ನೀರು ಕೊಟ್ಟ ನಜೀರ್ ಸಾಬ್, ಭಾವೈಕ್ಯತೆ ಸಾರಿದ ಶಿಶುನಾಳ ಷರೀಫ್, ಜೋಗದ ಸಿರಿ ಬಣ್ಣಿಸಿದ ಕೆ ಎಸ್ ನಿಸಾರ್ ಅಹಮದ್, ರಾಜ್ಯಕ್ಕಾಗಿ ಮಕ್ಕಳನ್ನೇ ತ್ಯಾಗ ಮಾಡಿದ ಟಿಪ್ಪು ಸುಲ್ತಾನ್, ಮೈಸೂರು ದಿವಾನರಾಗಿ ಹಳೆ ಮೈಸೂರಿಗೆ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದ ಸರ್ ಮಿರ್ಜಾ ಇಸ್ಮಾಯಿಲ್ ಅವರಿಂದಾಗಿ ಕನ್ನಡ, ಕರ್ನಾಟಕ ವಿಜೃಂಭಿಸಿದೆ...
ರಾಜ್ಯ ಸರ್ಕಾರವು 2025ನೇ ಸಾಲಿನ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯನವರು ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಶೇ.4 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಘೋಷಿಸಿದ್ದರು. ಬಜೆಟ್ನಲ್ಲಿ ತಿಳಿಸಿದಂತೆ ಮುಸ್ಲಿಮರಿಗೆ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮೀಸಲಾತಿ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಲಾಗಿದ್ದು, ಇದಕ್ಕೆ ಕೆಟಿಟಿಪಿ ಕಾಯ್ದೆ ತಿದ್ದುಪಡಿ ತರಲು ಸರ್ಕಾರ ಸಮ್ಮತಿಸಿದೆ. ಈ ಮೀಸಲಾತಿ ಅನ್ವಯ ರಾಜ್ಯದಲ್ಲಿ ಮುಸ್ಲಿಂ ಸಮುದಾಯದವರಿಗೆ 2 ಕೋಟಿ ರೂ. ತನಕ ಗುತ್ತಿಗೆ ಕಾಮಗಾರಿಗಳು ಹಾಗೂ 1 ಕೋಟಿ ರೂ. ವರೆಗೆ ಖರೀದಿ ಸೇವೆಗಳಲ್ಲಿ ಮೀಸಲಾತಿ ದೊರಕಲಿದೆ. ಈ ಮೊದಲು 1 ಕೋಟಿ ರೂವರೆಗೆ ಗುತ್ತಿಗೆ ಕಾಮಗಾರಿಗಳನ್ನು ಮುಸ್ಲಿಂ ಸಮುದಾಯದವರು ಪಡೆದುಕೊಳ್ಳುತ್ತಿದ್ದರು. ಈಗ ಎರಡು ಕೋಟಿ ರೂ.ವರೆಗೆ ಏರಿಕೆ ಮಾಡಲಾಗಿದೆ. ಕಾಲಕ್ಕನುಗುಣವಾಗಿ, ಕಾನೂನಿನ ನಿಯಮಾನುಸಾರ ಗುತ್ತಿಗೆಯ ಮೀಸಲಾತಿಯನ್ನು ಹೆಚ್ಚಳಗೊಳಿಸಲಾಗಿದೆ. ಆದರೆ ದ್ವೇಷ ರಾಜಕಾರಣ ಮಾಡುತ್ತಿರುವ ಬಿಜೆಪಿ ನಾಯಕರು ಗುತ್ತಿಗೆ ಮೀಸಲಾತಿಯನ್ನು ವಿರೋಧಿಸುತ್ತಿದ್ದಾರೆ.
