ಲೇಖಕಿಯರ ಸಂಘ | ಪದಾಧಿಕಾರಿಗಳ ರಾಜೀನಾಮೆಗೆ ಕಾರಣವೇನು? ಅಧ್ಯಕ್ಷರು ಏನಂತಾರೆ?

Date:

Advertisements

ಕರ್ನಾಟಕ ಲೇಖಕಿಯರ ಸಂಘದಿಂದ ಕೆಟ್ಟ ಸುದ್ದಿಯೊಂದು ಬಂದಿದೆ. ಸಂಘದ ಅಧ್ಯಕ್ಷೆ ಡಾ ಎಚ್‌ ಎಲ್‌ ಪುಷ್ಪ ಅವರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ, ಹಣಕಾಸಿನ ನಿರ್ವಹಣೆ ಪಾರದರ್ಶಕವಾಗಿಲ್ಲ ಮುಂತಾದ ಹತ್ತು ಹಲವು ಆರೋಪ ಮಾಡಿರುವ ನಾಲ್ವರು ಪದಾಧಿಕಾರಿಗಳು ಶನಿವಾರ (ಸೆ.27) ರಾಜೀನಾಮೆ ನೀಡಿದ್ದಾರೆ.

ಕನ್ನಡದ ಪ್ರಾತಿನಿಧಿಕ ಸಂಸ್ಥೆಗಳ ಕಡೆಯಿಂದ ಇತ್ತೀಚೆಗೆ ಬರುತ್ತಿರುವ ಸುದ್ದಿಗಳು ಘನತೆಯಿಂದ ಕೂಡಿಲ್ಲ ಎಂಬುದಂತು ನಿಜ. ಒಂದು ಕಡೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಅದ್ವಾನಗಳು ಸರಣಿಯಂತೆ ಮುಂದುವರಿದಿದೆ. ಆರಂಭದಿಂದಲೂ ದುರಹಂಕಾರದ ನಡೆ, ದಬ್ಬಾಳಿಕೆ, ಆರ್ಥಿಕ ಅಶಿಸ್ತಿಗೆ ಕುಖ್ಯಾತರಾದವರು ಕಸಾಪ ಅಧ್ಯಕ್ಷ ಮಹೇಶ್‌ ಜೋಶಿಯವರು. ಸಾಹಿತ್ಯ ಪರಿಷತ್ತಿನ ಸದಸ್ಯರನ್ನೇ “ಸಭೆಗೆ ಬಂದರೆ ಕುತ್ತಿಗೆ ಹಿಡಿದು ಹೊರ ದಬ್ಬುತ್ತೇವೆ” ಎಂಬ ಅತಿರೇಕದ ಹೇಳಿಕೆಗಳು, ಗೂಂಡಾ ವರ್ತನೆಗಳು ಸಾಹಿತ್ಯ ಪರಿಷತ್ತಿನಂತಹ ಶತಮಾನ ದಾಟಿದ ಕನ್ನಡದ ಅತಿದೊಡ್ಡ ಸಂಸ್ಥೆಯಿಂದ ಹೊರಬಿದ್ದಿದೆ.

ಈ ಮಧ್ಯೆ ಕರ್ನಾಟಕ ಲೇಖಕಿಯರ ಸಂಘದಿಂದಲೂ ಕೆಟ್ಟ ಸುದ್ದಿಯೊಂದು ಬಂದಿದೆ. ಸಂಘದ ಅಧ್ಯಕ್ಷೆ ಡಾ ಎಚ್‌ ಎಲ್‌ ಪುಷ್ಪ ಅವರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ, ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಲೇಖಕಿಯರ ಸಮ್ಮೇಳನದ ಖರ್ಚು ವೆಚ್ಚಗಳ ಬಗ್ಗೆ ಸರಿಯಾದ ವರದಿ ನೀಡಿಲ್ಲ, ಹಣಕಾಸಿನ ನಿರ್ವಹಣೆ ಪಾರದರ್ಶಕವಾಗಿಲ್ಲ, ಸಮ್ಮೇಳನದಲ್ಲಿ ಉಳಿದ ಹಣವನ್ನು ಸಂಘದ ಪುಸ್ತಕ ಪ್ರಕಟಣೆಗೆ ನೀಡುವಾಗ ಪದಾಧಿಕಾರಿಗಳ ಗಮನಕ್ಕೆ ತಂದಿಲ್ಲ… ಮುಂತಾದ ಹತ್ತು ಹಲವು ಆರೋಪ ಮಾಡಿರುವ ನಾಲ್ವರು ಪದಾಧಿಕಾರಿಗಳು ಶನಿವಾರ ರಾಜೀನಾಮೆ ನೀಡಿದ್ದಾರೆ.

