ಭಾರತದ ವಿಶ್ವಕಪ್‌ ಹಾಕಿ ಸಂಭ್ರಮಕ್ಕೆ 50 ವರ್ಷ: ರಾಷ್ಟ್ರೀಯ ಆಟದಲ್ಲಿ ಕಾಣೆಯಾಗುತ್ತಿರುವ ಭಾರತ!

Date:

Advertisements
ಭಾರತದ ರಾಷ್ಟ್ರೀಯ ಆಟ ಹಾಕಿ. ಆದರೆ ಕ್ರಿಕೆಟ್‌ ಆಟಕ್ಕೆ ದೊರಕುವ ಪ್ರೋತ್ಸಾಹ, ನೆರವಿನಷ್ಟು ಹಾಕಿ ಆಟಕ್ಕೆ ದೊರಕುತ್ತಿಲ್ಲ.  ಸರ್ಕಾರ ಹಾಕಿಗೂ ಹೆಚ್ಚು ಪ್ರೋತ್ಸಾಹ ನೀಡಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮತ್ತಷ್ಟು ವಿಜೃಂಭಿಸಲು ಸಾಧ್ಯವಾಗುತ್ತದೆ.    

ಹಾಕಿ ಕ್ರೀಡೆಯಲ್ಲಿ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶೇಷವಾದ ಹೆಸರಿದೆ. ಇಡೀ ವಿಶ್ವವೇ ಒಟ್ಟಾಗಿ ಸಂಭ್ರಮಿಸುವ ಒಲಿಂಪಿಕ್ಸ್‌ ಕ್ರೀಡೆಯಲ್ಲಿ ಟೀಂ ಇಂಡಿಯಾ ಹಾಕಿ ತಂಡದ ಸಾಧನೆ ಅತ್ಯಮೋಘವಾಗಿದೆ. ಒಟ್ಟು 8 ಚಿನ್ನದ ಪದಕ, ಒಂದು ಬೆಳ್ಳಿ ಹಾಗೂ ಕಳೆದ ಬಾರಿಯ ಒಂದು ಪದಕವೂ ಸೇರಿ 4 ಕಂಚಿನ ಪದಕದೊಂದಿಗೆ ಒಟ್ಟು 13 ಪದಕಗಳನ್ನು ಗೆದ್ದಿದೆ. ಇಂದಿನ ವಿಶಿಷ್ಟ ದಿನವನ್ನು(ಮಾರ್ಚ್‌ 15) ಮೆಲುಕು ಹಾಕಿದರೆ ಕಳೆದ 50 ವರ್ಷಗಳ ಹಿಂದೆ ಅಜಿತ್‌ ಪಾಲ್‌ ಸಿಂಗ್ ನೇತೃತ್ವದ ಭಾರತದ ಹಾಕಿ ತಂಡದ ಆಟಗಾರರು ಮಲೇಷ್ಯಾದ ಕೌಲಾಲಂಪುರದಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ವಿಶ್ವಕಪ್‌ ಹಾಕಿ ಫೈನಲ್‌ ಪಂದ್ಯದಲ್ಲಿ  ಪಾಕಿಸ್ತಾನ ತಂಡವನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಪ್ರಪ್ರಥಮ ಟ್ರೋಫಿ ವಿಜೇತರಾಗಿದ್ದರು.

