ಪ್ರತಿ ಬಾರಿಯೂ ಬಾಯಿ ಮಾತಿನಲ್ಲಿ ಸುಧಾರಣೆ ತರುತ್ತೇನೆಂದು ಹೇಳುವ ಸರ್ಕಾರಗಳು ಕ್ರೀಡೆಗಳನ್ನು ಉನ್ನತೀಕರಿಸುವ ಕೆಲಸ ಮಾಡುತ್ತಿಲ್ಲ. ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ಕ್ರೀಡೆ ಇಲಾಖೆಗೆ ಸಿಕ್ಕ ಹಣ 3442 ಕೋಟಿ ರೂ. ಮಾತ್ರ. ಭಾರತದಲ್ಲಿ ಕ್ರೀಡೆಗಾಗಿಯೇ ಪ್ರತ್ಯೇಕ ನಿಧಿ ಮೀಸಲಿಟ್ಟು ಭ್ರಷ್ಟಾಚಾರ ರಹಿತವಾಗಿ ಕಾರ್ಯಗತಗೊಳಿಸಿದರೆ ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ಕ್ರೀಡಾಪಟುಗಳು ಮೈಲಿಗಲ್ಲು ಸಾಧಿಸಬಹುದು. ಕೇವಲ ಶ್ರೀಮಂತರನ್ನು, ಉನ್ನತಸ್ತರದವರನ್ನು ಪ್ರೋತ್ಸಾಹಿಸದೆ ಪ್ರತಿಭೆಯುಳ್ಳ ಅಳಿವಿನಂಚಿನಲ್ಲಿರುವ ಸಮುದಾಯಗಳ ಕ್ರೀಡಾಪಟುಗಳನ್ನು ಮುಖ್ಯವಾಹಿನಿಗೆ ತಂದರೆ ಒಲಿಂಪಿಕ್ಸ್‌ನಂಥ ಕ್ರೀಡೆಗಳಲ್ಲಿ ಹತ್ತಾರು ಪದಕಗಳನ್ನು ಗೆಲ್ಲಲು ಸಾಧ್ಯ. ಇದಕ್ಕೆ ಆಳುವವರು ಮನಸ್ಸು ಮಾಡಬೇಕಷ್ಟೆ.
ಜಗತ್ತಿನ ಕ್ರೀಡಾ ರಸಿಕರು ಕಾತರದಿಂದ ಕಾಯುವ ವಿಶ್ವದ ಕ್ರೀಡಾಹಬ್ಬವಾದ ಪ್ಯಾರಿಸ್ ಒಲಿಂಪಿಕ್ಸ್ ಇಂದಿನಿಂದ ಅದ್ಧೂರಿಯಾಗಿ ಆರಂಭಗೊಳ್ಳಲಿದೆ. 33ನೇ ಬೇಸಿಗೆ ಒಲಿಂಪಿಕ್ಸ್ ಅನ್ನು ಫ್ರಾನ್ಸ್‌ನ ಪ್ಯಾರಿಸ್ ಆತಿಥ್ಯ ವಹಿಸಿದ್ದು, ಶುಕ್ರವಾರ ರಾತ್ರಿ 11.30ಕ್ಕೆ (ಜುಲೈ 26) ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಕಳೆದ ಬಾರಿ 2021ರಲ್ಲಿ ಜಪಾನ್‌ನ ಟೊಕಿಯೋದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡೆ ಕೋವಿಡ್ ಸಾಂಕ್ರಾಮಿಕದ ಕರಿನೆರಳಿನಲ್ಲಿ ನಡೆದಿತ್ತು. ಆದರೆ ಈ ಬಾರಿ ಯಾವುದೇ ಆತಂಕವಿಲ್ಲದೆ ಕ್ರೀಡಾಜಾತ್ರೆಗೆ ವೇದಿಕೆ ಸಿದ್ಧಗೊಂಡಿದೆ.
1896ರಿಂದ ಆರಂಭವಾದ ಆಧುನಿಕ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಇಲ್ಲಿಯವರೆಗೂ ವಿವಿಧ ದೇಶದ 32 ನಗರಗಳಲ್ಲಿ ಆತಿಥ್ಯ ವಹಿಸಲಾಗಿದೆ. ಯೂರೋಪ್ ಖಂಡದಲ್ಲೇ ಹೆಚ್ಚು ಬಾರಿ ಆಯೋಜಿಸಲಾದರೂ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬೇಸಿಗೆ ಆತಿಥ್ಯ ಸಿಗುತ್ತಿರುವುದು ಇದು ಮೂರನೇ ಬಾರಿ. ಈ ಮೊದಲು 1924ರಲ್ಲಿ ನೂರು ವರ್ಷಗಳ ಹಿಂದೆ ಎರಡನೇ ಬಾರಿ ಪ್ಯಾರಿಸ್ ಆತಿಥ್ಯ ವಹಿಸಿತ್ತು. ಇದಕ್ಕೂ ಮುಂಚೆ 1900ರಲ್ಲಿ ಎರಡನೇ ಒಲಿಂಪಿಕ್ಸ್ ಕ್ರೀಡಾಕೂಟಗಳು ಪ್ಯಾರಿಸ್‌ನಲ್ಲಿ ನಡೆದಿದ್ದವು.
ಜಾಗತಿಕ ಕ್ರೀಡಾಕೂಟಕ್ಕೆ 68 ಸಾವಿರ ಕೋಟಿ ರೂ. ವೆಚ್ಚ
2024ರ ಒಲಿಂಪಿಕ್ಸ್ ಆತಿಥ್ಯ ಪಡೆಯಲು ಪ್ಯಾರಿಸ್ ಬಹಳ ಶ್ರಮಪಟ್ಟಿದೆ. ಆರಂಭದ ಬಿಡ್‌ನಲ್ಲಿ ಪ್ಯಾರಿಸ್ ಜೊತೆಗೆ ಜರ್ಮನಿಯ ಹ್ಯಾಂಬರ್ಗ್, ಅಮೆರಿಕದ ಬೋಸ್ಟನ್ ಮತ್ತು ಲಾಸ್ ಏಂಜಲೀಸ್, ಹಂಗೇರಿಯ ಬುಡಾಪೆಸ್ಟ್, ಇಟಲಿಯ ರೋಮ್ ನಗರಗಳು ಪೈಪೋಟಿಯಲ್ಲಿದ್ದವು. ವರ್ಷದಿಂದ ವರ್ಷಕ್ಕೆ ಪ್ರಮುಖ ನಗರಗಳು ಹಿಂದೆ ಸರಿದವು. ಕೊನೆಯಲ್ಲಿ ಉಳಿದಿದ್ದು ಪ್ಯಾರಿಸ್ ಮತ್ತು ಲಾಸ್ ಏಂಜಲೀಸ್. ಉತ್ತಮ ಮೂಲಸೌಕರ್ಯ ಹೊಂದಿದ್ದ ಇವೆರಡರ ಪೈಕಿ ಯಾವ ನಗರಕ್ಕೆ ಆತಿಥ್ಯ ನೀಡಬೇಕೆಂಬ ಚರ್ಚೆ ಶುರುವಾದಾಗ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಪ್ಯಾರಿಸ್‌ಗೆ 2024ರ ಕ್ರೀಡಾಕೂಟಗಳನ್ನು ಆಯೋಜಿಸುವ ಹೊಣೆಗಾರಿಕೆ ನೀಡಿ, ಲಾಸ್ ಏಂಜಲೀಸ್ ನಗರಕ್ಕೆ 2028ರ ಆತಿಥ್ಯ ವಹಿಸುವ ಏಕೈಕ ಉಮೇದುವಾರ ಎಂದು ಘೋಷಿಸಿತು.
ಪ್ಯಾರಿಸ್ ಒಲಿಂಪಿಕ್ಸ್ ಸಂಘಟಿಸಲು 68.54 ಸಾವಿರ ಕೋಟಿ ರೂ. (8.2 ಬಿಲಿಯನ್ ಡಾಲರ್) ವೆಚ್ಚವಾಗಲಿದೆ. ಒಲಿಂಪಿಕ್ಸ್ ಇತಿಹಾಸದಲ್ಲೇ ಈ ಮೊತ್ತ 6ನೇ ಗರಿಷ್ಠ ವೆಚ್ಚವಾಗಿದೆ. 2014ರಲ್ಲಿ ರಷ್ಯಾದ ಸೋಚಿಯಲ್ಲಿ ನಡೆದ ಚಳಿಗಾಲದ ಒಲಿಂಪಿಕ್ಸ್‌ಗೆ 2 ಲಕ್ಷ ಕೋಟಿ ರೂ. (25 ಬಿಲಿಯನ್ ಡಾಲರ್) ಖರ್ಚಾಗಿದ್ದು ಇದುವರೆಗಿನ ಗರಿಷ್ಠ ಮೊತ್ತವಾಗಿದೆ. 68 ಸಾವಿರ ಕೋಟಿ ರೂ. ಹಣದಲ್ಲಿ ಖಾಸಗಿ ವಲಯದಿಂದಲೇ ಶೇ.96ರಷ್ಟು ಹಣ ಹರಿದು ಬರಲಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ), ಸಹಭಾಗಿ ಕಂಪೆನಿಗಳು, ಟಿಕೆಟ್ ಸಂಗ್ರಹ, ಪರವಾನಿಗೆಗಳನ್ನು ಪಡೆದುಕೊಳ್ಳುವ ಕಂಪೆನಿಗಳು ಉಳಿದ ಹಣವನ್ನು ಪೂರೈಸುತ್ತವೆ.
112 ಎಕರೆ ಪ್ರದೇಶದ ಕ್ರೀಡಾ ಗ್ರಾಮ, ಸಾವಿರಾರು ಮಂದಿಗೆ ವ್ಯವಸ್ಥೆ
ಪ್ಯಾರಿಸ್‌ನ ಕ್ರೀಡಾಗ್ರಾಮದ ವಿಸ್ತಾರ 112 ಎಕರೆಯಷ್ಟಿದೆ. ಸೆನ್ ನದಿಯ ವ್ಯಾಪ್ತಿಯಲ್ಲಿ 112 ಎಕರೆಗೂ ಹೆಚ್ಚು ವಿಸ್ತಾರದ ಕ್ರೀಡಾಗ್ರಾಮವನ್ನು ನಿರ್ಮಿಸಲಾಗಿದ್ದು, 14,000 ಮಂದಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಉತ್ತರ ಪ್ಯಾರಿಸ್‌ನ ಉಪನಗರಗಳಾದ ಸೇಂಟ್ ಡೆನಿಸ್, ಸೇಂಟ್ ಕ್ವೆನ್, ಲೀಲ್ ಸೇಂಟ್ ಡೆನಿಸ್‌ನಲ್ಲಿ ಈ ಬೃಹತ್ ಕ್ರೀಡಾಗ್ರಾಮ ಹರಡಿಕೊಂಡಿದೆ. ಇದರಲ್ಲಿ ಕ್ರೀಡಾಪಟುಗಳು ಸೇರಿ 14,000 ಮಂದಿ ಉಳಿದುಕೊಳ್ಳಲಿದ್ದಾರೆ. ಬೃಹತ್ ಊಟದ ಸಭಾಂಗಣ, ವಿವಿಧ ರೀತಿಯ ಆಹಾರ ತಾಣಗಳು, ಬೃಹತ್ತಾದ ಜಿಮ್, ಹಲವು ಕ್ರೀಡೆಗಳಿಗೆ ತರಬೇತಿ ಮೈದಾನಗಳು, ಪ್ರಾರ್ಥನಾ ಕೇಂದ್ರಗಳು, ಉದ್ದೀಪನ ನಿಗ್ರಹ ಕೇಂದ್ರಗಳಿವೆ. ಕ್ರೀಡಾಪಟುಗಳು ವಿದ್ಯುತ್ ಚಾಲಿತ ವಾಹನ ಬಳಸಿ ಸಂಚರಿಸಬಹುದು.
