ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಎರಡು ದಿನಗಳು ಬಾಕಿಯಿರುವಾಗ ಭಾರತ ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಬಿಸಿಸಿಐ ಹಾಗೂ ಟೀಂ ಇಂಡಿಯಾ ಸಮಿತಿಯಲ್ಲಿ ಭಿನ್ನಾಭಿಪ್ರಾಯ ಮೂಡಿಬಂದಿರುವ ಘಟನೆ ವರದಿಯಾಗಿದೆ.
ಜನವರಿ 19 ರಂದು ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡದ ಘೋಷಣೆಗೆ ಸಮಯ ನಿಗದಿಪಡಿಸಲಾಗಿತ್ತು. ಮಧ್ಯಾಹ್ನ 12.30 ಕ್ಕೆ ಸುದ್ದಿಗೋಷ್ಠಿ ಕರೆದಿದ್ದರೂ, ಅಂದು ಭಾರತ ತಂಡದ ಘೋಷಣೆಯಾಗಿದ್ದು 3 ಗಂಟೆಗೆ. ಭಾರತ ತಂಡದ ಆಯ್ಕೆ ಘೋಷಣೆ ವಿಳಂಬವಾಗಲು ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ನಡುವಣ ಭಿನ್ನಾಭಿಪ್ರಾಯವೇ ಕಾರಣ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೆಲ ಆಟಗಾರರ ಆಯ್ಕೆಗೆ ಗೌತಮ್ ಗಂಭೀರ್ ಹಾಗೂ ಅಜಿತ್ ಅಗರ್ಕರ್ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಹೀಗಾಗಿ ತಂಡದ ಘೋಷಣೆ ವಿಳಂಬವಾಗಿತ್ತು. ಮುಖ್ಯವಾಗಿ ವಿಕೆಟ್ ಕೀಪರ್ಗಳ ಆಯ್ಕೆ ವಿಷಯದಲ್ಲಿ ಅಗರ್ಕರ್ ಹಾಗೂ ಗಂಭೀರ್ ಪರಸ್ಪರ ಭಿನ್ನ ನಿಲುವುಗಳನ್ನು ಹೊಂದಿದ್ದರು ಎಂದು ವರದಿಯಾಗಿದೆ.
ಟೀಮ್ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಅಗರ್ಕರ್ ರಿಷಭ್ ಪಂತ್ ಅವರನ್ನು ಮೊದಲ ಆಯ್ಕೆಯಾಗಿ ಪರಿಗಣಿಸಿದ್ದರು. ಆದರೆ ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಕೆ ಎಲ್ ರಾಹುಲ್ ಹಾಗೂ ಸಂಜು ಸ್ಯಾಮ್ಸನ್ ಆಯ್ಕೆಗೆ ಒಲವು ಹೊಂದಿದ್ದರು. ಇದಾದ ಬಳಿಕ ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಆದರೆ ಇಲ್ಲಿ ಅಜಿತ್ ಅಗರ್ಕರ್ ಅವರು ರಿಷಭ್ ಪಂತ್ ಅವರನ್ನು ಮೊದಲ ಆಯ್ಕೆ ಎಂದು ಪರಿಗಣಿಸಿದ್ದಾರೆ. ಆದರೆ ಗೌತಮ್ ಗಂಭೀರ್ ಅವರು ಕೆ ಎಲ್ ರಾಹುಲ್ ಅವರನ್ನು ಮೊದಲ ಆಯ್ಕೆಯಾಗಿ ಪರಿಗಣಿಸಬೇಕೆಂದು ಪಟ್ಟು ಹಿಡಿದಿದ್ದರು ಎಂದು ವರದಿಯಾಗಿದೆ.
ಈ ಸುದ್ದಿ ಓದಿದ್ದೀರಾ? ವಿಡಿಯೋ | ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೊ ಡಿಕ್ಕಿ
ಭಾರತ ತಂಡದ ಘೋಷಣೆ ವೇಳೆ ಅಜಿತ್ ಅಗರ್ಕರ್ ಅವರು ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಎಂದು ಹೇಳಿದ್ದರು. ಆದರೆ ಇದಕ್ಕೆ ಮೊದಲೇ ಅಸಮ್ಮತಿ ಹೊಂದಿದ್ದ ಗೌತಮ್ ಗಂಭೀರ್ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಉತ್ತರ ನೀಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಡೆದ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಗೌತಮ್ ಗಂಭೀರ್, ರಿಷಭ್ ಪಂತ್ ಅವರನ್ನು ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿಸಿರಲಿಲ್ಲ. ಅಲ್ಲದೆ ಮೂರು ಮ್ಯಾಚ್ನಲ್ಲೂ ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್ ಅವರಿಗೆ ಸ್ಥಾನ ನೀಡಿದ್ದರು.
ಅಷ್ಟೇ ಅಲ್ಲದೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮುಕ್ತಾಯದ ಬೆನ್ನಲ್ಲೇ ಕೆ ಎಲ್ ರಾಹುಲ್ ಚಾಂಪಿಯನ್ಸ್ ಟ್ರೋಫಿಯಲ್ಲೂ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಆಗಿರಲಿದ್ದಾರೆ ಎಂದು ದೃಢಪಡಿಸಿದ್ದಾರೆ. ಸತತ ವೈಫಲ್ಯ ಅನುಭವಿಸುತ್ತಿರುವ ಕಾರಣ ರಾಹುಲ್ ಅವರನ್ನು ಅಗರ್ಕರ್ ಅವರು ಕಡೆಗಣಿಸಿದರು ಎನ್ನಲಾಗಿದೆ.
