ಲಂಡನ್ನಲ್ಲಿ ನಿಂತು “ಭಾರತದ ಒಗ್ಗಟ್ಟಿಗೆ ಏಕರೂಪತೆ ಅಗತ್ಯವಿಲ್ಲ” ಎಂದು ಸೌಹಾರ್ದದ ಮಂತ್ರ ಜಪಿಸಿರುವ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಮಾತುಗಳಿಗೂ, ಭಾರತದ ನೆಲದಲ್ಲಿ ಸಂಘಪರಿವಾರ ನಡೆಸುತ್ತಿರುವ ವಾಸ್ತವ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ವಿದೇಶಗಳಲ್ಲಿ ‘ವೈವಿಧ್ಯವೇ ಸಹಜ’ ಎನ್ನುವ, ದೇಶದೊಳಗೆ ನಿರ್ದಿಷ್ಟ ಸಮುದಾಯಗಳನ್ನು ಪರದೇಶಿಗಳಂತೆ ನಡೆಸಿಕೊಳ್ಳುವ, ಬುಲ್ಡೋಜರ್ ನ್ಯಾಯದಂತಹ ದ್ವೇಷದ ರಾಜಕಾರಣಕ್ಕೆ ಸಮ್ಮತಿ ನೀಡುವ ಅವರ ಇಬ್ಬಗೆಯ ನೀತಿ ಜಗಜ್ಜಾಹೀರಾಗಿದೆ.
ಹಿಂದೂ ರಾಷ್ಟ್ರ ಎಂಬ ಕಲ್ಪನೆಯು ಕೇವಲ ಧರ್ಮ, ಪೂಜಾ ವಿಧಾನ ಅಥವಾ ಜೀವನಶೈಲಿಯನ್ನು ಆಧರಿಸಿಲ್ಲ, ಬದಲಾಗಿ ಅದು ವೈವಿಧ್ಯತೆಯ ಸ್ವೀಕಾರವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ. ಲಂಡನ್ನಲ್ಲಿ ಭಾರತೀಯ ಡಯಾಸ್ಪೊರಾವನ್ನು (ಪ್ರವಾಸಿ ಭಾರತೀಯರು) ಉದ್ದೇಶಿಸಿ ಮಾತನಾಡಿದ ಅವರು, “ಒಗ್ಗಟ್ಟಿಗೆ ಏಕರೂಪತೆಯೇ ಇರಬೇಕೆಂಬ ಅಗತ್ಯವಿಲ್ಲ” ಎಂದಿದ್ದಾರೆ. ಆರ್ಎಸ್ಎಸ್ನ ಶತಮಾನೋತ್ಸವದ ಅಂಗವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, “ಯಾವುದೇ ಧಾರ್ಮಿಕ ಆಚರಣೆ ಅಥವಾ ಜೀವನಶೈಲಿಯ ಆಧಾರದ ಮೇಲೆ ‘ಹಿಂದೂ’ ಎಂಬ ಪದವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅದು ಒಂದು ಸ್ವಭಾವ. ಎಲ್ಲಾ ರೀತಿಯ ವೈವಿಧ್ಯತೆಗಳನ್ನು ಗೌರವಿಸುವ ಮತ್ತು ಸ್ವೀಕರಿಸುವ ಗುಣವದು. ನಾಸ್ತಿಕತೆ ಸೇರಿದಂತೆ ಎಲ್ಲಾ ರೀತಿಯ ವಿಚಾರಧಾರೆಗಳು ಭಾರತದಿಂದಲೇ ಬಂದಿವೆ. ಪ್ರತಿಯೊಬ್ಬರ ಹಾದಿಯೂ ಸತ್ಯವೆಂದೇ ಎಲ್ಲರೂ ಹೇಳುತ್ತಾರೆ. ನಾವೆಲ್ಲರೂ ಒಂದೇ ಗುರಿಯನ್ನು ತಲುಪಲಿದ್ದೇವೆ. ಹಾಗಾಗಿ ಒಬ್ಬರನ್ನೊಬ್ಬರು ಮತಾಂತರ ಮಾಡುವ ಅಗತ್ಯವಿಲ್ಲ. ‘ನಾವು ಮಾತ್ರ ಸರಿ’ ಎನ್ನುವುದಲ್ಲ, ‘ನಾವು ಸರಿ, ನೀವು ಕೂಡ ಸರಿ’ ಎನ್ನುವ ಮನೋಭಾವವೇ ಹಿಂದೂತ್ವ ಎಂದು ವಿವರಿಸಿದ್ದಾರೆ.
