POCSO | ಶಿಕ್ಷೆ ನೀಡಲು ಸಂತ್ರಸ್ತೆಯ ಹೇಳಿಕೆಯಷ್ಟೇ ಸಾಕು- ಹೈಕೋರ್ಟ್‌ ತೀರ್ಪು ಸಂತ್ರಸ್ತರ ಪಾಲಿನ ಬೆಳಕಿಂಡಿ

Date:

“ಪೋಕ್ಸೊ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆ ವಿಶ್ವಾಸಾರ್ಹವಾಗಿದ್ದರೆ ಶಿಕ್ಷೆ ನೀಡಲು ಆ ಹೇಳಿಕೆಯನ್ನು ನ್ಯಾಯಾಲಯವು ಅವಲಂಬಿಸಬಹುದು” ಎಂದು ದೆಹಲಿ ಹೈಕೋರ್ಟ್‌ ಹೇಳಿದೆ. ಇದು ಅತ್ಯಾಚಾರ ಸಂತ್ರಸ್ತ ಮಕ್ಕಳ ಪಾಲಿಗೆ ಚಿಕ್ಕದೊಂದು ಬೆಳಕಿನ ಕಿರಣವಾಗಿದೆ. ದೇಶದಾದ್ಯಂತ ಪೂರಕ ಸಾಕ್ಷ್ಯ ಇಲ್ಲ, ಸಾಕ್ಷಿಗಳ ಕೊರತೆ ಮುಂತಾದ ಕಾರಣದಿಂದ ನಿಜವಾದ ಸಂತ್ರಸ್ತರಿಗೆ ಅನ್ಯಾಯವಾಗುವುದನ್ನು ತಪ್ಪಿಸಲು ಈ ತೀರ್ಪು ನೆರವಾಗಬಲ್ಲದು.

