ಕೊರೋನ ವೈರಸ್ ವಿಶ್ವದಾದ್ಯಂತ ಸಾಂಕ್ರಾಮಿಕವಾಗಿ ಹರಡಿ ಜನರಲ್ಲಿ ಆತಂಕ ಸೃಷ್ಟಿಸಿದ ಐದು ವರ್ಷಗಳ ಬಳಿಕ ಇದೀಗ ಚೀನಾದಲ್ಲಿ ಹೊಸದಾಗಿ ಹ್ಯೂಮನ್ ಮೆಟಾ ನ್ಯೂಮೋ ವೈರಸ್(ಎಚ್‌ಎಂಪಿವಿ) ಎಂಬ ಸೋಂಕು ಪತ್ತೆಯಾಗಿದೆ. ಕೋವಿಡ್ ಸಂದರ್ಭದಲ್ಲಿ ಜನರ ಭಯ, ಆತಂಕವನ್ನೇ ಬಂಡವಾಳವನ್ನಾಗಿಸಿದ್ದ ಕೆಲವು ಮಾಧ್ಯಮಗಳು ಈಗ ಮತ್ತೆ ಜಾಗೃತವಾಗಿವೆ. ಎಚ್‌ಎಂಪಿವಿ ಎಂಬುದು ಭಯಾನಕ ಸೋಂಕು ಎಂದು ಸುದ್ದಿ ಹಬ್ಬಿಸಲು ಮುಂದಾಗಿವೆ. ಆದರೆ ನಾವು ಮೊದಲೇ ಹೇಳುವುದು ಜನರಿಗೆ ಆತಂಕಬೇಡ, ಎಚ್ಚರವಿರಲಿ ಎಂದಷ್ಟೆ.
ಮಾಧ್ಯಮಗಳ ವರದಿಗಳ ಪ್ರಕಾರ ಚೀನಾದಲ್ಲಿ ಈ ವೈರಸ್ ಅತೀ ವೇಗವಾಗಿ ಹರಡುತ್ತಿದೆ. ಆದರೆ ಕೋವಿಡ್ ವೇಳೆ ತಪ್ಪು ಮಾಹಿತಿಗಳನ್ನು ಹಬ್ಬಿಸಿದಂತೆ ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಈ ವೈರಸ್ ವಿಚಾರದಲ್ಲಿಯೂ ತಪ್ಪು ಮಾಹಿತಿಗಳನ್ನು ಹರಡಿಸುತ್ತಿದ್ದಾರೆ. ಈ ನಡುವೆ ಚೀನಾದಲ್ಲೇ ವಾಸವಿರುವ ಕನ್ನಡಿಗರು ಈ ಬಗ್ಗೆ ವಿಡಿಯೋಗಳನ್ನು ಮಾಡಿ ಚೀನಾದ ವಾಸ್ತವ ಸ್ಥಿತಿ ಬಗ್ಗೆ ತಿಳಿಸುತ್ತಿರುವುದು ಶ್ಲಾಘನೀಯ. ಈ ವೇಳೆ ಯಾವುದು ನಿಜಾಂಶ, ಯಾವುದು ಸುಳ್ಳು ಎಂದು ತಿಳಿಯುವುದು ಮುಖ್ಯ. ಭಯಪಡದೆ ಜಾಗರೂಕರಾಗಿರುವುದು ಉತ್ತಮ.
ಇದನ್ನು ಓದಿದ್ದೀರಾ? BREAKING NEWS | ಬೆಂಗಳೂರಿನ 8 ತಿಂಗಳ ಮಗುವಿನಲ್ಲಿ ಎಚ್‌ಎಂಪಿವಿ ವೈರಸ್ ಪತ್ತೆ
ಇನ್ನು ಬೆಂಗಳೂರಿನ 8 ತಿಂಗಳ ಮಗುವಿಗೆ ಎಚ್‌ಎಂಪಿವಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ, ಆರೋಗ್ಯ ಇಲಾಖೆ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಈಗಾಗಲೇ ಹೇಳಿದೆ. ಈ ವೈರಸ್ ಭಾರತದಲ್ಲಿ ಸಾಮಾನ್ಯವಾಗಿದ್ದು, ಚೀನಾದಲ್ಲಿ ಪತ್ತೆಯಾಗಿರುವ ಮ್ಯುಟೇಟೆಡ್ ವೈರಸ್‌ನೊಂದಿಗೆ ಇದಕ್ಕೆ ಸಂಬಂಧ ಇದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗಾಗಿ ಚಿಂತೆಪಡಬೇಕಾಗಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಇವೆಲ್ಲವುದರ ನಡುವೆ ನಾವು ಏನಿದು ಎಚ್‌ಎಂಪಿವಿ ವೈರಸ್, ರೋಗ ಲಕ್ಷಣಗಳೇನು, ಏನೆಲ್ಲ ಮುನ್ನೆಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ತಿಳಿಯೋಣ.
