ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಸ್ಪಷ್ಟ ಮೇಲುಗೈ ಸಾಧಿಸಿದೆ. ಅಂತಿಮ ದಿನವಾದ ಮಂಗಳವಾರ ಪಂದ್ಯ ಗೆಲ್ಲಲು ಕಮ್ಮಿನ್ಸ್ ಪಡೆ 174 ರನ್ ಗಳಿಸಬೇಕಾಗಿದೆ. ಇಂಗ್ಲೆಂಡ್ ಗೆಲುವಿಗೆ 7 ವಿಕೆಟ್‌ಗಳ ಅಗತ್ಯವಿದೆ.
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಗೆಲುವಿಗೆ 281 ರನ್‌ಗಳ ಗುರಿ ಪಡೆದಿರುವ ಡಬ್ಲ್ಯೂಟಿಸಿ ಚಾಂಪಿಯನ್ ಆಸ್ಟ್ರೇಲಿಯಾ, ನಾಲ್ಕನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟದಲ್ಲಿ 107 ರನ್‌ಗಳಿಸಿದೆ. ಪ್ರಥಮ ಇನ್ನಿಂಗ್ಸ್‌ನ ಶತಕ ವೀರ ಉಸ್ಮಾನ್ ಖ್ವಾಜಾ 34 ಮತ್ತು 13 ರನ್‌ಗಳೊಂದಿಗೆ ʻನೈಟ್ ವಾಚ್‌ಮೆನ್ʼ ಸ್ಕಾಟ್ ಬೋಲಂಡ್ ಕ್ರೀಸ್‌ನಲ್ಲಿದ್ದಾರೆ.
ಮಳೆ ಅಡ್ಡಿ
ಎಡ್ಜ್‌ಬಾಸ್ಟನ್‌ನಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಮಂಗಳವಾರ ಪಂದ್ಯ ಪ್ರಾರಂಭವಾಗುವುದು ತಡವಾಗಿದೆ. ಸೋಮವಾರವೂ ಕೆಲಕಾಲ ಮಳೆರಾಯ ಆಟಕ್ಕೆ ಅಡ್ಡಿಪಡಿಸಿದ್ದ. ಆದರೆ ಅಂತಿಮ ದಿನದಲ್ಲಿ ಸ್ಪಷ್ಟ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ವರುಣ ಅವಕೃಪೆ ತೋರುವ ಸಾಧ್ಯತೆಯಿದೆ.
ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಇದುವರೆಗೂ ನಡೆದಿರುವ ಟೆಸ್ಟ್ ಪಂದ್ಯಗಳಲ್ಲಿ ಕೇವಲ ಮೂರು ತಂಡಗಳಷ್ಟೇ, ನಾಲ್ಕನೇ ಇನಿಂಗ್ಸ್‌ನಲ್ಲಿ 200ಕ್ಕೂ ಅಧಿಕ ಮೊತ್ತವನ್ನು ಚೇಸ್ ಮಾಡಿ ಗೆಲುವು ದಾಖಲಿಸಿದೆ. ಕಳೆದ ವರ್ಷ ಟೀಮ್ ಇಂಡಿಯಾ ವಿರುದ್ಧ ಆತಿಥೇಯ ಇಂಗ್ಲೆಂಡ್ ತಂಡ , 378 ರನ್ ಚೇಸ್ ಮಾಡಿರುವುದು ಅತ್ಯಧಿಕ ಮೊತ್ತದ ಚೇಸ್ ಎನಿಸಿದೆ.
ಎರಡು ವಿಕೆಟ್ ನಷ್ಟದಲ್ಲಿ 28 ರನ್‌ಗಳೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ್ದ ಇಂಗ್ಲೆಂಡ್, ಚಹಾ ವಿರಾಮದ ವೇಳೆಗೆ 271 ರನ್ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತ್ತು.
ಆಸಿಸ್ ಪರ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಸ್ಪಿನ್ನರ್ ನಥಾನ್ ಲಯನ್ ತಲಾ 4 ವಿಕೆಟ್‌ಗಳನ್ನು ಪಡೆಯುವ ಮೂಲಕ, ಬೆನ್ ಸ್ಟೋಕ್ಸ್ ಪಡೆಯ ರನ್ ಬೇಟೆಗೆ ತಡೆ ಒಡ್ಡಿದರು. ಜೊ ರೂಟ್ ಮತ್ತು ಹ್ಯಾರಿ ಬ್ರೂಕ್ ತಲಾ 46 ರನ್ ಗಳಿಸಿದರೆ, ನಾಯಕ ಬೆನ್ ಸ್ಟೋಕ್ಸ್ 43 ರನ್ ಗಳಿಸಿದರು.