ಸೆನ್ ನದಿಯ ಭಾಗದಲ್ಲಿ ಕ್ರೀಡಾಪಟುಗಳು ಆರಾಮಾಗಿ ಸಂಚರಿಸಲು ಸ್ಥಳಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಒಲಿಂಪಿಕ್ಸ್ ಕ್ರೀಡಾಕೂಟ ಮುಗಿದ ಕೂಡಲೇ ಈ ಕಟ್ಟಡಗಳನ್ನು ರೂಪಾಂತರಗೊಳಿಸಿ 3,000 ಫ್ಲಾಟ್‌ಗಳನ್ನಾಗಿ ಬದಲಿಸಲಾಗುತ್ತದೆ. 16 ದಿನಗಳ ಕಾಲ ಕ್ರೀಡಾ ಕೂಟವನ್ನು ಆಯೋಜಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಇದೇ ಮೊದಲ ಬಾರಿ ಒಲಿಂಪಿಕ್ಸ್ ಇತಿಹಾಸದಲ್ಲಿ ಸಮಾನ ಪ್ರಮಾಣದಲ್ಲಿ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಭಾಗಿಯಾಗುತ್ತಿದ್ದು, ಒಟ್ಟು 10,500 ಮಂದಿ ಹಾಗೂ ಸಹಾಯಕ ಸಿಬ್ಬಂದಿಗೆ ವ್ಯವಸ್ಥೆಗಳನ್ನು ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಪ್ಯಾರಿಸ್ ಒಲಿಂಪಿಕ್ಸ್: 9 ಕ್ರೀಡಾಪಟುಗಳಿಗೆ ಅನುದಾನ ಮಂಜೂರು ಮಾಡಿದ ಸಿಎಂ ಸಿದ್ದರಾಮಯ್ಯ
‘ಎಐ’ಗೆ ಭದ್ರತಾ ಹೊಣೆಗಾರಿಕೆ
ಈ ಬಾರಿ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕೃತಕ ಬುದ್ಧಿಮತ್ತೆಯ(ಎಐ) ಸ್ಪರ್ಶ ನೀಡಲಾಗಿದೆ. ಈಜು, ಓಟ, ಸರ್ಫಿಂಗ್‌ನಂತಹ ಕ್ರೀಡೆಗಳ ಮೇಲೆ ಇದು ಕಣ್ಣಿಡುವುದಷ್ಟೇ ಅಲ್ಲದೇ, ಇಡೀ ನಗರದ ರಕ್ಷಣೆಯ ಜವಾಬ್ದಾರಿಯನ್ನು ಎಐ ವಹಿಸಿಕೊಂಡಿದೆ. ಇದು ಮನುಷ್ಯರಿಗಿಂತ ಹೆಚ್ಚು ಕ್ರಿಯಾಶೀಲವಾಗಿರುವುದರಿಂದ ತ್ವರಿತ ಕ್ರಮ ತೆಗೆದುಕೊಳ್ಳಲು ನೆರವಾಗಲಿದೆ. ಫ್ರಾನ್ಸ್‌ನಲ್ಲಿ ಕೆಲವು ತಿಂಗಳ ಹಿಂದೆ ಭಾರೀ ಜನಾಂಗೀಯ ಸಂಘರ್ಷ ನಡೆದ ಹಿನ್ನೆಲೆಯಲ್ಲಿ ಒಲಿಂಪಿಕ್ಸ್ ನಡೆಯುವ ಪ್ಯಾರಿಸ್‌ನಲ್ಲಿ 45,000 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಉದ್ಘಾಟನ ಸಮಾರಂಭಕ್ಕೆ 35,000 ಗುಪ್ತಚರರು, ಯೋಧರು ಭದ್ರತೆ ಒದಗಿಸಲಿದ್ದಾರೆ. ಸಂಭಾವ್ಯ ಡ್ರೋನ್ ದಾಳಿ ಸೇರಿ ಯಾವುದೇ ಸ್ಥಿತಿ ಎದುರಿಸಲು ಫ್ರಾನ್ಸ್ ಸಿದ್ಧವಾಗಿದೆ. ಅಲ್ಲದೆ ಅನ್ಯ ದೇಶಗಳ ಭದ್ರತಾಪಡೆಗಳ ನೆರವನ್ನೂ ಪಡೆಯಲಾಗಿದೆ.
