ಪುಟ್ಟ ದ್ವೀಪರಾಷ್ಟ್ರದ ಜೂಲಿಯನ್ ಆಲ್ಫ್ರೆಡ್: ಬರಿಗಾಲಿನಲ್ಲಿ ಓಡುತ್ತಿದ್ದ ಯುವತಿಗೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ

Date:

Advertisements

ಸಾಧಿಸುವ ಛಲವಿದ್ದರೆ ಏನು ಬೇಕಾದರೂ ಗುರಿ ಮುಟ್ಟಬಹುದು ಎಂಬುದಕ್ಕೆ ಜೂಲಿಯನ್‌ ಆಲ್ಫ್ರೆಡ್ ಸಾಕ್ಷಿಯಾಗಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡಲು ಬಯಸಿದಾಗ ಕಷ್ಟಗಳನ್ನೇ ಹಾಸು ಹೊದ್ದಿದ್ದರು. ಜಮೈಕಾದಲ್ಲಿ ಓದುತ್ತಿರುವ ಸಂದರ್ಭದಲ್ಲಿ ಅಥ್ಲೆಟಿಕ್ಸ್‌ನಲ್ಲಿ ತರಬೇತಿ ಪಡೆಯಲು ಆರ್ಥಿಕ ಸಂಕಷ್ಟವಿತ್ತು. ಶೂಗಳನ್ನು ಕೊಂಡುಕೊಳ್ಳಲು ಹಣಕಾಸಿನ ಮುಗ್ಗಟ್ಟಿತ್ತು. ಆಗ ಬರಿಗಾಲಿನಲ್ಲಿಯೇ ಎಲ್ಲೆಂದರಲ್ಲಿಯೇ ಓಡಿ ಸ್ವಯಂ ತರಬೇತಿ ಪಡೆದುಕೊಳ್ಳುತ್ತಿದ್ದರು.

ಸುಮಾರು 1.60 ಲಕ್ಷ ಜನಸಂಖ್ಯೆಯಿರುವ ಪುಟ್ಟ ದ್ವೀಪ ರಾಷ್ಟ್ರ ‘ಸೇಂಟ್‌ ಲೂಸಿಯಾ’ ಬಗ್ಗೆ ಈಗ ಇಡೀ ವಿಶ್ವದ ಜನರೆಲ್ಲ ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ. 23 ವರ್ಷದ ಯುವತಿ ‘ಜೂಲಿಯನ್ ಆಲ್ಫ್ರೆಡ್’ ಪ್ಯಾರಿಸ್‌ ಒಲಿಂಪಿಕ್ಸ್‌ನ 100 ಮೀಟರ್‌ ಮಹಿಳೆಯರ ಓಟದ ವಿಭಾಗದಲ್ಲಿ ಮೊದಲ ಸ್ಥಾನದೊಂದಿಗೆ ಚಿನ್ನ ಗೆಲ್ಲುವ ಮೂಲಕ ಜಗತ್ತೆ ನಿಬ್ಬೆರಗಾಗಿಸುವ ಸಾಧನೆ ಮಾಡಿದ್ದಾರೆ. ಅಲ್ಲದೆ 100 ಮೀಟರ್‌ ಓಟವನ್ನು 10.72 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಇದಲ್ಲದೆ 200 ಮೀಟರ್‌ ಮಹಿಳೆಯರ ಓಟದಲ್ಲೂ ಕೂಡ ಬೆಳ್ಳಿಯ ಪದಕವನ್ನು ಗೆದ್ದು ಬೀಗಿದ್ದಾರೆ. ವಿಶ್ವ ಭೂಪಟದಲ್ಲಿ ಆ ದೇಶವನ್ನು ಹುಡುಕಲು ಭೂತಕನ್ನಡಿ ಬೇಕಾಗಬಹುದು. ಆದರೆ ಈಗ ಎಲ್ಲರೂ ಜೂಲಿಯನ್‌ ಹಾಗೂ ಆಕೆಯ ಸಾಧನೆಯ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ.

