ಜ್ಯೋತಿ ಬಾ ಫುಲೆ ಬದಲಾಗಿ ಸರ್ವಪಲ್ಲಿ ರಾಧಾಕೃಷ್ಣನ್‌ ಜನ್ಮದಿನವನ್ನು ಶಿಕ್ಷಕರ ದಿನವೆಂದು ಆಚರಿಸುವುದೇಕೆ?

Date:

Advertisements
"ಸರ್ವಪಲ್ಲಿ ರಾಧಾಕಷ್ಣನ್ ಅವರು ವರ್ಣ ಮತ್ತು ಜಾತಿ ವ್ಯವಸ್ಥೆಯ ಬೆಂಬಲರಾಗಿದ್ದರು. ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಮತ್ತು ಲೇಖಕ ರಾಹುಲ್ ಸಾಂಕೃತ್ಯಾಯನ್ ರಾಧಾಕೃಷ್ಣನ್ ಅವರನ್ನು 'ಕಪಟ ಧಾರ್ಮಿಕ ಬೋಧಕ' ಎಂದು ಕರೆದಿದ್ದರು. ಜ್ಯೋತಿರಾವ್ ಫುಲೆಗೆ ಸಲ್ಲುವ ಸ್ಥಾನವನ್ನು ರಾಧಾಕೃಷ್ಣನ್ ಹೇಗೆ ಕಸಿದುಕೊಳ್ಳಬಹುದು" ಎಂದು ಪ್ರಶ್ನಿಸುತ್ತಾರೆ ಲೇಖಕ, ಅಂಕಣಕಾರ ಕನ್ವಲ್ ಭಾರತಿ.

ತತ್ವಜ್ಞಾನಿ, ಶಿಕ್ಷಣತಜ್ಞ, ಮತ್ತು ರಾಜಕಾರಣಿಯಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಜನ್ಮದಿನವನ್ನು ಪ್ರತಿ ವರ್ಷವೂ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದ ಮೊದಲ ಮತ್ತು ಎರಡನೇ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ರಾಧಾಕೃಷ್ಣನ್ ಅವರು 1888ರ ಸೆಪ್ಟೆಂಬರ್ 5ರಂದು ಜನಿಸಿದ್ದು ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ನೆನೆದು ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. 1962ರಲ್ಲಿ ರಾಧಾಕೃಷ್ಣನ್ ಅವರ ವಿದ್ಯಾರ್ಥಿಗಳು ಸೆಪ್ಟೆಂಬರ್ 5ರಂದು ಅವರ ಹುಟ್ಟುಹಬ್ಬವನ್ನು ಆಚರಿಸಲು ಮನವಿ ಮಾಡಿದಾಗ, ಆ ದಿನ ದೇಶಾದ್ಯಂತ ಎಲ್ಲಾ ಶಿಕ್ಷಕರಿಗೆ ಗೌರವಿಸಲು ಮೀಸಲಿಡುವಂತೆ ರಾಧಾಕೃಷ್ಣನ್ ಅವರೇ ಹೇಳಿದ್ದರು. ಅದರಂತೆ ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಆದರೆ ಅವರ ಪುತ್ರ ಸರ್ವಪಲ್ಲಿ ಗೋಪಾಲ್ ತಿಳಿಸಿರುವಂತೆ ರಾಧಾಕೃಷ್ಣನ್ ಅವರ ಜನ್ಮದಿನ 1887ರ ಸೆಪ್ಟೆಂಬರ್ 20. ಅದು ಭಿನ್ನ ವಿಚಾರ.

ಭಾರತೀಯ ತತ್ವಶಾಸ್ತ್ರ, ವಿಶೇಷವಾಗಿ ವೇದಾಂತ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಒಲವು ಹೊಂದಿದ್ದ ರಾಧಾಕೃಷ್ಣನ್, ‘ಇಂಡಿಯನ್ ಫಿಲಾಸಫಿ ಆಂಡ್ ದಿ ಹಿಂದೂ ವೀವ್ ಆಫ್ ಲೈಫ್’ ಎಂಬ ಪುಸ್ತಕಗಳನ್ನು ಬರೆದವರು. 1954ರಲ್ಲಿ ಭಾರತ ರತ್ನ, 1963ರಲ್ಲಿ ಬ್ರಿಟಿಷ್ ರಾಯಲ್ ಆರ್ಡರ್ ಆಫ್ ಮೆರಿಟ್ 1961ರಲ್ಲಿ ಜರ್ಮನ್ ‘ಪೀಸ್ ಪ್ರೈಜ್ ಆಫ್ ದಿ ಜರ್ಮನ್ ಬುಕ್ ಟ್ರೇಡ್’ ಎಂಬ ಮೊದಲಾದ ಗೌರವಗಳು ರಾಧಾಕೃಷ್ಣನ್ ಅವರಿಗೆ ಸಂದಿದೆ.