ಸೆನ್ ನದಿ ಮೇಲೆ ಉದ್ಘಾಟನೆ, 3 ಸಾವಿರ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಉದ್ಘಾಟನಾ ಕಾರ್ಯಕ್ರಮವನ್ನು ಸೆನ್ ನದಿಯ ಮೇಲೆ ಆಯೋಜಿಸಲಾಗಿದೆ. ಕ್ರೀಡಾಂಗಣದಲ್ಲೂ ಕಾರ್ಯಕ್ರಮಗಳಿದ್ದರೂ ಕೂಡ ಪ್ರಮುಖ ಕಾರ್ಯಕ್ರಮಗಳನ್ನು ನದಿಯ ಮೇಲೆ ಆಯೋಜಿಸಲಾಗಿದೆ. ಇದರಲ್ಲಿ 1 ಸಾವಿರ ಕ್ರೀಡಾಪಟುಗಳು ಭಾಗಿಯಾಗಲಿದ್ದು, ಇದಕ್ಕಾಗಿ 100ಕ್ಕೂ ಹೆಚ್ಚು ದೋಣಿಗಳನ್ನು ನಿಯೋಜಿಸಲಾಗಿದೆ. ಕ್ರೀಡಾಪಟುಗಳು ದೋಣಿಗಳ ಮೂಲಕ ಪಥ ಸಂಚಲನ ನಡೆಸಲಿದ್ದಾರೆ. ಅಸ್ಟರ್ಲಿಡ್ಜ್ ಸೇತುವೆಯಿಂದ ಆರಂಭವಾಗುವ ಪರೇಡ್ 6 ಕಿ.ಮೀ. ದೂರ ಸಾಗಲಿದ್ದು, ವಿಶ್ವ ವಿಖ್ಯಾತ ಐಫೆಲ್ ಟವರ್ ಬಳಿ ಅಂತ್ಯವಾಗಲಿದೆ.
ಐಫೆಲ್ ಟವರ್ ಎದುರಿನ ಟ್ರೋಕಾಡೆರೊದಲ್ಲಿ ನಿರ್ಮಿಸಿರುವ ಚಾಂಪಿಯನ್ಸ್ ಪಾರ್ಕ್ ಎಂಬ ತಾತ್ಕಾಲಿಕ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಒಲಿಂಪಿಕ್ಸ್‌ಗೆ ಕ್ರೀಡಾ ಹಬ್ಬಕ್ಕೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಅವರು ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪ್ಯಾರಿಸ್‌ನ ಪ್ರತಿ ಸೇತುವೆಯ ಮೇಲೆ 3 ಗಂಟೆಗೂ ಹೆಚ್ಚು ಕಾಲ ನೃತ್ಯ, ಸಂಗೀತ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕ್ರೀಡಾಂಗಣದಲ್ಲಿ 4 ಲಕ್ಷಕ್ಕೂ ಅಧಿಕ ಮಂದಿ ಕಣ್ತುಂಬಿಕೊಳ್ಳಲಿದ್ದಾರೆ. ಪ್ಯಾರಿಸ್‌ನ ಕ್ರೀಡಾ ಹಬ್ಬವನ್ನು ಸವಿಯಲು 2 ಲಕ್ಷ ಟಿಕೆಟ್ಗಳನ್ನು ಉಚಿತವಾಗಿ ಹಂಚಿಕೆ ಮಾಡಲಾಗಿದೆ. ಇದಲ್ಲದೆ ನಗರದ ಜನತೆ ಉದ್ಘಾಟನಾ ಕಾರ್ಯಕ್ರಮವನ್ನು ಸವಿಯಲು ಪ್ಯಾರಿಸ್‌ನ ಹಲವೆಡೆ ಬೃಹತ್ ಪರದೆಗಳನ್ನು ಅಳವಡಿಸಲಾಗಿದೆ.
ಪ್ಯಾರಿಸ್ ಕ್ರೀಡಾಕೂಟವನ್ನು ನೋಡಲು ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ಆಗಮಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಸರಿಸುಮಾರು 1 ಕೋಟಿ ಟಿಕೆಟ್ಗಳು ಮಾರಾಟವಾಗಿವೆ ಎಂದು ಐಒಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ಒಲಿಂಪಿಕ್ಸ್ ಕ್ರೀಡೆಗಳ ಇತಿಹಾಸದಲ್ಲೇ ಗರಿಷ್ಠ ಟಿಕೆಟ್ಗಳ ಮಾರಾಟವಾಗಿದೆ. 1998ರ ಅಮೆರಿಕದ ಅಟ್ಲಾಂಟಾ ಕ್ರೀಡಾಕೂಟದ ಸಮಯದಲ್ಲಿ 83 ಲಕ್ಷ ಟಿಕೆಟ್ಗಳು ಮಾರಾಟವಾಗಿದ್ದವು. ಪ್ರಸ್ತುತ ಉದ್ಘಾಟನೆ ನಂತರ ಸ್ಪರ್ಧೆಗಳು ಹೆಚ್ಚಾಗಲಿದ್ದು, ಮಾರಾಟವಾಗುವ ಟಿಕೆಟ್ಗಳ ಸಂಖ್ಯೆಯೂ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
1011 ಪದಕಗಳಿಗೆ 10,714 ಕ್ರೀಡಾಳುಗಳಿಂದ ಪೈಪೋಟಿ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿಶ್ವದ 206 ದೇಶಗಳಿಂದ 10,714 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಜುಲೈ 26ರಿಂದ ಆಗಸ್ಟ್ 11ರವರೆಗೆ 329 ಸ್ಥಳಗಳಲ್ಲಿ 32 ಕ್ರೀಡೆಗಳು ನಡೆಯಲಿದ್ದು, ಕ್ರೀಡಾಳುಗಳು ಒಟ್ಟು 1011 ಪದಕಗಳಿಗೆ ಪೈಪೋಟಿ ನಡೆಸಲಿದ್ದಾರೆ. ಓಟದ ಸ್ಪರ್ಧೆ, ಈಜಿನ ಸ್ಪರ್ಧೆಯಲ್ಲಿ ಈ ಬಾರಿ ಯಾರು ಹೆಚ್ಚಿನ ಪದಕ ಜಯಿಸುತ್ತಾರೆ ಎಂಬುದು ಕೋಟ್ಯಂತರ ಕ್ರೀಡಾಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಇಲ್ಲಿಯವರೆಗೂ ನಡೆದಿರುವ 32 ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಅಮೆರಿಕವು ಚಿನ್ನ, ಬೆಳ್ಳಿ, ಕಂಚು ಸೇರಿ 2500ಕ್ಕೂ ಹೆಚ್ಚು ಪದಕಗಳನ್ನು ಜಯಿಸಿ ಮೊದಲ ಸ್ಥಾನದಲ್ಲಿದೆ. 1500ಕ್ಕೂ ಹೆಚ್ಚು ಪದಕ ಜಯಿಸಿರುವ ರಷ್ಯಾ 2ನೇ ಸ್ಥಾನದಲ್ಲಿದ್ದರೆ, 1300ಕ್ಕೂ ಹೆಚ್ಚು ಪದಕ ಗೆದ್ದಿರುವ ಜರ್ಮನಿ ಮೂರನೇ ಸ್ಥಾನದಲ್ಲಿದೆ.
23 ಚಿನ್ನ ಗೆದ್ದಿರುವ ಮೈಕಲ್ ಫ್ಲೆಪ್ಸ್
ವೈಯಕ್ತಿಕ ವಿಭಾಗದಲ್ಲಿ ಅತಿ ಹೆಚ್ಚು ಚಿನ್ನ ಗೆದ್ದವರ ಪೈಕಿ ಅಮೆರಿಕದ ಈಜುಗಾರನಾದ ಮೈಕಲ್ ಫ್ಲೆಪ್ಸ್ ಹೆಚ್ಚಿನ ದಾಖಲೆ ಹೊಂದಿದ್ದಾರೆ. 2004 ರಿಂದ 2016ರವರೆಗೂ ನಾಲ್ಕು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 23 ಚಿನ್ನಗಳೊಂದಿಗೆ ಒಟ್ಟು 28 ಪದಕಗಳನ್ನು ಜಯಿಸಿದ್ದಾರೆ. ಎರಡನೇ ಸ್ಥಾನದಲ್ಲಿ 1956 ರಿಂದ 1964ರ ತನಕ ಸೋವಿಯತ್ ರಷ್ಯಾವನ್ನು ಪ್ರತಿನಿಧಿಸಿದ್ದ ಜಿಮ್ನಾಸ್ಟಿಕ್ಸ್ ಸ್ಪರ್ಧಿ ‘ಲರಿಸಾ ಲತ್ಯಾನಿನ’ 9 ಚಿನ್ನಗಳೊಂದಿಗೆ 18 ಪದಕ ಗಳಿಸಿದ್ದಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಜಮೈಕಾದ ಉಸೇನ್ ಬೋಲ್ಟ್ 2004ರಿಂದ 2016ರವರೆಗೆ 8 ಚಿನ್ನ ಗೆದ್ದಿದ್ದರೆ, ಅಮೆರಿಕದ ಕಾರ್ಲ್ ಲೂಯಿಸ್ 9 ಚಿನ್ನ ಹಾಗೂ 1 ಬೆಳ್ಳಿ ಪದಕ ಜಯಿಸಿದ್ದಾರೆ.