ಸೇಂಟ್‌ ಲೂಸಿಯಾ, ಕೆರಿಬಿಯನ್ ಸಮುದ್ರ ಮತ್ತು ಉತ್ತರ ಅಟ್ಲಾಂಟಿಕ್ ಸಾಗರದ ನಡುವಿನ ದ್ವೀಪ ರಾಷ್ಟ್ರವಾಗಿದೆ. ಇದರ ರಾಜಧಾನಿ ಕ್ಯಾಸ್ಟ್ರೀಸ್, ಈ ದ್ವೀಪ ರಾಷ್ಟ್ರದಲ್ಲಿ ಪ್ರದೇಶದ ಮೂರನೇ ಒಂದು ಭಾಗದಷ್ಟು ಜನರು ಮಾತ್ರ ವಾಸಿಸುತ್ತಾರೆ. ಉಳಿದವರು ಉದ್ಯೋಗದ ನಿಮಿತ್ತ ವಿದೇಶದಲ್ಲಿ ಆಶ್ರಯ ಪಡೆದಿದ್ದಾರೆ. ಅಂದ ಹಾಗೆ ಸಣ್ಣ ದ್ವೀಪ ರಾಷ್ಟ್ರ ಸೇಂಟ್‌ ಲೂಸಿಯಾ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಶುರು ಮಾಡಿದ್ದು 1996ರ ಅಟ್ಲಾಂಟ ಒಲಿಂಪಿಕ್ಸ್ ಕೂಟದಿಂದ. ಅಲ್ಲಿಂದ 8 ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಒಂದೂ ಪದಕವನ್ನು ಗೆದ್ದಿರಲಿಲ್ಲ. ಒಲಿಂಪಿಕ್ಸ್‌ನಲ್ಲಿ ಸಾಧನೆ ಮಾಡದಿದ್ದರೂ ಸಣ್ಣ ಪಟ್ಟಣದಷ್ಟಿರುವ ಉತ್ತರ ಅಮೆರಿಕಾ ಖಂಡದ ಸೇಂಟ್‌ ಲೂಸಿಯಾ ದ್ವೀಪರಾಷ್ಟ್ರದ ಲೇಖಕ ಡೆರೆಕ್ ವಾಲ್ಕಾಟ್ ಮತ್ತು ಅರ್ಥಶಾಸ್ತ್ರಜ್ಞ ಸರ್ ಆರ್ಥರ್ ಲೂಯಿಸ್ ಎಂಬುವವರಿಗೆ ನೊಬೆಲ್‌ ಪ್ರಶಸ್ತಿ ಲಭಿಸಿತ್ತು. ಈಗ ಅಂತಾರಾಷ್ಟ್ರೀಯ ಕ್ರೀಡಾಕೂಟ ಒಲಿಂಪಿಕ್ಸ್‌ನಲ್ಲೂ ಪದಕದ ಹಸಿವನ್ನು ಜೂಲಿಯನ್ ಆಲ್ಫ್ರೆಡ್ ನೀಗಿಸಿದ್ದಾರೆ.

Advertisements

ಜೂಲಿಯನ್ ಆಲ್ಫ್ರೆಡ್ ಮಹಿಳೆಯರ 100 ಮೀಟರ್‌ನಲ್ಲಿ ಚಿನ್ನ ಹಾಗೂ 200 ಮೀಟರ್‌ನಲ್ಲಿ ಬೆಳ್ಳಿ ಪದಕ ಗೆದ್ದ ನಂತರ ಸೇಂಟ್ ಲೂಸಿಯಾ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ 33ನೇ ಸ್ಥಾನಕ್ಕೇರಿದೆ. ಆದರೆ 120 ಕೋಟಿಗೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶವಾದ ಭಾರತ ಮೂರು ಕಂಚಿನ ಪದಕಗಳೊಂದಿಗೆ 63ನೇ ಸ್ಥಾನದಲ್ಲಿದೆ. ಭಾರತ ಮಾತ್ರವಲ್ಲದೆ ಡೆನ್ಮಾರ್ಕ್, ಪೋಲೆಂಡ್ ಸೇರಿದಂತೆ ಹಲವು ಯುರೋಪ್‌ ರಾಷ್ಟ್ರಗಳನ್ನು ಸೇಂಟ್‌ ಲೂಸಿಯಾ ಹಿಮ್ಮೆಟ್ಟಿಸಿರುವುದು ಗಮನಾರ್ಹ ಸಂಗತಿ.