- Advertisement -

ಶಿಕ್ಷೆಯಾಗಿರುವ ಪೋಕ್ಸೊ ಪ್ರಕರಣವೊಂದರ ಮೇಲ್ಮನವಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್‌ನ ಹೇಳಿಕೆ ದೇಶದಾದ್ಯಂತ ಲಕ್ಷಾಂತರ ಪೋಕ್ಸೊ(POCSO) ಪ್ರಕರಣಗಳು ಇತ್ಯರ್ಥವಾಗದೆ ನನೆಗುದಿಗೆ ಬಿದ್ದಿರುವ ಈ ಸಮಯದಲ್ಲಿ ಬಹಳ ಮಹತ್ವದ್ದಾಗಿದೆ. 2017ರಲ್ಲಿ ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ ಹನ್ನೆರಡು ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಪ್ರಕರಣದ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್‌ ಪೀಠವು, “ಸಂತ್ರಸ್ತೆಯ ಹೇಳಿಕೆ ವಿಶ್ವಾಸಾರ್ಹವಾಗಿದ್ದರೆ ಶಿಕ್ಷೆ ನೀಡಲು ಆ ಹೇಳಿಕೆಯನ್ನು ನ್ಯಾಯಾಲಯವು ಅವಲಂಬಿಸಬಹುದು” ಎಂದು ಹೇಳಿದೆ. ಇದು ಅತ್ಯಾಚಾರ ಸಂತ್ರಸ್ತ ಮಕ್ಕಳ ಪಾಲಿಗೆ ಚಿಕ್ಕದೊಂದು ಬೆಳಕಿನ ಕಿರಣವಾಗಿದೆ. ದೇಶದಾದ್ಯಂತ ಪೂರಕ ಸಾಕ್ಷ್ಯ ಇಲ್ಲ, ಸಾಕ್ಷಿಗಳ ಕೊರತೆ ಮುಂತಾದ ಕಾರಣದಿಂದ ನಿಜವಾದ ಸಂತ್ರಸ್ತರಿಗೆ ಅನ್ಯಾಯವಾಗುವುದನ್ನು ತಪ್ಪಿಸಲು ಈ ತೀರ್ಪು ನೆರವಾಗಬಲ್ಲದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಪೋಕ್ಸೊ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು, ಮಾತ್ರವಲ್ಲ ಸಂತ್ರಸ್ತೆಯ ಗೌರವ, ಘನತೆಗೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕಿರುವುದು ಇಡೀ ವ್ಯವಸ್ಥೆಯ ಜವಾಬ್ದಾರಿ. ವಿಪರ್ಯಾಸವೆಂದರೆ, ವಿಚಾರಣೆಯ ವಿಳಂಬ ಧೋರಣೆಯಿಂದಾಗಿ ಬಹುತೇಕ ಪ್ರಕರಣಗಳಲ್ಲಿ ಸಂತ್ರಸ್ತೆಯೇ ದೂರು ವಾಪಸ್‌ ಪಡೆಯುವುದು, ರಾಜಿಯಾಗುವುದು, ಅಪರಾಧಿಯ ಜೊತೆಗೆ ಮದುವೆ ಮಾಡುವುದು ಮುಂತಾದ ಬೆಳವಣಿಗೆಗಳು ನಡೆಯುತ್ತಿವೆ. ಇದು ಪೋಕ್ಸೊ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ವಿಳಂಬ ನ್ಯಾಯಕ್ಕೆ ಸಂತ್ರಸ್ತರು ಜವಾಬ್ದಾರರಲ್ಲ. ಸಂತ್ರಸ್ತೆಯ ಕುಟುಂಬ ಬಡತನದ ಕಾರಣದಿಂದ ಕೋರ್ಟ್ ವಿಚಾರಣೆಯ ಬಗ್ಗೆ ನಿರಾಸಕ್ತಿ ತೋರುವುದು, ಕಾರ್ಮಿಕ ಕುಟುಂಬಗಳು ಕೆಲಸ ಬಿಟ್ಟು ಕೋರ್ಟ್‌ಗೆ ಅಲೆದಾಡುವ ಅವಮಾನಕರ ಸನ್ನಿವೇಶದಿಂದ ಬೇಸತ್ತು ಕೇಸಿನ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸಹಜ. ಅದು ಸಂತ್ರಸ್ತೆಗೆ ನ್ಯಾಯ ನಿರಾಕರಿಸಿದಂತೆ. ಆದರೆ ಒಮ್ಮೆ ಸಂತ್ರಸ್ತೆಯ ಹೇಳಿಕೆ ದಾಖಲಾದ ನಂತರ ಆಕೆ ಮತ್ತೆ ವಿಚಾರಣೆಯ ವೇಳೆ ನೀಡುವ ಹೇಳಿಕೆ ಪ್ರಾಮಾಣಿಕವಾಗಿದ್ದರೆ ಶಿಕ್ಷೆ ನೀಡಲು ಅಷ್ಟೇ ಸಾಕ್ಷ್ಯ ಸಾಕು ಎಂದು ದೆಹಲಿ ಹೈಕೋರ್ಟ್‌ ಹೇಳಿದೆ. ಇದನ್ನು ದೇಶದ ಎಲ್ಲ ಕೋರ್ಟ್‌ಗಳಲ್ಲಿರುವ ಪೋಕ್ಸೊ ಪ್ರಕರಣಗಳನ್ನು ನಡೆಸುತ್ತಿರುವ ಪೀಠಗಳು ಪಾಲಿಸುವ ಅಗತ್ಯವಿದೆ. ವಿಚಾರಣೆಯ ನೆಪದಲ್ಲಿ ವರ್ಷಾನುಗಟ್ಟಲೆ ಕೋರ್ಟ್‌ಗೆ ಅಲೆದಾಡಿಸುವುದು ಸಂತ್ರಸ್ತ ಕುಟುಂಬಕ್ಕೆ ಶಿಕ್ಷೆ ನೀಡಿದಂತೆಯೇ ಸರಿ. ಇದು ಪೋಕ್ಸೊ ಕಾಯ್ದೆ ಜಾರಿ ತಂದ ಉದ್ದೇಶವನ್ನೇ ಮರೆತಂತೆ.

