕ್ಕಿಂತ ಹೆಚ್ಚಾಗಿ ಇತರ ಅನೇಕ ಕಾರಣಗಳಿವೆ. ಅಪಘಾತಕ್ಕೀಡಾದ ವಿಮಾನದ ಲಿಫ್ಟ್ ಸರಿ ಇರಲಿಲ್ಲ. ಫ್ಲಾಪ್ ಸೆಟ್ಟಿಂಗ್ ತೀರಾ ಅಸಮರ್ಪಕವಾಗಿತ್ತು ಎಂದು ಹೇಳಿದ್ದಾರೆ.
ಹೀಗೆ ಹಲವು ಸಾಧ್ಯತೆಗಳ ಮೇಲೆ ತಜ್ಞರು, ಅನುಭವಿ ಪೈಲಟ್‌ಗಳು ಬೆಳಕು ಚೆಲ್ಲಿದ್ದಾರೆ. ಆದರೆ ನಾವೀಗ ಚರ್ಚಿಸಬೇಕಾಗಿದ್ದು ಬೋಯಿಂಗ್ 787ರಲ್ಲಿ ಈ ಹಿಂದೆಯೂ ಹಲವು ಬಾರಿ ಕಾಣಿಸಿಕೊಂಡಿರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ. ಜೊತೆಗೆ ಈ ದೋಷಗಳತ್ತ ಬೊಟ್ಟು ಮಾಡಿ ನಿಗೂಢವಾಗಿ ಮೃತಪಟ್ಟ ಎಂಜಿನಿಯರ್ ಜಾನ್ ಬರ್ನೆಟ್ ಕುರಿತು. ಅಪಘಾತಕ್ಕೆ ಕಾರಣವೇನು ಎಂಬ ತನಿಖೆ ವೇಳೆ ಪೈಲಟ್‌ನತ್ತ ಬೆರಳು ತೋರಲಾಗುತ್ತಿದೆ. ಬೋಯಿಂಗ್ 787 ವಿಮಾನದಲ್ಲಿ ಭಾರಿ ಅನಾಹುತ ಸಂಭವಿಸಿದ್ದರೂ ಈ ಸುದ್ದಿ ಮಾಧ್ಯಮಕ್ಕೆ ಪ್ರಮುಖ ಎನಿಸದೆ ಇರುವುದು ವಿಪರ್ಯಾಸ. ಬೋಯಿಂಗ್ ಸಂಸ್ಥೆಯ ವಿರುದ್ಧ ಮಾತನಾಡಲು ಹಿಂಜರಿಕೆಯೇ ಅಥವಾ ತಾಂತ್ರಿಕ ದೋಷವಿರುವ ವಿಮಾನ ಹಾರಾಟಕ್ಕೆ ಇಳಿಸಿದ ಏರ್ ಇಂಡಿಯಾ ಸಮಸ್ಥೆ ವಿರುದ್ಧ ಧನಿ ಎತ್ತಲಾಗದೆ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.