ಜೂಲಿಯನ್ ಆಲ್ಫ್ರೆಡ್‌ಗೆ ಚಿಕ್ಕಂದಿನಲ್ಲೇ ಸಂಕಷ್ಟ, ಉಸೈನ್‌ ಬೋಲ್ಟ್‌ ಸ್ಪೂರ್ತಿ

ಒಲಿಂಪಿಕ್ಸ್‌ನಂಥ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಬೇಕಾದರೆ ಪುಟ್ಟ ರಾಷ್ಟ್ರದ ಕ್ರೀಡಾಪಟುಗಳಿಗೆ ಪ್ರತಿಭೆಯ ಜೊತೆ ಆರ್ಥಿಕವಾಗಿ ಸದೃಢರಾಗಿರಬೇಕು. ಜೂಲಿಯನ್‌ ಆಲ್ಫ್ರೆಡ್‌ಗೆ ಯಾವುದೇ ಶ್ರೀಮಂತಿಕೆಯ ಹಿನ್ನೆಲೆಯಿರಲಿಲ್ಲ. ಜೂನ್‌ 10 2001ರಂದು ಸೇಂಟ್ ಲೂಸಿಯಾದ ಕ್ಯಾಸ್ಟ್ರೀಸ್‌ನ ಸಿಸೆರಾನ್‌ನಲ್ಲಿ ಜನಿಸಿದ ಜೂಲಿಯನ್‌ ಅವರ ಆರಂಭಿಕ ಜೀವನ ಹಲವು ಸವಾಲುಗಳಿಂದ ಕೂಡಿತ್ತು. 12ನೇ ವಯಸ್ಸಿನಲ್ಲಿಯೇ ತನ್ನ ತಂದೆಯನ್ನು ಕಳೆದುಕೊಂಡರು. ಇದಾದ ನಂತರ ಆರ್ಥಿಕವಾಗಿ ಮತ್ತಷ್ಟು ಸಮಸ್ಯೆಗಳು ಉಂಟಾಯಿತು. ಬಳಿಕ ಜೂಲಿಯನ್ ತನ್ನ ಚಿಕ್ಕಮ್ಮ ಕರೆನ್ ಆಲ್ಫ್ರೆಡ್ ಅವರ ಆಶ್ರಯದಲ್ಲಿ ಬೆಳೆದರು. ವಿದ್ಯಾಭ್ಯಾಸಕ್ಕಾಗಿ ಮತ್ತೊಂದು ದ್ವೀಪ ರಾಷ್ಟ್ರ ಜಮೈಕಾದಲ್ಲಿ ಓದುವ ಅವಕಾಶ ಸಿಕ್ಕಿತು.

