ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದ 8ನೇ ದಿನವಾದ ಇಂದು(ಅ.01) ಗಾಲ್ಫ್‌ನಲ್ಲಿ ಕರ್ನಾಟಕದ ಅದಿತಿ ಅಶೋಕ್ ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಭಾನುವಾರ ಬೆಳಗ್ಗೆ ನಡೆದ ಗಾಲ್ಫ್ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಅದಿತಿ ಅಶೋಕ್ ಬೆಳ್ಳಿ ಪದಕ ಕೊರಳಿಗೇರಿಸಿಕೊಂಡರು. ಇದಲ್ಲದೆ ಏಷ್ಯನ್ ಕ್ರೀಡಾಕೂಟದ ಗಾಲ್ಫ್ ವಿಭಾಗದಲ್ಲಿ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕ್ರೀಡಾಕೂಟ ಎಂಬ ದಾಖಲೆ ಬರೆದಿದ್ದಾರೆ. ಫೈನಲ್‌ನಲ್ಲಿ ಆರಂಭದಿಂದ ಮುನ್ನಡೆಯಲ್ಲಿದ್ದ ಅದಿತಿ ಅಶೋಕ್‌ಗೆ ಚಿನ್ನ ಮುಡಿಗೇರಿಸಿಕೊಳ್ಳುವ ಅವಕಾಶವಿತ್ತು. ಆದರೆ ಕೊನೆಯ ಮೂರು ಹೊಡೆತಗಳಲ್ಲಿ ಹಿನ್ನಡೆ ಅನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಚಿನ್ನದ ಪದಕ ಥಾಯ್ಲೆಂಡ್‌ನ ಅರ್ಪಿಚಯಾ ಯುಬೋಲ್ ಪಾಲಾಯಿತು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಬೆಂಗಳೂರಿನ ಅದಿತಿ ಅಶೋಕ್ ನಾಲ್ಕನೇ ಸ್ಥಾನ ಪಡೆದು ಕೊಂಚದರಲ್ಲಿಯೇ ಕಂಚಿನ ಪದಕ ತಪ್ಪಿಸಿಕೊಂಡಿದ್ದರು. ಇದೀಗ ಏಷ್ಯನ್ ಕ್ರೀಡಾಕೂಟದಲ್ಲಿ ದಾಖಲೆಯ ಗೋಲು ಬರೆದಿದ್ದಾರೆ.
ವೈಯಕ್ತಿಕ ವಿಭಾಗದಲ್ಲಿ ಅದಿತಿ ಅಶೋಕ್ ಬೆಳ್ಳಿ ಸಾಧನೆ ಕೂಡ ಒಂದು ಮೈಲುಗಲ್ಲಾಗಿದೆ. ಈವರೆಗೆ ಗಾಲ್ಫ್‌ನಲ್ಲಿ ಪದಕ ಪಡೆದ ದೇಶದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇನ್ನು ಗಾಲ್ಪ್ ಮಹಿಳಾ ತಂಡ ಪ್ರಶಸ್ತಿ ಜಯಿಸುವಲ್ಲಿ ವಿಫಲವಾಯಿತು. ಉತ್ತಮವಾಗಿ ಆಟವಾಡಿರುವ ಮಹಿಳಾ ತಂಡವು ಕಂಚು ಜಯಿಸುವ ಸಾಧ್ಯತೆ ಇತ್ತು. ಆದರೆ ಕೊನೆ ಗಳಿಗೆಯಲ್ಲಿ ಕೆಲ ತಪ್ಪು ಹೊಡೆತಗಳಿಂದ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಏಷ್ಯನ್ ಕ್ರೀಡಾಕೂಟದ 8 ನೇ ದಿನದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಇಂದು ಪುರುಷರ ಟ್ರ್ಯಾ ಪ್ ಶೂಟಿಂಗ್ ವಿಭಾಗದಲ್ಲಿ ಭಾರತದ ಪೃಥ್ವಿರಾಜ್ ತೊಂಡೈಮಾನ್, ಕಿನಾನ್ ಚೆನೈ ಮತ್ತು ಜೊರಾವರ್ ಸಿಂಗ್ ಸಂಧು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಹಾಗೆಯೇ ಮಹಿಳಾ ಟ್ರ್ಯಾಪ್ ಶೂಟಿಂಗ್ ವಿಭಾಗದಲ್ಲಿ ಮನೀಶಾ ಕೀರ್, ಪ್ರೀ ತಿ ರಜಾಕ್ ಮತ್ತು ರಾಜೇಶ್ವರಿ ಕುಮಾರಿ ಅವರು ಬೆಳ್ಳಿ ಪದಕ ಜಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಶ್ವಕಪ್ ಏಕದಿನ ತಂಡಕ್ಕೆ ಸ್ಥಾನ ಪಡೆದ ಸ್ಪಿನ್ನರ್ ಆರ್ ಅಶ್ವಿನ್: ಬದಲಾವಣೆಯ 15ರ ಬಳಗದಲ್ಲಿ ಆಯ್ಕೆ
ಭಾನುವಾರದ ಮಧ್ಯಾಹ್ನದ ಹೊತ್ತಿಗೆ ಪದಕ ಪಟ್ಟಿಯಲ್ಲಿ ಭಾರತವು 11 ಚಿನ್ನ,16 ಬೆಳ್ಳಿ ಹಾಗೂ 14 ಕಂಚಿನ ಪದಕಗಳೊಂದಿಗೆ ಒಟ್ಟು 41 ಪದಕಗಳನ್ನು ಜಯಿಸಿ ನಾಲ್ಕನೇ ಸ್ಥಾನದಲ್ಲಿದೆ. ಚೀನಾ 115 ಚಿನ್ನ,70 ಬೆಳ್ಳಿ,36 ಕಂಚುಗಳೊಂದಿಗೆ ಮೊದಲ ಸ್ಥಾನದಲ್ಲಿದೆ