ಭಾಷೆ, ಧರ್ಮ ಅಥವಾ ಆಡಳಿತ ಮಾದರಿಯಂತಹ ಸಮಾನತೆಗಳ ಆಧಾರದ ಮೇಲೆ ಜನರು ಒಗ್ಗೂಡುವ ವ್ಯವಸ್ಥೆಯೇ ನೇಶನ್. ಆದರೆ, ‘ರಾಷ್ಟ್ರ’ ಎಂಬುದು ಒಂದು ಸಮಾನ ಉದ್ದೇಶದಿಂದ ವ್ಯಾಖ್ಯಾನಿಸಲ್ಪಡುತ್ತದೆ. ಬ್ರಿಟನ್ ಮತ್ತು ಭಾರತದ ಹಿತಾಸಕ್ತಿಗಳ ನಡುವೆ ಸಂಘರ್ಷ ಏರ್ಪಟ್ಟರೆ ಬ್ರಿಟಿಷ್ ಹಿಂದೂಗಳು ಹೇಗೆ ವರ್ತಿಸಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಬ್ರಿಟಿಷ್ ಹಿಂದೂಗಳು ‘ಪಕ್ಕಾ ಹಿಂದೂ’ಗಳಾಗಿದ್ದರೆ ಯಾವುದೇ ಸಂಘರ್ಷ ಎದುರಾಗುವುದಿಲ್ಲ. ಒಂದು ವೇಳೆ ಅಂತಹ ಪರಿಸ್ಥಿತಿ ನಿರ್ಮಾಣವಾದರೆ, ಅವರು ಸ್ವಾಭಾವಿಕವಾಗಿ ಬ್ರಿಟನ್ ಪರ ನಿಲ್ಲಬೇಕು. ಏಕೆಂದರೆ, ಹಿಂದುತ್ವವು ನಿಮ್ಮ ‘ಕರ್ಮಭೂಮಿ’ಗೆ ದ್ರೋಹ ಬಗೆಯಲು ಎಂದಿಗೂ ಹೇಳುವುದಿಲ್ಲ” ಎಂದು ಸ್ಪಷ್ಟಪಡಿಸಿದರು. ಒಗ್ಗಟ್ಟಿನ ಕುರಿತು ಮಾತನಾಡಿದ ಅವರು, ನಮ್ಮ ನಡುವಿನ ಭಿನ್ನಾಭಿಪ್ರಾಯಗಳಿಗಿಂತ ನಮ್ಮನ್ನು ಒಗ್ಗೂಡಿಸುವ ಸಮಾನ ಅಂಶಗಳ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದು ಕರೆ ನೀಡಿದರು.
ಕೆನಡಾದಲ್ಲಿ ನಡೆದ ‘Hindu Vishwa Bandhu – Embrace the World in Friendship’ ಕಾರ್ಯಕ್ರಮದಲ್ಲಿಯೂ ಮುಸ್ಲಿಮರು, ಕ್ರೈಸ್ತರು, ಯಹೂದಿಗಳು, ಪಾರ್ಸಿಗಳು ಸೇರಿದಂತೆ ವಿವಿಧ ಸಮುದಾಯಗಳು ಭಾರತದಲ್ಲಿ ಐತಿಹಾಸಿಕವಾಗಿ ಆಶ್ರಯ ಪಡೆದಿವೆ ಎಂದು ಭಾಗವತ್ ಪ್ರತಿಪಾದಿಸಿದ್ದರು.