ಒಲಿಂಪಿಕ್ಸ್ ಹಾಕಿಯಲ್ಲಿ ದಾಖಲೆ ಹೊಂದಿರುವ ಭಾರತ
ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಭಾರತದ ದಾಖಲೆ ಏನೇನೂ ಇಲ್ಲವೆಂದು ಹೇಳಬಹುದು. ಆದರೆ ಹಾಕಿಯಲ್ಲಿ ಮಾತ್ರ ದೊಡ್ಡ ಸಾಧನೆ ಮೆರೆದಿದೆ. 8 ಚಿನ್ನ, ಮೂರು ಕಂಚು ಹಾಗೂ ಒಂದು ಬೆಳ್ಳಿಯೊಂದಿಗೆ 11 ಪದಕ ಗೆದ್ದಿರುವ ಭಾರತ ಅಗ್ರ ಸ್ಥಾನದಲ್ಲಿದೆ. ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸ್ವತಂತ್ರ ಪೂರ್ವ ಮತ್ತು ಸ್ವತಂತ್ರಾನಂತರದಲ್ಲಿ ಭಾರತವು ಉಳಿದ ಎಲ್ಲ ಕ್ರೀಡೆಗಳಲ್ಲಿ ಜಯಿಸಿರುವುದು 29 ಪದಕಗಳು ಮಾತ್ರ. ಹಾಕಿಯೂ ಒಳಗೊಂಡು ಭಾರತ ಒಟ್ಟು 35 ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ವೈಯಕ್ತಿಕ ವಿಭಾಗದಲ್ಲಿ ಭಾರತ ಕೇವಲ ಎರಡು ಚಿನ್ನ ಮಾತ್ರ ಗೆದ್ದಿದೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಶೂಟರ್ ಅಭಿನವ್ ಬಿಂದ್ರಾ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರೆ, 2021ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ, ಜಾವೆಲಿನ್ ಎಸೆತದ ಟ್ರ್ಯಾಕ್ ಅಂಡ್ ಫೀಲ್ಡ್ ವಿಭಾಗದಲ್ಲಿ ಭಾರತಕ್ಕೆ ಮೊತ್ತಮೊದಲ ಚಿನ್ನ ಗೆದ್ದುಕೊಟ್ಟಿದ್ದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ ತಂಡ 84ನೇ ರಾಷ್ಟ್ರವಾಗಿ ಈ ಬಾರಿ ಕಾಣಿಸಿಕೊಳ್ಳಲಿದೆ. ಆತಿಥೇಯ ಪ್ಯಾರಿಸ್ ಕೊನೆಯ 205ನೇ ರಾಷ್ಟ್ರವಾಗಿರಲಿದ್ದು, ಅಮೆರಿಕದ ಲಾಸ್ ಏಂಜಲೀಸ್ ಮುಂದಿನ ಒಲಿಂಪಿಕ್ಸ್ ಆಯೋಜಿಸುತ್ತಿರುವುದರಿಂದ ಅಮೆರಿಕ 204ನೇ ರಾಷ್ಟ್ರವಾಗಿರಲಿದೆ. 2032ರ ಒಲಿಂಪಿಕ್ಸ್ ಆಯೋಜಿಸುತ್ತಿರುವ ಆಸ್ಟ್ರೇಲಿಯಾ 203ನೇ ದೇಶವಾಗಿರಲಿದೆ.
ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದ ಪಥಸಂಚಲನದ ವೇಳೆ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಮತ್ತು ಟೇಬಲ್ ಟೆನಿಸ್ ಹಿರಿಯ ಆಟಗಾರ, ಕಾಮನ್‌ವೆಲ್ತ್ ಕ್ರೀಡೆಯಲ್ಲಿ 7 ಚಿನ್ನದ ಪದಕಗಳನ್ನು ಗೆದ್ದಿರುವ ಶರತ್ ಕಮಲ್, ಭಾರತದ ಧ್ವಜಧಾರಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.
ಭಾರತದಿಂದ 117 ಕ್ರೀಡಾಪಟುಗಳು ಭಾಗಿ
ವಿಶ್ವದ ಅತ್ಯಧಿಕ ಜನಸಂಖ್ಯೆ ಹೊಂದಿರುವ ರಾಷ್ಟ್ರ ಭಾರತ. ಪ್ಯಾರಿಸ್‌ನಲ್ಲಿ ನಡೆಯುತ್ತಿರುವ 2024ರ ಸಾಲಿನ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಒಟ್ಟು 10,714 ಕ್ರೀಡಾಪಟುಗಳ ಪೈಕಿ 117 ಮಂದಿ ಭಾಗವಹಿಸುತ್ತಿದ್ದಾರೆ. ಈ ಸ್ಪರ್ಧಿಗಳು 16 ವಿವಿಧ ಕ್ರೀಡೆಗಳ ಒಟ್ಟು 69 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಇದರಲ್ಲಿ ಐವರು ಮೀಸಲು ಕ್ರೀಡಾಪಟುಗಳು ಇದ್ದಾರೆ.
ಭಾರತದಿಂದ ಇಷ್ಟು ಕಡಿಮೆ ಮಂದಿ ಕ್ರೀಡಾಳುಗಳು ಭಾಗವಹಿಸುತ್ತಿರುವುದು ದುಃಖದ ಸಂಗತಿಯೂ ಹೌದು. ಜಾಗತಿಕ ಮಟ್ಟದಲ್ಲಿ ಹಲವು ಸಂಗತಿಗಳಲ್ಲಿ ದೊಡ್ಡಣ್ಣನಾಗುವ ಕಡೆಗೆ ಹೆಜ್ಜೆ ಇಡುತ್ತೇನೆ ಎಂದು ಹೇಳುವ ಭಾರತ ವಿಶ್ವದ ಕ್ರೀಡಾ ಹಬ್ಬ ಒಲಿಂಪಿಕ್ಸ್‌ನಲ್ಲಿ ಮಾತ್ರ ಹಿಂದುಳಿದಿದೆ. ಇದಕ್ಕೆಲ್ಲ ರಾಜಕಾರಣಿಗಳ, ಅಧಿಕಾರಿಗಳ ಭ್ರಷ್ಟಾಚಾರ, ಕ್ರೀಡಾಸಕ್ತಿಯ ಕೊರತೆಯೆ ಪ್ರಮುಖ ಕಾರಣವಾಗಿದೆ. ನಮ್ಮ ದೇಶದಲ್ಲಿ ಹೆಚ್ಚು ಆದಾಯ ನೀಡುವ ಕ್ರಿಕೆಟ್‌ಗೆ ಮಾತ್ರ ಉನ್ನತ ಮಟ್ಟದಲ್ಲಿ ಪ್ರೋತ್ಸಾಹ ನೀಡಲಾಗುತ್ತದೆ. ಆದರೆ ಜಾಗತಿಕ ಕ್ರೀಡಾ ಹಬ್ಬ ಒಲಿಂಪಿಕ್ಸ್‌ಅನ್ನು ಕಡೆಗಣಿಸಲಾಗುತ್ತಿದೆ. ಎಲ್ಲೆಲ್ಲೂ ಭ್ರಷ್ಟಾಚಾರ, ಸ್ವಜನ ಪಕ್ಷಪಾತವೇ ಹೆಚ್ಚಿರುವ ಕಾರಣ ನಿಜವಾದ ಪ್ರತಿಭೆಗಳಿಗೆ ಅವಕಾಶ ಸಿಗುತ್ತಿಲ್ಲ.

ಒಲಿಂಪಿಕ್ಸ್‌ನಲ್ಲಿ ಭಾರತದ ಹೀನಾಯ ಸ್ಥಿತಿಗೆ ಸಾರ್ವಕಾಲಿಕ ಪದಕ ಪಟ್ಟಿಯೇ ಪ್ರಮುಖ ನಿದರ್ಶನ. ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸ್ವತಂತ್ರ ಪೂರ್ವ ಮತ್ತು ಸ್ವತಂತ್ರಾನಂತರದ ಭಾರತ ಜಯಿಸಿರುವುದು ಕೇವಲ 35 ಪದಕಗಳನ್ನು ಮಾತ್ರ. ಅಮೆರಿಕ ಮತ್ತು ಚೀನಾ ಪ್ರತಿಬಾರಿ ನೂರಾರು ಪದಕಗಳನ್ನು ಗೆಲ್ಲುತ್ತಿರುವ ಸಂದರ್ಭದಲ್ಲಿ ಭಾರತ ಕೇವಲ ಬೆರಳೆಣಿಕೆಯ ಸಾಧನೆ ಮಾಡುತ್ತಿದೆ. ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಪ್ರತಿಭೆಗೆ ಬೇಕಿರುವ ಅವಕಾಶ, ಪ್ರೋತ್ಸಾಹ, ಸವಲತ್ತುಗಳ ಕೊರತೆ ಹೆಚ್ಚಿದೆ.
ಪ್ರತಿ ಬಾರಿಯೂ ಬಾಯಿ ಮಾತಿನಲ್ಲಿ ಸುಧಾರಣೆ ತರುತ್ತೇನೆಂದು ಹೇಳುವ ಸರ್ಕಾರಗಳು ಕ್ರೀಡೆಗಳನ್ನು ಉನ್ನತೀಕರಿಸುವ ಕೆಲಸ ಮಾಡುತ್ತಿಲ್ಲ. ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ಕ್ರೀಡೆ ಇಲಾಖೆಗೆ ಸಿಕ್ಕ ಹಣ 3442 ಕೋಟಿ ರೂ. ಮಾತ್ರ. ಭಾರತದಲ್ಲಿ ಕ್ರೀಡೆಗಾಗಿಯೇ ಪ್ರತ್ಯೇಕ ನಿಧಿ ಮೀಸಲಿಟ್ಟು ಭ್ರಷ್ಟಾಚಾರ ರಹಿತವಾಗಿ ಕಾರ್ಯಗತಗೊಳಿಸಿದರೆ ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ಕ್ರೀಡಾಪಟುಗಳು ಮೈಲಿಗಲ್ಲು ಸಾಧಿಸಬಹುದು. ಕೇವಲ ಶ್ರೀಮಂತರನ್ನು, ಉನ್ನತಸ್ತರದವರನ್ನು ಪ್ರೋತ್ಸಾಹಿಸದೆ ಪ್ರತಿಭೆಯುಳ್ಳ ಅಳಿವಿನಂಚಿನಲ್ಲಿರುವ ಸಮುದಾಯಗಳ ಕ್ರೀಡಾಪಟುಗಳನ್ನು ಮುಖ್ಯವಾಹಿನಿಗೆ ತಂದರೆ ಒಲಿಂಪಿಕ್ಸ್‌ನಂಥ ಕ್ರೀಡೆಗಳಲ್ಲಿ ಹತ್ತಾರು ಪದಕಗಳನ್ನು ಗೆಲ್ಲಲು ಸಾಧ್ಯ. ಇದಕ್ಕೆ ಆಳುವವರು ಮನಸ್ಸು ಮಾಡಬೇಕಷ್ಟೆ.
ಕರ್ನಾಟಕದ 7 ಮಂದಿ ಸ್ಪರ್ಧೆ
ಭಾರತದ 117 ಮಂದಿ ಕ್ರೀಡಾಪಟುಗಳಲ್ಲಿ ಕರ್ನಾಟಕದ 7 ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಒಲಿಂಪಿಕ್ಸ್ ಕ್ರೀಡೆಯಲ್ಲಿ ಕರ್ನಾಟಕದ ಕ್ರೀಡಾಪಟುಗಳ ಹೆಜ್ಜೆಗುರುತು ಹೆಮ್ಮೆ ಮೂಡಿಸುತ್ತದೆ. 1920ರ ಒಲಿಂಪಿಕ್ಸ್‌ನಿಂದಲೂ ಭಾರತ ತಂಡದಲ್ಲಿ ಕನ್ನಡಿಗರು ಸ್ಥಾನ ಪಡೆದಿದ್ದಾರೆ. ವೈಯಕ್ತಿಕ ಸ್ಪರ್ಧೆಗಳಲ್ಲಿ ಈತನಕ ಪದಕ ಜಯಿಸಲು ಸಾಧ್ಯವಾಗದಿದ್ದರೂ, ಪದಕ ಗೆದ್ದಿರುವ ಹಾಕಿ ತಂಡದಲ್ಲಿ ರಾಜ್ಯದ ಕ್ರೀಡಾಪಟುಗಳು ತಮ್ಮದೆ ಆದ ಕೊಡುಗೆ ನೀಡಿದ್ದಾರೆ.