ಲೇಖಕಿಯರ ಸಂಘದ ಉಪಾಧ್ಯಕ್ಷೆ ಜಯಲಕ್ಷ್ಮಿ ಪಾಟೀಲ್‌, ಕಾರ್ಯದರ್ಶಿ ಭಾರತಿ ಹೆಗಡೆ, ಸಹ ಕಾರ್ಯದರ್ಶಿ ಸುಮಾ ಸತೀಶ್‌ ಕಾರ್ಯಕಾರಿ ಸಮಿತಿ ಸದಸ್ಯೆ ಸರ್ವ ಮಂಗಳಾ ಶನಿವಾರ ಕಲೇಸಂನಲ್ಲಿ ನಡೆದ ಸಭೆಯಲ್ಲಿ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಅಧ್ಯಕ್ಷರು, ಸಮಿತಿಯ ಅವಧಿ ಮುಗಿದಿದೆ, ಈಗ ಯಾಕೆ ದಿಢೀರ್‌ ರಾಜೀನಾಮೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ರಾಜೀನಾಮೆ 1

ಈ ಬಗ್ಗೆ ʼಈ ದಿನ.ಕಾಮ್‌ʼನಿಂದ ಎರಡೂ ಕಡೆಯವರ ಅಭಿಪ್ರಾಯ ಪಡೆಯಲಾಗಿದೆ. ಸಂಘದ ಉಪಾಧ್ಯಕ್ಷೆ ಜಯಲಕ್ಷ್ಮಿ ಪಾಟೀಲ್‌ ಮಾತನಾಡಿ, “ಲೇಖಕಿಯರ ಸಂಘದ ಅಧ್ಯಕ್ಷೆ ಡಾ ಎಚ್‌ ಎಲ್‌ ಪುಷ್ಪ ಅವರ ಬಗ್ಗೆ ನಮಗೆ ವೈಯಕ್ತಿಕವಾಗಿ ಯಾವುದೇ ಬೇಸರವಿಲ್ಲ. ಆದರೆ ಅವರು ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಖಜಾಂಚಿ ಇದ್ದರೂ ಎಲ್ಲ ಲೆಕ್ಕವನ್ನೂ ತಾವೇ ಇಟ್ಟುಕೊಂಡಿದ್ದಾರೆ. ರಸೀದಿಯನ್ನು ಸರಿಯಾಗಿ ನಿರ್ವಹಿಸಿಲ್ಲ. ಸಮ್ಮೇಳನ ಮುಗಿದ ನಂತರ ಉಳಿಕೆ ಹಣವನ್ನು ಸಂಘದ ಹೆಸರಲ್ಲಿ ಎಫ್‌ಡಿ ಹಾಕುವ ನಿರ್ಧಾರ ಮಾಡಲಾಗಿತ್ತು. ಆದರೆ, ಅವರು ಲೇಖಲೋಕ ಮತ್ತು ವಿಶೇಷ ಲೇಖಕಿ ಸ್ಮರಣಸಂಚಿಕೆಯ ಮುದ್ರಣಕ್ಕೆ ಹಣ ಬಳಸಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿಲ್ಲ. ಭಾನುವಾರ ಸಭೆ ಇತ್ತು, ಆದರೆ ಶನಿವಾರ ಸಂಜೆ ಲೆಕ್ಕ ಸರಿ ಬರ್ತಿಲ್ಲ, ಆಡಿಟರ್‌ ಬಳಿ ಹೋಗೋಣ ಅಂದ್ರು. ಇದು ಸರಿ ಕಾಣಲಿಲ್ಲ. ಹಾಗಾಗಿ ನಾವು ರಾಜೀನಾಮೆ ಕೊಟ್ಟಿದ್ದೇವೆ” ಎಂದರು.

ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ ಮಾತನಾಡಿ, “ಲೇಖಕಿಯರ ಸಮ್ಮೇಳನ ಮುಗಿದ ನಂತರ ನಾಲ್ಕು ತಿಂಗಳಾದರೂ ಸಭೆ ಕರೆದಿಲ್ಲ. ಜಾಹೀರಾತು ಸಂಗ್ರಹ, ಸ್ಪಾನ್ಸರ್‌ ಹುಡುವುದು ಎಲ್ಲವನ್ನೂ ಜೊತೆಗೆ ಹೋಗಿ ಮಾಡಿದ್ದೇವೆ. ಲೇಖಕಿ ಮ್ಯಾಗಜೀನ್‌ ನಾನೇ ನೋಡಿಕೊಳ್ಳುತ್ತಿದ್ದೆ. ಅದರಲ್ಲಿ ಆಡಿಟ್‌ ರಿಪೋರ್ಟ್‌ ಹಾಕಿದ್ರು. ಸಮ್ಮೇಳನಕ್ಕೆ ಹನ್ನೊಂದುವರೆ ಲಕ್ಷ ಖರ್ಚಾಗಿದೆ ಅಂತಿದೆ. ಲೇಖಕಿಯರ ಸಮ್ಮೇಳನದ ಬದಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮ ಅಂತ ಬೇರೆ ಹಾಕಿದ್ದಾರೆ. ಈ ಬಗ್ಗೆ ಸದಸ್ಯರು ಫೋನ್‌ ಮಾಡಿ ಕೇಳಲು ಶುರು ಮಾಡಿದ್ರು. ಆಗಸ್ಟ್‌ 28ರ ಸಭೆಯಲ್ಲಿ ಈ ಬಗ್ಗೆ ಕೇಳಿದಾಗ “ಎಲ್ಲ ಲೆಕ್ಕ ಎಲ್ಲರಿಗೂ ಕೊಡಲು ಸಾಧ್ಯವಿಲ್ಲ” ಅಂದ್ರು. “ನಾಳೆ ಸರ್ವ ಸದಸ್ಯರ ಸಭೆಯಲ್ಲಿ ಕೇಳಿದ್ರೆ ಏನು ಉತ್ತರಿಸೋದು..?” ಅಂತ ಹೇಳಿದ್ರೆ, “ನಾನೇ ಉತ್ತರಿಸ್ತೇನೆ.” ಅಂದ್ರು. ಸೆಪ್ಟಂಬರ್‌ 7ರಂದು ನಡೆದ ಸಭೆಯಲ್ಲಿ ಡಾ ಸಬೀಹಾ ಭೂಮಿಗೌಡ ಅವರು ಆಡಿಟ್‌ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, “ಇದರಲ್ಲಿ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಯಾರ ಸಹಿಯೂ ಇಲ್ಲ. ಬೇರೆ ಆಡಿಟ್‌ ವರದಿ ತಯಾರಿಸಿ” ಎಂದು ಸಲಹೆ ನೀಡಿದ್ರು. ಡಾ ಸಂಧ್ಯಾರೆಡ್ಡಿ, ಡಾ ಎನ್‌ ಗಾಯತ್ರಿ, ಡಾ ಹೇಮಲತಾ ಮಹಿಷಿ, ಪ್ರತಿಭಾ, ಸುನಂದಾ ರು.ಬಸಪ್ಪ ಎಲ್ಲರೂ ಇದೇ ಸಲಹೆ ನೀಡಿದ್ದಾರೆ. ಸೆ. 9ರಂದು ಮತ್ತೊಂದು ಸಭೆ ನಡೆಯಿತು. ಮೊದಲ ಸಭೆಯಲ್ಲಿ ಮೂರೂವರೆ ಲಕ್ಷ ಉಳಿದಿದೆ ಅಂದವರು ಸೆ. 28ರಂದು ನಡೆದ ಆರನೇ ಸಭೆಯಲ್ಲಿ ಎರಡೂವರೆ ಲಕ್ಷ ಉಳಿದಿದೆ ಅಂದ್ರು. ಹಣಕಾಸಿನ ವ್ಯವಹಾರ ಪಾರದರ್ಶಕವಾಗಿಲ್ಲ. ಇದೇ ಕಾರಣ ನೀಡಿ ನಾವು ರಾಜೀನಾಮೆ ಕೊಟ್ಟಿದ್ದೇವೆ” ಎಂದರು.