ವಿಶ್ವಕಪ್‌ ಚಾಂಪಿಯನ್‌ ಪಟ್ಟ ಅಲಂಕರಿಸಿದರೂ ಭಾರತ ಹಾಕಿ ತಂಡಕ್ಕೆ ಇದು ಮಹತ್ವವಾಗಿತ್ತು. ಏಕೆಂದರೆ ಐದು ವರ್ಷಗಳ ಹಿಂದೆ 1971ರಲ್ಲಿ ಸ್ಪೇನ್‌ನ ಬಾರ್ಸಿಲೋನಾದಲ್ಲಿ ಮೊದಲ ವಿಶ್ವಕಪ್‌ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಪಾಕ್‌ ವಿರುದ್ಧ ಪರಾಭವಗೊಂಡು ಪದಕದ ಸುತ್ತಿನಿಂದ ಹೊರಬಿದ್ದಿತ್ತು. ಮತ್ತೆ ಫೈನಲ್‌ನಲ್ಲಿ ಅದೇ ತಂಡದ ವಿರುದ್ಧ ವಿಜಯಿಯಾಗಿದ್ದು ತಂಡಕ್ಕೆ ಮತ್ತಷ್ಟು ಮೆರಗು ತಂದಿತ್ತು. ಟ್ರೋಫಿ ಗೆದ್ದು ಅರ್ಧ ಶತಮಾನ ಕಳೆದರೂ ನೆನಪುಗಳು ಮಾತ್ರ ಹಲವರ ಮನಸ್ಸಿನಲ್ಲಿ ಹಸಿರಾಗಿದೆ. ಕ್ರಿಕೆಟನ್ನು ಹುಚ್ಚರಂತೆ ವೀಕ್ಷಿಸುವ ಪ್ರಸ್ತುತ ಭಾರತದ ಕಾಲಘಟ್ಟದಲ್ಲಿ ಕೌಲಾಲಂಪುರದಲ್ಲಿ 1975ರ ಮಾರ್ಚ್‌ 15ರಂದು ನಡೆದ ವಿಶ್ವಕಪ್‌ ಹಾಕಿ ಫೈನಲ್‌ ಪಂದ್ಯಕ್ಕೆ 40 ಸಾವಿರಕ್ಕೂ ಅಧಿಕ ಮಂದಿ ಸಾಕ್ಷಿಯಾಗಿದ್ದರು. ರೋಚಕ ಪಂದ್ಯ ಅದಾಗಿತ್ತು.

1975ರ ಹೊತ್ತಿಗಾಗಲೆ ಭಾರತ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ 7 ಚಿನ್ನ ಹಾಗೂ 1 ಬೆಳ್ಳಿ ಪದಕ ಜಯಿಸಿದ್ದರೂ ವಿಶ್ವಕಪ್‌ನಲ್ಲಿ ಮಾತ್ರ ಪ್ರಬಲ ತಂಡಗಳ ಎದುರು ಪೈಪೋಟಿ ಎದುರಿಸಬೇಕಾಗಿತ್ತು. 1971ರಲ್ಲಿ ಸೆಮಿಫೈನಲ್‌ನಲ್ಲಿ ಪರಾಭವಗೊಂಡರೆ, 1973ರಲ್ಲಿ ನೆದರ್‌ಲ್ಯಾಂಡ್ಸ್‌ ವಿರುದ್ಧ ಫೈನಲ್‌ನಲ್ಲಿ ಸೋತು ರನ್ನರ್ಸ್‌ ಅಪ್‌ ಸ್ಥಾನಕ್ಕೆ ತೃಪ್ತಿಪಡಬೇಕಾಗಿತ್ತು. ಅದಲ್ಲದೆ 1964ರ ನಂತರ ಮೂರು ಒಲಿಂಪಿಕ್ಸ್‌ನಲ್ಲಿ ಭಾರತ ಚಿನ್ನ ಗೆದ್ದಿರಲಿಲ್ಲ. ಎರಡು ಬಾರಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತ್ತು. ಒಂದು ಬಾರಿ ಕಂಚು ಜಯಿಸಿತ್ತು. ಆದ ಕಾರಣದಿಂದ ಕೊನೆಯ ಹಂತದ ಪಂದ್ಯಗಳಲ್ಲಿ ಭಾರತ ಪ್ರಶಸ್ತಿ ಕಳೆದುಕೊಳ್ಳುವುದು ಅಭ್ಯಾಸವಾಗಿಬಿಟ್ಟಿದೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ಕಠಿಣ ಸನ್ನಿವೇಶದಲ್ಲಿಯೇ 1975ರಲ್ಲಿ ಬಹಳಷ್ಟು ಸವಾಲುಗಳೊಂದಿಗೆ ನಾಯಕ ಅಜಿತ್‌ ಪಾಲ್ ಸಿಂಗ್ ನೇತೃತ್ವದಲ್ಲಿ ಭಾರತೀಯ ತಂಡವು ಮಲೇಷ್ಯಾದ ಕೌಲಾಲಂಪುರ ತಲುಪಿತು.