ಜಮೈಕಾದಲ್ಲಿ ಓದುತ್ತಿರುವಾಗ ಅಥ್ಲೆಟಿಕ್ಸ್‌ನ ಓಟದ ಕ್ರೀಡೆಯಲ್ಲಿ ಆಸಕ್ತಿ ಬೆಳೆಯಿತು. ಒಲಿಂಪಿಕ್ಸ್‌ನಲ್ಲಿ ಹಲವು ಚಿನ್ನಗಳನ್ನು ಗೆದ್ದಿದ್ದ ಜಮೈಕಾದ ಉಸೈನ್‌ ಬೋಲ್ಟ್‌ ಬಗ್ಗೆ ಟಿವಿ, ಪತ್ರಿಕೆಗಳಲ್ಲಿ ತಿಳಿದುಕೊಂಡಾಗ ಓಟದ ಆಸಕ್ತಿ ಮತ್ತಷ್ಟು ಹೆಮ್ಮರವಾಯಿತು. ಪ್ರಾಥಮಿಕ ಶಾಲೆಯಲ್ಲಿಯೇ ಓದುತ್ತಿರುವಾಗ ಓಟದಲ್ಲಿ ಸ್ಪರ್ಧಿಸುವ ಮೂಲಕ ಹಲವು ಬಗೆಯ ಕೌಶಲ್ಯಗಳನ್ನು ಜೂಲಿಯನ್ ಬೆಳೆಸಿಕೊಂಡರು. ಇದು ಅಥ್ಲೆಟಿಕ್ಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ಆತ್ಮವಿಶ್ವಾಸವನ್ನು ವೃದ್ಧಿಸಿತು. ಇವಲ್ಲವು ಒಗ್ಗೂಡಿ ತಾನೊಂದು ದಿನ ಉಸೈನ್‌ ಬೋಲ್ಟ್‌ರಂತೆ ತಮ್ಮ ದೇಶಕ್ಕೆ ಒಂದು ದಿನ ಪದಕವನ್ನು ಗೆಲ್ಲಿಸಿಕೊಡುತ್ತೇನೆ ಎಂದು ಆಗಲೇ ಜೂಲಿಯನ್ ಆಲ್ಫ್ರೆಡ್‌ಗೆ ದೃಢವಾಗಿ ಅನ್ನಿಸಿದೆ. ಶಾಲೆಯಲ್ಲಿಯೇ ಓಟದ ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ತನ್ನ ಪ್ರಾಥಮಿಕ ಶಾಲೆಯಲ್ಲಿ ಹುಡುಗರ ವಿರುದ್ಧ ಸ್ಪರ್ಧಿಸುವ ಮೂಲಕ ಓಟದ ಕೌಶಲ್ಯಗಳು ಹಾಗೂ ಸಾಮರ್ಥ್ಯಗಳನ್ನು ಕರಗತ ಮಾಡಿಕೊಂಡರು.

ಈ ಸುದ್ದಿ ಓದಿದ್ದೀರಾ? ಕ್ರಿಕೆಟ್‌ನ ಶಿಸ್ತು, ಸಂಯಮದ ಪ್ರತಿರೂಪ ಅಂಶುಮಾನ್ ಗಾಯಕವಾಡ್

ಸ್ಥಳೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗಳ ನಡುವೆಯೆ 2017 ಯುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು. ನಂತರದ ವರ್ಷ 2018ರ ಅರ್ಜೇಂಟೇನಾದ ಬ್ಯೂನಸ್ ಐರಿಸ್‌ನಲ್ಲಿ ನಡೆದ ಯುವ ಒಲಿಂಪಿಕ್ಸ್‌ನ 100 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದು ಮುಖ್ಯ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಮತ್ತಷ್ಟು ವೇದಿಕೆಗಳನ್ನು ನಿರ್ಮಿಸಿಕೊಂಡರು. ಈ ಸಾಧನೆಗಳ ನಡುವೆಯೆ ಜೂಲಿಯನ್‌ಗೆ ಮತ್ತೊಂದು ಸಮಸ್ಯೆ ಎದುರಾಯಿತು. 2018ರ ಸಮಯದಲ್ಲಿಯೇ ತನ್ನನ್ನು ಪೋಷಿಸಿದ ಜೂಲಿಯನ್‌ ಚಿಕ್ಕಮ್ಮ ನಿಧನರಾದರು. ಚಿಕ್ಕಮ್ಮನ ಸಾವಿನಿಂದ ಅವರು ತುಂಬಾ ಆಘಾತಕ್ಕೊಳಗಾಗಿದ್ದರು. ಇದರಿಂದಾಗಿ ಎರಡು ವರ್ಷಗಳ ಕಾಲ ಅಥ್ಲೆಟಿಕ್ಸ್‌ನಿಂದ ದೂರ ಉಳಿದಿದ್ದರು. 2021ರ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಈಗ 2024ರ ವೇಳೆಗೆ ಪುಟಿದೆದ್ದ ಜೂಲಿಯನ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಗೆಲ್ಲುವ ಮೂಲಕ ತಮ್ಮ ಚಿಕ್ಕಂದಿನ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಬೂಟಿಲ್ಲದೆ ಬರಿಗಾಲಿನಲ್ಲಿ ಓಡುತ್ತಿದ್ದ ಜೂಲಿಯನ್