ವಿದೇಶದ ವೇದಿಕೆಗಳಲ್ಲಿ ಭಾರತದ ಒಳಗೊಳ್ಳುವಿಕೆಯ ಸಂಸ್ಕೃತಿಯನ್ನು ಜಗತ್ತಿನ ಮುಂದೆ ಸಾರಲು ಪ್ರಯತ್ನಿಸಿರುವುದು ಹೆಮ್ಮೆಯ ಸಂಗತಿಯೇ. ಆದರೆ ಮಾತಿನಲ್ಲಿರುವ ವಸ್ತು ಕೃತಿಯಲ್ಲಿಯೂ ಇರಬೇಕಲ್ಲವೇ ಎನ್ನುವುದು ಪ್ರಶ್ನೆ. ಈ ದೇಶದಲ್ಲಿ ಹಬ್ಬಗಳಲ್ಲಿ ಭಾಗವಹಿಸುವುದರಿಂದ ಹಿಡಿದು ವ್ಯಾಪಾರ, ದೇವಸ್ಥಾನ ಪ್ರವೇಶ ಹಾಗೂ ಸಾರ್ವಜನಿಕ ಬದುಕಿನವರೆಗೆ ‘ಯಾರು ಒಳಗೆ, ಯಾರು ಹೊರಗೆ’ ಎಂಬುದನ್ನು ನಿರ್ಧರಿಸಲು ಒಂದು ಸಮುದಾಯ, ಧರ್ಮದ ಗಡಿಯನ್ನೆಳೆಯಲಾಗುತ್ತದೆ. ಭಾಗವತ್ರ ಮಾತುಗಳ ಹಿನ್ನೆಲೆಯಲ್ಲೇ ಇಂತಹ ಬೆಳವಣಿಗೆಗಳನ್ನು ನೋಡಿದಾಗ, ಸಂಘ ಪರಿವಾರದ ವಲಯದಲ್ಲಿ ‘ವೈವಿಧ್ಯ’ ಮತ್ತು ‘ಏಕತೆ’ಯ ಪರಿಕಲ್ಪನೆ ಹೇಗೆ ಅರ್ಥೈಸಲ್ಪಡುತ್ತಿದೆ ಎಂಬುದನ್ನು ಪರಿಶೀಲಿಸುವ ಅಗತ್ಯ ಎದುರಾಗುತ್ತದೆ.
ವಿದೇಶಿ ನೆಲದಲ್ಲಿ ವಾಸಿಸುವ ಭಾರತೀಯರಿಗೆ ಅವರ ಕರ್ಮಭೂಮಿಯ ನಿಷ್ಠೆಯನ್ನು ಮುಕ್ತವಾಗಿ ಬೆಂಬಲಿಸುವಂತೆ ತಿಳಿಸುವ ಆರ್ಎಸ್ಎಸ್ ಮುಖ್ಯಸ್ಥರು, ಭಾರತದ ನೆಲದಲ್ಲೇ ಹುಟ್ಟಿ ಬೆಳೆದಿರುವ ಅಲ್ಪಸಂಖ್ಯಾತರ ನಿಷ್ಠೆಯನ್ನು ಮಾತ್ರ ಪ್ರತಿ ಹೆಜ್ಜೆಯಲ್ಲೂ ಏಕೆ ಅನುಮಾನಿಸುತ್ತಾರೆ?
