ಐಪಿಎಲ್ 2025 ನೇ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಎರಡು ಸೋಲುಗಳ ನಂತರ ಮೊದಲ ಗೆಲುವಿನ ಖಾತೆ ತೆರೆದಿದೆ.
ವಾಖೆಂಡೆ ಕ್ರೀಡಂಗಣದಲ್ಲಿ ನಡೆದ 18ನೇ ಆವೃತ್ತಿಯ 12ನೇ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ ಸಾರಥ್ಯದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಣಿಸಿರುವ ಮುಂಬೈ ಇಂಡಿಯನ್ಸ್ ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಂಡಿದೆ. ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ತವರಿನಲ್ಲಿ ಕೆಕೆಆರ್ ಮೇಲೆ ಪ್ರಾಬಲ್ಯ ಸಾಧಿಸಿದ ಮುಂಬೈ ಇಂಡಿಯನ್ಸ್ ಬೌಲರ್‌ಗಳು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 116 ರನ್‌ಗಳಿಗೆ ಆಲೌಟ್ ಮಾಡಿದರು. ಕೆಕೆಆರ್‌ನಿಂದ 117 ರನ್‌ಗಳ ಸುಲಭ ಗುರಿ ಪಡೆದ ಮುಂಬೈ ಇಂಡಿಯನ್ಸ್ 12.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 121 ರನ್ ಗಳಿಸಿ ಆರಾಮದಾಯಕ ಗೆಲುವು ಪಡೆಯಿತು.
ಕೆಕೆಆರ್ ನೀಡಿದ 117 ರನ್‌ಗಳ ಸುಲಭ ಗೆಲುವಿನ ಗುರಿ ಬೆನ್ನಟ್ಟಿದ ಮುಂಬೈ ಬ್ಯಾಟರ್‌ಗಳು ತವರಿನಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದರು. ರೋಹಿತ್ ಶರ್ಮಾ ಮತ್ತು ರಯಾನ್ ರಿಕಲ್ಟನ್ ಇನಿಂಗ್ಸ್ ಪ್ರಾರಂಭಿಸಿದರು. ಇಬ್ಬರೂ ಮೊದಲ ವಿಕೆಟ್‌ಗೆ 5.2 ಓವರ್‌ಗಳಲ್ಲಿ 51 ರನ್‌ಗಳ ಜೊತೆಯಾಟವಾಡಿದರು.
ಈ ಸುದ್ದಿ ಓದಿದ್ದೀರಾ? ಐಪಿಎಲ್ | 9ನೇ ಕ್ರಮಾಂಕದಲ್ಲಿ ಆಡಿದ ಧೋನಿ; ಅಭಿಮಾನಿಗಳ ಆಕ್ರೋಶ-ಟೀಕೆ
ರೋಹಿತ್ 13 ರನ್ ಗಳಿಸಿದ್ದಾಗ ಆಂಡ್ರೆ ರಸೆಲ್ ಬೌಲಿಂಗ್‌ನಲ್ಲಿ ಹರ್ಷಿತ್ ರಾಣಾಗೆ ಕ್ಯಾಚ್ ನೀಡಿ ಔಟಾದರು. ಇದಾದ ನಂತರ ರಿಕಲ್ಟನ್ ತಮ್ಮ ಅರ್ಧಶತಕವನ್ನು ಪೂರೈಸಿದರು. ವಿಲ್ ಜ್ಯಾಕ್ 16 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು. ರಿಕಲ್ಟನ್ ಅವರು 33 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 50 ರನ್‌ಗಳನ್ನು ಪೂರ್ಣಗೊಳಿಸಿದರು.
ಮುಂಬೈ ಪರ ರಿಕಲ್ಟನ್ 44 ಚೆಂಡುಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್‌ಗಳೊಂದಿಗೆ ಅಜೇಯ 62 ರನ್ ಸ್ಫೋಟಿಸಿದರು. ಸೂರ್ಯಕುಮಾರ್ ಯಾದವ್ ಅಜೇಯ 27 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಕೆಕೆಆರ್ ಪರ ರಸೆಲ್ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 2 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭವನ್ನು ಕಂಡಿತು. 45 ರನ್‌ಗಳನ್ನು ತಲುಪುವ ಹೊತ್ತಿಗೆ ಕೆಕೆಆರ್ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಕೆಕೆಆರ್ ಪರ ಅಂಗ್ಕ್ರಿಶ್ ರಘುವಂಶಿ (26) ತಂಡದ ಅತಿ ಹೆಚ್ಚು ರನ್ ಗಳಿಸಿದರು. ನಂತರದಲ್ಲಿ ರಮಣದೀಪ್ ಸಿಂಗ್ 22 ರನ್, ಮನೀಶ್ ಪಾಂಡೆ 19 ರನ್ ಮತ್ತು ರಿಂಕು ಸಿಂಗ್ 17 ರನ್ ಗಳಿಸಿದರು.
ಮುಂಬೈ ಪರ ಪಾದಾರ್ಪಣೆ ಮಾಡಿದ 23 ವರ್ಷದ ಅಶ್ವಿನಿ ಕುಮಾರ್ ಮೊದಲ ಎಸೆತದಲ್ಲೇ ವಿಕೆಟ್ ಪಡೆದರು. ಅವರು 3 ಓವರ್‌ಗಳಲ್ಲಿ 24 ರನ್‌ಗಳಿಗೆ 4 ವಿಕೆಟ್‌ಗಳನ್ನು ಉರುಳಿಸಿದರು. ದೀಪಕ್ ಚಹಾರ್ 2, ಹಾರ್ದಿಕ್ ಪಾಂಡ್ಯ, ಮಿಚೆಲ್ ಸ್ಯಾಂಟ್ನರ್, ಟ್ರೆಂಟ್ ಬೌಲ್ಟ್ ಮತ್ತು ವಿಘ್ನೇಶ್ ಪುತ್ತೂರ್ ತಲಾ 1 ವಿಕೆಟ್ ಪಡೆದರು.