ತಮ್ಮ ಕಂಪನಿಯ ಉದ್ಯೋಗಿಗಳಿಗೆ ಮತ್ತು ಸರ್ಕಾರಕ್ಕೆ ವಂಚಿಸಿದ ಆರೋಪದ ಮೇಲೆ ಟೀಮ್ ಇಂಡಿಯಾ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರನ್ನು ಬಂಧಿಸಲು ‘ಅರೆಸ್ಟ್ ವಾರೆಂಟ್’ ಜಾರಿಗೊಳಿಸಲಾಗಿದೆ.
ರಾಬಿನ್ ಉತ್ತಪ್ಪ ಅವರು ಬೆಂಗಳೂರಿನಲ್ಲಿ ‘ಸೆಂಟಾರಸ್ ಲೈಫ್ ಸ್ಟೈಲ್ ಬ್ರಾಂಡ್ಸ್ ಪ್ರೈವೇಟ್ ಲಿಮಿಟೆಡ್’ ಕಂಪನಿ ನಡೆಸುತ್ತಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಉತ್ತಪ್ಪ ಅವರು ಪಿಎಫ್ ಹಣ ಪಾವತಿಸಿಲ್ಲ. ಉದ್ಯೋಗಿಗಳ ಸಂಬಳದಲ್ಲಿ ಪಿಎಫ್ ಹಣ ಕಡಿತವಾಗಿದ್ದರೂ, ಅದನ್ನು ಪಿಎಫ್ ಖಾತೆಗೆ ಜಮೆ ಮಾಡಿಲ್ಲ. ಉದ್ಯೋಗಗಳಿಗೆ ಸುಮಾರು 23 ಲಕ್ಷ ರೂ. ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಉದ್ಯೋಗಿಗಳ ಖಾತೆಗೆ ಪಿಎಫ್ ಹಣವನ್ನು ಜಮೆ ಮಾಡದೇ ಇರುವುದನ್ನು ಪಿಎಫ್ಓ ರಿಜಿನಲ್ ಕಮಿಷನರ್ ಷಡಕ್ಷರ ಗೋಪಾಲ ರೆಡ್ಡಿ ಗಂಭೀರವಾಗಿ ಪರಿಗಣಿಸಿದ್ದಾರೆ. ರಾಬಿನ್ ಉತ್ತಪ್ಪ ಅವರನ್ನು ಬಂಧಿಸುವಂತೆ ಪುಲಕೇಶಿ ನಗರ ಪೊಲೀಸರಿಗೆ ಡಿಸೆಂಬರ್ 4ರಂದು ಪತ್ರ ಬರೆದಿದ್ದಾರೆ.
ಪೊಲೀಸರು ರಾಬಿನ್ ಉತ್ತಪ್ಪ ಅವರ ಮನೆಗೆ ನೋಟಿಸ್ ಅಂಟಿಸಿದ್ದಾರೆ. ಆದರೆ, ರಾಬಿನ್ ಉತ್ತಪ್ಪ ಅವರು ಬೆಂಗಳೂರು ತೊರೆದು, ದುಬೈನಲ್ಲಿ ನೆಲೆಸಿದ್ದಾರೆ. ವಾರೆಂಟ್ ಜಾರಿಯಾಗಿರುವ ಹಿನ್ನೆಲೆ, ಅವರನ್ನು ಬೆಂಗಳೂರಿಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ.