ಸದ್ಯ ಲಭ್ಯವಾಗಬಹುದಾದ 8 ಟಿಎಂಸಿ ನೀರು ಕಟ್ಟ ಕಡೆಯ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರಕ್ಕೆ ತಲುಪಲು ಸಾಧ್ಯವೇ ಇಲ್ಲ ಎಂಬುದು ಹಲವು ತಜ್ಞರುಗಳ ಅಭಿಪ್ರಾಯ. ಹಾಗಿದ್ದಾಗ ಏಳು ಜಿಲ್ಲೆಗಳಿಗೆ ಮೂರು ವರ್ಷಗಳಲ್ಲಿ ನೀರು ನೀಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹೇಳುವುದು ಹೇಗೆ?
ಸಾಕಷ್ಟು ಪರ – ವಿರೋಧಗಳ ನಡುವೆಯೂ ಎತ್ತಿನಹೊಳೆ ಕುಡಿಯುವ ನೀರು ಯೋಜನೆ ಪ್ರಗತಿಯಲ್ಲಿದೆ. ಈ ಯೋಜನೆ ವಿಫಲವಾಗಲಿದೆ ಎಂಬ ಅಭಿಪ್ರಾಯ ಒಂದೆಡೆಯಾದರೆ, ಮತ್ತೊಂದೆಡೆ ಯೋಜನೆ ಸಫಲವಾದರೆ ಬರದಿಂದ ಬಸವಳಿದ ಬಯಲುಸೀಮೆಯ ಜಿಲ್ಲೆಗಳಿಗೆ ನೀರುಣಿಸಿದಂತಾಗುತ್ತದೆ ಎಂಬ ಆಶಯವಿದೆ. ಇವೆಲ್ಲವುದರ ನಡುವೆ ಈ ಒಂದು ಯೋಜನೆಯಿಂದ ಪರಿಸರಕ್ಕೆ, ಪ್ರಾಣಿಸಂಕುಲಕ್ಕೆ, ವನ್ಯಜೀವಿಗಳಿಗೆ, ಅರಣ್ಯ ಭೂಮಿಗೆ ಆಗುವ ಹಾನಿಯನ್ನು ನಾವು ಅಲ್ಲಗಳೆಯುವಂತಿಲ್ಲ. ಜೊತೆಗೆ ಈ ಯೋಜನೆ ಸಂಪೂರ್ಣವಾಗಿ ಯಶಸ್ಸು ಕಾಣಲಿದೆ ಎಂದು ಹೇಳಲಾಗದು.
ಈ ಸಮಗ್ರ ಕುಡಿಯುವ ನೀರು ಯೋಜನೆಯ ಕಾಮಗಾರಿಗೆ ಮತ್ತೆ 500 ಎಕರೆ (199 ಹೆಕ್ಟೇರ್) ಅರಣ್ಯಭೂಮಿ ಬಳಸಿಕೊಳ್ಳಲು ವಿಶ್ವೇಶ್ವರಯ್ಯ ಜಲ ನಿಗಮ ನಿರ್ಧರಿಸಿದೆ. ಇದಕ್ಕಾಗಿ ನಿಗಮ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯ ಸರ್ಕಾರವು ಎತ್ತಿನಹೊಳೆ ಯೋಜನೆ ಬಗ್ಗೆ ಒಂದೇ ಹಂತದಲ್ಲಿ ಪ್ರಸ್ತಾವನೆ ನೀಡದಿರುವುದು ಈಗಾಗಲೇ ಸಚಿವಾಲಯದ ಅಸಮಾಧಾನಕ್ಕೆ ಕಾರಣವಾಗಿದೆ. ಇದೀಗ ಮತ್ತೆ 500 ಎಕರೆ ಅರಣ್ಯ ಬಳಸಿಕೊಳ್ಳಲು ಪ್ರಸ್ತಾವನೆ ಕಳಿಸಿ ಸಚಿವಾಲಯದ ಕೆಂಗಣ್ಣಿಗೆ ಗುರಿಯಾಗಿದೆ.