ಇದನ್ನು ಓದಿದ್ದೀರಾ? ಶಿಕ್ಷಕರ ದಿನಾಚರಣೆ | ವಿಜ್ಞಾನ ಓದಿ ಮೌಢ್ಯಕ್ಕೆ ಜೋತು ಬಿದ್ದರೆ ಶಿಕ್ಷಣ ನಿರರ್ಥಕ: ಸಿಎಂ ಸಿದ್ದರಾಮಯ್ಯ

Advertisements
Advertisements

ರಾಧಾಕೃಷ್ಣನ್ ಶಿಕ್ಷಣ ವೃತ್ತಿಗೆ ಘನತೆ ತಂದುಕೊಟ್ಟ ವ್ಯಕ್ತಿ ಎಂದು ನಾವು ಹೇಳಬಹುದು. ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನೂ ಅಲ್ಲಗಳೆಯಲಾಗದು. ಆದರೆ ನಿಜವಾಗಿಯೂ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಬಹುದು ಎನ್ನುವಷ್ಟು ಉತ್ತಮ ಸಾಧನೆ ಮಾಡಿದವರು, ಸಾಮಾಜಿಕವಾಗಿ ಯಾವುದೇ ವಿವಾದದಲ್ಲಿ ಸಿಲುಕದ ಶಿಕ್ಷಕರೇ ರಾಧಾಕೃಷ್ಣನ್? ಅಷ್ಟಕ್ಕೂ ಓರ್ವ ಜಾತಿವಾದಿ, ಮನುವಾದಿ ಆದರ್ಶ ಶಿಕ್ಷಕರಾಗಲು ಹೇಗೆ ಸಾಧ್ಯ?

ಮನುವಾದವನ್ನು ಸಮರ್ಥಿಸುತ್ತಿದ್ದ ರಾಧಾಕೃಷ್ಣನ್

ಮನುಸ್ಮೃತಿಯಲ್ಲಿ ಪ್ರತಿಪಾದಿಸಲಾಗುವ ಕೆಲವು ಜಾತಿವಾದಿ, ದಲಿತ ವಿರೋಧಿ, ಸ್ತ್ರೀ ವಿರೋಧಿ ನಿಯಮಗಳನ್ನು ಶಂಕರಾಚಾರ್ಯರಂತೆಯೇ ಸಮರ್ಥಿಸಿಕೊಂಡಿವರು ಸರ್ವಪಳ್ಳಿ ರಾಧಾಕೃಷ್ಣನ್ ಅವರು. “ಮನುಸ್ಮೃತಿ ಮೂಲತಃ ಧಾರ್ಮಿಕ ಗ್ರಂಥ. ಇದು ನೈತಿಕ ಮೌಲ್ಯಗಳ ಸಂಕಲನ. ಪದ್ಧತಿಗಳು ಮತ್ತು ಸಂಪ್ರದಾಯಗಳು ದುರ್ಬಲವಾಗುವ ಸಮಯದಲ್ಲಿ ಮನುಸ್ಮೃತಿ ಅದನ್ನು ಕಾಪಾಡಿದೆ” ಎಂಬುದು ರಾಧಾಕೃಷ್ಣನ್ ಅಭಿಪ್ರಾಯ. ಹಾಗೆಯೇ ವರ್ಣ (ಹುಟ್ಟಿನ ಆಧಾರದ ಮೇಲೆ ಜಾತಿ ನಿರ್ಣಯ) ‘ದೇವರ ಇಚ್ಛೆ’ ಎಂದು ನಂಬಿದ್ದ ರಾಧಾಕೃಷ್ಣನ್ ಈ ವರ್ಣವ್ಯವಸ್ಥೆ ದುರ್ಬಲವಾಗುವ ಬಗ್ಗೆ ವಿಷಾದಿಸಿದ್ದರು. ಅತ್ತ ‘ಹಾವು ಸಾಯಬಾರದೂ ಕೋಲು ಮುರಿಯಬಾರದು’ ಎಂಬ ರೀತಿಯಲ್ಲಿ ನಾಜೂಕಾಗಿ ಮನುವಾದವನ್ನು ರಾಧಾಕೃಷ್ಣನ್ ಸಮರ್ಥಿಸಿಕೊಂಡಿದ್ದಾರೆ.

ರಾಧಾಕೃಷ್ಣನ್ ತಮ್ಮ ಗ್ರಂಥಗಳಾದ The Hindu View of Life ಮತ್ತು Indian Philosophyನಲ್ಲಿ ಜಾತಿವ್ಯವಸ್ಥೆಯ ಬಗ್ಗೆ ಚರ್ಚಿಸಿದ್ದಾರೆ. ರಾಧಾಕೃಷ್ಣನ್ ಅವರು ಜನ್ಮಾಧಾರಿತ ಜಾತಿವ್ಯವಸ್ಥೆಯನ್ನು ಅಂದರೆ ಹುಟ್ಟಿದ ಕುಟುಂಬದ ಆಧಾರದಲ್ಲಿ ಜಾತಿ ನಿರ್ಧರಿಸುವುದನ್ನು ಟೀಕಿಸಿದರೂ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ವರ್ಣ ವ್ಯವಸ್ಥೆ ಒಂದು ಕಾಲದಲ್ಲಿ ಸಮಾಜವನ್ನು ಕಾರ್ಯಾತ್ಮಕವಾಗಿರುವಂತೆ ನೋಡಿಕೊಳ್ಳುವ ವಿಧಾನವೆಂದು ಹೇಳಿಕೊಂಡಿದ್ದಾರೆ. ಹಾಗೆಯೇ ವರ್ಣವ್ಯವಸ್ಥೆಯ ಮೂಲ ಉದ್ದೇಶ ವ್ಯಕ್ತಿಯ ಗುಣ ಮತ್ತು ಕರ್ಮ (ಗುಣ-ಕರ್ಮ) ಆಧಾರಿತವಾಗಿ ವಿಂಗಡಿಸುವುದು ಆಗಿತ್ತು, ಜನ್ಮಾಧಾರಿತವಾಗಿ ವಿಂಗಡಿಸುವುದು ಆಗಿರಲಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಅಂದರೆ ವ್ಯಕ್ತಿಯ ಗುಣ ಮತ್ತು ಆತ ಮಾಡಿದ ಕಾರ್ಯಫಲದ ಆಧಾರದಲ್ಲಿ ವರ್ಣ ವ್ಯವಸ್ಥೆಯನ್ನು ಮಾಡಲಾಗಿತ್ತು, ಹುಟ್ಟಿನಿಂದಲೇ ಆತ ಈ ಜಾತಿ ಎಂದು ಹೇಳುವುದು ಆಗಿರಲಿಲ್ಲ ಎಂದು ಹೇಳಿದ್ದಾರೆ. ಪರೋಕ್ಷವಾಗಿ ಈ ವರ್ಣ ವ್ಯವಸ್ಥೆ ಸರಿ, ಆದರೆ ಅದರ ರೀತಿ ಸರಿ ಎಂದಂತೆ ಅಲ್ಲವೇ? ವರ್ಣ ವ್ಯವಸ್ಥೆಯನ್ನು ಒಪ್ಪಿಕೊಂಡಂತೆ ಅಲ್ಲವೇ? ಇದರೊಂದಿಗೆ ಜನ್ಮಾಧಾರಿತ ಜಾತಿ ವ್ಯವಸ್ಥೆಯಿಂದ ಉಂಟಾದ ಅಸಮಾನತೆ ಮತ್ತು ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿಗಳನ್ನೂ ರಾಧಾಕೃಷ್ಣನ್ ವಿರೋಧಿಸಿದ್ದಾರೆ. ಇದರಿಂದಾಗಿ ಹಿಂದೂ ಧರ್ಮದ ಆಧ್ಯಾತ್ಮಿಕ ಏಕತೆಗೆ ಧಕ್ಕೆಯಾಗಿದೆ ಎಂದು ವಾದಿಸಿದ್ದಾರೆ.