ಇದಕ್ಕೆ ಇತ್ತೀಚಿನ ಉದಾಹರಣೆ ಮಹಾರಾಷ್ಟ್ರದಲ್ಲಿ ಕಂಡುಬಂದಿದೆ. ನವರಾತ್ರಿ ಸಂದರ್ಭದಲ್ಲಿ ನಡೆಯುವ ಗರ್ಬಾ ಮತ್ತು ದಾಂಡಿಯಾ ಕಾರ್ಯಕ್ರಮಗಳಿಗೆ ಮುಸ್ಲಿಮರು ಪ್ರವೇಶಿಸಬಾರದು ಎಂದು ಆರ್ಎಸ್ಎಸ್ ಅಂಗಸಂಸ್ಥೆ ವಿಶ್ವ ಹಿಂದೂ ಪರಿಷತ್ (VHP) ಮಾರ್ಗಸೂಚಿ ನೀಡಿದೆ. ಕಾರ್ಯಕ್ರಮಕ್ಕೆ ಬರುವವರು ತಿಲಕ ಧರಿಸಬೇಕು, ಗುರುತಿನ ಪರಿಶೀಲನೆ ನಡೆಸಬೇಕು ಎಂಬ ಸೂಚನೆಯೂ ವರದಿಯಾಗಿದೆ. ಧಾರ್ಮಿಕ ಆಚರಣೆಯ ಪಾವಿತ್ರ್ಯ ಮತ್ತು ಭದ್ರತೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಎಂದು VHP ಹೇಳಿದರೂ, ಇದೇ ಬೆಳವಣಿಗೆ ಭಾಗವತ್ ಲಂಡನ್ನಲ್ಲಿ ಹೇಳಿದ ‘ವೈವಿಧ್ಯವನ್ನು ಒಪ್ಪಿಕೊಳ್ಳುವುದು’ ಎಂಬ ಪರಿಕಲ್ಪನೆಗೆ ವಿರುದ್ಧವಾಗಿ ನಿಲ್ಲುತ್ತದೆ.
ಮಧ್ಯಪ್ರದೇಶದ ಇಂದೋರ್ನ ಸಿತ್ಲಾ ಮಾತಾ ಬಜಾರ್ನಲ್ಲಿ ನೂರಾರು ವರ್ಷಗಳಿಂದ ಹಿಂದೂ ಮಾಲೀಕರು ಮತ್ತು ಮುಸ್ಲಿಂ ಮಾರಾಟಗಾರರು, ಟೈಲರ್ಗಳು ಹಾಗೂ ಕಾರ್ಮಿಕರು ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಅಂತಹ ಮಾರುಕಟ್ಟೆಯಲ್ಲಿ, ಇಂದೋರ್ ಬಿಜೆಪಿ ಘಟಕದ ಉಪಾಧ್ಯಕ್ಷ ಅಕ್ಲವ್ಯ ಗೌರ್ ಅವರು ಮುಸ್ಲಿಂ ಸಮುದಾಯದವರು ಮಾರುಕಟ್ಟೆ ತೊರೆಯಬೇಕು ಎಂದು ಗಡುವು ನೀಡಿದ್ದರು ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿತ್ತು.
ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಬಿಜೆಪಿ ಆಡಳಿತದ ಕೆಲವು ರಾಜ್ಯಗಳಲ್ಲಿ ಮುಸ್ಲಿಮರ ಮನೆ, ಅಂಗಡಿ ಮತ್ತು ಇತರ ಕಟ್ಟಡಗಳನ್ನು ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಧ್ವಂಸಗೊಳಿಸಿದ ಘಟನೆಗಳನ್ನು ಮಾನವ ಹಕ್ಕುಗಳ ಸಂಸ್ಥೆಗಳು ದಾಖಲಿಸಿವೆ. ‘ಬುಲ್ಡೋಜರ್ ಜಸ್ಟಿಸ್’ ಎಂದು ಕರೆಯಲ್ಪಟ್ಟ ಈ ಕ್ರಮಗಳಲ್ಲಿ ಕೆಲವು ಪ್ರಕರಣಗಳು ಸಾಮೂಹಿಕ ಶಿಕ್ಷೆಯ ಸ್ವರೂಪ ಪಡೆದಿವೆ ಎಂಬುದು Human Rights Watchನ ಆರೋಪ. 2024ರ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ಕೂಡ ಆಸ್ತಿಗಳನ್ನು ಧ್ವಂಸಗೊಳಿಸುವ ಮೊದಲು ಸೂಕ್ತ ಕಾನೂನು ಪ್ರಕ್ರಿಯೆ ಪಾಲಿಸಬೇಕೆಂದು ಮಾರ್ಗಸೂಚಿಗಳನ್ನು ನೀಡಿತ್ತು.