Advertisements

ನಾಕೌಟ್ ಸುತ್ತಿನಲ್ಲಿ ಭಾರತಕ್ಕೆ ಉತ್ತಮ ಆರಂಭ

ವಿಶ್ವಕಪ್‌ನಲ್ಲಿ ಭಾರತ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿತ್ತು. ಈ ಗುಂಪಿನಲ್ಲಿ ಭಾರತದ ಜೊತೆಗೆ ಪಶ್ಚಿಮ ಜರ್ಮನಿ, ಆಸ್ಟ್ರೇಲಿಯಾ, ಇಂಗ್ಲೆಂಡ್, ಅರ್ಜೆಂಟೀನಾ ಮತ್ತು ಘಾನಾ ತಂಡಗಳಿದ್ದವು. ಗುಂಪು ಹಂತದಲ್ಲಿ ಭಾರತ ಹಲವು ಏರಿಳಿತಗಳನ್ನು ಎದುರಿಸಬೇಕಾಯಿತು. ಮೊದಲ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಬೇಕಾಯಿತು. ಜಾನ್‌ ವಿಕ್ಟರ್‌ ಫಿಲಿಫ್ಸ್‌ ಅತ್ಯುತ್ತಮ ಎರಡು ಗೋಲುಗಳು ಬಾರಿಸಿದ ಪರಿಣಾಮ ಆಂಗ್ಲರ ವಿರುದ್ಧ 2-1 ಅಂತರದಿಂದ ಟೀಂ ಇಂಡಿಯಾ ಶುಭಾರಂಭ ಮಾಡಿತು. ಇದರ ನಂತರ, ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಭಾರತ 1-1 ಗೋಲುಗಳ ಅಂತರದಲ್ಲಿ ಡ್ರಾಗೆ ಸಮಾಧಾನ ಪಟ್ಟುಕೊಳ್ಳಬೇಕಾಯಿತು. ಮುಂದಿನ ಪಂದ್ಯದಲ್ಲಿ ಅಷ್ಟೇನು ಪ್ರಬಲವಲ್ಲದ ಘಾನಾ ವಿರುದ್ಧದ ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿ 7-0 ಅಂತರದಿಂದ ಭರ್ಜರಿ ಜಯಗಳಿಸಿತು. ಆದರೆ ನಾಲ್ಕನೇ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾ ವಿರುದ್ಧ ಭಾರತ 2-1 ಗೋಲುಗಳಿಂದ ಸೋಲನ್ನು ಎದುರಿಸಬೇಕಾಯಿತು. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡ ಪಶ್ಚಿಮ ಜರ್ಮನಿಯ ಎದುರು 3-1 ಅಂತರದಿಂದ ಅಮೋಘ ಗೆಲುವು ಸಾಧಿಸಿತು. ನಾಲ್ಕು ಪಂದ್ಯ ಗೆಲ್ಲುವುದರೊಂದಿಗೆ ಗುಂಪು ಹಂತದಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಭಾರತ ಸೆಮಿಫೈನಲ್‌ಗೆ ಪ್ರವೇಶಿಸಿತು.

ಈ ಸುದ್ದಿ ಓದಿದ್ದೀರಾ? ಜನಪ್ರಿಯವಾಗುತ್ತಿರುವ ವಿಮೆನ್ ಪ್ರೀಮಿಯರ್‌ ಲೀಗ್‌: ದೇಶದ ಉದ್ದಕ್ಕೂ ಮಹಿಳಾ ಕ್ರಿಕೆಟ್ ಪಸರಿಸಲಿ!