ಏನಿದು ಎಚ್‌ಎಂಪಿವಿ, ಇದು ಹೊಸ ವೈರಸ್ ಹೌದಾ?
ಹ್ಯೂಮನ್ ಮೆಟಾ ನ್ಯೂಮೋ ವೈರಸ್(ಎಚ್‌ಎಂಪಿವಿ) ಸಾಮಾನ್ಯ ವೈರಸ್ ಆಗಿದ್ದು ಶೀತದಂತಹ ಸಣ್ಣ ಸೋಂಕು ಕಾಣಿಸಿಕೊಳ್ಳುತ್ತದೆ. ಚಳಿಗಾಳದಲ್ಲಿ ಬರುವ ಸಾಮಾನ್ಯ ಸೋಂಕು ಇದಾಗಿದ್ದು ಆರ್‌ಸಿವಿ ಅಥವಾ ಫ್ಲ್ಯುನಂತೆಯೇ ಇದು ಕೂಡ. ಅಷ್ಟಕ್ಕೂ ಕೆಲವು ಮಾಧ್ಯಮಗಳು ಬೊಬ್ಬೆ ಹಾಕುವಂತೆ ಇದೇನು ಹೊಸ ವೈರಸ್ ಏನಲ್ಲ. 2001ರಲ್ಲಿ ಮೊದಲ ಬಾರಿಗೆ ಈ ವೈರಸ್ ಕಾಣಿಸಿಕೊಂಡಿದೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ (ಸಿಡಿಸಿ) ಯುಎಸ್ ಕೇಂದ್ರ ಹೇಳುತ್ತದೆ. ಆದರೆ ಕೆಲವು ಪುರಾವೆಗಳನ್ನು ಆಧರಿಸಿ ತಜ್ಞರು ಹೇಳುವಂತೆ ಈ ವೈರಸ್ 1958ರಿಂದಲೇ ಅಸ್ತಿತ್ವದಲ್ಲಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಟ್ರಿಪಲ್ ವೆಸೆಲ್ ಕೊರೊನರಿ ಕಾಯಿಲೆಗೆ ತುತ್ತಾಗಿದ್ದ ಮಡಗಾಸ್ಕರ್ ದ್ವೀಪದ ವ್ಯಕ್ತಿ; ಶಸ್ತ್ರ ಚಿಕಿತ್ಸೆ ಯಶಸ್ವಿ
ಎಚ್‌ಎಂಪಿವಿ ರೋಗ ಲಕ್ಷಣಗಳೇನು?
ಈ ಮೇಲೆ ತಿಳಿಸಿದಂತೆ ಎಚ್‌ಎಂಪಿವಿ ಫ್ಲ್ಯೂ ಅಥವಾ ಸಾಮಾನ್ಯ ಶೀತದಂತಹ ರೋಗ ಲಕ್ಷಣಗಳನ್ನು ಹೊಂದಿರುತ್ತದೆ. ಕೆಮ್ಮು, ನೆಗಡಿ ಅಥವಾ ವೈಯಕ್ತಿಕ ಸಂಪರ್ಕದಿಂದ ಓರ್ವ ವ್ಯಕ್ತಿಯಿಂದ ಇನ್ನೋರ್ವ ವ್ಯಕ್ತಿಗೆ ಈ ಸೋಂಕು ಹರಡಬಹುದು. ಕೆಮ್ಮು, ಜ್ವರ, ಮೂಗು ಕಟ್ಟುವಿಕೆ, ಶೀತ, ಉಸಿರುಗಟ್ಟುವುದು ಮೊದಲಾದ ಲಕ್ಷಣಗಳು ಈ ಸೋಂಕಿತರಲ್ಲಿ ಇರುತ್ತದೆ. ಸಾಮಾನ್ಯವಾಗಿ ಮೂರರಿಂದ ಆರು ದಿನಗಳಲ್ಲಿ ಈ ಸೋಂಕು ಗುಣಮುಖವಾಗುತ್ತದೆ. ಸೋಂಕು ಹೆಚ್ಚಾಗಿದ್ದರೆ ಇನ್ನೂ ಅಧಿಕ ಸಮಯ ಬೇಕಾಗಬಹುದು.
