ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಒಮಾನ್ ವಿರುದ್ಧ ನಡೆಯುತ್ತಿರುವ ಏಷ್ಯಾ ಕಪ್ 2025ರ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದ್ದು, ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಕೇವಲ 5 ರನ್‌ಗಳಿಗೆ ಶಾಹ್ ಫೈಸಲ್‌ಗೆ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ಭಾರತ 6 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 60 ರನ್ ಗಳಿಸಿದೆ. ಆರಂಭಿಕ ಅಭಿಷೇಕ್ ಶರ್ಮಾ(38) ಹಾಗೂ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್(13) ಬ್ಯಾಟಿಂಗ್ ಮಾಡುತ್ತಿದ್ದಾರೆ.
ಎರಡು ದಿನಗಳ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈವೋಲ್ಟೇಜ್ ಘರ್ಷಣೆಗೆ ಮುನ್ನ, ಭಾರತ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಖ್ಯಾತ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿದ್ದು, ಟಿ20 ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ವಿಕೆಟ್ ಟೇಕರ್ ಆಗಿರುವ ಅರ್ಶದೀಪ್ ಸಿಂಗ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ, ಹರ್ಷಿತ್ ರಾಣಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಗುಂಪು ಹಂತದಲ್ಲಿ ಈಗಾಗಲೇ ಸೂಪರ್-ಫೋರ್‌ಗೆ ಅರ್ಹತೆ ಪಡೆದಿರುವ ಭಾರತ, ಟೂರ್ನಿಯ ಮೊದಲ ತಂಡವಾಗಿದೆ. ಯುಎಇ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಮತ್ತು ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳ ಗೆಲುವಿನೊಂದಿಗೆ ಭಾರತ ಈ ಪಂದ್ಯಕ್ಕೆ ಫೇವರಿಟ್ ಆಗಿ ಪ್ರವೇಶಿಸಿದೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಮಾಡದಿರಲು ತಂಡದ ನಿರ್ವಹಣೆ ತೀರ್ಮಾನಿಸಿದೆ, ಏಕೆಂದರೆ ಈವರೆಗಿನ ಪಂದ್ಯಗಳಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಗಟ್ಟಿಯಾದ ಸವಾಲು ಎದುರಾಗಿಲ್ಲ.
ಒಮಾನ್ ತಂಡ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಲು ವಿಫಲವಾಗಿದೆ. ಪಾಕಿಸ್ತಾನ ವಿರುದ್ಧ 93 ರನ್‌ಗಳಿಂದ ಮತ್ತು ಯುಎಇ ವಿರುದ್ಧ 42 ರನ್‌ಗಳಿಂದ ಸೋತು ಸೂಪರ್-ಫೋರ್‌ಗೆ ಅರ್ಹತೆ ಕಳೆದುಕೊಂಡಿದೆ. ಈ ನಡುವೆ ಒಮಾನ್ ನಾಯಕ ಜತಿಂದರ್ ಸಿಂಗ್ ಮತ್ತು ತಂಡವು ಈ ಕೊನೆಯ ಪಂದ್ಯದಲ್ಲಿ ಭಾರತದ ವಿರುದ್ಧ ಗೌರವಾನ್ವಿತ ಪ್ರದರ್ಶನ ನೀಡಲು ಉತ್ಸುಕವಾಗಿದೆ.
ಇದನ್ನು ಓದಿದ್ದೀರಾ? ಚೆಸ್ | ಆರ್ ವೈಶಾಲಿ ಎರಡನೇ ಬಾರಿಗೆ FIDE ಮಹಿಳಾ ಗ್ರ್ಯಾಂಡ್ ಸ್ವಿಸ್ ಚಾಂಪಿಯನ್
ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಈವರೆಗೆ ನಡೆದ ಐದು ಪಂದ್ಯಗಳಲ್ಲಿ ಸರಾಸರಿ ಮೊದಲ ಇನಿಂಗ್ಸ್ ಸ್ಕೋರ್ 160 ರನ್‌ಗಳಾಗಿದೆ. ಈ ಐದು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದಿವೆ, ಇದರಿಂದ ಟಾಸ್ ಈ ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು. ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಸ್ವಲ್ಪ ಮೇಲುಗೈ ಇರಬಹುದು.
ಆದರೆ ಒಮಾನ್ ತಂಡ ತಮ್ಮ ಕೊನೆಯ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಲು ಎದುರು ನೋಡುತ್ತಿದೆ.
ಪಂದ್ಯವಾಡುತ್ತಿರಯವ ಉಭಯ ತಂಡಗಳು
ಭಾರತ : ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್, ಕುಲದೀಪ್ ಯಾದವ್
ಒಮಾನ್: ಆಮಿರ್ ಕಲೀಮ್, ಜತಿಂದರ್ ಸಿಂಗ್ (ನಾಯಕ), ಹಮ್ಮದ್ ಮಿರ್ಜಾ, ವಿನಾಯಕ್ ಶುಕ್ಲಾ (ವಿಕೆಟ್ ಕೀಪರ್), ಶಾಹ್ ಫೈಸಲ್, ಜಿಕ್ರಿಯಾ ಇಸ್ಲಾಂ, ಆರ್ಯನ್ ಬಿಷ್ಟ್, ಮೊಹಮ್ಮದ್ ನದೀಮ್, ಶಕೀಲ್ ಅಹ್ಮದ್, ಸಮಯ್ ಶ್ರೀವಾಸ್ತವ, ಜಿತೇನ್ ರಾಮಾನಂದಿ