hocky 1975

ಸೆಮಿಫೈನಲ್‌ನಲ್ಲಿ ಮಿಂಚಿದ ಅಸ್ಲಂ ಶೇರ್ ಖಾನ್

ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತಕ್ಕೆ ಭಾರಿ ಪೈಪೋಟಿ ಎದುರಾಯಿತು. ಫೈನಲ್ ತಲುಪಲು ಭಾರತವು ಆತಿಥೇಯ ಮಲೇಷ್ಯಾವನ್ನು ಸೋಲಿಸಬೇಕಾಗಿತ್ತು. ಈ ಪಂದ್ಯವನ್ನು ನೋಡಲು ಮೆರ್‌ಡೇಕಾ ಕ್ರೀಡಾಂಗಣದಲ್ಲಿ 50 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು. ಮಲೇಷ್ಯಾ ತಂಡ 33ನೇ ನಿಮಿಷದಲ್ಲಿ ಆರಂಭಿಕ ಗೋಲು ಗಳಿಸುವ ಮೂಲಕ ಮುನ್ನಡೆ ಸಾಧಿಸಿತು. ಮೊದಲಾರ್ಧದಲ್ಲಿ ಮಲೇಷ್ಯಾ 1-0 ಮುನ್ನಡೆ ಸಾಧಿಸಿತು. ಆನಂತರದಲ್ಲಿ ಶಿವಾಜಿ ಪವಾರ್ 40ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸುವ ಮೂಲಕ ಭಾರತವನ್ನು ಸಮಾನ ಅಂತರಕ್ಕೆ ಕರೆದೊಯ್ದರು. ಆದರೆ ಇದೇ ಸಂದರ್ಭದಲ್ಲಿ ಮಲೇಷ್ಯಾ ತಂಡ 42ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸುವ ಮೂಲಕ 2-1 ಮುನ್ನಡೆ ಸಾಧಿಸಿತು. 65 ನಿಮಿಷಗಳವರೆಗೂ ಭಾರತಕ್ಕೆ ಯಾವುದೇ ಗೋಲು ಬರಲಿಲ್ಲ. ಆಗ ಆಪತ್‌ಬಾಂಧವನಂತೆ ಮಿಂಚಿದ್ದೆ ಅಸ್ಲಾಂ ಶೇರ್‌ ಖಾನ್‌. ಅಸ್ಲಾಂ ಶೇರ್ ಖಾನ್ 66ನೇ ನಿಮಿಷದಲ್ಲಿ(ಹೆಚ್ಚುವರಿ ಮೊದಲ ನಿಮಿಷ) ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ಭಾರತವನ್ನು ಸಮಬಲಕ್ಕೆ ಕೊಂಡೊಯ್ದೊರು. ಸಮಬಲವಾದ್ದರಿಂದ ಪಂದ್ಯವು ಹೆಚ್ಚುವರಿ ಸಮಯಕ್ಕೆ ಹೋಯಿತು. 79ನೇ ನಿಮಿಷದಲ್ಲಿ ಹರ್ಚರಣ್ ಸಿಂಗ್ ಭಾರತ ಪರ ಗೋಲು ಗಳಿಸಿದ ಪರಿಣಾಮ ಮಲೇಷ್ಯಾ ವಿರುದ್ಧ ಭಾರತ 3-2 ಅಂತರದ ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿತು.

ಫೈನಲ್‌ನಲ್ಲಿ ಗೆಲುವು ತಂದುಕೊಟ್ಟ ಅಶೋಕ್ ಕುಮಾರ್ ಧ್ಯಾನಚಂದ್

ಫೈನಲ್‌ನಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಬೇಕಿತ್ತು. 1971ರ ಸೆಮಿಫೈನಲ್‌ನಲ್ಲಿ ಸೋತಿದ್ದ ಕಾರಣ ಈ ಪಂದ್ಯ ರೋಮಾಂಚಕಾರಿಯಾಗಿರುತ್ತದೆ ಎಂಬ ನಿರೀಕ್ಷೆ ಇತ್ತು. 40 ಸಾವಿರಕ್ಕೂ ಅಧಿಕ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಸೇರಿದ್ದರು. ಎರಡೂ ತಂಡಗಳ ನಡುವಿನ ಪೈಪೋಟಿಯನ್ನು ಇಡೀ ಜಗತ್ತು ನೋಡಿತ್ತು. ಪಂದ್ಯ ಆರಂಭವಾದ ನಂತರ 17ನೇ ನಿಮಿಷದಲ್ಲಿ ಮುಹಮ್ಮದ್ ಜಾಹಿದ್ ಶೇಖ್ ಗೋಲು ಗಳಿಸುವ ಮೂಲಕ ಪಾಕಿಸ್ತಾನಕ್ಕೆ ಮುನ್ನಡೆ ತಂದುಕೊಟ್ಟರು. ಪಾಕಿಸ್ತಾನ ಮೊದಲಾರ್ಧವನ್ನು 1-0 ಗೋಲಿನೊಂದಿಗೆ ಕೊನೆಗೊಳಿಸಿತು. ಟೀಂ ಇಂಡಿಯಾಕ್ಕೆ ಆತಂಕ ಶುರುವಾದರೂ ಪೈಪೋಟಿಯನ್ನು ಮಾತ್ರ ಬಿಟ್ಟುಕೊಟ್ಟಿರಲಿಲ್ಲ. ಗೋಲು ಗಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿತ್ತು.