ಸಾಧಿಸುವ ಛಲವಿದ್ದರೆ ಏನು ಬೇಕಾದರೂ ಗುರಿ ಮುಟ್ಟಬಹುದು ಎಂಬುದಕ್ಕೆ ಜೂಲಿಯನ್‌ ಆಲ್ಫ್ರೆಡ್ ಸಾಕ್ಷಿಯಾಗಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡಲು ಬಯಸಿದಾಗ ಕಷ್ಟಗಳನ್ನೇ ಹಾಸು ಹೊದ್ದಿದ್ದರು. ಜಮೈಕಾದಲ್ಲಿ ಓದುತ್ತಿರುವ ಸಂದರ್ಭದಲ್ಲಿ ಅಥ್ಲೆಟಿಕ್ಸ್‌ನಲ್ಲಿ ತರಬೇತಿ ಪಡೆಯಲು ಆರ್ಥಿಕ ಸಂಕಷ್ಟವಿತ್ತು. ಶೂಗಳನ್ನು ಕೊಂಡುಕೊಳ್ಳಲು ಹಣಕಾಸಿನ ಮುಗ್ಗಟ್ಟಿತ್ತು. ಆಗ ಬರಿಗಾಲಿನಲ್ಲಿಯೇ ಎಲ್ಲೆಂದರಲ್ಲಿಯೇ ಓಡಿ ಸ್ವಯಂ ತರಬೇತಿ ಪಡೆದುಕೊಳ್ಳುತ್ತಿದ್ದರು. ಈ ಬಗ್ಗೆ ಪದಕ ಗೆದ್ದ ನಂತರ ಮಾತನಾಡಿರುವ ಅವರು, ‘ನನಗೆ ಸರಿಯಾದ ಸೌಲಭ್ಯಗಳಿರಲಿಲ್ಲ. ತಾನು ಶಾಲಾ ದಿನಗಳಲ್ಲಿ ಮೈದಾನದಲ್ಲಿ ಬರಿಗಾಲಿನಲ್ಲಿ ಬೂಟುಗಳಿಲ್ಲದೆ ಓಡುತ್ತಿದ್ದೆ, ನನ್ನ ಶಾಲಾ ಸಮವಸ್ತ್ರದಲ್ಲಿ ಓಡುತ್ತಿದ್ದೆ, ಎಲ್ಲ ಕಡೆ ಓಡುತ್ತಿದ್ದೆ. ಈಗಲೂ ನಮ್ಮ ದೇಶದಲ್ಲಿ ಅಥ್ಲೆಟಿಕ್ಸ್ ಕ್ರೀಡಾಪಟುಗಳಿಗೆ ಸರಿಯಾದ ಸೌಲಭ್ಯಗಳಿಲ್ಲ. ಕ್ರೀಡಾಂಗಣವನ್ನು ಸರಿಪಡಿಸಲಾಗಿಲ್ಲ. ನನ್ನ ಚಿನ್ನದ ಪದಕವು ಯುವಕರಿಗೆ ಸಹಾಯ ಮಾಡುತ್ತದೆ. ಸೇಂಟ್ ಲೂಸಿಯಾ ಹೊಸ ಕ್ರೀಡಾಂಗಣವನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಅಲ್ಲದೆ ಕ್ರೀಡೆಯ ಏಳಿಗೆಗೆ ಅನುಕೂಲ ಮಾಡಿಕೊಡುತ್ತದೆ’ ಎಂದಿದ್ದಾರೆ.

