ಉಡುಪಿಯ ಕಾಲೇಜಿನಲ್ಲಿ ನಡೆದಿದ್ದೇನು? ಬಿಜೆಪಿ ನಾಯಕರು ಹೇಳುತ್ತಿರುವುದೇನು? ಇಲ್ಲಿದೆ ವಿವರ

Date:

Advertisements
ಕಳೆದ ವರ್ಷ ಇದೇ ಸಮಯದಲ್ಲಿ ಕರಾವಳಿ ಜಿಲ್ಲೆ ಉಡುಪಿಯ ಕಾಲೇಜಿನಲ್ಲಿ ಹುಟ್ಟಿಕೊಂಡ  ಹಿಜಾಬು ವಿವಾದದ ಕಿಚ್ಚು ಇಡೀ ದೇಶದಲ್ಲೇ ಸುದ್ದಿ ಮಾಡಿತ್ತು. ಅಲ್ಲಿಂದ ಶುರುವಾದ ಇಸ್ಲಾಮೊಫೋಬಿಯಾದ ನಂಜು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರುವವರೆಗೆ ಹಬ್ಬಿತ್ತು. ಈಗ ಮತ್ತೆ ಅಂತಹದ್ದೇ ಒಂದು ಆತಂಕ ಸೃಷ್ಟಿಸುವ ಸುದ್ದಿ ಉಡುಪಿ ಜಿಲ್ಲೆಯಿಂದ ಬಂದಿದೆ. ಕಾಲೇಜು ಅಂಗಳದಲ್ಲೇ ಪ್ರಕರಣ ಇತ್ಯರ್ಥ ಆಗಿದ್ದರೂ ಅದನ್ನು ಅಲ್ಲಿಂದಾಚೆಗೆ ಬೆಳೆಸುವ ಹಟಕ್ಕೆ ಬಿಜೆಪಿ ಮುಖಂಡರು ಬಿದ್ದಂತಿವೆ.

ಹದಿಹರೆಯದ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಮಾಡಿಕೊಂಡ ದುಬಾರಿ ಚೇಷ್ಟೆಯೊಂದು ಕೋಮು ಬಣ್ಣ ಪಡೆಯುವ ಹಂತಕ್ಕೆ ತಲುಪಿದೆ. ಪ್ರಾಂಶುಪಾಲರ ಕೊಠಡಿಯೊಳಗೆ ಬಗೆಹರಿದ ಇದೇ ವಿಚಾರ ಈಗ ಸೋಲಿನ ಹತಾಶೆಯಲ್ಲಿರುವ ಬಿಜೆಪಿಯ ನಾಯಕರಿಗೆ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಲು ಮತ್ತು ಕೋಮು ದ್ವೇಷ ಹರಡಲು ಇದೊಂದು ಅಸ್ತ್ರವಾಗಿದೆ.

ಹಿಜಾಬ್‌ ವಿವಾದ ಸದ್ದು ಮಾಡಿದ ಉಡುಪಿಯಲ್ಲೇ, ಸರಿಯಾಗಿ ಒಂದು ವರ್ಷಕ್ಕೆ ಮತ್ತೊಮ್ಮೆ ಕಾಲೇಜು ಅಂಗಳ ಕೋಮು ಸೂಕ್ಷ್ಮ ಬೆಳವಣಿಗೆಗೆ ಸಾಕ್ಷಿಯಾಗುತ್ತಿರುವುದು ಜಿಲ್ಲೆಯ ಮಟ್ಟಿಗೆ ಕೆಟ್ಟ ಬೆಳವಣಿಗೆಯೇ ಸರಿ. ದೊಡ್ಡ ವಿವಾದವಾಗುವ ಲಕ್ಷಣಗಳು ಇಲ್ಲದಿದ್ದರೂ ಹೇಗಾದರೂ ಮಾಡಿ ವಿವಾದ ಮಾಡಲೇ ಬೇಕು ಎಂಬ ಹಟಕ್ಕೆ ಬಿಜೆಪಿ ಮುಖಂಡರು, ಮತೀಯ ಹಿಂದುತ್ವವಾದಿ ಸಂಘಟನೆಗಳು ಬಿದ್ದಂತಿವೆ. ಹೇಳಿಕೇಳಿ ಕಳೆದ ವರ್ಷ ಉಡುಪಿಯ ಕಾಲೇಜಿನೊಳಗೆ ನುಗ್ಗಿ ಹಿಜಾಬು ಧರಿಸಿದ್ದ ವಿದ್ಯಾರ್ಥಿನಿಯರನ್ನು ಹೊರಗೆ ಹಾಕಿಸಿದ್ದ ಆಸಾಮಿ ಯಶ್‌ಪಾಲ್‌ ಸುವರ್ಣ ಈಗ ಅಲ್ಲಿನ ಶಾಸಕ!