ಗುರುತ್ವಾಕರ್ಷಣೆ ಕಾಲುವೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಹಾಸನ ಹಾಗೂ ತುಮಕೂರು ಜಿಲ್ಲೆಗಳ ಅರಣ್ಯ ಬಳಸುವ ಪ್ರಸ್ತಾಪವನ್ನು ವಿಶ್ವೇಶ್ವರಯ್ಯ ಜಲ ನಿಗಮ ಮುಂದಿಟ್ಟಿದೆ. ಹಾಸನ ಜಿಲ್ಲೆಯಲ್ಲಿ 819 ಹೆಕ್ಟೇರ್ ಅರಣ್ಯೇತರ ಹಾಗೂ 159 ಹೆಕ್ಟೇರ್ ಅರಣ್ಯ, ತುಮಕೂರು ಜಿಲ್ಲೆಯಲ್ಲಿ 1,215 ಹೆಕ್ಟೇರ್ ಅರಣ್ಯೇತರ ಮತ್ತು 33 ಹೆಕ್ಟೇರ್ ಅರಣ್ಯ ಭೂಮಿ ಬಳಕೆಯ ಪ್ರಸ್ತಾಪವಿದೆ.
ಇದನ್ನು ಓದಿದ್ದೀರಾ? ಎತ್ತಿನಹೊಳೆ ಎರಡನೇ ಹಂತ 2027ಕ್ಕೆ ಮುಗಿಯುವುದು ಶತಸಿದ್ಧ: ಸಿಎಂ ಸಿದ್ದರಾಮಯ್ಯ ಭರವಸೆ
ಎರಡು ತಿಂಗಳ ಹಿಂದೆ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಒಟ್ಟು ಮೂರು ಹಂತಗಳ ಯೋಜನೆ ಇದಾಗಿದೆ. ಸುಮಾರು ಹತ್ತು ವರ್ಷಗಳ ಬಳಿಕ ಪಶ್ಚಿಮಕ್ಕೆ ಹರಿಯುವ ಎತ್ತಿನಹೊಳೆ ನದಿ ಮತ್ತು ಅದರ ಉಪನದಿಗಳಿಂದ ಪ್ರವಾಹದ ನೀರನ್ನು ತಿರುಗಿಸುವ ಮೊದಲ ಹಂತ ಸಾಕಾರಗೊಂಡಿದೆ. ಎರಡನೇ ಹಂತದಲ್ಲಿ ಗುರುತ್ವಾಕರ್ಷಣೆಯ ಕಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತದೆ. ಮೂರನೇ ಹಂತದಲ್ಲಿ ಭೈರಗೊಂಡ್ಲು ಜಲಾಶಯ ನಿರ್ಮಾಣ, ಜಲಾಶಯದಲ್ಲಿ ಘಟಕ ಕಾಮಗಾರಿಗಳನ್ನು ಒಳಗೊಂಡು ಕೋಲಾರ ಮತ್ತು ಶ್ರೀನಿವಾಸಪುರ ಫೀಡರ್‌ಗಳ ನಿರ್ಮಾಣ ಮಾಡಲಾಗುತ್ತದೆ. 2027ರ ವೇಳೆಗೆ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಸರ್ಕಾರ ಹೇಳಿದೆ.
ಆದರೆ ಈ ಯೋಜನೆಯಿಂದಾಗಿ ವರ್ಷ ಕಳೆಯುತ್ತಿದ್ದಂತೆ ಪಶ್ಚಿಮ ಘಟ್ಟದಲ್ಲಿ ಅರಣ್ಯ, ಪ್ರಾಣಿಸಂಕುಲ ನಾಶವಾಗುತ್ತಿರುವುದನ್ನು ನಾವು ಗಮನಿಸಿಯೂ ಸುಮ್ಮನಿರಲಾಗದು. ಈ ಯೋಜನೆಗಾಗಿ ಮೂರು ಸಾವಿರ ಎಕರೆ ಭೂಮಿಯನ್ನು ಬಳಸಲಾಗುತ್ತಿದೆ. ಅದರಲ್ಲಿ ಶೇಕಡ 50ರಷ್ಟು ಅರಣ್ಯ ಭೂಮಿಯಾಗಿದೆ. ಯೋಜನೆಯಲ್ಲಿ ಹರಿದ ನೀರಿನ ಪ್ರಮಾಣಕ್ಕಿಂತ ಹೆಚ್ಚು ಮರಗಳು ಧರೆಗುರುಳಿ ಪರಿಸರ ನಾಶವಾಗಿದೆ. ಇದರೊಂದಿಗೆ ಪ್ರಾಣಿ, ಪಕ್ಷಿಸಂಕುಲವೂ ಅಧಃಪತನದ ಹಾದಿ ತುಳಿಯುತ್ತಿದೆ.