ಪೋಕ್ಸೊ ಕಾಯ್ದೆ ರೂಪಿಸಿದ ಉದ್ದೇಶ ಏನಿತ್ತು ಹಾಗೂ ಜಾರಿಯಾದಾಗ ದೇಶದ ಜನರಲ್ಲಿ ಯಾವ ನಿರೀಕ್ಷೆ ಇತ್ತೋ ಅದು ಈ ಹದಿಮೂರು ವರ್ಷಗಳಲ್ಲಿ ಸಂಪೂರ್ಣವಾಗಿ ಮಣ್ಣುಪಾಲಾಗಿದೆ ಎಂಬುದನ್ನು ಸರ್ಕಾರದ ಅಂಕಿಅಂಶಗಳೇ ಹೇಳುತ್ತವೆ. ಜನಸಂಖ್ಯೆಗೆ ಅನುಗುಣವಾಗಿ ಕೋರ್ಟ್‌ಗಳ ಕೊರತೆಯ ನೆಪದಿಂದ ತ್ವರಿತ ವಿಚಾರಣೆ ನಡೆಯುತ್ತಿಲ್ಲ, ಅಪರಾಧಿಗಳಿಗೆ ಶಿಕ್ಷೆ ಆಗುತ್ತಿಲ್ಲ. ಕುಟುಂಬದ ಅಸಹಾಕಾರ, ಪೊಲೀಸರ ನಿರಾಸಕ್ತಿ, ಸಾಕ್ಷಿಯ ಕೊರತೆಯ ನೆಪ ಹೇಳಿ ಪ್ರಕರಣವನ್ನು ಹಳ್ಳ ಹಿಡಿಸಲಾಗುತ್ತಿದೆ. ಇವು ಪೋಕ್ಸೊ ಕಾಯ್ದೆಯನ್ನು ಗಾಳಿಗೆ ತೂರುವ ಪ್ರಯತ್ನಗಳಾಗಿವೆ.

delhi highcourt

ಪ್ರಭಾವಿ ಆರೋಪಿಗಳ ಬಂಧನದಂದಲೂ ವಿನಾಯ್ತಿ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಬಿ ಎಸ್‌ ಯಡಿಯೂರಪ್ಪ ಅವರ ಪ್ರಕರಣ ಇದಕ್ಕೊಂದು ತಾಜಾ ಉದಾಹರಣೆ. ಬಂಧನವಿಲ್ಲ, ವಿಚಾರಣೆಗೂ ತಡೆ ನೀಡಲಾಗಿದೆ. ಸಂತ್ರಸ್ತ ಬಾಲಕಿಗೆ ನ್ಯಾಯ ಮರೀಚಿಕೆಯಾಗಿದೆ. ಆರೋಪಿಯ ವಯಸ್ಸು, ಪ್ರತಿಷ್ಠೆ, ರಾಜಕೀಯ ಸ್ಥಾನಮಾನ ಪ್ರಕರಣದ ವಿಚಾರಣೆಗೆ ವಿನಾಯ್ತಿಗೆ ಕಾರಣವಾಗುವುದಾದರೆ, ಪುಟ್ಟ ಬಾಲಕಿಯ ಮೇಲೆ ಕಾಮದ ದೃಷ್ಟಿಯಿಂದ ಅಸಭ್ಯವಾಗಿ ನಡೆದುಕೊಳ್ಳುವಾಗ ಆ ವ್ಯಕ್ತಿಗೆ ತನ್ನ ವಯಸ್ಸು, ಸ್ಥಾನಮಾನ ನೆನಪಿರಬೇಕಲ್ವಾ? ಇದೇ ಅರ್ಥದಲ್ಲಿ ಹೈಕೋರ್ಟ್‌ನ ಒಂದು ಪೀಠ ಪ್ರಕರಣಕ್ಕೆ ತಡೆ ನೀಡಲು ನಿರಾಕರಿಸಿತ್ತು. ಮತ್ತೊಂದು ಪೀಠ ತಡೆ ನೀಡಿದೆ. ಇದಲ್ಲವೇ ವ್ಯವಸ್ಥೆಯ ವ್ಯಂಗ್ಯ?