ರೋಹನ್ ಬೋಪಣ್ಣ (44 ವರ್ಷ): ಕೊಡಗಿನ ಟೆನಿಸ್ ಆಟಗಾರ ಬೋಪಣ್ಣ, 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಸಾನಿಯಾ ಮಿರ್ಜಾ ಅವರೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದರು. 2021ರ ಲಂಡನ್ ಒಲಿಂಪಿಕ್ಸ್‌ನಲ್ಲೂ ಮಹೇಶ್ ಭೂಪತಿ ಜೊತೆಗೂಡಿ ಸ್ಪರ್ಧಿಸಿದ್ದರು. ಈ ಬಾರಿ ಶ್ರೀರಾಮ್ ಬಾಲಾಜಿ ಅವರೊಂದಿಗೆ ಟೆನಿಸ್‌ನ ಪುರುಷರ ಡಬಲ್ಸ್‌ನಲ್ಲಿ ಕಣಕ್ಕೆ ಇಳಿಯಲಿದ್ದಾರೆ.
ಅಶ್ವಿನಿ ಪೊನ್ನಪ್ಪ (34 ವರ್ಷ): ಕೊಡಗಿನ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಈ ಹಿಂದೆ ಜ್ವಾಲಾ ಗುಟ್ಟಾ ಅವರೊಂದಿಗೆ ಲಂಡನ್ ಮತ್ತು ರಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಈ ಬಾರಿ ಮಹಿಳೆಯರ ಡಬಲ್ಸ್‌ನಲ್ಲಿ ತನಿಶಾ ಕಾಸ್ಟೊ ಅವರೊಂದಿಗೆ ಆಡಲಿದ್ದಾರೆ.
ಅದಿತಿ ಅಶೋಕ್ (26 ವರ್ಷ): ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಡಿಮೆ ಅಂತರದಲ್ಲಿ ಕಂಚು ತಪ್ಪಿಸಿಕೊಂಡು ನಾಲ್ಕನೇ ಸ್ಥಾನ ಪಡೆದಿದ್ದ ಗಾಲ್ಫ್ ಆಟಗಾರ್ತಿ ಬೆಂಗಳೂರಿನ ಅದಿತಿ, ಈ ಬಾರಿ ಪದಕದ ಭರವಸೆಯಲ್ಲಿದ್ದಾರೆ. ಕಳೆದ ಬಾರಿ ಅವರು ತಮ್ಮ 18ನೇ ವಯಸ್ಸಿನಲ್ಲೇ ರಿಯೊ ಒಲಿಂಪಿಕ್ಸ್‌ನಲ್ಲಿ ಆಡುವ ಅವಕಾಶ ಪಡೆದಿದ್ದರು.
ಎಂ.ಆರ್. ಪೂವಮ್ಮ (34 ವರ್ಷ): ಮಂಗಳೂರಿನ ಪೂವಮ್ಮ, ಮಹಿಳೆಯರ 4×400 ಮೀಟರ್ ರಿಲೆ ತಂಡದಲ್ಲಿದ್ದಾರೆ. ಅವರು ಬೀಜಿಂಗ್ ಒಲಿಂಪಿಕ್ಸ್ ಮತ್ತು ರಿಯೊ ಕೂಟದಲ್ಲೂ ಸ್ಪರ್ಧಿಸಿದ್ದರು.
ಶ್ರೀಹರಿ ನಟರಾಜ್ (23 ವರ್ಷ): ಬೆಂಗಳೂರಿನ ಶ್ರೀಹರಿ 100 ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 27ನೇ ಸ್ಥಾನ ಪಡೆದಿದ್ದರು. 2023ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ದಾಖಲೆಯ 10 ಪದಕಗಳನ್ನು ಗೆದ್ದಿದ್ದಾರೆ.
ಧೀನಿಧಿ ದೇಸಿಂಗು (14 ವರ್ಷ): ಭಾರತ ತುಕಡಿಯ ಅತಿ ಕಿರಿಯ ವಯಸ್ಸಿನ ಕ್ರೀಡಾಪಟು ಬೆಂಗಳೂರಿನ ಧೀನಿಧಿ ಮಹಿಳೆಯರ 200 ಮೀಟರ್ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸುವರು. 9ನೇ ತರಗತಿ ಓದುತ್ತಿರುವ ಧೀನಿಧಿ, ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದರು.
ಅರ್ಚನಾ ಕಾಮತ್ (24 ವರ್ಷ): ಬೆಂಗಳೂರಿನ ಅರ್ಚನಾ ಕಾಮತ್ 2023ರಲ್ಲಿ ಗೋವಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಗಳಲ್ಲಿ ಮಹಿಳೆಯರ ಟೇಬಲ್ ಟೆನಿಸ್ ವಿಭಾಗದ ಸಿಂಗಲ್ಸ್ ಚಿನ್ನ ಗೆದ್ದಿದ್ದರು. ಈ ಬಾರಿ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.
ಉದ್ಘಾಟನೆ ಸಮಯ: ರಾತ್ರಿ 11.30 (ಭಾರತೀಯ ಕಾಲಮಾನ)
ನೇರಪ್ರಸಾರ: ಸ್ಪೋರ್ಟ್ಸ್ 18 ಮತ್ತು ಜಿಯೊ ಸಿನಿಮಾ ಆ್ಯಪ್