ಯಾರು ಹೆಚ್ಚು ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು?
ಸಣ್ಣ ಮಕ್ಕಳು, ಹಿರಿಯ ನಾಗರಿಕರು ಮತ್ತು ಕಡಿಮೆ ರೋಗ ನಿರೋಧಕ ಶಕ್ತಿ ಹೊಂದಿರುವವರು ಎಚ್‌ಎಂಪಿವಿ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಿಕೊಳ್ಳುವುದು ಅಗತ್ಯ.
- ಸಾಬೂನು ಮತ್ತು ನೀರಿನಿಂದ ಕೈತೊಳೆದುಕೊಂಡು ಆಹಾರ ಸೇವಿಸಿ
- ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಿ
- ಸಾರ್ವಜನಿಕ ಸ್ಥಳದಲ್ಲಿ ಉಗುಳಬೇಡಿ, ಟಿಶ್ಯೂ ಪೇಪರ್, ಕೈವಸ್ತ್ರಗಳನ್ನು ಮರುಬಳಕೆ ಮಾಡಬೇಡಿ
- ಕೆಮ್ಮುವಾಗ, ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ
- ನೆಗಡಿಯಿದ್ದರೆ ಮಾಸ್ಕ್ ಧರಿಸಿ, ವೈದ್ಯರನ್ನು ಸಂಪರ್ಕಿಸದೆ ಔಷಧಿ ಸೇವಿಸಬೇಡಿ
- ಕೈತೊಳೆಯದೆ ಕಣ್ಣು, ಮೂಗು, ಬಾಯಿ ಮುಟ್ಟಬೇಡಿ.
- ನಿಮಗೆ ಶೀತ, ಜ್ವರ ಮೊದಲಾದ ಲಕ್ಷಣ ಕಾಣಿಸಿಕೊಂಡರೆ ಇತರರಿಂದ ಕೊಂಚ ಅಂತರ ಕಾಯ್ದುಕೊಳ್ಳಿ
ಇದನ್ನು ಓದಿದ್ದೀರಾ? ಧಾರವಾಡ | ಶಾಲೆಗಳಲ್ಲಿ ಕೊರೊನಾ ತಡೆಗೆ ತುರ್ತು ಮಾರ್ಗಸೂಚಿ ಹೊರಡಿಸಿ; ಶಿಕ್ಷಕರ ಸಂಘದ ಆಗ್ರಹ
ತಜ್ಞರು ಏನು ಹೇಳುತ್ತಾರೆ?
ಕೋವಿಡ್ ವೇಳೆ ಉಂಟಾದ ಗೊಂದಲ, ಪ್ರಾಣಹಾನಿಯಿಂದ ಬೇಸತ್ತ ಜನರು ಈಗ ಸಾಮಾನ್ಯವಾಗಿಯೇ ಹೊಸ ವೈರಸ್ ಎಂದಾಗ ಭೀತಿಗೆ ಒಳಗಾಗುತ್ತಾರೆ. ಆದರೆ ಭಾರತದಲ್ಲಿ ಈ ವೈರಸ್ ಬಗ್ಗೆ ಜನರು ಆತಂಕಪಡುವ ಯಾವುದೇ ಅಗತ್ಯವಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಮುನ್ನೆಚ್ಚರಿಕೆ ವಹಿಸಿ, ರೋಗ ಲಕ್ಷಣಗಳು ಕಂಡುಬಂದಾಗ ಇತರರ ಸಂಪರ್ಕದಿಂದ ದೂರವಿದ್ದು ಸೋಂಕು ಇತರರಿಗೆ ಹರಡದಂತೆ ನೋಡಿಕೊಳ್ಳಿ. ಆತಂಕಪಟ್ಟು ವಾಟ್ಸಾಪ್ ಯೂನಿವರ್ಸಿಟಿಯ ತಪ್ಪು ಮಾಹಿತಿಗೆ ಬಲಿಯಾಗದಿರಿ ಎಂಬುದು ತಜ್ಞರ ಸಲಹೆ.
ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯೆ ನೀಡಿದ ಡಾ. ಶ್ರೀನಿವಾಸ ಕಕ್ಕಿಲ್ಲಾಯ, “ವೈರಸ್‌ಗಳು ಯಾವುದೂ ಕೂಡಾ ಹೊಸದಾಗಿ ಹುಟ್ಟಿರುವುದಲ್ಲ. ಮನುಷ್ಯರು ಇರುವುದಕ್ಕೂ ಮುನ್ನವೇ ಇತ್ತು. ಆದರೆ ಈಗ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಯಾವುದೇ ವೈರಸ್ ಅನ್ನು ಎದುರಿಸುವ ಶಕ್ತಿ ಮನುಷ್ಯನ ದೇಹದಲ್ಲಿದೆ. ಮಕ್ಕಳು, ಹಿರಿಯ ನಾಗರಿಕರು ಕೊಂಚ ಎಚ್ಚರಿಕೆ ವಹಿಸಬೇಕಾಗುತ್ತದೆ” ಎಂದು ತಿಳಿಸಿದ್ದಾರೆ.