ಕಾರ್ಯಕಾರಿ ಸಮಿತಿ ಸದಸ್ಯೆ ಮತ್ತು ಸಮ್ಮೇಳನದ ಜಾಹೀರಾತು ವಿಭಾಗ ನಿರ್ವಹಿಸಿದ್ದ ಸರ್ವ ಮಂಗಳಾ ಅವರು ಮಾತನಾಡಿ, “ಪುಷ್ಪ ಅವರು ಹಣ ದುರುಪಯೋಗ ಮಾಡಿದ್ದಾರೆ ಎಂದು ಹೇಳಲ್ಲ. ಆದರೆ, ಯಾವ ಯಾವ ಬಾಬ್ತಿಗೆ ಎಷ್ಟೆಷ್ಟು ಖರ್ಚಾಗಿದೆ ಎಂದು ಹೇಳಿರುವುದು ನಮಗೆ ಕನ್ವಿನ್ಸ್‌ ಆಗಿಲ್ಲ. ಅವರು ಹೇಳಿದ್ದು ತಾಳೆಯಾಗುತ್ತಿಲ್ಲ. ಪ್ರಕಟಣೆಗೆ, ಪ್ರಿಂಟಿಂಗಿಗೆ ಅಂತ ಇಷ್ಟಿಷ್ಟು ಖರ್ಚಾಗಿದೆ ಅಂತಾರೆ. ಅದನ್ನು ಮೊದಲೇ ನಮ್ಮ ಗಮನಕ್ಕೆ ತಂದಿಲ್ಲ. ಏಕಪಕ್ಷೀಯವಾಗಿ ತೀರ್ಮಾನ ಮಾಡಿದ್ದಾರೆ. ಕೇಳಿದರೆ, ಏನೀವಾಗ…? ಅಂತಾರೆ. ಅದನ್ನು ಒಪ್ಪಿಕೊಳ್ಳುವುದು ಕಷ್ಟ. ಸೆ. 7ಕ್ಕೆ ಸಭೆ ನಡೆದಿದೆ. ಆ ನಂತರ ಇಪ್ಪತ್ತು ದಿನ ಕಳೆದಿದೆ. ಒಂದೊಂದೇ ಬಿಲ್‌ ತೋರಿಸುತ್ತಿದ್ದಾರೆ. ಅದು ಅನುಮಾನಕ್ಕೆ ಕಾರಣವಾಗಿದೆ” ಎಂದರು.

ಸಮ್ಮೇಳನ

ಸಲಹಾ ಸಮಿತಿಯ ಹಿರಿಯ ಸದಸ್ಯೆ ಡಾ ಎನ್‌ ಗಾಯತ್ರಿ ಅವರು ಮಾತನಾಡಿ, “ಪುಷ್ಪ ಅವರ ನಡವಳಿಕೆಯಲ್ಲಿ ಒಳಗೊಳ್ಳುವಿಕೆಯ ಕೊರತೆ ಇದೆ. ಎಷ್ಟೋ ಸಮ್ಮೇಳನಗಳು ನಡೆಯುತ್ತವೆ. ಎಲ್ಲಾ ಸಮ್ಮೇಳನಕ್ಕೂ ಒಂದು ಸ್ವಾಗತ ಸಮಿತಿ ಇರುತ್ತದೆ. ಆದರೆ, ಈ ವರ್ಷ ನಡೆದ ಲೇಖಕಿಯರ ಸಮ್ಮೇಳನಕ್ಕೆ ಸ್ವಾಗತ ಸಮಿತಿಯೇ ಇರಲಿಲ್ಲ. ಸಮ್ಮೇಳನ ನಡೆಯುವ ಪ್ರದೇಶದ ಸ್ಥಳೀಯ ಕಾರ್ಯಕಾರಿ ಸಮಿತಿಯು ಸ್ವಾಗತ ಸಮಿತಿ ರಚನೆ ಮಾಡುತ್ತದೆ. ಅದನ್ನು ಮಾಡಿಲ್ಲ. ಸಲಹಾ ಸಮಿತಿಯನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ತಾವೇ ಏಕ ಪಕ್ಷೀಯವಾಗಿ ಅತಿಥಿಗಳನ್ನು ಆಯ್ಕೆ ಮಾಡಿದ್ದಾರೆ. ಕಮಿಟಿ ಮಾಡಿ ಜವಾಬ್ದಾರಿ ಕೊಡಿ ಅಂದ್ರೆ ಹೂ ಅಂತಾರೆ. ಮತ್ತೆ ಸುಮ್ಮನಾಗುತ್ತಾರೆ. ವಿಶೇಷ ಸಂಚಿಕೆಗೂ ಒಂದು ಸಮಿತಿ ಇರಬೇಕು ಇದೆಲ್ಲ ಬೈಲಾದಲ್ಲಿದೆ.

