ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೂರನೇ ಟೆಸ್ಟ್‌ನ ಮೂರನೇ ದಿನದಂದು ಆಸೀಸ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್‌ಗಳನ್ನು ಪೇರಿಸಿ ಆಲೌಟ್ ಆಗಿದೆ.
ಬ್ಯಾಂಟಿಂಗಿಗೆ ಇಳಿದ ಭಾರತ, ಆರಂಭಿಕ ಆಘಾತ ಕಂಡು, ಸದ್ಯ 4 ವಿಕೆಟ್ ಕಳೆದುಕೊಂಡು ಕೇವಲ 48 ರನ್‌ಗಳನ್ನು ಪೇರಿಸುವಲ್ಲಿ ಪರದಾಡಿದೆ. ಮಳೆಯ ಕಾರಣ ಆಟಕ್ಕೆ ತಡೆ ಉಂಟಾಗಿದೆ. ಮೊದಲ ದಿನವು ಮಳೆಯಿಂದಾಗಿ ಆಟ ಸ್ಥಗಿತಗೊಂಡಿತ್ತು. ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡವು ಭಾರತ ತಂಡದ ಬೆವರಿಳಿಸಿತ್ತು. ಆದರೆ ಬೂಮ್ರಾ ಭಾರತ ಪರವಾಗಿ ಏಕಾಂಗಿ ಹೋರಾಟ ನಡೆಸಿದ್ದರು.
ಇದನ್ನು ಓದಿದ್ದೀರಾ? IND vs AUS | ಬೂಮ್ರಾ ಅಬ್ಬರಕ್ಕೆ ಆಸ್ಟ್ರೇಲಿಯಾ ಬ್ಯಾಟರ್‌ಗಳು ತತ್ತರ
ಇನ್ನೊಂದೆಡೆ ಭಾರತದ ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ ಕ್ರಮವಾಗಿ 4, 1, 3 ರನ್‌ಗಳನ್ನು ಗಳಿಸಿ ತೀವ್ರ ನಿರಾಶೆ ಹುಟ್ಟು ಹಾಕಿದ್ದಾರೆ.
ಹಿಂದಿನ ದಿನ ಏಳು ವಿಕೆಟ್‌ಗೆ 405 ರನ್‌ಗಳನ್ನು ಗಳಿಸಿದ್ದ ಆಸೀಸ್ ಇಂದು ಬೆಳಗ್ಗೆ ಆಟ ಪುನರಾರಂಭಿಸಿ ಹೆಚ್ಚುವರಿ 40 ರನ್ ಗಳಿಸಿ ಒಟ್ಟು ರನ್‌ಗಳನ್ನು 445ಕ್ಕೆ ಏರಿಸಿತು. ಎರಡನೇ ದಿನದಲ್ಲಿ ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ಅವರ ಅವಳಿ ಶತಕ ಪಡೆದರೆ, ಅದರ ನಂತರ ಅಲೆಕ್ಸ್ ಕ್ಯಾರಿ 70 ರನ್ ಗಳಿಸಿ ಭಾರತದ ಬೌಲರ್‌ಗಳಿಗೆ ನೀರಿಳಿಸಿದರು.
ಆದರೆ ಭಾರತದ ಪರವಾಗಿ ಏಕಾಂಗಿಯಾಗಿ ಸೆಣಸಿದ ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಆರು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಆಸ್ಟ್ರೇಲಿಯಾದ ಎದುರಿನ ಪಂದ್ಯದಲ್ಲಿ ಒಟ್ಟು 50 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನುಳಿದಂತೆ ಮೊಹಮ್ಮದ್ ಸಿರಾಜ್ ಎರಡು, ಆಕಾಶ್ ದೀಪ್ ಒಂದು ವಿಕೆಟ್ ಪಡೆದಿದ್ದಾರೆ. ಐದು ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿದೆ.