ಪೋಕ್ಸೊ ಪ್ರಕರಣದ ವಿಚಾರಣೆ ನಡೆದು ಶಿಕ್ಷೆಯಾದ ಪ್ರಮಾಣ ಕೇವಲ 29%! ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 13,719 ಪೋಕ್ಸೊ ಕೇಸ್​ ದಾಖಲಾಗಿದೆ. ಶಿಕ್ಷೆಯಾಗಿದ್ದು 348 ಪ್ರಕರಣಗಳಲ್ಲಿ ಮಾತ್ರ! 2022ರಲ್ಲಿ 3209 ಪೋಕ್ಸೊ ಪ್ರಕರಣ ದಾಖಲಾಗಿದ್ದರೆ 2024ರಲ್ಲಿ ಈ ಸಂಖ್ಯೆ 4064ಕ್ಕೆ ಏರಿಕೆಯಾಗಿದೆ. ಈ ಮೂಲಕ ಶೇಕಡಾ 26ರಷ್ಟು ಪ್ರಕರಣಗಳು ಹೆಚ್ಚಳವಾಗಿವೆ. 2022ರಲ್ಲಿ ದಾಖಲಾಗಿದ್ದ 3,209 ಪ್ರಕರಣಗಳ ಪೈಕಿ 186 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿವೆ. ಇನ್ನು 1562 ಕೇಸ್​​ಗಳು ನ್ಯಾಯಾಲಯದಲ್ಲಿ ವಜಾಗೊಂಡರೆ, 1224 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಶಾಲೆ, ಮನೆ, ಹಾಸ್ಟೆಲ್‌, ಪೋಷಕರು ದುಡಿಯುವ ಜಾಗಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಪ್ರಕರಣಗಳು ತ್ವರಿತವಾಗಿ ನಡೆದು ಕಠಿಣ ಶಿಕ್ಷೆ ನೀಡುವ ಮೂಲಕ ಸಮಾಜಕ್ಕೊಂದು ಸ್ಪಷ್ಟ ಸಂದೇಶ ರವಾನೆಯಾಗುವ ಅಗತ್ಯವಿದೆ.

ದೇಶದ ಮಟ್ಟದಲ್ಲಿ 2.43 ಲಕ್ಷಕ್ಕೂ ಹೆಚ್ಚು POCSO ಪ್ರಕರಣಗಳು ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಉಳಿದಿವೆ ಎಂದು ವರದಿಯಾಗಿದೆ. ಫಾಸ್ಟ್-ಟ್ರ್ಯಾಕ್ ಕೋರ್ಟ್‌ಗಳ ಹೊರತಾಗಿಯೂ ಈ ಪ್ರಕರಣಗಳನ್ನು ತೆರವು ಮಾಡಲು ಒಂಬತ್ತು ವರ್ಷಗಳ ಕಾಲ ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಮಕ್ಕಳ ಲೈಂಗಿಕ ದೌರ್ಜನ್ಯವನ್ನು ತಡೆಯಲು ತಂದ ಕಾಯ್ದೆ ಜಾರಿಯಾಗಿ ಹದಿಮೂರು ವರ್ಷದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ತಿಂಗಳ ಮಗುವಿನ ಮೇಲೂ ಅತ್ಯಾಚಾರ ನಡೆಯುತ್ತಿದೆ ಎಂದರೆ ವ್ಯವಸ್ಥೆ ಅದೆಷ್ಟು ಹದಗೆಟ್ಟಿದೆ ಎಂದು ಅಂದಾಜಿಸಬಹುದು.

ಇತ್ತೀಚೆಗೆ ಬಾಲ ತಾಯಂದಿರ ಸಂಖ್ಯೆ ಹೆಚ್ಚುತ್ತಿದೆ. ಹದಿಹರೆಯದ ವಯಸ್ಸಿನಲ್ಲಿ ಮೊಬೈಲ್‌ ಸಾಮಾಜಿಕ ಮಾಧ್ಯಮಗಳ ಬಳಕೆಯ ಕಡೆಗೆ ಬೆಟ್ಟು ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಅಪರಿಚಿತರ ಸಂಪರ್ಕ ಸಾಧ್ಯವಾಗುತ್ತಿದೆ. ಅಪ್ರಾಪ್ತ ಬಾಲಕರೇ ಅತ್ಯಾಚಾರ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಶಾಲೆಯ ಶೌಚಾಲಯದಲ್ಲಿ ಅಪ್ರಾಪ್ತೆಗೆ ಹೆರಿಗೆಯಾಗುವುದು, ಮಗಳು ಬಸುರಿ ಎಂಬುದು ಮನೆಯವರ ಗಮನಕ್ಕೆ ಬರದಿರುವುದು, ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದಾಗ ತಿಂಗಳು ತುಂಬಿದ ಬಸುರಿ ಎಂದು ಗೊತ್ತಾಗುವುದು… ಇವೆಲ್ಲ ಸಾಮಾನ್ಯ ಸುದ್ದಿಗಳಾಗಿವೆ. ಆತಂಕ ಮೂಡಿಸಿರುವ ಬಾಲ ಗರ್ಭಿಣಿಯರ ಹೆಚ್ಚಳ ಮತ್ತು ಪೋಕ್ಸೊ ಪ್ರಕರಣಗಳ ನಿರ್ಲಕ್ಷ್ಯ ಒಂದಕ್ಕೊಂದು ಸಂಬಂಧ ಹೊಂದಿದೆ.