ಕಲೇಸಂ ಸ್ತ್ರೀ ಪರಂಪರೆ ಕಟ್ಟಿ ಕೊಡುವ ಸಂಸ್ಥೆ ಆಗಬೇಕು ಎಂಬುದು ಸಂಘ ಕಟ್ಟಿದ ಹಿರಿಯ ಲೇಖಕಿಯರ ಆಶಯವಾಗಿತ್ತು. ಆದರೆ ಪುಷ್ಪಾ ಅವರಿಗೆ ಸ್ತ್ರೀವಾದಿ ಪರಂಪರೆಯ ದೃಷ್ಟಿಕೋನವೇ ಇಲ್ಲ. ಜಾಹೀರಾತು ಕೊಟ್ಟವರನ್ನೆಲ್ಲ ವೇದಿಕೆಯಲ್ಲಿ ಕೂರಿಸಿದ್ರು. ಪ್ರತಿ ಗೋಷ್ಠಿಗಳಲ್ಲೂ ಪುರುಷರನ್ನು ಕೂರಿಸಿದ್ರು. ಪ್ರಾಧಿಕಾರದ ಅಧ್ಯಕ್ಷರಿಗೆ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಿಗೆ ಗೋಷ್ಠಿಗಳಲ್ಲಿ ಅವಕಾಶ ಮಾಡಿಕೊಟ್ಟಿದ್ರು. ನಮ್ಮ ಲೇಖಕಿಯರಿಗೆ ವೇದಿಕೆ ಕೊಡಬೇಕು ಎಂಬುದನ್ನು ಮರೆತಿದ್ದರು” ಎಂದು ಹೇಳಿದರು.

ಇದನ್ನೂ ಓದಿ ‘ರಾಹುಲ್ ಗಾಂಧಿ ಎದೆಗೆ ಗುಂಡು ಹೊಡಿತೀವಿ’; ಬಿಜೆಪಿ ನಾಯಕನಿಂದ ಕೊಲೆ ಬೆದರಿಕೆ, ಕಾನೂನು ಕ್ರಮಕ್ಕೆ ಆಗ್ರಹ

ತಮ್ಮ ಮೇಲಿನ ಆರೋಪಗಳಿಗೆ ಉತ್ತರಿಸಿದ ಅಧ್ಯಕ್ಷೆ ಡಾ ಎಚ್‌ ಎಲ್‌ ಪುಷ್ಪ, “ಸಮ್ಮೇಳನದಲ್ಲಿ ಉಳಿದ ಹಣವನ್ನು ʼಲೇಖಲೋಕʼ ಮತ್ತು ಸಮ್ಮೇಳನ ಸಂಚಿಕೆಯ ಪ್ರಕಟಣೆಗೆ ಬಳಸಲಾಗಿದೆ. ನನ್ನ ಅವಧಿಯಲ್ಲಿ ಒಂದು ʼಲೇಖಲೋಕʼವಾದರೂ ಬರಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಖಜಾಂಚಿಯವರ ಬಳಿ ಎಲ್ಲ ಲೆಕ್ಕ ಇದೆ. ನನ್ನ ಬಳಿ ರಸೀದಿ ಇದೆ. ಮುಂದಿನ ಸಭೆಯಲ್ಲಿ ವರದಿ ನೀಡಲಿದ್ದೇನೆ. ನನ್ನ ಅವಧಿ ಇದೇ ಸೆ.18ಕ್ಕೆ ಮುಗಿದಿದೆ. ಇನ್ನು ಮೂರು ತಿಂಗಳಲ್ಲಿ ಚುನಾವಣೆ ನಡೆಸಬೇಕಿದೆ. ಈಗ ರಾಜೀನಾಮೆ ನೀಡಿದವರ ಜಾಗಕ್ಕೆ ಬೇರೆಯವರನ್ನು ಆಯ್ಕೆ ಮಾಡಿ ಉಳಿದ ಪ್ರಕ್ರಿಯೆಗಳನ್ನು ಮುಗಿಸಬೇಕಿದೆ” ಎಂದರು.