ಪಂದ್ಯದ 44ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ದೊರಕಿತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಸುರ್ಜೀತ್ ಸಿಂಗ್ ಗೋಲು ಗಳಿಸಿ ಭಾರತವನ್ನು ಸಮಬಲಕ್ಕೆ ತೆಗೆದುಕೊಂಡು ಹೋದರು. ಪಂದ್ಯ ಹೆಚ್ಚುವರಿ ಸಮಯಕ್ಕೆ ಹೋದ ನಂತರ ಮತ್ತಷ್ಟು ರೋಮಾಂಚಕಾರಿ ಎನಿಸಿತು. ಎರಡೂ ತಂಡಗಳು ಗೋಲು ಗಳಿಸಬೇಕೆನ್ನುವ ಛಲದಲ್ಲಿದ್ದವು. ಈ ಸಂದರ್ಭದಲ್ಲಿ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರ ಪುತ್ರ ಅಶೋಕ್ ಕುಮಾರ್ 51ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಟೀಂ ಇಂಡಿಯಾವನ್ನು ಮೊಟ್ಟಮೊದಲ ವಿಶ್ವ ಚಾಂಪಿಯನ್‌ ಮಾಡಿದರು.

image 46 1

ಚಾಂಪಿಯನ್‌ ತಂಡದಲ್ಲಿದ್ದ ಕನ್ನಡಿಗ ಬಿ ಪಿ ಗೋವಿಂದ್

1975ರ ವಿಶ್ವಕಪ್ ಗೆದ್ದ ಭಾರತೀಯ ಹಾಕಿ ತಂಡದಲ್ಲಿ ಅಜಿತ್ ಪಾಲ್ ಸಿಂಗ್ (ನಾಯಕ), ಅಶೋಕ್ ಕುಮಾರ್, ಅಸ್ಲಾಂ ಶೇರ್ ಖಾನ್, ಹರ್ಚರಣ್ ಸಿಂಗ್, ಲೆಸ್ಲಿ ಫೆರ್ನಾಂಡಿಸ್, ವರೀಂದರ್ ಸಿಂಗ್, ಅಶೋಕ್ ದಿವಾನ್, ಮೈಕೆಲ್ ಕಿಂಡೋ, ಎಚ್.ಜೆ.ಎಸ್. ಚಿಮ್ನಿ, ವಿಕ್ಟರ್ ಫಿಲಿಪ್ಸ್, ಓಂಕಾರ್ ಸಿಂಗ್, ಬಿಪಿ ಕಾಲಿಯಾ, ಸುರ್ಜಿತ್ ಸಿಂಗ್, ಮೊಹಿಂದರ್ ಸಿಂಗ್, ಶಿವಾಜಿ ಪವಾರ್, ಹರ್ಜಿಂದರ್ ಸಿಂಗ್ ಜೊತೆಗೆ ಕರ್ನಾಟಕದ ಕೊಡಗಿನ ಬಿ ಪಿ ಗೋವಿಂದ್‌ ಕೂಡ ತಂಡದಲ್ಲಿದ್ದರು.

ಆಸ್ಟ್ರೇಲಿಯಾ ಹಾಗೂ ಘಾನ ವಿರುದ್ಧದ ಪಂದ್ಯದಲ್ಲಿ ಗೋವಿಂದ್‌ ತಲಾ ಒಂದೊಂದು ಗೋಲು ಗಳಿಸಿದ್ದರು. ಆಸ್ಟ್ರೇಲಿಯಾ ವಿರುದ್ಧ ಇವರು ಗಳಿಸಿದ ಗೋಲು ಟೀಂ ಇಂಡಿಯಾ ಸೆಮಿಫೈನಲ್‌ ತಲುಪಲು ಕಾರಣವಾಗಿತ್ತು. ಇದಲ್ಲದೆ ಗೋವಿಂದ್‌ ಅವರು 1972ರ ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. 1973ರ ಹಾಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಕೂಡ ಟೀಂ ಇಂಡಿಯಾದ ಪ್ರಮುಖರಾಗಿದ್ದರು. 1975ರ ವಿಶ್ವಕಪ್‌ನಲ್ಲೂ ಪಾಕ್‌ ಹಾಗೂ ಕೀನ್ಯಾ ವಿರುದ್ದ ತಲಾ ಒಂದೊಂದು ಗೋಲು ಗಳಿಸಿದ್ದರು. ಭಾರತ ತಂಡ ಏಷ್ಯಾ ಕಪ್‌ನಲ್ಲಿ ಮೂರು ಬಾರಿ ಬೆಳ್ಳಿ ಜಯಿಸಿದಾಗ ತಂಡವನ್ನು ಪ್ರತಿನಿಧಿಸಿದ್ದರು. ಗೋವಿಂದ್‌ ಅವರ ಸಾಧನೆಗೆ ಕೇಂದ್ರ ಸರ್ಕಾರ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ.