ವಿವಾದಕ್ಕೆ ಗ್ರಾಸವಾದ ಪ್ರಕರಣ ಏನು?
ಕೆಲ ದಿನಗಳ ಹಿಂದೆ ಉಡುಪಿಯ ಕಾಲೇಜೊಂದರ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಗೆಳತಿ ಶೌಚಾಲಯದಲ್ಲಿದ್ದಾಗ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಹುಡುಗಾಟದಿಂದ ಮಾಡಿದ ಆ ವಿಡಿಯೊವನ್ನು ಆ ಗೆಳತಿಗೆ ತೋರಿಸಿ ಡಿಲಿಟ್‌ ಕೂಡಾ ಮಾಡಿದ್ದರು. ಇದರಿಂದ ನೊಂದ ವಿದ್ಯಾರ್ಥಿನಿ ಬೇರೆ ಗೆಳತಿಯರ ಜೊತೆ ಹೇಳಿಕೊಂಡಿದ್ದಳು. ಆ ವಿದ್ಯಾರ್ಥಿಗಳು ಆಡಳಿತ ಮಂಡಳಿಯ ಗಮನಕ್ಕೆ ತಂದಿದ್ದರು. ಪ್ರಾಂಶುಪಾಲರು ವಿಚಾರಣೆ ನಡೆಸಿ ಕಾಲೇಜಿನಲ್ಲಿ ಮೊಬೈಲ್‌ ನಿಷೇಧ ಇದ್ದರೂ ಮೊಬೈಲ್‌ ತಂದಿರುವುದು ಮತ್ತು ವಿಡಿಯೋ ಮಾಡಿರುವ ತಪ್ಪಿಗಾಗಿ ಮೂವರನ್ನು ಅಮಾನತು ಮಾಡಿದ್ದರು. ಸಂತ್ರಸ್ತ ವಿದ್ಯಾರ್ಥಿನಿ ಪೊಲೀಸರಿಗೆ ದೂರು ಕೊಡದಿದ್ದರೂ ಆಡಳಿತ ಮಂಡಳಿಯವರೇ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ತಪ್ಪಿತಸ್ಥ ವಿದ್ಯಾರ್ಥಿನಿಯರ ಮೊಬೈಲ್‌ಗಳನ್ನು ತಪಾಸಣೆಗಾಗಿ ಪೊಲೀಸರಿಗೂ ಒಪ್ಪಿಸಿದ್ದರು.

Advertisements

ಈ ಮಧ್ಯೆ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ವಿಡಿಯೋವನ್ನು ಹರಿಯಬಿಟ್ಟು ಉಡುಪಿಯ ವಿದ್ಯಾರ್ಥಿನಿಯರು ಚಿತ್ರೀಕರಿಸಿದ ವಿಡಿಯೋ ಎಂದೂ, ಮುಸ್ಲಿಂ ವಿದ್ಯಾರ್ಥಿನಿಯರು ಉದ್ದೇಶಪೂರ್ವಕವಾಗಿ ಹಿಂದೂ ವಿದ್ಯಾರ್ಥಿನಿಯರ ಬಾತ್‌ ರೂಂ ವಿಡಿಯೋ ಚಿತ್ರೀಕರಿಸಿ ಯುವಕನೊಬ್ಬನಿಗೆ ಕಳುಹಿಸುತ್ತಿದ್ದರು. ಆತ ಅವುಗಳನ್ನು ಬೇರೆ ಬೇರೆ ವಾಟ್ಸಪ್‌ ಗ್ರೂಪ್‌ಗಳಲ್ಲಿ ಹಂಚುತ್ತಿದ್ದ ಎಂಬ ಕಪೋಲ ಕಲ್ಪಿತ ಸುದ್ದಿಗಳನ್ನು ಹರಿಯಬಿಟ್ಟಿದ್ದಾರೆ. ಬಿಜೆಪಿಯ ಹಲವು ನಾಯಕರು ಟ್ವೀಟ್‌ ಮಾಡಿ ಅನ್ಯ ಕೋಮಿನ ವಿದ್ಯಾರ್ಥಿನಿಯರ ರಕ್ಷಣೆಗೆ ಕಾಂಗ್ರೆಸ್‌ ಸರ್ಕಾರ ನಿಂತಿದೆ ಎಂದು ಟೀಕಿಸಿದ್ದಾರೆ. ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ಕೂಡಾ ಟ್ವೀಟ್‌ ಮಾಡಿ ಕೋಮು ಬಣ್ಣ ಬಳಿದಿದ್ದರು.

