ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಲ್ಲಿ ಮೂರು ಇನಿಂಗ್ಸ್ ನಡೆದು 23 ವಿಕೆಟ್ ಉರುಳಿವೆ. ಸದ್ಯ 2ನೇ ಇನಿಂಗ್ಸ್ ಆಡುತ್ತಿರುವ ಹರಿಣಿ ಪಡೆ ಮೂರು ವಿಕೆಟ್ ನಷ್ಟಕ್ಕೆ 63 ರನ್ ಗಳಿಸಿ 36 ರನ್ ಗಳ ಹಿನ್ನಡೆ ಅನುಭವಿಸಿದೆ.
ಒಂದೇ ದಿನ 23 ವಿಕೆಟ್ ಉರುಳಿರುವುದು ಇತ್ತೀಚಿನ ವರ್ಷಗಳಲ್ಲಿ ಕಂಡರಿಯದ ದಾಖಲೆಯಾಗಿದೆ.
ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬೃಹತ್ ಮುನ್ನಡೆ ನಿರೀಕ್ಷೆಯಲ್ಲಿದ್ದ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 153 ರನ್‌ಗಳಿಗೆ ಆಲೌಟ್ ಆಗಿ 98 ರನ್ ಮುನ್ನಡೆ ಪಡೆದಿದೆ.
33 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದ್ದ ಭಾರತ ತಂಡ 34.5 ಕೇವಲ 11 ಚೆಂಡುಗಳಲ್ಲಿ ಶೂನ್ಯ ರನ್ ಗಳಿಸಿ 6 ವಿಕೆಟ್ ಕಳೆದುಕೊಂಡು ಆಲೌಟ್ ಆಯಿತು. 34ನೇ ಓವರ್‌ನಲ್ಲಿ ಲುಂಗಿ ಎನ್ಗಿಡಿ ಮೂರು ವಿಕೆಟ್ ಕಬಳಿಸಿದರೆ, 35ನೇ ಓವರ್‌ನಲ್ಲಿ ರಬಾಡ ಎರಡು ವಿಕಿಟ್ ಕಿತ್ತರು. ಸಿರಾಜ್ ರನೌಟ್ ಆದರು.
ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ 46, ನಾಯಕ ರೋಹಿತ್ ಶರ್ಮಾ 39 ಹಾಗೂ ಶುಭಮನ್ ಗಿಲ್ 36 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಬಂದ ಹಾಗೆಯೇ ಪೆವಿಲಿಯನ್ ಕಡೆ ತೆರಳಿದರು. 7 ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಔಟಾದರು.
ದಕ್ಷಿಣ ಆಫ್ರಿಕಾ ಪರ ರಬಾಡ 38/3, ಲುಂಗಿ ಎನ್ಗಿಡಿ 30/3 ಹಾಗೂ ನಾಂದ್ರೆ ಬರ್ಗರ್ 42/3 ವಿಕೆಟ್ ಪಡೆದು ಭಾರತದ ಪತನಕ್ಕೆ ಕಾರಣರಾದರು.
ಸಿರಾಜ್‌ಗೆ 6 ವಿಕೆಟ್
ಈ ಮೊದಲು ಟಾಸ್ ಗೆದ್ದ ದಕ್ಷಿಣ ಅಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಲ್ಕನೇ ಓವರ್‌ನಿಂದ ಶುರುವಾದ ಹರಿಣಗಳ ತಂಡದ ವಿಕೆಟ್ ಪತನ 23.2 ಓವರ್‌ಗಳಾಗುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೊಸವರ್ಷದ ಹೊಸ್ತಿಲಲ್ಲಿ ನಮ್ಮನ್ನಗಲಿದ ನಿಜಾಯತಿಯ ಪತ್ರಕರ್ತ ಜಾನ್ ಪಿಲ್ಜರ್
ದಕ್ಷಿಣ ಆಫ್ರಿಕಾ ಪರ ಕೈಲ್ ವೆರ್ರೆನ್ 15 ರನ್ ಗಳಿಸಿದರೆ, ಡೇವಿಡ್ ಬೆಡಿಂಗ್ ಹ್ಯಾಮ್ 12 ರನ್ ಗಳಿಸಿದರು. ಈ ಇಬ್ಬರು ಬ್ಯಾಟರ್‌ಗಳು ಮಾತ್ರ ಎರಡಂಕಿ ಮೊತ್ತ ದಾಟಿದರು.
ಉಳಿದ ನಾಲ್ಕು ವಿಕೆಟ್‌ಗಳಲ್ಲಿ 2 ಜಸ್‌ಪ್ರೀತ್ ಬೂಮ್ರಾ ಹಾಗೂ ಉಳಿದ ಎರಡನ್ನು ಮುಖೇಶ್ ಕುಮಾರ್ ಕಿತ್ತು ದಕ್ಷಿಣ ಆಫ್ರಿಕಾ ಇನಿಂಗ್ಸ್ ಮುಕ್ತಾಯ ಮಾಡಿದರು.
ಟೆಸ್ಟ್ ಕ್ರಿಕೆಟ್ ಮಾದರಿಯ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಮೊಹಮದ್ ಸಿರಾಜ್ 15 ರನ್‌ಗಳಿಗೆ 6 ವಿಕೆಟ್ ಕಬಳಿಸಿದರು. ಸಿರಾಜ್ 6 ವಿಕೆಟ್ ಗಳಿಕೆಯು ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತೀಯ ಬೌಲರ್ ಪ್ರದರ್ಶಿಸಿದ ಮೂರನೇ ಅತ್ಯುತ್ತಮ ಪ್ರದರ್ಶನವಾಗಿದೆ.
ದಕ್ಷಿಣಆಫ್ರಿಕಾ ತಂಡ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹಾಗೂ ಭಾರತ ತಂಡದ ವಿರುದ್ಧ 55 ರನ್‌ಗಳ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿರುವುದು ಇದೇ ಮೊದಲಾಗಿದೆ.