ವೃತ್ತಿಜೀವನದ ಮೊದಲ ಬಿಡಬ್ಲ್ಯುಎಫ್ 300 ಸೆಮಿಫೈನಲ್ ತಲುಪಿದ ಸಾಧನೆ ಮಾಡಿದ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ಮಿತಾ ಚಾಲಿಹಾ
ಥಾಯ್ಲಂಡ್‌ನಲ್ಲಿ ಸದ್ಯ ನಡೆಯುತ್ತಿರುವ ಬಿಡಬ್ಲ್ಯುಎಫ್ ಸೂಪರ್ 300 ಪಂದ್ಯಾಕೂಟದಲ್ಲಿ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ಮಿತಾ ಚಾಲಿಹಾ ಸೆಮಿಫೈನಲ್ ತಲುಪಿದ್ದಾರೆ. ಆ ಮೂಲಕ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಬಿಡಬ್ಲ್ಯುಎಫ್ ಸೂಪರ್ 300 ಸೆಮಿಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ.
25 ವರ್ಷದ ಅಶ್ಮಿತಾ ಇಂಡೋನೇಷ್ಯಾದ ಈಸ್ಟರ್ ನುರುಮಿ ಟ್ರೈ ವಾರ್‍ಡೊಯೊ ಅವರನ್ನು 21-14, 19-21, 21-13 ಅಂತರದಲ್ಲಿ ಸೋಲಿಸಿದ್ದಾರೆ. ಆರಂಭದಲ್ಲಿ ಇಂಡೋನೇಷ್ಯಾದ ಆಟಗಾತಿ ಮೊದಲ ಸೆಟ್‌ನಲ್ಲಿ 5-1ರಿಂದ ಮುನ್ನಡೆಯಲ್ಲಿದ್ದರೂ ಅಶ್ಮಿತಾ 8-8ರಲ್ಲಿ ಸಮ ಮಾಡಿಕೊಂಡಿದ್ದರು.
ತೀವ್ರ ಸ್ಪರ್ಧೆಯ ನಂತರ ಸೆಟ್ ತಮ್ಮದಾಗಿಸಿಕೊಂಡಿದ್ದರು. ಮುಂದಿನ ಸೆಟ್‌ಗಳಲ್ಲೂ ಸಮಬಲದ ಹೋರಾಟದಲ್ಲಿ ಕೊನೆಗೂ ಅಶ್ಮಿತಾ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಸೆಮಿಫೈನಲ್ ಪ್ರವೇಶಿಸುವ ಮೂಲಕ ಪಂದ್ಯಾವಳಿಯಲ್ಲಿ ಇನ್ನೂ ಸ್ಪರ್ಧೆಯಲ್ಲಿರುವ ಏಕೈಕ ಭಾರತೀಯ ಆಟಗಾರ್ತಿ ಎನಿಸಿದ್ದಾರೆ.
ಇದನ್ನು ಓದಿದ್ದೀರಾ? ದ್ವಿತೀಯ ಟೆಸ್ಟ್ | ಇಂಗ್ಲೆಂಡ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಯಶಸ್ವಿ ಜೈಸ್ವಾಲ್ ದ್ವಿಶತಕದತ್ತ
ಇದಕ್ಕೂ ಮೊದಲು ಮಿಥುನ್ ಮಂಜುನಾಥ್ ಪುರುಷರ ಸಿಂಗಲ್ಸ್‌ನಲ್ಲಿ ನೆದರ್‌ಲ್ಯಾಂಡ್ಸ್ ಆಟಗಾರ ಮಾರ್ಕ್ ಕ್ಯಾಲಿಜ್ಯುಔ ಅವರ ವಿರುದ್ಧ ನೇರ ಸೆಟ್‌ಗಳಲ್ಲಿ ಸೋತು ಪಂದ್ಯಾವಳಿಯಿಂದ ಹೊರನಡೆದಿದ್ದರು. ಇದರ ಜೊತೆಗೆ ಆರನೇ ಶ್ರೇಯಾಂಕದ ಡಬಲ್ಸ್ ಜೋಡಿಯಾಗಿದ್ದ ತ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಇಂಡೋನೇಷ್ಯಾದ ಜೋಡಿ ಫೆಬ್ರಿಯಾನಾ ಡ್ವಿಪುಜಿ ಕುಸುಮ ಮತ್ತು ಅಮಾಲಿಯ ಕಾಹ್ಯಾ ಪ್ರಿಟಿವಿ ವಿರುದ್ಧ ಸೋತು ಹೊರ ನಡೆದಿದ್ದಾರೆ.