ಆದರೆ, ಈ ಪ್ರಕರಣದಲ್ಲಿ ಮುಚ್ಚಿ ಹಾಕುವ ಅಥವಾ ಯಾರನ್ನೋ ರಕ್ಷಣೆ ಮಾಡುವ ಪ್ರಮೇಯವೇ ಬಂದಿಲ್ಲ. ಯಾಕೆಂದರೆ ವಿಡಿಯೋ ಮಾಡಿದ ಹುಡುಗಿಯರು ಸಂತ್ರಸ್ತ ಗೆಳತಿಗೆ ತೋರಿಸಿ ಕ್ಷಮೆ ಕೇಳಿ ಡಿಲಿಟ್‌ ಮಾಡಿದ್ದರು. ಆ ನಂತರ ಆಡಳಿತ ಮಂಡಳಿಯ ಗಮನಕ್ಕೆ ಬಂದಿದೆ. ಅವರು ಸ್ವಯಂಪ್ರೇರಣೆಯಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

“ಈ ಘಟನೆ ಬೆಳಕಿಗೆ ಬಂದ ಕೂಡಲೇ ಕಾರ್ಯೋನ್ಮುಖರಾದ ಕಾಲೇಜಿನ ಆಡಳಿತ ಮಂಡಳಿಯು, ಆರೋಪಿಗಳಾದ ಮೂವರು ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತು ಮಾಡಿದ್ದಾರೆ. ತೀವ್ರವಾಗಿ ಮನನೊಂದಿದ್ದ ಶೋಷಿತ ವಿದ್ಯಾರ್ಥಿನಿಯು ಪೊಲೀಸರಿಗೆ ದೂರನ್ನು ನೀಡಲು ಹಿಂದೇಟು ಹಾಕಿದ್ದಳು. ಹಾಗಾಗಿ, ಕಾಲೇಜು ಆಡಳಿತ ಮಂಡಳಿಯೇ, ಪೊಲೀಸರಿಗೆ ಸುದ್ದಿಯನ್ನು ಮುಟ್ಟಿಸಿದೆ. ಪೊಲೀಸರು ಬಂದು ಪ್ರಾಥಮಿಕ ವಿಚಾರಣೆ ನಡೆಸುವಾಗ ಕೃತ್ಯಕ್ಕೆ ಬಳಸಲಾಗಿರುವ ಫೋನ್ ಗಳನ್ನು ಪೊಲೀಸರಿಗೆ ಒಪ್ಪಿಸಿದೆ” ಎಂದು ಕಾಲೇಜು ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದರು.