ಹನ್ನೊಂದು ವರ್ಷಗಳಲ್ಲಿ ದಾಖಲಾದ ಪ್ರಕರಣಗಳು

ಮಕ್ಕಳ ಲೈಂಗಿಕ ಅಪರಾಧಗಳಿಂದ ರಕ್ಷಣೆ ಕಾಯಿದೆ (POCSO), 2012, ನವೆಂಬರ್ 14, 2012 ರಂದು ಜಾರಿಗೆ ಬಂದಿತು. ಇದು 18 ವರ್ಷದೊಳಗಿನ ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)ತನ್ನ ವಾರ್ಷಿಕ ವರದಿಗಳಲ್ಲಿ POCSO ಪ್ರಕರಣಗಳ ಅಂಕಿಅಂಶಗಳನ್ನು ಸಂಗ್ರಹಿಸುತ್ತದೆ. 2014ರಿಂದ NCRB ಈ ಪ್ರಕರಣಗಳನ್ನು ನಿರ್ದಿಷ್ಟವಾಗಿ ದಾಖಲಿಸಲು ಆರಂಭಿಸಿತು. ಏಕೆಂದರೆ ಕಾಯಿದೆ 2012-2013ರಲ್ಲಿ ಹೊಸದಾಗಿತ್ತು.

2025 ರವರೆಗಿನ ಒಟ್ಟು ದಾಖಲಿತ ಪ್ರಕರಣಗಳು ಸರಿಸುಮಾರು 5,10,000. ಇದು ದಾಖಲಿತ ಪ್ರಕರಣಗಳನ್ನು (FIR) ಸೂಚಿಸುತ್ತದೆ. 97-99% ಸಂತ್ರಸ್ತರು ಹೆಣ್ಣುಮಕ್ಕಳು; 96.8% ಅಪರಾಧಿಗಳು ಸಂತ್ರಸ್ತರಿಗೆ ತಿಳಿದವರು (ಕುಟುಂಬದವರು/ಪರಿಚಿತರು). ಪೋಕ್ಸೊ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಬಂದಿವೆ. ಇದು ಸಮಾಜದಲ್ಲಿ ಕಾನೂನಿನ ಭಯ ಇಲ್ಲದಿರುವುದನ್ನು ತೋರಿಸುತ್ತದೆ.

ರಾಜ್ಯವಾರು ಮುಂಚೂಣಿ (2022)
ಉತ್ತರ ಪ್ರದೇಶ (7,955),
ಮಹಾರಾಷ್ಟ್ರ (7,467),
ಮಧ್ಯಪ್ರದೇಶ (6,000),
ತಮಿಳುನಾಡು (5,000)

ಬಾಕಿ ಮತ್ತು ಶಿಕ್ಷೆ: ಜನವರಿ 2023 ವರದಿಯಂತೆ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳಲ್ಲಿ (FTSCs) 2.43 ಲಕ್ಷಕ್ಕಿಂತ ಹೆಚ್ಚು ಬಾಕಿ ಪ್ರಕರಣಗಳು; ಶಿಕ್ಷೆ ದರ 3-14%.
1,023 ವಿಶೇಷ ನ್ಯಾಯಾಲಯಗಳು (389 ವಿಶೇಷ POCSO ನ್ಯಾಯಾಲಯಗಳು ಸೇರಿದಂತೆ) ಜನವರಿ 2025ರ ವೇಳೆಗೆ 3.06 ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸಿವೆ. ಆದರೆ ಇನ್ನೂ ಬಾಕಿ ಇವೆ. ಉದಾಹರಣೆಗೆ ಉತ್ತರ ಪ್ರದೇಶದ ಪ್ರಕರಣಗಳ ಇತ್ಯರ್ಥಕ್ಕೆ 22 ವರ್ಷಗಳು ಬೇಕು!

