ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ವೈಎಸ್‌ಆರ್ ಕಾಂಗ್ರೆಸ್ ಪಕ್ಷ ತ್ಯಜಿಸಿದ್ದಾರೆ. ಡಿ.28ರಂದು ಆಂಧ್ರ ಮುಖ್ಯಮಂತ್ರಿ ವೈಎಸ್‌ಆರ್ ಜಗನ್ ನೇತೃತ್ವದಲ್ಲಿ ಪಕ್ಷಕ್ಕೆ ಸೇರಿದ್ದರು.
ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ರಾಯುಡು, “ನಾನು ವೈಎಸ್‌ಆರ್‌ಸಿಪಿ ಪಕ್ಷ ತ್ಯಜಿಸಲು ನಿರ್ಧರಿಸಿರುವುದಾಗಿ ಎಲ್ಲರಿಗೂ ತಿಳಿಸುತ್ತಿದ್ದೇನೆ. ರಾಜಕೀಯದಿಂದ ಸ್ವಲ್ಪ ಸಮಯ ದೂರವುಳಿಯಲಿದ್ದು, ಸೂಕ್ತ ಸಮಯದಲ್ಲಿ ಮುಂದಿನ ಕ್ರಮಗಳ ಬಗ್ಗೆ ತಿಳಿಸುತ್ತೇನೆ” ಎಂದು ತಿಳಿಸಿದ್ದಾರೆ.
ಗಂಟೂರು ಮೂಲದವರಾದ ರಾಯುಡು, ಟೀಂ ಇಂಡಿಯಾ, ಐಪಿಎಲ್‌ನ ಸಿಎಸ್‌ಕೆ, ಮುಂಬೈ ಇಂಡಿಯನ್ಸ್ ಪರ ಮಧ್ಯಮ ಕ್ರಮಾಂಕದ ಆಟಗಾರನಾಗಿ ಹಲವು ಪಂದ್ಯಗಳನ್ನು ಆಡಿದ್ದರು.
2019ರ ಜುಲೈನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಹಾಗೂ 2023ರ ಮೇನಲ್ಲಿ ಐಪಿಎಲ್‌ಗೆ ನಿವೃತ್ತಿ ಘೋಷಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶಾಲಾ ಸಿಬ್ಬಂದಿಗೆ ‘ನಡತೆ ಸರ್ಟಿಫಿಕೇಟ್ʼ ಮಕ್ಕಳೇ ಕೊಡುವಂತಾಗಬೇಕು
ಅಂಬಟಿ ಮೊದಲಿನಿಂದಲೂ ಆಂಧ್ರದಲ್ಲಿ ವೈಎಸ್‌ಆರ್‌ಸಿಪಿ ಪರ ನಿಂತಿದ್ದರು. ಸರಕಾರ ಕೈಗೊಂಡ ಕೆಲವು ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದರು. ಪಕ್ಷದ ಅಭಿವೃದ್ಧಿ, ಕಲ್ಯಾಣ ಕಾರ್ಯಕ್ರಮಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಎಂದಿದ್ದರು. ರಾಯುಡು ಅವರು ಆಂಧ್ರದ ಶಾಸಕ ಅಥವಾ ಸಂಸದ ಸ್ಥಾನಕ್ಕೆ ಸ್ಪರ್ಧಿಸುತ್ತಾರೆ ಎಂಬ ಪ್ರಚಾರ ಕೂಡ ಎಲ್ಲಡೆ ಹರಿದಾಡುತ್ತಿತ್ತು.
ಆದರೆ, ಅವರು ಗುಂಟೂರು ಸಂಸದ ಸ್ಥಾನಕ್ಕೆ ಸ್ಪರ್ಧಿಸಲು ಆಸಕ್ತಿ ತೋರಿದ್ದು, ಈ ಬಗ್ಗೆ ವೈಎಸ್‌ಆರ್‌ಸಿಪಿ ಹೈಕಮಾಂಡ್‌ನಿಂದ ಸ್ಪಷ್ಟ ಭರವಸೆ ಸಿಗದ ಕಾರಣ ಪಕ್ಷ ಬಿಟ್ಟಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.