ಕಿಚ್ಚು ಹಚ್ಚಿದ್ದ ರಶ್ಮಿ ಸಾಮಂತ್ ಟ್ವೀಟ್‌

ಈ ಮಧ್ಯೆ ಪ್ರಕರಣದ ಬಗ್ಗೆ ಟ್ವೀಟ್‌ ಮಾಡಿದ್ದ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷೆ ಉಡುಪಿಯವರೇ ಆದ ರಶ್ಮಿ ಸಾಮಂತ್‌, “ನಾನು ಸಹ ಉಡುಪಿಯವಳೇ. ಉಡುಪಿಯಲ್ಲಾಗಿರುವ ಸ್ನಾನದ ದೃಶ್ಯಗಳ ಚಿತ್ರೀಕರಣ ಪ್ರಕರಣದಲ್ಲಿ ಆರೋಪಿಗಳಾಗಿರುವ ಅನ್ಯಕೋಮಿನ ವಿದ್ಯಾರ್ಥಿನಿಯರ ವಿರುದ್ಧ ಯಾರೂ ಅಲ್ಲಿ ಬೆರಳು ತೋರಿಸುತ್ತಿಲ್ಲ” ಎಂದು ಟ್ವೀಟ್‌ ಮಾಡುವ ಮೂಲಕ ಕೋಮುದ್ವೇಷದ ಕಿಚ್ಚಿಗೆ ತುಪ್ಪ ಸುರಿದಿದ್ದರು. ʼಸ್ನಾನದ ದೃಶ್ಯ ಚಿತ್ರೀಕರಿಸಲಾಗಿದೆʼ ಎಂಬ ಸುಳ್ಳನ್ನು ಆಕೆ ಪೂರ್ಣ ಮಾಹಿತಿ ಇಲ್ಲದೇ ಬರೆದದ್ದಾ ಅಥವಾ ಇದೊಂದು ಷಡ್ಯಂತ್ರದ ಟ್ವೀಟಾ ಎಂಬುದು ಗೊತ್ತಿಲ್ಲ. ಅನುಮಾನ ಬರಲು ಕಾರಣವಿದೆ. ಈಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಜೊತೆಗಿರುವ ಫೋಟೋವನ್ನು ಟ್ವಿಟರ್‌ ಪ್ರೊಫೈಲ್‌ನಲ್ಲಿ ಹಾಕಿಕೊಂಡಿದ್ದಾರೆ. ಅಲ್ಲಿಗೆ ದೇಶದ ಮೂಲೆ ಮೂಲೆಯಲ್ಲಿರುವ ಬಿಜೆಪಿ ಕೃಪಾಪೋಷಿತ ಸಕಲ ಹಿಂದುತ್ವದ ಫಯರ್‌ ಬ್ರ್ಯಾಂಡ್‌ಗಳೂ ಒಂದಾಗಿ ಗಲಭೆ ಸೃಷ್ಟಿ ಮಾಡಲೇಬೇಕು ಎಂಬ ಹಟಕ್ಕೆ ಬಿದ್ದಂತಿದೆ. ಆಕೆಯ ಟ್ವೀಟ್‌ ಬಂದ ನಂತರ ರಾಜ್ಯದ ಎಲ್ಲ ಬಿಜೆಪಿ ನಾಯಕರು ನಿದ್ದೆಯಿಂದ ಎದ್ದವರಂತೆ ಟ್ವೀಟ್‌ ಸುರಿಮಳೆ ಸುರಿಸುತ್ತಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್‌ ಸಂತೋಷ್‌ ಆದಿಯಾಗಿ ಎಲ್ಲರೂ ತಮ್ಮ ಒಂದೆಳೆಯ ವಾದವನ್ನೇ ಮಂಡಿಸುತ್ತಿದ್ದಾರೆ. ಸಿ ಟಿ ರವಿ, ಬಿ ವೈ ವಿಜಯೇಂದ್ರ, ಬಸವನಗೌಡ ಪಾಟೀಲ್‌ ಯತ್ನಾಳ್‌ ಸೇರಿದಂತೆ ಎಲ್ಲರೂ ʼಮುಸ್ಲಿಂ ವಿದ್ಯಾರ್ಥಿಯರ ಬಂಧನಕ್ಕೆ ಒತ್ತಾಯಿಸಿದ್ದಾರೆ.