ಕರ್ನಾಟಕ ಮಾತ್ರವಲ್ಲದೆ ಹಲವು ರಾಜ್ಯಗಳಲ್ಲೂ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ವಿವಿಧ ಸಂದರ್ಭಗಳಲ್ಲಿ ಮೀಸಲಾತಿಯಲ್ಲಿ ವಿನಾಯಿತಿ ನೀಡಲಾಗಿದೆ. ರಾಜ್ಯ ಸರ್ಕಾರ ಒಬಿಸಿ (ಇತರ ಹಿಂದುಳಿದ ವರ್ಗ) ಅಡಿಯಲ್ಲಿ ಮೀಸಲಾತಿ ನೀಡಿದೆ ವಿನಾ ಮತ್ತೇನಿಲ್ಲ. ಆದರೆ ವಿಪಕ್ಷ ಬಿಜೆಪಿಯವರು ಇದನ್ನೇ ಧಾರ್ಮಿಕ ವಿಷಯವನ್ನಾಗಿ ದೊಡ್ಡದು ಮಾಡುತ್ತಿದ್ದಾರೆ.
ಬಡತನ, ನಿರುದ್ಯೋಗ, ಸಾಮಾಜಿಕ ನ್ಯಾಯ ಮುಂತಾದ ವಿಷಯಗಳಲ್ಲಿ ರಾಜಕಾರಣ ಮಾಡದೆ ಪಕ್ಷ ಸ್ಥಾಪನೆಯಾದಾಗಿನಿಂದ ಸದಾ ಧರ್ಮದ ಆಧಾರದ ಮೇಲೆ ರಾಜಕೀಯ ಮಾಡುತ್ತಿರುವ ಭಾರತೀಯ ಜನತಾ ಪಕ್ಷದ ನಾಯಕರಿಗೆ ಒಟ್ಟಾರೆ ದೇಶ ಹಾಗೂ ರಾಜ್ಯದ ಅಭಿವೃದ್ಧಿ ಬೇಕಿಲ್ಲ. ಆರ್ಥಿಕವಾಗಿ ಮಾತ್ರವಲ್ಲದೆ ಸಾಮಾಜಿಕವಾಗಿ ಹಿಂದುಳಿದಿರುವ ಎಲ್ಲ ಧರ್ಮದವರನ್ನು ಅಭಿವೃದ್ಧಿಗೊಳಿಸುವುದು ಬಿಜೆಪಿಯವರ ಆಸೆಯಲ್ಲ. ಮೂರ್ನಾಲ್ಕು ದಶಕಗಳಿಂದ ಕೇಂದ್ರದಲ್ಲಿ ಮಾತ್ರವಲ್ಲದೆ, ರಾಜ್ಯಗಳಲ್ಲಿಯೂ ಸಹ ಮುಸ್ಲಿಂ ವಿರೋಧಿ ನೀತಿಯನ್ನು ಅಳವಡಿಸಿಕೊಂಡು ರಾಜಕೀಯ ಮಾಡುತ್ತಾ ಬರುತ್ತಿದ್ದಾರೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ವಿಶ್ವಕ್ಕೆ ಶ್ರೇಷ್ಠವಾದ ಸಂವಿಧಾನವನ್ನು ಬಹುತೇಕ ಕೇಸರಿ ಹಾಗೂ ಸಂಘಪರಿವಾರದ ನಾಯಕರು ಆಗಲೂ ಒಪ್ಪುತ್ತಿರಲಿಲ್ಲ ಈಗಲೂ ಸ್ವೀಕರಿಸಲು ಮನಸ್ಸಿಲ್ಲದೆ ಬಹಿರಂಗವಾಗಿ ವಿರೋಧಿಸುತ್ತಾರೆ. ‘ಮುಸ್ಲಿಮರಿಗೆ ಬಹುಪಾಲು ಇತರರಿಗೆ ಅಲ್ಪಪಾಲು’ ಎಂದು ಎಲ್ಲೆಡೆ ಪ್ರಚಾರ ಮಾಡುತ್ತಿದ್ದಾರೆ.
ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ; ಬಿಜೆಪಿ ವಿರೋಧವೇ ಅಸಾಂವಿಧಾನಿಕ
ಕರ್ನಾಟಕದಲ್ಲಿ ಗುತ್ತಿಗೆ ಕಾಮಗಾರಿ ಹಂಚುವಲ್ಲಿಯೂ ಶೇ.4 ಮೀಸಲಾತಿ ನಿಗದಿಪಡಿಸುವ ಮೂಲಕ ಸಮಾಜದಲ್ಲಿ ಒಡಕು ಮೂಡಿಸಲಾಗುತ್ತಿದೆ ಎಂದು ಎಲ್ಲೆಡೆ ಬಿಜೆಪಿ ನಾಯಕರು ಅಬ್ಬರಿಸುತ್ತಿದ್ದಾರೆ. ಆದರೆ ಧರ್ಮ – ಧರ್ಮಗಳ ನಡುವೆ ಬಿರುಕು ಮೂಡಿಸುವ ಕೆಲಸವನ್ನು ಎಷ್ಟೋ ವರ್ಷಗಳ ಹಿಂದೆಯೇ ಶುರು ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಸಾಮಾಜಿಕ ನ್ಯಾಯ ಎಂಬ ಪದವನ್ನೇ ಮರೆಯುವ ಭಾರತೀಯ ಜನತಾಪಕ್ಷದ ನಾಯಕರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಂವಿಧಾನಕ್ಕೆ ದ್ರೋಹವೆಸಗುವ ಕೆಲಸವನ್ನು ಶುರುವಿಟ್ಟುಕೊಳ್ಳುತ್ತಾರೆ. ಅಲ್ಪಸಂಖ್ಯಾತರಾಗಿರುವ ಮುಸ್ಲಿಂ ಸಮುದಾಯಕ್ಕೂ ಕೂಡ ಇತರ ಎಲ್ಲ ಧರ್ಮ, ಜಾತಿ ಸಮುದಾಯಗಳಂತೆ ಸಮಾನವಾಗಿ ಹಕ್ಕು, ಸವಲತ್ತುಗಳು ಹಂಚಿಕೆಯಾಗಬೇಕು ಎಂಬುದನ್ನು ಮರೆತು ‘ಅವರು ನಮ್ಮ ದೇಶದ ಪ್ರಜೆಗಳಲ್ಲ’ ಎಂದು ದ್ವೇಷ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡುವ ಮೂಲಕ ಸಮಾಜದಲ್ಲಿ ಕಿಚ್ಚು ಹಚ್ಚಲಾಗುತ್ತಿದೆ ಎಂದು ಹೇಳುತ್ತಿರುವ ಬಿಜೆಪಿಯ ಪ್ರಮುಖರು ತಾವು ಅಧಿಕಾರಕ್ಕೆ ಬಂದಾಗಲೆಲ್ಲ ಅಭಿವೃದ್ಧಿಯ ಕಡೆ ಗಮನ ಕೊಡದೆ ಸಂವಿಧಾನವನ್ನು ದುರ್ಬಲಗೊಳಿಸುವ ಹಾಗೂ ಅದರ ಮೂಲ ತತ್ವದ ಕತ್ತು ಹಿಸುಕುವ ಪ್ರಯತ್ನವನ್ನು ನಡೆಸುತ್ತ ಬಂದಿದ್ದಾರೆ. ಮುಸ್ಲಿಂ ಸಮುದಾಯವೂ ಸೇರಿದಂತೆ ಹಕ್ಕುಗಳಿಂದ ವಂಚಿತರಾದವರನ್ನು ಮೇಲಕ್ಕೆತ್ತುವ, ಅವರನ್ನು ಆರ್ಥಿಕ ಸಬಲರನ್ನಾಗಿ ಮಾಡುವುದು ಕೇಸರಿಯ ನಾಯಕರಿಗೆ ಸುತಾರಾಂ ಇಷ್ಟವಿಲ್ಲ. ಅಧಿಕಾರ ಸಿಕ್ಕಾಗಲೆಲ್ಲ ಒಡೆದು ಆಳುವ ನೀತಿಯನ್ನು ಅಸ್ತ್ರವನ್ನಾಗಿ ಮಾಡಿಕೊಂಡು ತಾವು ತಮ್ಮ ಸ್ವಹಿತ ಸಾಧಿಸಿಕೊಳ್ಳುತ್ತಿದ್ದಾರೆ.