2025 ಆಂಶಿಕ ಡೇಟಾ: ದೇಶದಲ್ಲಿ ದಿನಕ್ಕೆ ಸರಾಸರಿ 170 ಪ್ರಕರಣಗಳು ದಾಖಲಾಗುತ್ತಿವೆ. ಆದರೆ 94%ಗೂ ಹೆಚ್ಚು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಕರ್ನಾಟಕದಲ್ಲಿ ಮೊದಲ ಎರಡು ತಿಂಗಳಲ್ಲಿ 612 ಪ್ರಕರಣಗಳು ದಾಖಲಾಗಿವೆ. ಇದು ಏರಿಕೆಯನ್ನು ಸೂಚಿಸುತ್ತವೆ.

ಪ್ರಾಸಿಕ್ಯೂಷನ್‌ಗೆ ಸಂತ್ರಸ್ತೆ ಮೇಲೆ ನಂಬಿಕೆ ಮುಖ್ಯ : ನ್ಯಾಯವಾದಿ ರಾಜಲಕ್ಷ್ಮಿ ಅಂಕಲಗಿ

ರೇಪ್‌ ಆಗಿರಲಿ, ಈ ತರದ ದೌರ್ಜನ್ಯ ಪ್ರಕರಣದಲ್ಲಿ, ಬೇರೆ ತರಹದ ಸಾಕ್ಷ್ಯ ಅಥವಾ ಪ್ರತ್ಯಕ್ಷ ಸಾಕ್ಷಿ ಇರಲ್ಲ. ಸಂತ್ರಸ್ತೆ ಒಬ್ಬಳೇ ಸಾಕ್ಷಿ ಆಗಿರುತ್ತಾಳೆ. ಸೆಕೆಂಡರಿ ಸಾಕ್ಷ್ಯ ಫೊರೆನ್ಸಿಕ್‌ ಸಾಕ್ಷ್ಯ. ಸಾಂದರ್ಭಿಕ ಸಾಕ್ಷ್ಯ ಕೊನೆಯದು. ಇಲ್ಲಿ ಎಲ್ಲಾ ಕೇಸುಗಳಲ್ಲಿ ಒಂದೇ ಪ್ಯಾರಾಮೀಟರ್‌ ಕಾಮನ್‌ ಆಗಿ ಬಳಸುವಂತಿಲ್ಲ. ಪ್ರತಿ ಕೇಸನ್ನು ಡಿಫರೆಂಟ್‌ ಆಗಿ ನೋಡಬೇಕು. ಕಾಮನ್‌ ಏನಂದ್ರೆ, ಪ್ರಾಸಿಕ್ಯೂಷನ್‌ಗೆ ಸಂತ್ರಸ್ತೆ ಮೇಲೆ ನಂಬಿಕೆ ಇರಬೇಕು. ೨೪ ಗಂಟೆಯೊಳಗೆ ಹೆಚ್ಚೆಂದರೆ ೪೮ ಗಂಟೆಯೊಳಗೆ ಎಲ್ಲಾ ಸಾಕ್ಷ್ಯ ಸಂಗ್ರಹ ಮಾಡಬೇಕು. ಆಗ ಚಾರ್ಜ್‌ಶೀಟ್‌ ಸ್ಟ್ರಾಂಗ್‌ ಆಗಿರುತ್ತದೆ. ಇವ್ಯಾವುದೂ ಇಲ್ಲದ ಸಂದರ್ಭದಲ್ಲಿ ಸಂತ್ರಸ್ತೆಯೊಬ್ಬಳೇ ಸಾಕ್ಷಿಯಾಗಿದ್ದಾಗ ಕೋರ್ಟ್‌ಗೆ ಮನವರಿಕೆಯಾದರೆ ಸಾಕು. ಕೋರ್ಟ್‌ ಒಂದು ಅಸೆಸ್‌ ಮಾಡಿದಾಗ, ಆಕೆ ಸಾಕ್ಷಿ ಹೇಳಲು ಅರ್ಹಳಿದ್ದಾಳೆ, ಮಾನಸಿಕವಾಗಿ ಗಟ್ಟಿ ಇದ್ದಾಗ ಕೋರ್ಟ್‌ ಆಕೆಯ ಹೇಳಿಕೆಯನ್ನು ಪರಿಗಣಿಸಲೇಬೇಕು.