ರಶ್ಮಿ ಸಾವಂತ್
ಯೋಗಿ ಆದಿತ್ಯನಾಥ್‌ ಜೊತೆ ಉಡುಪಿಯ ರಶ್ಮಿ ಸಮಂತ್‌

ಟ್ವೀಟ್‌ ಮಾಡಿದ ರಶ್ಮಿ ಅವರ ಮನೆಗೆ ಪೊಲೀಸರು ಹೋಗಿ ಬೆದರಿಕೆಯೊಡ್ಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಇಂದು ಬೆಳಿಗ್ಗೆ ಉಡುಪಿಯು ಶಾಸಕ ಯಶಪಾಲ್‌ ಸುವರ್ಣ ಅವರ ತಂಡ ಉಡುಪಿಯ ರಶ್ಮಿ ಅವರ ಪೋಷಕರ ಮನೆಗೆ ಹೋಗಿ ಧೈರ್ಯ ತುಂಬಿರುವುದಾಗಿ ಟ್ವೀಟ್‌ ಮಾಡಿದ್ದಾರೆ. ಆದರೆ ಉಡುಪಿ ಎಸ್‌ಪಿ ಅವರು, ರಶ್ಮಿ ಸಮಂತ್ ಅವರ ಟ್ವಿಟರ್‌ ಖಾತೆಯ ಸತ್ಯಾಸತ್ಯತೆ ಪರೀಕ್ಷಿಸಲು ಅವರ ಮನೆಗೆ ಹೋಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಪ್ರಕರಣದಲ್ಲಿ ಅನ್ಯ ಕೋಮಿನ ವಿದ್ಯಾರ್ಥಿನಿಯರು ಆರೋಪಿಗಳಾಗಿರುವುದರಿಂದ ಆ ಪ್ರಕರಣವನ್ನು ಅಲ್ಲಿಯೇ ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ. ಪ್ರಕರಣದ ಬಗ್ಗೆ ಧ್ವನಿ ಎತ್ತಿರುವ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ರಶ್ಮಿ ಸಮಂತ್ ಅವರ ಮನೆಗೆ ಪೊಲೀಸರನ್ನು ಕಳುಹಿಸಿ ಅವರನ್ನು ಸುಮ್ಮನಿರಿಸಲು ಪ್ರಯತ್ನಿಸಿದೆ ಎಂದು ಆರೋಪಿಸಿರುವ ಉಡುಪಿಯ ಶಾಸಕ ಯಶ್ ಪಾಲ್ ಸುವರ್ಣ ಈ ಪ್ರಕರಣಕ್ಕೆ ಜಿಹಾದ್ ನಂಟು ಇದೆ ಎಂದಿದ್ದಾರೆ. ಯಾವುದೇ ಪ್ರಕರಣದಲ್ಲಿ ಮುಸ್ಲಿಮರಿದ್ದರೆ ಬಿಜೆಪಿಯವರಿಗೆ ಕೋಮು ರಾಜಕಾರಣ ಮಾಡಲು ಒಂದು ಅಸ್ತ್ರ ಸಿಕ್ಕಂತಾಗುತ್ತದೆ. ಅದನ್ನು ಅವರು ಯಾವುದೇ ಕಾರಣಕ್ಕೂ ಮಿಸ್‌ ಮಾಡಿಕೊಳ್ಳಲ್ಲ.

ಎಸ್‌ ಪಿ ಅಕ್ಷಯ್ ಮಚೀಂದ್ರ ಸ್ಪಷ್ಟನೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೆ ಉಡುಪಿ ಎಸ್‌ಪಿ ಅಕ್ಷಯ್ ಮಚೀಂದ್ರ ಸ್ಪಷ್ಟನೆ ನೀಡಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಯಾವುದೇ ವಿಡಿಯೋ ನಮಗೆ ಸಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಕೂಡಾ ನಮ್ಮ ಗಮನಕ್ಕೆ ಬಂದಿಲ್ಲ. ಹೀಗಾಗಿ ಸಾರ್ವಜನಿಕರು ಊಹಾಪೋಹದ ಮಾಹಿತಿಗಳನ್ನು ನಂಬಬಾರದು.

ಹಿಡನ್ ಕ್ಯಾಮೆರಾ ಅಥವಾ ಅಂತಹ ಯಾವುದೇ ಸಾಧನ ಬಳಸಿರುವ ಯಾವುದೇ ಕುರುಹು ಕಂಡುಬಂದಿಲ್ಲ. ಇಂತಹ ಫೋಟೊ, ವಿಡಿಯೋಗಳನ್ನು ಸೆರೆಹಿಡಿದು ಬ್ಲ್ಯಾಕ್‌ಮೇಲ್‌ಗೆ ಬಳಸಿಕೊಳ್ಳುತ್ತಿದ್ದಾರೆಂಬ ವದಂತಿಗಳನ್ನೂ ಹಬ್ಬಿಸಲಾಗುತ್ತಿದೆ. ಆದರೆ ಇಲ್ಲಿಯ ತನಕ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳ ಮೇಲೆ ನಾವೂ ನಿಗಾ ಇಟ್ಟಿದ್ದು, ನಮಗೂ ಯಾವುದೇ ವಿಡಿಯೋ ಲಭ್ಯವಾಗಿಲ್ಲ. ಕೆಲವರು ಬೇರೆ ಕಡೆ ಆದ ವಿಡಿಯೋಗಳಿಗೆ ಧ್ವನಿ ಎಡಿಟ್ ಮಾಡಿ ಉಡುಪಿ ಘಟನೆ ಎಂದು ಬಿಂಬಿಸುವ ಕೆಲಸ ನಡೆದಿದ್ದು, ಅದಕ್ಕೆ ನಾವು ಸ್ಪಷ್ಟನೆ ನೀಡಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಸತ್ಯಾಂಶ ತಿಳಿಯದೆ ಸುಮ್ಮನೆ ಮಾಹಿತಿ ಹರಡುವುದರಿಂದ ಜನರಿಗೆ ಗೊಂದಲ ಸೃಷ್ಟಿಯಾಗುತ್ತಿದೆ ಎಂದಿದ್ದಾರೆ.