“ಸಣ್ಣ ವೈರಸ್, ಸೋಂಕುಗಳನ್ನು ಗಂಭೀರ ರೋಗಗಳಂತೆ ಬಿಂಬಿಸುವುದು ಅಧಿಕವಾಗಿದೆ. ಇವೆಲ್ಲವೂ ಮಾಧ್ಯಮ, ಲ್ಯಾಬ್, ವೈದ್ಯರು, ಆರೋಗ್ಯ ಇಲಾಖೆಗಳ ಮಾಫಿಯಾವಷ್ಟೆ. ಕೋವಿಡ್ ಸಂದರ್ಭದಲ್ಲಿ ಆತಂಕ ಸೃಷ್ಟಿಸುವಲ್ಲಿ ಮಾಧ್ಯಮ, ವೈದ್ಯರು ಯಶಸ್ವಿಯಾಗಿದ್ದಾರೆ” ಎಂದರು.
ಮುನ್ನೆಚ್ಚರಿಕೆ ವಹಿಸಿಕೊಂಡರೆ ಯಾವುದೇ ಸೋಂಕಿನಿಂದ ದೂರವಿರಲು ಸಾಧ್ಯ. ಈ ಮುನ್ನೆಚ್ಚರಿಕೆಯನ್ನು ನೀಡುವ ಜವಾಬ್ದಾರಿ ಸರ್ಕಾರ ಮತ್ತು ಮಾಧ್ಯಮಗಳದ್ದು. ಹಾಗಿರುವಾಗ ಜನರಿಗೆ ನೈಜ ಮಾಹಿತಿಯನ್ನು ನೀಡಿ, ಜನರಲ್ಲಿರುವ ಆತಂಕ ಮರೆ ಮಾಡಬೇಕಾದ ಮಾಧ್ಯಮಗಳು ವಿಪತ್ತಿನ ಕಾಲದಲ್ಲೂ ತಮ್ಮ ಟಿಆರ್‌ಪಿ, ರೀಚ್, ಆದಾಯ ಹೆಚ್ಚಿಸಿಕೊಳ್ಳುವ ದುರಾಸೆಗೆ ಬಿದ್ದಿರುವುದು ವಿಪರ್ಯಾಸ. ಪ್ರಜಾಪ್ರಭುತ್ವದಲ್ಲಿ ನಾಲ್ಕನೇ ಅಂಗ ಎನಿಸಿಕೊಂಡಿರುವ ಮಾಧ್ಯಮಗಳು ಜನರಿಗೆ ಮಾಹಿತಿ, ಮುನ್ನೆಚ್ಚರಿಕೆ ನೀಡಲಿ, ಭೀತಿ ಹುಟ್ಟಿಸುವುದು ಬೇಡ.
ಇದನ್ನು ಓದಿದ್ದೀರಾ? ಕೋವಿಶೀಲ್ಡ್ ಲಸಿಕೆ ಪಡೆದವರು ಎಚ್ಚರವಹಿಸಬೇಕಾದ್ದು ಎಲ್ಲಿ?