2025ರಲ್ಲಿ ಮತ್ತೊಂದು ಗಂಭೀರ ಬೆಳವಣಿಗೆ ಬಂಗಾಳಿ ಮಾತನಾಡುವ ಮುಸ್ಲಿಮರ ವಿಚಾರದಲ್ಲಿ ಕಾಣಿಸಿತ್ತು. ಅಕ್ರಮ ವಲಸಿಗರನ್ನು ಗುರುತಿಸುವ ಕಾರ್ಯಾಚರಣೆಯ ಹೆಸರಿನಲ್ಲಿ ಬಿಜೆಪಿ ಆಡಳಿತದ ಹಲವು ರಾಜ್ಯಗಳಲ್ಲಿ ಬಂಗಾಳಿ ಮುಸ್ಲಿಂ ಕಾರ್ಮಿಕರನ್ನು ವಶಕ್ಕೆ ಪಡೆದು ಬಾಂಗ್ಲಾದೇಶಕ್ಕೆ ಕಳುಹಿಸಿದ ಪ್ರಕರಣಗಳನ್ನು Human Rights Watch ದಾಖಲಿಸಿದೆ. ಇವರಲ್ಲಿ ಭಾರತೀಯ ನಾಗರಿಕರೂ ಇದ್ದರು ಎಂದು ಸಂಸ್ಥೆ ಹೇಳಿದೆ. ಮಹಾರಾಷ್ಟ್ರದಲ್ಲೇ ಪಶ್ಚಿಮ ಬಂಗಾಳದಿಂದ ಉದ್ಯೋಗಕ್ಕಾಗಿ ಬಂದಿದ್ದ ಕಾರ್ಮಿಕರನ್ನು ಬಂಧಿಸಿ ಗಡಿಗೆ ಕಳುಹಿಸಿದ ಪ್ರಕರಣಗಳೂ ವರದಿಯಾಗಿದ್ದವು; ಕೆಲವರನ್ನು ನಂತರ ಭಾರತೀಯ ನಾಗರಿಕರೆಂದು ದೃಢಪಟ್ಟ ಬಳಿಕ ವಾಪಸ್ ಕರೆತರಲಾಯಿತು.
ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆಯ ಮತ್ತೊಂದು ಮುಖ ಗೋವು ಮತ್ತು ಮಾಂಸದ ವಿಚಾರದಲ್ಲಿ ಗೋಚರಿಸುತ್ತಲೇ ಇದೆ. ವರದಿಗಳ ಪ್ರಕಾರ, 2024ರಲ್ಲಿ ಗೋಮಾಂಸ ಸೇವನೆ ಅಥವಾ ಗೋವು ಸಾಗಾಟದ ಅನುಮಾನದ ಮೇಲೆ ಹಿಂದೂ ಗುಂಪುಗಳಿಂದ ಮುಸ್ಲಿಂ ಪುರುಷರ ಮೇಲೆ ಹಲ್ಲೆಗಳ ಹಲವು ಪ್ರಕರಣಗಳು ನಡೆದಿವೆ. ಹರಿಯಾಣದಲ್ಲಿ ಪಶ್ಚಿಮ ಬಂಗಾಳದ 26 ವರ್ಷದ ಮುಸ್ಲಿಂ ವಲಸೆ ಕಾರ್ಮಿಕನನ್ನು ಕೊಲ್ಲಲಾಗಿತ್ತು ಎಂಬ ಪ್ರಕರಣವೂ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ರೈಲಿನಲ್ಲಿದ್ದ 72 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಹಲ್ಲೆ ನಡೆದಿತ್ತು.
ಇದನ್ನೂ ಓದಿ: ಏಕತೆಗೆ ಏಕರೂಪತೆಯ ಅಗತ್ಯವಿಲ್ಲ: ಲಂಡನ್ನಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಭಾಗವತ್ ಪ್ರತಿಪಾದನೆ
ಕ್ರೈಸ್ತ ಸಮುದಾಯವೂ ಇದೇ ರೀತಿಯ ಒತ್ತಡವನ್ನು ಎದುರಿಸುತ್ತಿರುವುದಾಗಿ ಮಾನವ ಹಕ್ಕುಗಳ ವರದಿಗಳು ಹೇಳುತ್ತವೆ. ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳಲ್ಲಿನ ‘ಬಲವಂತದ ಮತಾಂತರ’ ವಿರೋಧಿ ಕಾನೂನುಗಳು ಕ್ರೈಸ್ತರು, ವಿಶೇಷವಾಗಿ ದಲಿತ ಮತ್ತು ಆದಿವಾಸಿ ಕ್ರೈಸ್ತರನ್ನು ಗುರಿಯಾಗಿಸಲು ಬಳಸಲ್ಪಡುತ್ತಿವೆ ಎಂಬ ಆರೋಪಗಳಿವೆ. ಪ್ರಾರ್ಥನಾ ಸಭೆಗಳ ಮೇಲೆ ಕಿಡಿಗೇಡಿಗಳ ಗುಂಪುಗಳು ದಾಳಿ ನಡೆಸಿದ, ಪಾದ್ರಿಗಳ ಮೇಲೆ ಹಲ್ಲೆ ಮಾಡಿದ ಪ್ರಕರಣಗಳನ್ನೂ Human Rights Watch ದಾಖಲಿಸಿದೆ. ಅಂದರೆ ಧರ್ಮ ಬದಲಾವಣೆಯ ಆರೋಪವೂ ಕೆಲ ಸಂದರ್ಭಗಳಲ್ಲಿ ಒಂದು ನಿರ್ದಿಷ್ಟ ಸಮುದಾಯದ ಮೇಲಿನ ಸಾಮಾಜಿಕ ಅನುಮಾನಕ್ಕೆ ಕಾರಣವಾಗುತ್ತಿದೆ.
ಜಾಗತಿಕ ವೇದಿಕೆಗಳಲ್ಲಿ ಬಿಂಬಿತವಾಗುವ ಸಾಂಸ್ಕೃತಿಕ ಉದಾರತೆಯು ಭಾರತದ ನೆಲದಲ್ಲಿ ಯಾಕೆ ಪ್ರಾಯೋಗಿಕವಾಗಿ ರೂಪುಗೊಳ್ಳುತ್ತಿಲ್ಲ ಎಂಬುದು ಅತ್ಯಂತ ಗಂಭೀರ ಪ್ರಶ್ನೆ. ಭಾರತದೊಳಗಿನ ಅಲ್ಪಸಂಖ್ಯಾತರು ಮತ್ತು ದುರ್ಬಲ ವರ್ಗಗಳ ಸಾಂಸ್ಕೃತಿಕ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ಪದೇಪದೇ ಕಸಿದುಕೊಳ್ಳುತ್ತಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಒಬ್ಬ ಮುಸ್ಲಿಂ ಅಥವಾ ಕ್ರೈಸ್ತ ನಾಗರಿಕನನ್ನು ತನ್ನದೇ ದೇಶದಲ್ಲಿ ಪರದೇಶಿಯಂತೆ ನೋಡುವ ಧೋರಣೆ ಕೊನೆಯಾಗದ ಹೊರತು, ‘ವೈವಿಧ್ಯದಲ್ಲಿ ಏಕತೆ’ ಎಂಬ ಪರಿಕಲ್ಪನೆ ಬರೀ ಬೋಗಸ್ ಭಾಷಣವಾಗಿ ಕಾಣಿಸುತ್ತದೆ. ಮಾತಿನಲ್ಲೂ, ಕೃತಿಯಲ್ಲೂ ಏಕರೂಪತೆ ಇರುವ ಸಮಾನತೆಯ ಸಮಾಜ ನಿರ್ಮಾಣವಾದಾಗ ಮಾತ್ರ ಮೋಹನ್ ಭಾಗವತ್ ಅವರ ಲಂಡನ್ ಮಾತುಗಳಿಗೆ ನಿಜವಾದ ಅರ್ಥ ಸಿಗಲು ಸಾಧ್ಯ.