ಬಿಜೆಪಿ ಹಾಗೂ ಸಂಘಪರಿವಾರದ ನಾಯಕರಲ್ಲಿ ಇಸ್ಲಾಂ ವಿರೋಧಿ ಮನಸ್ಥಿತಿ ಮೊದಲಿನಿಂದಲೂ ಇತ್ತು. ಆದರೆ ಕಳೆದ ಹತ್ತು ವರ್ಷಗಳ ಹಿಂದೆ ಕೇಂದ್ರದಲ್ಲಿ ಅಧಿಕಾರ ಬಂದ ನಂತರ ಇದು ಮತ್ತಷ್ಟು ಹೆಚ್ಚಾಗಿದೆ. ಕೋವಿಡ್ ಕಾಲದಲ್ಲಂತೂ ವೈರಸ್ಗಿಂತ ಹೆಚ್ಚು ಮುಸ್ಲಿಂ ಸಮುದಾಯ ಅಪಾಯಕಾರಿಗಳಾಗಿ ಬಿಂಬಿತಗೊಂಡರು. ಕುರ್ತಾ, ಪೈಜಾಮ, ಟೋಪಿ ಮತ್ತು ಗಡ್ಡವುಳ್ಳ ಚಿತ್ರವು ಕೊರೋನಾ ವೈರಸ್ಗೆ ಅನ್ವರ್ಥವಾಗಿ ಬಳಕೆಯಾಯಿತು. ಈ ದೇಶವನ್ನು ವಿಭಜಿಸಿದವರು ಮುಸ್ಲಿಮರು, ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಅವರ ಜನಸಂಖ್ಯೆ ಏರುತ್ತಿದೆ, ಹಿಂದೂಗಳ ಜನಸಂಖ್ಯೆ ಕುಂಠಿತವಾಗುತ್ತಿದೆ, ಮುಂದೊಂದು ದಿನ ಮುಸ್ಲಿಮರು ಬಹುಸಂಖ್ಯಾತರಾಗುತ್ತಾರೆ, ಹಿಂದೂಗಳಿಗಿರುವುದು ಒಂದೇ ದೇಶ. ಇಂತಹ ಹಲವಾರು ಪ್ರಚಾರಗಳು ನಿತ್ಯವು ಒಂದಲ್ಲ ಒಂದು ರೀತಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಬಳಕೆಯಾಗುತ್ತಲೆ ಇರುತ್ತದೆ. ಕೆಲವು ಸಂದರ್ಭಗಳಲಂತೂ ಏನೇ ತಪ್ಪು ನಡೆದರೂ ಎಲ್ಲದಕ್ಕೂ ಆ ಸಮುದಾಯವೆ ಕಾರಣಕರ್ತರು ಎಂದು ಬಿಂಬಿಸಲಾಗುತ್ತದೆ.
ರಾಜ್ಯದ ಎಲ್ಲ ಸಮುದಾಯಗಳ ರೀತಿ ಮುಸ್ಲಿಂ ಸಮುದಾಯ ಕೂಡ ಕರ್ನಾಟಕ ಹಾಗೂ ಕನ್ನಡ ಭಾಷೆಗಾಗಿ ಅನೇಕ ಕೊಡುಗೆ, ತ್ಯಾಗ ಬಲಿದಾನಗಳನ್ನು ನೀಡಿದೆ. ರಾಜ್ಯದ ಜನರು ನೀರಿಗಾಗಿ ಸಂಕಷ್ಟ ಪಡುತ್ತಿದ್ದ ಕಾಲದಲ್ಲಿ ಹಲವು ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿದ ನಜೀರ್ ಸಾಬ್, ಭಾವೈಕ್ಯತೆಯ ಮೂಲಕ ಕನ್ನಡ ಸಾಹಿತ್ಯಕ್ಕೆ ಮಹಾನ್ ಕೊಡುಗೆ ನೀಡಿದ್ದ ಶಿಶುನಾಳ ಷರೀಫ್, ನವೋದಯ ಸಾಹಿತ್ಯದ ಕೆ ಎಸ್ ನಿಸಾರ್ ಅಹಮದ್, ರಾಜ್ಯಕ್ಕಾಗಿ ಮಕ್ಕಳನ್ನೇ ತ್ಯಾಗ ಮಾಡಿದ ಟಿಪ್ಪು ಸುಲ್ತಾನ್, ಮೈಸೂರು ದಿವಾನರಾಗಿ ಹಳೆ ಮೈಸೂರು ಭಾಗಗಳಿಗೆ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದ ಸರ್ ಮಿರ್ಜಾ ಇಸ್ಮಾಯಿಲ್, ಬ್ಯಾಂಕಿಂಗ್ ಉದ್ಯಮದಲ್ಲಿ ರಾಷ್ಟ್ರಮಟ್ಟದಲ್ಲಿ ಛಾಪು ಮೂಡಿಸಿದ ‘ಕಾರ್ಪೊರೇಷನ್ ಬ್ಯಾಂಕ್’ ಸಂಸ್ಥಾಪಕ ಉಡುಪಿಯ ಅಬ್ದುಲ್ಲಾ ಹಾಜಿ ಖಾಸೀಂ ಸಾಹೇಬ್, ಖ್ಯಾತ ಶಿಕ್ಷಣ ತಜ್ಞ ಬೀದರ್ನ ಅಬ್ದುಲ್ ಖಾದೀರ್ ಸೇರಿದಂತೆ ನೂರಾರು ಸಾಧಕರು ರಾಜ್ಯದ ಏಳಿಗೆಗೆ ಕೊಡುಗೆ ನೀಡಿದ್ದಾರೆ. ಮುಸ್ಲಿಂ ಸಾಧಕರ ಕೊಡುಗೆಯಿಂದ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ವಿಜೃಂಭಿಸಿದೆ.
ಕರ್ನಾಟಕದಲ್ಲಿ ಒಂದು ಕಾಲದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಸಹಬಾಳ್ವೆಯಾಗಿ ಒಂದೇ ಗ್ರಾಮ ಹಾಗೂ ನಗರಗಳಲ್ಲಿ ಸಹ ಜೀವನ ನಡೆಸುತ್ತಿದ್ದರು. ಎಲ್ಲ ತಮ್ಮ ಕಷ್ಟಸುಖದಲ್ಲಿ ಭಾಗಿಯಾಗುತ್ತಿದ್ದರು. ಆದರೆ ಬಿಜೆಪಿ ನಾಯಕರಿಂದ ಧರ್ಮ ರಾಜಕಾರಣ ಹೆಚ್ಚಾದ ನಂತರ ದ್ವೇಷದ ಕಾರ್ಮೋಡ ಎಲ್ಲೆಡೆ ಆವರಿಸಿದೆ. ಮನಸ್ಸುಗಳು ಒಡೆದು ಹೋಗಿವೆ.

ಕರ್ನಾಟಕದ ಬಿಜೆಪಿ ಪಕ್ಸದವರಿಗೆ ರಾಜ್ಯಕ್ಕೆ ಹೆಸರು ತಂದ ತ್ಯಾಗ ಮಾಡಿದ ದುಡಿದ ಮುಸ್ಲಿಂ ಜನಾಂಗ ಬೇಕಾಗಿಲ್ಲ ಇವರಿಗೆ ಇವರ ಗುರು ಧೃತಾರಾಷ್ಟ್ರನ ಅವನ ಶಿಷ್ಯ ಗೃಹ ಮಂತ್ರಿಯ ಆದೇಶದ ಮತ್ತು ಗುಜರಾತಿ ಗುಲಾಮಗಿರಿ ಮಾಡುವ ಭಕ್ತಿಯಲ್ಲಿ ತೊಡಗಿದ್ದಾರೆ ರಾಜ್ಯಕ್ಕೆ ಅನ್ಯಾಯ ಆದಾಗ ಎದ್ದು ನಿಲ್ಲುವ ಶಕ್ತಿ ಕಳೆದುಕೊಂಡ ನರಸತ್ತವಂತರಂತೆ ನಡೆದು ಕೊಳ್ಳುತ್ತಿದ್ದಾರೆ