ಈಗಾಗಲೇ ಎತ್ತಿನಹೊಳೆ ಯೋಜನೆಗೆ ಸುಮಾರು 500 ಎಕರೆ ಮತ್ತು ಕಳಸಾ-ಬಂಡೂರಿ ಯೋಜನೆಗಳಿಗೆ 50 ಹೆಕ್ಟೇರ್ ಭೂಮಿ ನೀಡಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಇಷ್ಟೊಂದು ಅರಣ್ಯ ನಾಶವಾದರೂ ಒಂದು ಹನಿ ನೀರೂ ಎತ್ತಿನಹೊಳೆ ಯೋಜನೆಯಿಂದ ಹರಿದಿಲ್ಲ. ಈಗ ಮತ್ತೆ 500 ಎಕರೆ ಅರಣ್ಯ ಭೂಮಿ ನಾಶ ಮಾಡಿದರೆ ಪ್ರಕೃತಿಗೆ ಆಗುವ ಹಾನಿ ತುಂಬುವವರಾರು ಎಂಬುದು ಪರಿಸರವಾದಿಗಳ ಕಳಕಳಿ.
ಅರಣ್ಯವನ್ನು ನಾಶಗೊಳಿಸಿ ಯಾವುದೇ ಯೋಜನೆ ಮಾಡಿದರೂ ಕೂಡಾ ಅದು ವಿನಾಶಕ್ಕೆ ಕಾರಣ ಎನ್ನುವ ಪರಿಸರ ಪ್ರೇಮಿಗಳಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಭರವಸೆಯನ್ನು ಹುಟ್ಟಿಸಿರುವ ಈ ಯೋಜನೆ ಸಾಕಾರವಾಗದು ಎನ್ನುವ ತಜ್ಞರೂ ಇದ್ದಾರೆ, ಇದು ಉತ್ತಮ ಯೋಜನೆ ಎನ್ನುವ ತಜ್ಞರೂ ಇದ್ದಾರೆ. ಅವೆಲ್ಲವನ್ನೂ ಬದಿಗಿಟ್ಟು ನಾವು ಪರಿಸರದೆಡೆ ಕಣ್ಣು ಹಾಯಿಸಿದಾಗ ನಮ್ಮ ಮುಂದೆ ಬರುವುದು ಭೂಕುಸಿತ, ಮಳೆ ಅಭಾವ, ಪ್ರಕೃತಿ ವಿಕೋಪ ಇತ್ಯಾದಿ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಎತ್ತಿನಹೊಳೆಯಲ್ಲಿ ನೀರಿಗಿಂತ ಹೆಚ್ಚು ಹಣವೂ ಹರಿದಿದೆ; ಪಶ್ಚಿಮಘಟ್ಟವೂ ನಾಶವಾಗಿದೆ
ಕುದುರೆಮುಖ ಅರಣ್ಯದಲ್ಲಿ ಗಣಿಗಾರಿಕೆ ಮಾಡಿದ್ದರಿಂದ ಸುಮಾರು ಹತ್ತು ವರ್ಷಗಳ ಕಾಲ ಆ ಭಾಗದಲ್ಲಿ ಸರಿಯಾಗಿ ಮಳೆಯಾಗಲಿಲ್ಲ. ಲಿಂಗನ ಮಕ್ಕಿ ಜಲಾಶಯ ತುಂಬಲಿಲ್ಲ. ನೀರಿನ ಅಭಾವವನ್ನು ನೀಗಿಸಬೇಕು ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ ಪರಿಸರವನ್ನು ನಾಶಮಾಡಿದರೆ ಅದರಿಂದಾಗುವ ದುಷ್ಪರಿಣಾಮ ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತದೆ. ಇದು ಮಲೆನಾಡಿಗರಿಗೆ ಹಾನಿ ಉಂಟು ಮಾಡಲಿದೆ ಎಂದು ಈ ಹಿಂದೆಯೇ ಹೇಳಿದ್ದಾರೆ ಜಲತಜ್ಞರಾದ ಅಯ್ಯಪ್ಪ ಮಸಗಿ ಅವರು.
ಕೇಂದ್ರದ ನಿಲುವುಗಳು ಬದಲಾಗುತ್ತಿವೆಯೇ?
ರಾಜ್ಯದಲ್ಲಿ ಸರ್ಕಾರ ಬದಲಾಗುತ್ತಿದ್ದಂತೆ ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಕೇಂದ್ರದ ನಿಲುವುಗಳು ಕೂಡಾ ಬದಲಾಗುತ್ತಿರುವಂತೆ ಕಾಣುತ್ತಿದೆ. ಕಾಕತಾಳೀಯವೋ, ಉದ್ದೇಶಪೂರ್ವಕವೋ ಅರಿಯದು. 2023ರ ಜನವರಿಯಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ಎತ್ತಿನಹೊಳೆ ಯೋಜನೆಯಿಂದ ಯಾವುದೇ ಪರಿಸರ ಹಾನಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಈಗ ಸರ್ಕಾರ ಬದಲಾಗಿ ಕೆಲವು ತಿಂಗಳು ಕಳೆದು ಎತ್ತಿನಹೊಳೆಯ ಮೊದಲ ಹಂತ ಪೂರ್ಣಗೊಳ್ಳುತ್ತಿದ್ದಂತೆ ಯೋಜನೆಯಿಂದಾಗಿ ಪರಿಸರಕ್ಕಾದ ಹಾನಿಯ ಬಗ್ಗೆ ವರದಿಯನ್ನು ಕೇಳಿದೆ.