ಬಲಾಢ್ಯರಿಗೆ ಮಣಿವ ಕಾನೂನು

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಬಿ ಎಸ್‌ ಯಡಿಯೂರಪ್ಪ ವಿರುದ್ಧ 2024 ಮಾಚ್ 14ರಂದು ಸದಾಶಿವನಗರ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಬಿಜೆಪಿ ಹಿರಿಯ ಮುಖಂಡ ಬಿ ಎಸ್‌ ಯಡಿಯೂರಪ್ಪ ದೂರು ದಾಖಲಾಗಿತ್ತು. ಬಿಜೆಪಿಯ ಕಾರ್ಯಕರ್ತೆಯೂ, ಯಡಿಯೂರಪ್ಪ ಅವರಿಗೆ ಪರಿಚಿತೆಯೂ ಆಗಿದ್ದ ಮಹಿಳೆ ಯಡಿಯೂರಪ್ಪನವರನ್ನು ಭೇಟಿಯಾಗಲು ಮಗಳ ಜೊತೆಗೆ ಡಾಲರ್ಸ್‌ ಕಾಲೋನಿಯ ಮನೆಗೆ ಹೋಗಿದ್ದಾಗ ಮಗಳನ್ನು ಯಡಿಯೂರಪ್ಪ ಅವರು ರೂಮಿಗೆ ಕರೆದೊಯ್ದು ಅಂಗಾಂಗ ಮುಟ್ಟಿ ಕಿರುಕುಳ ನೀಡಿದ್ದಾರೆ ಎಂಬುದು ಆರೋಪವಾಗಿತ್ತು. ರಾಜ್ಯ ಸರ್ಕಾರ ಪೋಕ್ಸೊ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿತ್ತು. 2024 ಜೂನ್‌ 27ರಂದು ಸಿಐಡಿ ಪೊಲೀಸರು ಚಾರ್ಜ್​ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಬಾಲಕಿ ದಾಖಲಿಸಿದ್ದ ಹಳೆಯ ಲೈಂಗಿಕ ಕಿರುಕುಳ ಕೇಸ್ ಬಗ್ಗೆ ವಿಚಾರಿಸುತ್ತಾ ಯಡಿಯೂರಪ್ಪ ಅವರು ರೂಮಿಗೆ ಕರೆದೊಯ್ದು ಅನುಚಿತವಾಗಿ ವರ್ತಿಸಿರುವುದನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್​ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಕೋರ್ಟ್ಗೆ ಚಾರ್ಜ್‌ಶೀಟ್‌ ಸಲ್ಲಿಸಿ ಒಂದು ವರ್ಷ ನಾಲ್ಕು ತಿಂಗಳು ಕಳೆದಿದೆ. ಈ ಮಧ್ಯೆ ಹೈಕೋರ್ಟ್‌ನ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪ್ರಕರಣ ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ವಿಪರ್ಯಾಸವೆಂದರೆ ಹೈಕೋರ್ಟ್‌ನ ಮತ್ತೊಂದು ಪೀಠ ವಿಚಾರಣೆಗೆ ತಡೆ ನೀಡಿದೆ.