ಒಲಿಂಪಿಕ್ಸ್ ಪದಕಗಳು ತಂದೆಗೆ ಅರ್ಪಣೆ

100 ಮೀಟರ್‌ ಓಟದ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಅಮೆರಿಕದ ರಿಚರ್ಡ್‌ಸನ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದ 23 ವರ್ಷ ವಯಸ್ಸಿನ ಜೂಲಿಯನ್ ಆಲ್ಫ್ರೆಡ್ ಬಾಲ್ಯದಲ್ಲಿಯೇ ಕಷ್ಟಕರ ಜೀವನವನ್ನು ಎದುರಿಸಿದ್ದಾರೆ. ಅವರು 12 ವರ್ಷದವರಾಗಿದ್ದಾಗ ಅವರ ತಂದೆ ಜೂಲಿಯನ್ ಹ್ಯಾಮಿಲ್ಟನ್ ನಿಧನರಾದರು. ಆದರೆ ಮಗಳು ದೊಡ್ಡ ಸಾಧನೆ ಮಾಡುತ್ತೇಳೆಂದು ತಂದೆ ಚಿಕ್ಕವಳಿದ್ದಾಗಲೆ ಊಹಿಸಿದ್ದರು. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ನಂತರ ತಂದೆಯವರನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಜೂಲಿಯನ್‌, ”ದೇವರೇ ನನ್ನ ತರಬೇತುದಾರ. ನನ್ನ ತಂದೆ 2013ರಲ್ಲಿ ನಿಧನರಾದರು. ನಾನು ಒಲಿಂಪಿಕ್ಸ್‌ನಲ್ಲಿ ದೊಡ್ಡ ಸಾಧನೆಯನ್ನು ಮಾಡಬಹುದೆಂದು ನನ್ನ ತಂದೆ ನಂಬಿದ್ದರು. ಆಗಲೇ ತನ್ನ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಿದ್ದರು. ನನ್ನ ತಂದೆಯ ಕನಸು ಅವರು ಮೃತಪಟ್ಟ ನಂತರ ಈಡೇರಿದೆ. ನಾನು ನನ್ನ ಒಲಿಂಪಿಕ್ಸ್‌ ಪದಕವನ್ನು ನನ್ನ ತಂದೆಗೆ ಅರ್ಪಿಸುತ್ತೇನೆ” ಎಂದು ಹೇಳಿದರು.

ಜೂಲಿಯನ್‌ ದಾಖಲೆಗಳು

ಅಥ್ಲೆಟಿಕ್ಸ್‌ನಲ್ಲಿ ಓಟಗಾರ್ತಿಯಾಗಿ ಜೂಲಿಯನ್ ಆಲ್ಫ್ರೆಡ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 2017 ಯುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ, 2018ರ ಅರ್ಜೇಂಟೇನಾದ ಬ್ಯೂನಸ್ ಐರಿಸ್‌ನಲ್ಲಿ ನಡೆದ ಯುವ ಒಲಿಂಪಿಕ್ಸ್‌ನ 100 ಮೀಟರ್ ಓಟದಲ್ಲಿ ಬೆಳ್ಳಿ, 2022ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ 100 ಮೀಟರ್‌ ಓಟದಲ್ಲಿ ಬೆಳ್ಳಿ ಪದಕ, 2023ರ ಅಮೆರಿಕನ್‌ ಹಾಗೂ ಕೆರೆಬಿಯನ್‌ ಕ್ರೀಡಾಕೂಟದ 100 ಮೀ. ಓಟದಲ್ಲಿ ಚಿನ್ನದ ಪದಕ, ಗ್ಲಾಸ್ಕೋದಲ್ಲಿ 2024ರಲ್ಲಿ ನಡೆದ ವಿಶ್ವ ಒಳಾಂಗಣ ಚಾಂಪಿಯನ್‌ಷಿಪ್‌ನ 60 ಮೀಟರ್‌ ಓಟದಲ್ಲಿ ಮೊದಲ ಸ್ಥಾನ. ಈಗ 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 100 ಮೀಟರ್‌ ಓಟದಲ್ಲಿ ಚಿನ್ನ ಹಾಗೂ 200 ಮೀಟರ್‌ ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಮಹಿಳಾ ವಿಶ್ವಕಪ್‌, ಆಸೀಸ್‌ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ ಪ್ರಕಟ

ಮುಂದಿನ ತಿಂಗಳು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್‌ಗೆ...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X