ಇದನ್ನು ಓದಿದ್ದೀರಾ? ಕಲಬುರಗಿ | ನೇತಾಜಿ ಜನ್ಮದಿನಾಚರಣೆ; ವಿದ್ಯಾರ್ಥಿ ಸಂಘಟನೆಗಳ ಬೃಹತ್ ಮೆರವಣಿಗೆ

ತನ್ನ ತಂದೆಯ ಬಗ್ಗೆ ಗೋಪಾಲ್ ಮಾತು

ಅಂತಾರಾಷ್ಟ್ರೀಯ ಮಟ್ಟದ ಪ್ರಾಧ್ಯಾಪಕರೂ ಇತಿಹಾಸಕಾರರೂ ಆಗಿರುವ ಡಾ. ಸರ್ವಪಲ್ಲಿ ಗೋಪಾಲ್ ಅವರು ತಮ್ಮ ತಂದೆಯ ಕುರಿತು Radhakrishnan : A Biography ಎಂಬ ಪುಸ್ತಕವನ್ನು ಬರೆದಿದ್ದು, Oxford University Press 1989ರಲ್ಲಿ ಪ್ರಕಟಿಸಿದೆ. ಈ ಪುಸ್ತಕದಲ್ಲಿ ತಮ್ಮ ತಂದೆಯ ವ್ಯಕ್ತಿತ್ವ, ನಕಾರಾತ್ಮಕ, ವಿಮರ್ಶಾತ್ಮಕ ಗುಣಗಳ ಬಗ್ಗೆ ನಿಷ್ಠುರವಾಗಿ ಬರೆದಿದ್ದಾರೆ. ಪ್ರಾಮಾಣಿಕ ಮತ್ತು ವಿಮರ್ಶಾತ್ಮಕ ಬರಹಗಳಿಗೆ ಹೆಸರುವಾಸಿಯಾಗಿರುವ ಗೋಪಾಲ್ ಅವರು ತಮ್ಮ ತಂದೆಯ ಜೀವನಚರಿತ್ರೆಯಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ನ್ಯೂನತೆಗಳನ್ನು ಉಲ್ಲೇಖಿಸುವಲ್ಲಿ ಯಾವುದೇ ಹಿಂಜರಿಕೆ ತೋರಿಲ್ಲ.

Dr. S. Gopal

ಗೋಪಾಲ್ ಅವರು ತಮ್ಮ ತಂದೆಯ ವಿವಾಹೇತರ ಸಂಬಂಧಗಳ ಬಗ್ಗೆಯೂ ಈ ಜೀವನಚರಿತ್ರೆಯಲ್ಲಿ ಬರೆದಿದ್ದಾರೆ. ಹಾಗೆಯೇ ರಾಧಾಕೃಷ್ಣನ್ ಅವರ ಪಿತೃಪ್ರಭುತ್ವ((Patriarchy) ಮನಸ್ಥಿತಿಯನ್ನೂ ವಿವರಿಸಿದ್ದಾರೆ. ಗೋಪಾಲ್ ಹೇಳುವಂತೆ ರಾಧಾಕೃಷ್ಣನ್ ಅವರು ಶಿಕ್ಷಕರಾಗಿದ್ದರೂ ತಮ್ಮ ಐವರೂ ಹೆಣ್ಣುಮಕ್ಕಳ ಮದುವೆಯ ವೇಳೆ ಕನಿಷ್ಠ ತಮ್ಮ ಮಕ್ಕಳ ಒಪ್ಪಿಗೆಯನ್ನೂ ಪಡೆದಿಲ್ಲ. ನೀವು ಮದುವೆಗೆ ಸಿದ್ಧರಾಗಿದ್ದೀರಾ ಅಥವಾ ನಿಮಗೆ ಗಂಡು ಇಷ್ಟವಾಗಿದ್ದಾನೆಯೇ ಎಂದೂ ಕೇಳಿಲ್ಲ. ಅಷ್ಟು ಮಾತ್ರವಲ್ಲದೆ ಮದುವೆ ದಿನದಂದೇ ಮೊದಲ ಬಾರಿಗೆ ತಮ್ಮ ಜೀವನ ಸಂಗಾತಿಯನ್ನು ಈ ಹೆಣ್ಣುಮಕ್ಕಳು ನೋಡಿದ್ದರು. ಓರ್ವ ಸಾಮಾನ್ಯ ವ್ಯಕ್ತಿ ತಮ್ಮ ಕುಟುಂಬದ ಹೆಣ್ಣುಮಕ್ಕಳಿಗೆ ನೀಡುವ ಗೌರವಕ್ಕೂ ಓರ್ವ ಶಿಕ್ಷಕ ತಮ್ಮ ಕುಟುಂಬವನ್ನು ನಡೆಸಿಕೊಳ್ಳುವ ರೀತಿಗೂ ಖಂಡಿತವಾಗಿಯೂ ವ್ಯತ್ಯಾಸ ಇರಬೇಕಲ್ಲವೇ? ಅದರಲ್ಲಿಯೂ ದೇಶಾದ್ಯಂತ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಾಗ ಅವರ ಮೌಲ್ಯಗಳೂ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವಂತಿರಬೇಕಲ್ಲವೇ? “ಮಾನವನ ಮನವನು ಗೆದ್ದವನೇ ಗುರು, ಮಾನವನಿಗೆ ಗೌರವ ಕೊಡುವವನೇ ಜಾಣ ಸರ್ವಜ್ಞ”