***

ಒಟ್ಟಿನಲ್ಲಿ ʼಕರ್ನಾಟಕ ಲೇಖಕಿಯರ ಸಂಘʼ ಬೇರೆಲ್ಲ ಸಂಘ ಸಂಸ್ಥೆಗಳಿಂತ ಭಿನ್ನವಾಗಿ ಆದರ್ಶವಾಗಿ ಉಳಿಯಬೇಕಿತ್ತು. ಆದರೆ, ಇಂತಹ ನಕಾರಾತ್ಮಕ ಕಾರಣಗಳಿಗೆ ಸುದ್ದಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಇನ್ನು ಮುಂದಾದರೂ ಕಲೇಸಂ ಸ್ಥಾಪನೆಯ ಘನ ಉದ್ದೇಶ ಈಡೇರಿಸುವ ಕಡೆಗೆ ಎಲ್ಲರೂ ಸೇರಿ ಗಮನಹರಿಸಬೇಕಿದೆ. ಪ್ರಜ್ಞಾವಂತ ಮಹಿಳಾ ಸಾಹಿತಿಗಳೇ ಸ್ಥಾಪಿಸಿ ಮುನ್ನಡೆಸುತ್ತಿರುವ ಸಂಘ ಎಲ್ಲರನ್ನೂ ಒಳಗೊಂಡು ಮಹಿಳಾ ಸಾಹಿತ್ಯದ ಬೆಳವಣಿಗೆಗೆ ಕೊಡುಗೆ ನೀಡಲಿ ಎಂಬುದು ಎಲ್ಲರ ಆಶಯ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಾಹ್ಮಣ್ಯದ ಜನರು ಜಾತಿ ಗಣತಿಯನ್ನು ಯಾಕೆ ವಿರೋಧಿಸುತ್ತಾರೆ?

ಸಮೀಕ್ಷೆಯಿಂದ ಲಿಂಗಾಯತ ಹಾಗೂ ಒಕ್ಕಲಿಗರು ಒಳಗೊಂಡಂತೆ ಎಲ್ಲಾ ಅಹಿಂದ ವರ್ಗಗಳ ಸಾಮಾಜಿಕ,...

ಭೈರಪ್ಪ ಮತ್ತು ಕುತರ್ಕದ ಉರುಳು

ಅಂತಃಕರಣವೇ ಇಲ್ಲದಾತ ಅದು ಹೇಗೆ ಬರಹಗಾರನಾಗಲು ಸಾಧ್ಯ? ತನ್ನ ಸಹಜೀವಿಗಳ ಬಗ್ಗೆ...

ಪಹಲ್ಗಾಮ್ ದಾಳಿ, ಯುದ್ಧ ಮತ್ತು ಕ್ರಿಕೆಟ್- ಮೋದಿ ಅಸಹ್ಯ ರಾಜಕಾರಣಕ್ಕೆ ಎಲ್ಲವೂ ಬಲಿ

ಮೋದಿ ಅವರು ಏಷ್ಯಾ ಕಪ್ ಫೈನಲ್ ಗೆಲುವನ್ನು 'ಆಪರೇಷನ್ ಸಿಂಧೂರ್'ಗೆ ಹೋಲಿಸಿದ್ದಾರೆ....

ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-5 | ತೆರೆಮರೆಯ ನಾಯಕ ಸಜ್ಜಾದ್ ಕಾರ್ಗಿಲಿ: ಸಂದರ್ಶನ

ಲಡಾಖ್‌ಗೆ ರಾಜ್ಯವೊಂದರ ಸ್ಥಾನಮಾನ ಆಗ್ರಹದ ಆಂದೋಲನವನ್ನು ತೆರೆಮರೆಯಲ್ಲಿ ಅದೆಷ್ಟೋ ನಾಯಕರು ನಿರಂತರವಾಗಿ...

Download Eedina App Android / iOS

X