ಟಿ20 ವಿಶ್ವಕಪ್ ವಿಜೇತರಾಗಿ ಆಡಿದ ಮೊದಲ ಪಂದ್ಯದಲ್ಲಿಯೇ ಜಿಂಬಾಬ್ವೆ ವಿರುದ್ಧ ಸೋತ ಟೀ ಇಂಡಿಯಾಗೆ ಎಲ್ಲಡೆ ಆಕ್ರೋಶ ವ್ಯಕ್ತವಾಗಿತ್ತು. ಟೀಕೆಗಳನ್ನೆ ಅಸ್ತ್ರ ಮಾಡಿಕೊಂಡ ಭಾರತ ತಂಡದ ಆಟಗಾರರು ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ ಆಟವಾಡಿ ಅತಿಥೇಯ ತಂಡಕ್ಕೆ 235 ರನ್ ಗುರಿ ನೀಡಿದ್ದಾರೆ.
ಅಂತಾರಾಷ್ಟ್ರೀಯ ಪಾದಾರ್ಪಣೆ ಮಾಡಿದ ಎರಡನೇ ಪಂದ್ಯದಲ್ಲಿಯೇ ಪಂಜಾಬ್ನ 23 ವರ್ಷದ ಉದಯೋನ್ಮುಖ ಆಟಗಾರ ಅಭಿಷೇಕ್ ಶರ್ಮಾ ಸಿಕ್ಸರ್ ಬೌಂಡರಿಗಳ ಮೂಲಕ ಜಿಂಬಾಬ್ವೆ ಬೌಲರ್ಗಳ ಬೆವರಿಳಿಸಿದರು. ಕೇವಲ 47 ಚೆಂಡುಗಳಲ್ಲಿ 8 ಭರ್ಜರಿ ಸಿಕ್ಸರ್ ಹಾಗೂ 7 ಆಕರ್ಷಕ ಬೌಂಡರಿಗಳೊಂದಿಗೆ 100 ರನ್ ಸಿಡಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡು ಆರಂಭಿಕನಾಗಿ ಕಣಕ್ಕಿಳಿದ ಶುಭಮನ್ ಗಿಲ್ ಕೇವಲ ಎರಡು ರನ್ಗಳಿಗೆ ಔಟಾಗಿ ಪೆವಿಲಿಯನ್ಗೆ ತೆರಳಿದರು. ಅನಂತರ ಬ್ಯಾಟಿಂಗ್ ಅಬ್ಬರಿಸಿದವರು ಅಭಿಷೇಕ್ ಶರ್ಮಾ ಹಾಗೂ ಮತ್ತೊಬ್ಬ ಉದಯೋನ್ಮುಖ ಆಟಗಾರ ರುತುರಾಜ್ ಗಾಯಕ್ವಾಡ್. ಇವರಿಬ್ಬರು ಎರಡನೇ ವಿಕೆಟ್ ಜೊತೆಯಾಟದಲ್ಲಿ 76 ಚೆಂಡುಗಳಲ್ಲಿ 137 ರನ್ ಸ್ಫೋಟಿಸಿದರು.
ಈ ಸುದ್ದಿ ಓದಿದ್ದೀರಾ? ಟಿ20 ವಿಶ್ವಕಪ್ ವಿಜಯೋತ್ಸವದ ಮೆರವಣಿಗೆ: ಸಾವಿರಾರು ಅಭಿಮಾನಿಗಳೊಂದಿಗೆ ಸಂಭ್ರಮಿಸಿದ ಟೀಂ ಇಂಡಿಯಾ
ಅಜೇಯರಾಗಿ ಉಳಿದ ರುತುರಾಜ್ ಗಾಯಕ್ವಾಡ್ 47 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ನೊಂದಿಗೆ 77 ರನ್ ಬಾರಿಸಿದರು.
ಅಭಿಷೇಕ್ ಶರ್ಮಾ ಔಟಾದ ನಂತರ ಕೊನೆಯ 6 ಓವರ್ಗಳಲ್ಲಿ ಆಡಲು ಬಂದ ಯುವ ಪ್ರತಿಭೆ ರಿಂಕು ಸಿಂಗ್ ಕೂಡ ಅಬ್ಬರಿಸಿದರು. ಕೇವಲ 22 ಚೆಂಡುಗಳಲ್ಲಿ ಅಮೋಘ 5 ಸಿಕ್ಸರ್ ಹಾಗೂ 2 ಬೌಂಡರಿಯೊಂದಿಗೆ ಅಜೇಯ 48 ರನ್ ಸಿಡಿಸಿದರು.
ಜಿಂಬಾಂಬ್ವೆಯ 7 ಬೌಲರ್ಗಳು ಬೌಲ್ ಮಾಡಿದರೂ ಅಭಿಷೇಕ್, ರುತುರಾಜ್ ಹಾಗೂ ರಿಂಕು ಆರ್ಭಟವನ್ನು ತಡೆಯಲು ಸಾಧ್ಯವಾಗಲಿಲ್ಲ. ಗುರಿ ಬೆನ್ನಟ್ಟಿದ ಜಿಂಬಾಬ್ವೆ ಇತ್ತೀಚಿನ ವರದಿ ಬಂದಾಗ 3.2 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 41 ರನ್ ಗಳಿಸಿತ್ತು.