ಈ ಹಿಂದೆ ಫೆಬ್ರವರಿಯಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ಬಳಿ ಎತ್ತಿನಹೊಳೆ ನೀರಾವರಿ ಯೋಜನೆಯಿಂದ ಕೇವಲ 13.93 ಹೆಕ್ಟೇರ್ ಅರಣ್ಯ ಭೂಮಿಯ ಬಳಕೆಯಾಗಿದೆ. ಆದ್ದರಿಂದ ಪರಿಸರದ ಮೇಲೆ ಯಾವುದೇ ಪರಿಣಾಮವಿಲ್ಲ ಎಂದು ಕೇಂದ್ರ ಹೇಳಿದೆ. ಹಾಗೆಯೇ ಇದು ಕುಡಿಯುವ ನೀರು ಸರಬರಾಜು ಯೋಜನೆಯಾಗಿರುವುದರಿಂದ, ಇದು ಎನ್ವಿರಾನ್‌ಮೆಂಟಲ್ ಇಂಪ್ಯಾಕ್ಟ್ ಅಸೆಸ್ಮೆಂಟ್ ನೋಟಿಫಿಕೇಷನ್– 2006 ಮತ್ತು 2009ರಲ್ಲಿ ಮಾಡಿದ ಅದರ ತಿದ್ದುಪಡಿಯ ನಿಬಂಧನೆಗಳನ್ನು ಒಳಗೊಳ್ಳುವುದಿಲ್ಲ ಎಂದು ಅಂದಿನ ಜಲಶಕ್ತಿ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ರಾಜ್ಯಸಭೆಯಲ್ಲಿ ಹೇಳಿದ್ದರು.
ಇದನ್ನು ಓದಿದ್ದೀರಾ? ಪಶ್ಚಿಮ ಘಟ್ಟಗಳ ಭೂಕುಸಿತ | ಮೊದಲು ನೈಸರ್ಗಿಕ ವಿಪತ್ತು, ಈಗ ಮಾನವ ನಿರ್ಮಿತ
ಆದರೆ ಇತ್ತೀಚೆಗೆ ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರ ತಕರಾರು ಎತ್ತಿದೆ. ಯೋಜನೆ ಅನುಷ್ಠಾನಗೊಳಿಸುವಾಗ ಪಶ್ಚಿಮ ಘಟ್ಟಕ್ಕೆ ಹಾನಿಯಾಗಿದೆ ಎಂಬ ವರದಿಗಳಿವೆ, ಈ ಬಗ್ಗೆ ವರದಿ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.
ವಿಶ್ವೇಶ್ವರಯ್ಯ ಜಲ ನಿಗಮವು ಎತ್ತಿನಹೊಳೆಯ ಮುಖ್ಯ ಕಾಲುವೆ ನಿರ್ಮಾಣಕ್ಕೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಂಚಿಗಾನಹಳ್ಳಿಯ ಸರ್ವೆ ಸಂಖ್ಯೆ 2, 30 ಹಾಗೂ ಯಲ್ಲಾಪುರ ಗ್ರಾಮದ ಸರ್ವೆ ಸಂಖ್ಯೆ 34, 35 ಮತ್ತು 36ರ (ಮಾರಶೆಟ್ಟಿಹಳ್ಳಿ ಮೀಸಲು ಅರಣ್ಯ) 26 ಎಕರೆ ಅರಣ್ಯ ಬಳಸುವ ಪ್ರಸ್ತಾಪವನ್ನು 2020ರಲ್ಲಿ ಮಾಡಿತ್ತು. ಇದಕ್ಕೆ ಅನುಮತಿ ನೀಡುವಂತೆ 2024ರ ಜುಲೈ ತಿಂಗಳಲ್ಲಿ ರಾಜ್ಯ ಸರ್ಕಾರ ಪತ್ರ ಬರೆದಿತ್ತು. ಈ ಪ್ರಸ್ತಾವದ ಕುರಿತು ಸ್ಪಷ್ಟನೆ ಹಾಗೂ ಹೆಚ್ಚುವರಿ ಮಾಹಿತಿ ಒದಗಿಸುವಂತೆ ರಾಜ್ಯ ಅರಣ್ಯ ಇಲಾಖೆಗೆ ಸಚಿವಾಲಯ ಆದೇಶಿಸಿದೆ.