ಕ್ರಿಕೆಟ್‌ಗೆ ಪ್ರೋತ್ಸಾಹ, ರಾಷ್ಟ್ರೀಯ ಆಟಕ್ಕೆ ಕಡೆಗಣನೆ

ಒಲಿಂಪಿಕ್ಸ್‌ ಕ್ರೀಡೆಯಲ್ಲಿ ಅತಿ ಹೆಚ್ಚು ಚಿನ್ನಗೆದ್ದ ಪಟ್ಟಿಯಲ್ಲಿ ಭಾರತ ಹಾಕಿ ತಂಡ ಮೊದಲ ಸ್ಥಾನದಲ್ಲಿದೆ. ಟೀಂ ಇಂಡಿಯಾ ಒಟ್ಟು 8 ಬಾರಿ ಚಿನ್ನ ಗೆದ್ದಿದ್ದರೆ, ಪಾಕ್‌, ಜರ್ಮನಿ, ಹಾಲೆಂಡ್‌, ಇಂಗ್ಲೆಂಡ್‌ ತಂಡಗಳು ಗೆದ್ದಿರುವುದು ತಲಾ 3 ಚಿನ್ನ ಮಾತ್ರ. ಆದರೆ ವಿಶ್ವಕಪ್‌ನಲ್ಲಿ ಮಾತ್ರ 1975ರ ನಂತರ ಪದಕದ ಸಮೀಪ ಸುಳಿದಿಲ್ಲ. ಅದಲ್ಲದೆ ಕಳೆದ ಆರು ಆವೃತ್ತಿಗಳಲ್ಲಿ ಭಾರತ ತಂಡ ಟಾಪ್-5 ರೊಳಗೆ ಸ್ಥಾನ ಪಡೆದಿಲ್ಲ. ಸಮಾಧಾನದ ಸಂಗತಿ ಎಂದರೆ ಕಳೆದ ಎರಡು ಒಲಿಂಪಿಕ್ಸ್‌ಗಳಲ್ಲಿ ಕಂಚಿನ ಪದಕ ಗೆದ್ದಿದೆ.

ಭಾರತದ ರಾಷ್ಟ್ರೀಯ ಆಟ ಹಾಕಿ. ಆದರೆ ಕ್ರಿಕೆಟ್‌ ಆಟಕ್ಕೆ ದೊರಕುವ ಪ್ರೋತ್ಸಾಹ, ನೆರವಿನಷ್ಟು ಹಾಕಿ ಆಟಕ್ಕೆ ದೊರಕುತ್ತಿಲ್ಲ. ಕ್ರಿಕೆಟ್‌ಗೆ ಹಣದ ಹೊಳೆಯೆ ಹರಿಸಲಾಗುತ್ತದೆ. ಗಲ್ಲಿಗೆ ಒಂದೊಂದು ಕ್ರಿಕೆಟ್‌ ಪೋಷಿಸುವ ಕ್ಲಬ್‌ಗಳಿವೆ. ಆದರೆ ಹಾಕಿಗೆ ಅಷ್ಟು ಪ್ರಾಧಾನ್ಯತೆ ಸಿಗುತ್ತಿಲ್ಲ. ಸರ್ಕಾರ ಕೂಡ ಒಂದಷ್ಟು ನೆರವು ಕೊಟ್ಟು ಸುಮ್ಮನಾಗುತ್ತದೆ. ಹೆಚ್ಚು ಆಸಕ್ತಿಯಿರುವವರು ಮಾತ್ರ ಈ ಕ್ರೀಡೆಯತ್ತ ಆಸಕ್ತಿ ಬೆಳೆಸಿಕೊಂಡು ತೊಡಗಿಸಿಕೊಳ್ಳುತ್ತಿದ್ದಾರೆ. ಆದಕಾರಣದಿಂದ ಒಲಿಂಪಿಕ್ಸ್‌ನಂಥ ವಿಶ್ವ ಕ್ರೀಡಾಕೂಟದಲ್ಲಿ ಮಾನ್ಯತೆ ಸಿಗುತ್ತಿದೆ. ಸರ್ಕಾರ ಹಾಕಿಗೂ ಹೆಚ್ಚು ಪ್ರೋತ್ಸಾಹ ನೀಡಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮತ್ತಷ್ಟು ವಿಜೃಂಭಿಸಲು ಸಾಧ್ಯವಾಗುತ್ತದೆ.    

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

ಕೇರಳ ಭೇಟಿ ರದ್ದುಗೊಳಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ

ಲಿಯೊನೆಲ್ ಮೆಸ್ಸಿ ನೇತೃತ್ವದ ಫೀಫಾ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡವನ್ನು ಕೇರಳಕ್ಕೆ...

Download Eedina App Android / iOS

X