ಆಡಳಿತ ಮಂಡಳಿ ಹೇಳಿದ್ದೇನು?

ಈ ಮಧ್ಯೆ ಕಾಲೇಜಿನ ಆಡಳಿತ ಮಂಡಳಿ ಜು. 25ರಂದು ಪತ್ರಿಕಾಗೋಷ್ಠಿ ನಡೆಸಿ ಈ ಪ್ರಕರಣದಲ್ಲಿ ಯಾವುದೇ ಸಂಘಟನೆಗಳ ಷಡ್ಯಂತ್ರ ಇಲ್ಲ. ಗೆಳತಿಯರು ಮೋಜಿಗಾಗಿ ವಿಡಿಯೊ ಮಾಡಿ ತಕ್ಷಣ ಡಿಲಿಟ್‌ ಮಾಡಿ ತಪ್ಪೊಪ್ಪಿಕೊಂಡಿದ್ದಾರೆ. ಸಂತ್ರಸ್ತೆ ಕೂಡಾ ದೂರು ನೀಡಲು ಮುಂದಾಗಿಲ್ಲ. ಕಾಲೇಜು ಶಿಸ್ತು ಕ್ರಮ ಕೈಗೊಂಡಿದೆ. ವಿಡಿಯೋ ಶೇರ್‌ ಆಗಿಲ್ಲ ಎಂಬುದನ್ನು ಪೊಲೀಸರೂ ಸ್ಪಷ್ಟಪಡಿಸಿದ್ದಾರೆ. “ಯಾರ ಭವಿಷ್ಯವೂ ಹಾಳಾಗುವುದು ಬೇಡ, ಅವರು ನನ್ನಲ್ಲಿ ಕ್ಷಮೆ ಕೇಳಿದ್ದಾರೆ” ಎಂದು ಸಂತ್ರಸ್ತೆಯೇ ಹೇಳಿರುವ ಕಾರಣ ದೂರು ನೀಡುವ ಪ್ರಶ್ನೆಯೇ ಬರುವುದಿಲ್ಲ. ನಾವು ಪೊಲೀಸರಿಗೆ ಎಲ್ಲ ಜವಾಬ್ದಾರಿಗಳನ್ನು ನೀಡಿದ್ದೇವೆ. ಫೊರೆನ್ಸಿಕ್‌ನವರಿಗೆ ಕಳಿಸಿ ಪರೀಕ್ಷಿಸಿದಾಗಲೂ ಏನೂ ಸಿಕ್ಕಿಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಈ ಪ್ರಕರಣ ಬೆಳಕಿಗೆ ಬಂದದ್ದು ಜುಲೈ 19 ರಂದು, ತಕ್ಷಣ ಬಲಪಂಥೀಯ ವಿದ್ಯಾರ್ಥಿಗಳು ಎಸ್‌ ಪಿ ಯವರಿಗೆ ದೂರು ನೀಡಿ ಆ ಮೂವರು ವಿದ್ಯಾರ್ಥಿನಿಯರ ಮೇಲೆ ಸುವೊಮೊಟೋ ದಾಖಲಿಸಿಕೊಳ್ಳಬೇಕು. ಇಲ್ಲದಿದ್ದರೆ ಜು.25ರಂದು ದೊಡ್ಡ ಮಟ್ಟದ ಪ್ರತಿಭಟನೆ ಮಾಡುವುದಾಗಿ ಹೇಳಿದ್ದರು. ಇಂದು ಪತ್ರಿಕಾಗೋಷ್ಠಿ ನಡೆಸಿದ ಎಸ್‌ಪಿ, ಸಾಮಾಜಿಕ ವಿಡಿಯೋ ಹಂಚಿಕೆಯಾಗಿದ್ದರೆ, ಸಾಕ್ಷ್ಯ ಸಿಕ್ಕರೆ ಮಾತ್ರ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬಹುದು. ಆದರೆ, ಅಂತಹ ಯಾವುದೇ ವಿಡಿಯೋ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ವಿದ್ಯಾರ್ಥಿ ಸಂಘಟನೆಗಳು ಸುಮ್ಮನಾಗಿವೆ. ಆದರೆ, ರಾಜ್ಯದಲ್ಲಿ ಬಿಜೆಪಿ ನಾಯಕರು ಸುಮ್ಮನಿರುವ ಲಕ್ಷಣ ಕಾಣುತ್ತಿಲ್ಲ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿಧಾನ ಪರಿಷತ್ತಿನ ಸದಸ್ಯರಾದ ತೇಜಸ್ವಿನಿ ಗೌಡ ಮತ್ತು ಎನ್‌ ರವಿಕುಮಾರ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಭಾರತಿ ಅವರು ಇದನ್ನು ಈ ಪ್ರಕರಣವನ್ನು ಹಿಂದೂ ಮುಸ್ಲಿಂ ದ್ವೇಷದ ಹಿನ್ನೆಲೆಯಲ್ಲಿಯೇ ನೋಡಲು ಬಯಸಿದ್ದಾರೆ ಎಂಬುದು ಅವರ ಮಾತಿನಿಂದಲೇ ಸ್ಪಷ್ಟವಾಗಿದೆ. ಹೇಗಾದರೂ ಇದನ್ನೊಂದು ದೊಡ್ಡ ಪ್ರಕರಣ ಅಂತ ಮಾಡಿ ಸರ್ಕಾರದ ತಲೆಗೆ ಕಟ್ಟಲೇಬೇಕು ಎಂದು ನಿರ್ಧಾರ ಮಾಡಿದಂತಿದೆ. ಅವರು ಪ್ರೆಸ್‌ಮೀಟ್‌ನಲ್ಲಿ ಆಡಿರುವ ಮಾತುಗಳೇ ಅದಕ್ಕೆ ಸಾಕ್ಷಿ.

