ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋತ ನಂತರ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ ಕಠಿಣವಾಗಿದೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಮಾಜಿ ಲೆಗ್ಸ್ಪಿನರ್ ಅನಿಲ್ ಕುಂಬ್ಳೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿದ ಅವರು, ಈಗ ಭಾರತ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದೆ. ಹೀಗಾಗಿ ಮುಂದಿನ ಪ್ರತಿಯೊಂದು ಟೆಸ್ಟ್ ಪಂದ್ಯವೂ ಭಾರತದ ಪಾಲಿಗೆ ನಿರ್ಣಾಯಕವಾಗಿದೆ. ಈ ಸೋಲುಗಳು ನಮಗೆ ಫೈನಲ್ ಹಾದಿಯನ್ನು ಕಠಿಣಗೊಳಿಸಿವೆ. ಸರಣಿ ಪ್ರಾರಂಭಕ್ಕೂ ಮುನ್ನ ಐದು ಗೆಲುವು ಭಾರತವನ್ನು ನಿರಾತಂಕವಾಗಿ ಡಬ್ಲ್ಯೂಟಿಸಿ ಫೈನಲ್ ತಲುಪಲು ಸಹಾಯ ಮಾಡಬಲ್ಲುದು ಎಂದು ನಾವು ಮಾತನಾಡಿಕೊಂಡಿದ್ದೆವು. ಆದರೆ ಈಗ ಮುಂದಿನ ಆರು ಪಂದ್ಯಗಳಿಂದ ಕನಿಷ್ಠ 4 ಗೆಲುವುಗಳಂತೂ ಬೇಕಾಗಿದೆ. ಇದು ಇನ್ನೂ ಕಠಿಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತವು ಕೊನೆ ಪಕ್ಷ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ 3ನೇ ಟೆಸ್ಟ್ ಪಂದ್ಯವನ್ನಾದರೂ ಗೆದ್ದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಾರ್ಡರ್ -ಗವಾಸ್ಕರ್ ಟೆಸ್ಟ್ ಸರಣಿಗೆ ಮುನ್ನ ಸ್ವಲ್ಪವಾದರೂ ಒತ್ತಡ ಕಡಿಮೆ ಆಗಬಹುದು ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಚೆಂಡು ವಿರೂಪ ಪ್ರಕರಣ: ಡೇವಿಡ್ ವಾರ್ನರ್ ಮೇಲಿನ ನಿಷೇಧ ತೆರವು
ಭಾರತದ ಬೌಲಿಂಗ್ ಪಡೆ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದು ಟೆಸ್ಟ್ ಪಂದ್ಯದಲ್ಲಿ 20 ವಿಕೆಟ್ಗಳನ್ನು ಪಡೆಯವಷ್ಟು ಸಾಮರ್ಥ್ಯ ಮತ್ತು ಕ್ಷಮತೆಯನ್ನು ಹೊಂದಿದೆ. ಇದೇ ಕಾರಣಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದರೆ ಭಾರತದ ಬ್ಯಾಟಿಂಗ್ನದ್ದೇ ಈಗ ಚಿಂತೆಯಾಗಿದೆ. ಹೀಗಾಗಿ ಬ್ಯಾಟರ್ಗಳು ಶೀಘ್ರ ಲಯ ಕಂಡುಕೊಂಡು ಉತ್ತಮ ಪ್ರದರ್ಶನ ನೀಡಬೇಕಿದೆ ಎಂದು ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಕಳೆದ 2 ಸರಣಿಗಳಲ್ಲಿ ಭಾರತ ತಂಡ ನಿಜಕ್ಕೂ ಉತ್ತಮ ಪ್ರದರ್ಶನ ನೀಡಿದೆ. ಆದರೆ ಇದೀಗ ಡಬ್ಲ್ಯೂಟಿಸಿ ಫೈನಲ್ಗೆ ಅರ್ಹತೆ ಪಡೆಯುವುದು ಅಗತ್ಯವಾಗಿದೆ. ಬ್ಯಾಟಿಂಗ್ ಪ್ರದರ್ಶನ ನಿಜಕ್ಕೂ ನಿರಾದಾಯಕವಾಗಿದೆ. ಬೌಲಿಂಗ್ ಚೆನ್ನಾಗಿರುವುದರಿಂದಲೇ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆದರೆ ಬ್ಯಾಟರ್ಗಳು ಇದೀಗ ರನ್ ಕಲೆ ಹಾಕಬೇಕಾದ ಅಗತ್ಯ ಇದೆ ಎಂದಿದ್ದಾರೆ.
ಭಾರತ ಪ್ರಸ್ತುತ 62.82 ಸರಾಸರಿ ಅಂಕಗಳೊಂದಿಗೆ ಟೆಸ್ಟ್ ಅಂಕಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಆದರೆ ಆಸ್ಟ್ರೇಲಿಯಾ ತಂಡ 62.50 ಸರಾಸರಿ ಅಂಕಗಳೊಂದಿಗೆ ಕೂದಲೆಳೆಯ ಅಂತರದಿಂದ 2ನೇ ಸ್ಥಾನದಲ್ಲಿದೆ. ಮುಂದಿನ ಸರಣಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವುದರಿಂದ ಅದರ ನೇರ ಲಾಭ ನಂತರದ ಸ್ಥಾನದಲ್ಲಿರುವ ಶ್ರೀಲಂಕಾ ಮೇಲಾಗಲಿದೆ. ಭಾರತ ಅಧಿಕ ಅಂತರದಿಂದ ಗೆದ್ದಲ್ಲಿ ಮಾತ್ರ ಟಾಪ್ 2ರಲ್ಲಿ ಉಳಿಯಲು ಸಾಧ್ಯ. ಇಲ್ಲವಾದಲ್ಲಿ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾಗೆ ಲಾಭ ಆಗುವುದು ಖಚಿತ.