ಯಾವುದೇ ಸರ್ಕಾರ ಬರಲಿ, ಹೋಗಲಿ ಕುಡಿಯುವ ನೀರಿನ ನೆಪದಲ್ಲಿ ಕೋಟಿಗಟ್ಟಲೆ ಹಣ ನೀರಿನಂತೆಯೇ ಹರಿದಾಗಿದೆ. ಲಭಿಸುವ ನೀರಿನ ಪ್ರಮಾಣವೂ ಕುಗ್ಗುತ್ತಾ ಬಂದಿದೆ. ಆರಂಭದಲ್ಲಿ 8,323 ಕೋಟಿ ರೂಪಾಯಿ ವೆಚ್ಚದ ಯೋಜನೆಯಾಗಿದ್ದ ಎತ್ತಿನಹೊಳೆ ಇದೀಗ 23,252 ಕೋಟಿ ರೂಪಾಯಿಗೆ ಜಿಗಿದಿದೆ. ಆದರೆ ಯೋಜನೆಯಿಂದಾಗಿ ಲಭಿಸುವ ನೀರಿನ ಪ್ರಮಾಣ 24 ಟಿಎಂಸಿಯಿಂದ ಈಗ 8 ಟಿಎಂಸಿಗೆ ಕುಸಿದಿದೆ. ಇವೆಲ್ಲವುದರ ನಡುವೆ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿ (ಶಿರಾಡಿ ಘಾಟ್) ಇತ್ತೀಚೆಗೆ ಹೆಚ್ಚುತ್ತಿರುವ ಭೂಕುಸಿತಕ್ಕೆ ಈ ಯೋಜನೆಯೇ ಕಾರಣ ಎಂಬ ಆರೋಪ ಸ್ಥಳೀಯರದ್ದು. ಯಾವುದೇ ಸರ್ಕಾರವಿರಲಿ ಪಶ್ಚಿಮ ಘಟ್ಟದಲ್ಲಿ ಧರೆಗುರುಳಿದ ಮರಗಳಿಗೆ ಲೆಕ್ಕವಿಲ್ಲ, ವನ್ಯಸಂಕುಲದ ಅವಸಾನಕ್ಕೆ ಕೊನೆಯಿಲ್ಲ.
ಇನ್ನೊಂದೆಡೆ ಎತ್ತಿನಹೊಳೆ ಯೋಜನೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸಿನ ಪ್ರಶ್ನೆಯಾಗಿಯೂ ಬದಲಾಗಿದೆ. ಮುಡಾ ಪ್ರಕರಣ, ವಾಲ್ಮೀಕಿ ಪ್ರಕರಣದಿಂದಾಗಿ ಸರ್ಕಾರದ ವಿರುದ್ಧವಾಗಿ ಸೃಷ್ಟಿಯಾದ ಅಭಿಪ್ರಾಯವನ್ನು ಎತ್ತಿನಹೊಳೆ ಮೂಲಕ ಬದಲಾಯಿಸುವ ಪ್ರಯತ್ನ ಸಿದ್ದರಾಮಯ್ಯ ಅವರದ್ದು ಎಂಬ ಮಾತಿದೆ. ಸದ್ಯ ಲಭ್ಯವಾಗಬಹುದಾದ 8 ಟಿಎಂಸಿ ನೀರು ಕಟ್ಟ ಕಡೆಯ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರಕ್ಕೆ ತಲುಪಲು ಸಾಧ್ಯವೇ ಇಲ್ಲ ಎಂಬುದು ಹಲವು ತಜ್ಞರುಗಳ ಅಭಿಪ್ರಾಯ. ಹಾಗಿದ್ದಾಗ ಏಳು ಜಿಲ್ಲೆಗಳಿಗೆ ಮೂರು ವರ್ಷಗಳಲ್ಲಿ ನೀರು ನೀಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹೇಳುವುದು ಹೇಗೆ? ಅತ್ತ ನೀರೂ ಇಲ್ಲ, ಇತ್ತ ಪಶ್ಚಿಮ ಘಟ್ಟವೂ ನಾಶವಾಗಿರುವಾಗ ಸರ್ಕಾರದ ರಾಜಕೀಯದಾಟ ಎಷ್ಟು ಸರಿ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.