bs yediyurappa

ಪೋಕ್ಸೊ ಪ್ರಕರಣಗಳನ್ನು ಕಾಲಮಿತಿಯೊಳಗೆ ಮುಗಿಸಬೇಕು ಎಂಬ ಕಾಯ್ದೆಯ ನಿಯಮ ಪಾಲನೆಯಾಗುತ್ತಿಲ್ಲ ಎಂಬುದಂತು ಸ್ಪಷ್ಟವಾಗಿ ಕಣ್ಣಿಗೆ ರಾಚುತ್ತಿದೆ. ಬಡ ಯಂಕ, ಸೀನ, ನಾಣಿಗೆ ಮತ್ತು ಅಧಿಕಾರಸ್ಥ ಯಡಿಯೂರಪ್ಪನವರಂಥ ಪ್ರಭಾವಿಗಳಿಗೆ ಬೇರೆ ಬೇರೆ ಕಾನೂನು ಎಂಬುದನ್ನು ನ್ಯಾಯಧೀಶರೊಬ್ಬರು ಯಡಿಯೂರಪ್ಪನವರಿಗೆ ಜಾಮೀನು ನೀಡುವಾಗಲೇ ಪರೋಕ್ಷವಾಗಿ ಸಾರಿ ಹೇಳಿದ್ದರು. ವಾಸ್ತವದಲ್ಲಿ ಆಗುತ್ತಿರುವುದು ಅದೇ. ರಾಜಕಾರಣಿಗಳು, ರಾಜಕಾರಣಿಗಳ ಮಕ್ಕಳು, ಧಾರ್ಮಿಕ ಮುಖಂಡರು, ಆರ್ಥಿಕವಾಗಿ ಬಲಿಷ್ಠರಾಗಿರುವ ವ್ಯಕ್ತಿಗಳ ಮೇಲೆ ಆರೋಪ ಬಂದಾಗ ಪೊಲೀಸರು ಮತ್ತು ನ್ಯಾಯಾಂಗ ವ್ಯವಸ್ಥೆ ನಡೆದುಕೊಳ್ಳುವ ರೀತಿ ಪಕ್ಷಪಾತಿಯಿಂದ ಕೂಡಿರುತ್ತದೆ ಎಂಬುದು ಸುಳ್ಳೇನಲ್ಲ.

ವ್ಯವಸ್ಥೆಯ ಈ ಎಲ್ಲ ನಿರ್ಲಕ್ಷ್ಯ, ಪಕ್ಷಪಾತ ಧೋರಣೆಯ ಕಾರಣಕ್ಕೆ ಸಂತ್ರಸ್ತ ಮಕ್ಕಳು ಜೀವನವಿಡೀ ನೋವು ಪಡುವಂತೆ ಮಾಡುವುದು, ಅವಮಾನ, ಸೋಲಿನ ಹತಾಶೆಯಿಂದ ನಲುಗುವಂತೆ ಮಾಡುವುದು ಸ್ವಸ್ಥ ಸಮಾಜಕ್ಕೆ ಮಾರಕ. ಈ ನಿಟ್ಟಿನಲ್ಲಿ ದೆಹಲಿ ಹೈಕೋರ್ಟ್‌ ಈ ಹೇಳಿಕೆ ಪೋಕ್ಸೊ ಪ್ರಕರಣದ ವಿಚಾರಣೆಯ ಸಂದರ್ಭಗಳಲ್ಲಿ ಅನುಸರಣೆ ಆದರೆ ಸಂತ್ರಸ್ತರಿಗೆ ನ್ಯಾಯ ನೀಡುವ ಹಾದಿಯಲ್ಲಿ ಹೊಸ ಬೆಳಕು ಮೂಡಲಿದೆ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ವಿಬಿ-ಜಿ ರಾಮ್‌ ಜಿ’ ಅನುಷ್ಠಾನದಲ್ಲಿ ಎಡವಟ್ಟು! ಕೂಲಿ ಸಿಗದೆ ಕಂಗಾಲಾದ ಬಡ ಕಾರ್ಮಿಕರು

ಗ್ರಾಮೀಣ ಬಡ ಕುಟುಂಬಗಳಿಗೆ ಆಸರೆಯಾಗಬೇಕಿದ್ದ ‘ವಿಬಿ-ಜಿ ರಾಮ್ ಜಿ’ (VB-G RAM...

ಖಾಲಿಯಾಗುತ್ತಿವೆ ಉತ್ತರ ಕನ್ನಡದ ಹಳ್ಳಿಗಳು: 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶೂನ್ಯ ಜನವಸತಿ!

ಮಕ್ಕಳ ಗದ್ದಲ, ಕೃಷಿ ಚಟುವಟಿಕೆಯ ಹಿಗ್ಗು, ಹಬ್ಬ-ಹರಿದಿನಗಳ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಹಳ್ಳಿಗಳು...

ಚುನಾವಣಾ ಆಯೋಗದ ಸಭೆ: ಪರಿಹಾರವಲ್ಲ, ತೇಪೆ ಹಚ್ಚುವ ಕಾರ್ಯಕ್ರಮ

ಅವೈಜ್ಞಾನಿಕ 'SIR' ಪ್ರಕ್ರಿಯೆ ಮತ್ತು ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಸಾರ್ವಜನಿಕವಾಗಿ ಬಯಲಾದ ಬೆನ್ನಲ್ಲೇ...