ತೇಜಸ್ವಿನಿ ಗೌಡ, ಎನ್‌ ರವಿಕುಮಾರ್‌ ಹೇಳಿದ್ದೇನು?

ಜುಲೈ 19 ರಂದು ಪ್ರಕರಣ ಬೆಳಕಿಗೆ ಬಂದಿದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಅವರನ್ನು ತಕ್ಷಣ ಬಂಧಿಸಬೇಕು. ಆರೋಪ ಸಾಬೀತಾದರೆ ಮರಣದಂಡನೆ ಶಿಕ್ಷೆ ನೀಡಬೇಕು ಎಂದು ತೇಜಸ್ವಿನಿ ಗೌಡ ಆಗ್ರಹಿಸಿದ್ದಾರೆ. ಇದು ವಿಕೃತ ಮಾತ್ರವಲ್ಲ ವಿದ್ವಂಸಕ ಚಟುವಟಿಕೆ. ಆ ವಿಡಿಯೋಗಳನ್ನು ಹಲವು ಗ್ರೂಪ್‌ಗಳಿಗೆ ಕಳಿಸಿದ್ದಾರೆ. ತಕ್ಷಣ ಕಠಿಣ ಕ್ರಮ ಜರುಗಿಸದಿದ್ದರೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿ, ಮಾತು ಮುಗಿಸುವ ಮುನ್ನ “ಆರೋಪಿಗಳಿಗೆ ಮರಣದಂಡನೆಯಾಗಬೇಕು ಎಂದು ನಾನು ಪುನರುಚ್ಛರಿಸುತ್ತೇನೆ” ಎಂದು ಹೇಳಿದ್ದಾರೆ.

ಈ ದೇಶದ ಕಾನೂನಿನಡಿಯಲ್ಲಿ ಯಾವ ಪ್ರಕರಣಗಳಿಗೆ ಮರಣದಂಡನೆ ಶಿಕ್ಷೆ ಕೊಡಬಹುದು ಎಂಬ ಕನಿಷ್ಠ ಜ್ಞಾನ ಕೂಡಾ ಇಲ್ಲದಂತೆ ತೇಜಸ್ವಿನಿ ಮಾತನಾಡಿದ್ದಾರೆ.