ಕರ್ನಾಟಕದಲ್ಲಿ ಎರಡು ಎಚ್‌ಎಂಪಿವಿ ಪ್ರಕರಣಗಳು ಪತ್ತೆಯಾಗಿದೆ ಎಂಬುದನ್ನು ಕನ್ನಡ ಮಾಧ್ಯಮಗಳು ಮಾತ್ರವಲ್ಲದೆ ಆಂಗ್ಲ ಮಾಧ್ಯಮಗಳು ಕೂಡಾ ಇಂದು ಮುಂಜಾನೆಯಿಂದಲೇ ಪ್ರಮುಖ ಸುದ್ದಿಯಾಗಿಸಿಕೊಂಡಿದೆ. ಕರ್ನಾಟಕ, ಬೆಂಗಳೂರು ಎಂದರೆ ಜನರು ಆತಂಕ ಪಡುವಂತೆ ಮಾಧ್ಯಮಗಳು ಸುದ್ದಿ ಮಾಡುತ್ತಿದೆ. ಜೊತೆಗೆ ವೈರಸ್‌ನಿಂದಾಗಿ ಚೀನಾದಲ್ಲಿ ಪರಿಸ್ಥಿತಿ ಬಿಗಾಡಯಿಸಿದೆ ಎಂದು ಪರಿಷ್ಕರಿಸದ ವಿಡಿಯೋಗಳನ್ನು ಪ್ರಮುಖ ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಮಾಧ್ಯಮಗಳು ಸತ್ಯ ವಿಚಾರವನ್ನು ತಿಳಿಸುತ್ತವೆ ಎಂಬ ನಂಬಿಕೆಯಿಂದ ಕೆಲ ಜನರು ಟಿವಿ ಚಾನೆಲ್‌ಗಳನ್ನು ವೀಕ್ಷಿಸುವಾಗ ಈ ರೀತಿ ಪರಿಷ್ಕರಿಸದ ವಿಡಿಯೋಗಳನ್ನು ಹಾಕಿ ಮಾಧ್ಯಮಗಳು ತಮ್ಮ ಮರ್ಯಾದೆಯನ್ನು ತಾವೇ ಕಳೆದುಕೊಳ್ಳುತ್ತಿದೆ.
ಜನರಿಗೆ ಆರೋಗ್ಯ ಅಂದರೆ ಎಚ್ಚರಿಕೆ ಹೆಚ್ಚು. ಅದರಲ್ಲೂ ಕೊರೋನ ಬಳಿಕ ಜನರು ತಮ್ಮ ಆಹಾರ ಪದ್ಧತಿ, ಜೀವನಶೈಲಿ ಮೊದಲಾದವುಗಳ ವಿಚಾರದಲ್ಲಿ ಅತೀ ಸೂಕ್ಷ್ಮವಾಗಿದ್ದಾರೆ. ಇದನ್ನೇ ಸ್ವಯಂಘೋಷಿತ ಆರೋಗ್ಯ ತಜ್ಞರು ತಮ್ಮ ಲಾಭಕ್ಕೆ ಬಳಸಿಕೊಂಡಿರುವುದೂ ಇದೆ. ಇವೆಲ್ಲವುದರ ನಡುವೆ ವೈರಸ್ ಬಗ್ಗೆ ಆತಂಕ ಸೃಷ್ಟಿಸಿ ಜನರನ್ನು ಇನ್ನಷ್ಟು ಖಿನ್ನತೆಗೆ ಒಳಗಾಗಿಸುವುದು ಸರಿಯಲ್ಲ. ಮಾಧ್ಯಮ ಮತ್ತು ಕೇಂದ್ರ-ರಾಜ್ಯ ಸರ್ಕಾರಗಳೇ ಜನರಿಗೆ ನೈಜ ಮಾಹಿತಿ ನೀಡುವ ಹೊಣೆಯನ್ನು ಹೊರಬೇಕು.
ಕೋವಿಡ್ ಸಂದರ್ಭದಲ್ಲಿ ಅವೈಜ್ಞಾನಿಕ ವಿಧಾನಗಳ ಮೂಲಕವೇ ಜನರ ದಾರಿತಪ್ಪಿಸಿದ ಕೇಂದ್ರ ಸರ್ಕಾರ ಈ ಬಾರಿಯಾದರೂ ಕೊಂಚ ಜವಾಬ್ದಾರಿಯುತವಾಗಿ ವರ್ತಿಸಬೇಕಾಗಿದೆ. ತಪ್ಪು ಮಾಹಿತಿ ನೀಡಿ ಜನರನ್ನು ಮೂರ್ಖರನ್ನಾಗಿಸುದನ್ನು ಬಿಡಬೇಕಾಗಿದೆ. ಅದಕ್ಕಿಂತ ಹೆಚ್ಚಾಗಿ ಜನರೇ ಮುನ್ನೆಚ್ಚರಿಕೆ ವಹಿಸಿದರೆ ಈ ವೈರಸ್ ಸಾಂಕ್ರಾಮಿಕವಾಗಿ ಹರಡಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಅರಿಯಬೇಕಾಗಿದೆ.
ಏನೇ ಆದರೂ ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ, ಪಾತ್ರೆ ತಟ್ಟಿ, ದೀಪ ಹಚ್ಚಿ, ‘ಗೋ ಗೋ’ ಎಂದು ಕೂಗಿ ವೈರಸ್ ಅನ್ನು ಓಡಿಸುವ ದುಸ್ಸಾಹಸಕ್ಕೆ ಮಾತ್ರ ಮುಂದಾಗಬೇಡಿ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.