ರಾಧಾಕೃಷ್ಣನ್ ಮೇಲಿರುವ ಕೃತಿಚೌರ್ಯದ ಆರೋಪ

ರಾಧಾಕೃಷ್ಣನ್ ಆಳವಾದ ಜ್ಞಾನವನ್ನು ಹೊಂದಿದ್ದವರು. ಇದನ್ನು ನಾವೆಲ್ಲರೂ ಒಪ್ಪಲೇಬೇಕು. ನೇರ, ನಿಷ್ಠುರವಾಗಿ ಬರೆಯುವ ರಾಧಾಕೃಷ್ಣನ್ ಅವರ ಪುತ್ರ ಗೋಪಾಲ್ ಕೂಡಾ ತಮ್ಮ ತಂದೆಯ ಜ್ಞಾನವನ್ನು ಶ್ಲಾಘಿಸಿದ್ದಾರೆ. ಇದರ ಜೊತೆಗೆ ರಾಧಾಕೃಷ್ಣನ್ ಮೇಲಿರುವ ಕೃತಿಚೌರ್ಯದ ಆರೋಪವನ್ನೂ ಜೀವನಚರಿತ್ರೆಯಲ್ಲಿ ಗೋಪಾಲ್ ಉಲ್ಲೇಖಿಸಿದ್ದಾರೆ. 1929ರಲ್ಲಿ ಹಳೆ ವಿದ್ಯಾರ್ಥಿ ಜಾದುನಾಥ್ ಸಿನ್ಹಾ ಎಂಬವರು ರಾಧಾಕೃಷ್ಣನ್ ಅವರ ಮೇಲೆ ಕೃತಿಚೌರ್ಯದ ಆರೋಪ ಮಾಡಿದ್ದರು. ತಾನು ಬರೆದ ಪ್ರಬಂಧದ ಭಾಗಗಳನ್ನು ರಾಧಾಕೃಷ್ಣನ್ ನಕಲು ಮಾಡಿದ್ದಾರೆ ಎಂದು ಸಿನ್ಹಾ ಆರೋಪಿಸಿದ್ದರು, ನ್ಯಾಯಾಲಯದ ಮೆಟ್ಟಿಲೂ ಏರಿದ್ದರು. ಆದರೆ ಕೋರ್ಟ್ ಅಳೆದು ಬೇಸತ್ತ, ಆರ್ಥಿಕವಾಗಿ ಬಿಕ್ಕಟ್ಟಿನ ಸ್ಥಿತಿಗೆ ತಲುಪಿದ, ಹಲವು ಕಡೆಗಳಿಂದ ಒತ್ತಡಕ್ಕೆ ಒಳಗಾದ ಸಿನ್ಹಾ ಕೊನೆಗೆ ಬೇರೆ ದಾರಿ ಕಾಣದೆ ನ್ಯಾಯಾಲಯದ ಹೊರಗೆ ಈ ಪ್ರಕರಣದ ಇತ್ಯರ್ಥ ಮಾಡಿಕೊಂಡರು.