ಮುಸ್ಲಿಂ ವಿದ್ಯಾರ್ಥಿನಿಯರು ಟಾಯ್ಲೆಟ್‌ನಲ್ಲಿ ಕ್ಯಾಮೆರಾ ಇಟ್ಟು ವಿಡಿಯೋ ಚಿತ್ರೀಕರಣ ಮಾಡಿ ಮುಸ್ಲಿಂ ಗ್ರೂಪ್‌ಗಳಿಗೆ ಹಂಚಿದ್ದಾರೆ. ಆ ವಿದ್ಯಾರ್ಥಿನಿ ಅವಮಾನದಿಂದ ಕಾಲೇಜಿಗೆ ಹೋಗುತ್ತಿಲ್ಲ. ಸರ್ಕಾರ ಕೂಡಲೇ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜುಲೈ 27ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎನ್‌ ರವಿಕುಮಾರ್‌ ಹೇಳಿದ್ದಾರೆ. ಹಿಜಾಬ್‌ ವಿವಾದದ ಸಮಯದಲ್ಲಿ ಸುದ್ದಿಯಾದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್‌ ಅವರ ಹೆಸರನ್ನೂ ಎಳೆದು ತಂದು ಉಗ್ರ ಸಂಘಟನೆಗಳ ಜೊತೆಗೆ ಲಿಂಕ್ ಮಾಡಿ ಮಾತನಾಡಿದ್ದಾರೆ.

ವಾಸ್ತವದಲ್ಲಿ ವಿದ್ಯಾರ್ಥಿನಿಯರು ಮೊಬೈಲ್‌ನಲ್ಲಿ ವಿಡಿಯೋ ಮಾಡಿರುವುದು ಎಂಬ ವಿಷಯ ಗೊತ್ತಿದ್ದರೂ ಬಿಜೆಪಿ ನಾಯಕರು ಮಾತ್ರ ಕ್ಯಾಮೆರಾ ಇಟ್ಟಿದ್ದರು ಎಂದು ಸುಳ್ಳು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ ಶೌಚಾಲಯದಲ್ಲಿರುವಾಗ ನಡೆದಿರುವ ಘಟನೆಯನ್ನು ಬಾತ್‌ ರೂಂನಲ್ಲಿ ಸ್ನಾನ ಮಾಡುತ್ತಿರುವಾಗ ನಗ್ನ ದೃಶ್ಯ ಸೆರೆ ಹಿಡಿದು ಶೇರ್‌ ಮಾಡಿದ್ದಾರೆ ಎಂಬ ಹಸಿ ಹಸಿ ಸುಳ್ಳನ್ನು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಟ್ವೀಟ್‌ನಲ್ಲೂ ಇದೇ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ.

ಆದರೆ, ಉಡುಪಿಯ ವಿದ್ಯಾರ್ಥಿನಿಯರು ಚಿತ್ರೀಕರಿಸಿದ ವಿಡಿಯೋ ವಾಟ್ಸಪ್‌ ಗ್ರೂಪ್‌ಗಳಿಗೆ ಹಂಚಲಾಗಿದೆ ಎಂಬುದಕ್ಕೆ ಬಿಜೆಪಿ ನಾಯಕರು ಯಾವುದೇ ಸಾಕ್ಷ್ಯಗಳನ್ನು ಸಾರ್ವಜನಿಕರ ಮುಂದೆ ಇಟ್ಟಿಲ್ಲ. ಈ ಎಲ್ಲಾ ಬೆಳವಣಿಗೆಗಳ ನಡುವೆ ಆಡಳಿತ ಮಂಡಳಿಯವರ ಹೇಳಿಕೆ ಮತ್ತು ಸಂತ್ರಸ್ತೆ ದೂರು ಕೊಡದಿರುವುದರಿಂದ ಬಿಜೆಪಿಯವರ ʼಉಗ್ರʼ ಹೋರಾಟಕ್ಕೆ ಹಿನ್ನಡೆಯಾಗುವುದಂತು ನಿಶ್ಚಿತ.

ಹೇಮಾ 2
ಹೇಮಾ ವೆಂಕಟ್
+ posts

ʼಈ ದಿನ.ಕಾಮ್‌ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್
ಹೇಮಾ ವೆಂಕಟ್
ʼಈ ದಿನ.ಕಾಮ್‌ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.

1 COMMENT

  1. ಎಲ್ಲಿಯವರೆಗೆ ಮತೀಯ ಪೂರ್ವಾಗ್ರಹ ಭಾವನೆಗಳು ಇರುತ್ತದೆಯೋ ಅಲ್ಲಿಯವರೆಗೆ ಇಂತಹ ಅಲ್ಪ ಮತೀಯ ವದಂತಿಗಳು ಸರ್ವೆ ಸಾಮಾನ್ಯವಾಗಿರುತ್ತದೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X