ಓರ್ವ ಉತ್ತಮ ಶಿಕ್ಷಕ ವೈಯಕ್ತಿಕವಾಗಿಯೂ, ಶೈಕ್ಷಣಿಕವಾಗಿಯೂ ತನ್ನ ವಿದ್ಯಾರ್ಥಿಗಳನ್ನು ತಿದ್ದಬಲ್ಲಂತಹ ಸಾಮರ್ಥ್ಯ ಉಲ್ಲವರಾಗಿರಬೇಕು. ಶಿಕ್ಷಕರ ನಡೆ, ನುಡಿ, ಜೀವನ ಎಲ್ಲವೂ ಸಾಮಾನ್ಯವಾಗಿಯೇ ವಿದ್ಯಾರ್ಥಿ ಮೇಲೆ ಪ್ರಭಾವ ಬೀರುತ್ತದೆ. ಶಿಕ್ಷಕರ ಕಣ್ಣೋಟವೂ ವಿದ್ಯಾರ್ಥಿಯ ಮುಂದಿನ ಜೀವನಕ್ಕೆ ದಿಕ್ಸೂಚಿಯಾಗಬಲ್ಲದು. ಹಾಗಿರುವಾಗ ಓರ್ವ ಮನುವಾದಿ, ಜಾತಿವಾದಿ, ಸ್ತ್ರೀ ವಿರೋಧಿ ನಿಜವಾದ ಉತ್ತಮ ಶಿಕ್ಷಕರಾಗಲು ಸಾಧ್ಯವೇ? ನುಡಿಯುವುದೊಂದು ಮಾಡುವುದೊಂದು ಎಂಬ ಜೀವನವನ್ನು ರೂಢಿಸಿದ್ದವರನ್ನು ನಮ್ಮ ಆದರ್ಶ ವ್ಯಕ್ತಿ ಎಂದು ಹೇಗೆ ಪರಿಗಣಿಸುವುದು? ಜಾತಿ-ಲಿಂಗ ತಾರತಮ್ಯ ಮೀರಿ ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂದು ಸಾಮಾಜಿಕ ಹೋರಾಟ ನಡೆಸಿದ ಜ್ಯೋತಿ ಬಾ ಫುಲೆ, ಸಾವಿತ್ರಿ ಬಾ ಫುಲೆ ನಿಜವಾದ ಉತ್ತಮ ಶಿಕ್ಷಕರು ಹೌದಲ್ಲವೇ?

“ಸರ್ವಪಲ್ಲಿ ರಾಧಾಕಷ್ಣನ್ ಅವರು ವರ್ಣ ಮತ್ತು ಜಾತಿ ವ್ಯವಸ್ಥೆಯ ಬೆಂಬಲರಾಗಿದ್ದರು. ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಮತ್ತು ಲೇಖಕ ರಾಹುಲ್ ಸಾಂಕೃತ್ಯಾಯನ್ ರಾಧಾಕೃಷ್ಣನ್ ಅವರನ್ನು ‘ಕಪಟ ಧಾರ್ಮಿಕ ಬೋಧಕ’ ಎಂದು ಕರೆದಿದ್ದರು. ಜ್ಯೋತಿ ಬಾ ಫುಲೆಗೆ ಸಲ್ಲುವ ಸ್ಥಾನವನ್ನು ರಾಧಾಕೃಷ್ಣನ್ ಹೇಗೆ ಕಸಿದುಕೊಳ್ಳಬಹುದು” ಎಂದು ಪ್ರಶ್ನಿಸುತ್ತಾರೆ ಲೇಖಕ, ಅಂಕಣಕಾರ ಕನ್ವಲ್ ಭಾರತಿ.

Mayuri
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಡದಿ | ದೇಶದ ಮೊದಲ AI ನಗರವಾಗಲಿದೆಯೆ?

ಜಾಗತಿಕ ಮಟ್ಟದಲ್ಲಿ ಸಿಂಗಪೂರ್, ಸಿಯೋಲ್, ಬೀಜಿಂಗ್, ದುಬೈ ಹಾಗೂ ಸಾನ್ ಫ್ರಾನ್ಸಿಸ್ಕೊ...

ಭಾರತ-ಚೀನಾ-ರಷ್ಯಾ ದೋಸ್ತಿ: ಅಮೆರಿಕದ ನಿಲುವೇನು?

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಯೋಜಿಸಿದ್ದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ...

’12th Fail’ ಸೋಲುಸೋಲುತ್ತಾ ಗೆಲ್ಲುತ್ತಾ ಹೋದವನ ಜೀವನಗಾಥೆ

'12th Fail' ಮಹಾನ್ ವ್ಯಕ್ತಿಗಳ, ಸಾಧಕರ ಬದುಕನ್ನು ಕುರಿತಾದ ಸಿನಿಮಾವೇನಲ್ಲ. ಬಡತನದ...

ಶಿಕ್ಷಕರ ದಿನಾಚರಣೆ | ವಿದ್ಯಾರ್ಥಿಗಳ ಕಣ್ಣಲ್ಲಿ ಶಿಕ್ಷಕರು

ಶಿಕ್ಷಕರ ದಿನ- ಶಿಕ್ಷಕರನ್ನು ಗೌರವಿಸುವ, ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ತಿಳಿಸುವ...

Download Eedina App Android / iOS

X