2021ರ ನವೆಂಬರ್‌ನಲ್ಲಿ ಟೆಸ್ಟ್ ತಂಡಕ್ಕೆ ನಾಯಕತ್ವ ವಹಿಸಿಕೊಂಡ ಕಮಿನ್ಸ್ ಮೂರು ವರ್ಷಗಳಲ್ಲಿ ಆಶಸ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್, ಏಕದಿನ ವಿಶ್ವಕಪ್ ಗೆದ್ದಿದ್ದಾರೆ. ಸದ್ಯ ಅವರ ಮುಂದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿದೆ. ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಗೆಲುವಿನ ನಾಗಾಲೋಟ ಮುಂದುವರಿಸುತ್ತಾ...?
ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ ಅಂತ್ಯಗೊಂಡಿದೆ. ‘ಮಳೆ ನಿಂತರೂ ಹನಿ ನಿಲ್ಲದು’ ಎಂಬಂತೆ ಭಾರತದ ಹೀನಾಯ ಪ್ರದರ್ಶನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಟೀಂ ಇಂಡಿಯಾ ಮಾಜಿ ಆಟಗಾರರು ಹಾಗೂ ಕ್ರಿಕೆಟ್ ಅಭಿಮಾನಿಗಳು ಬ್ಯಾಟಿಂಗ್ ವೈಫಲ್ಯದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. ಕೆಲವರಂತೂ ‘ಸ್ಟಾರ್ ಬ್ಯಾಟರ್‍ಗಳಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಿವೃತ್ತಿ ಘೋಷಿಸಲು ಇದು ಸೂಕ್ತ ಸಮಯ’ ಎಂದೂ ಕಾಲೆಳೆಯುತ್ತಿದ್ದಾರೆ.
ಕಳೆದ 10 ವರ್ಷಗಳಿಂದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೂರ್ನಿಯನ್ನು ತನ್ನಲ್ಲೇ ಉಳಿಸಿಕೊಂಡಿದ್ದ ಭಾರತ, ಆಸ್ಟ್ರೇಲಿಯಾ ನೆಲದಲ್ಲಿ ಪಾರಮ್ಯ ಮೆರೆದಿತ್ತು. ಟೀಂ ಇಂಡಿಯಾ ಗೆಲುವಿನ ಓಟಕ್ಕೆ ಕಾಂಗರೂ ಪಡೆ ಈಗ ಬ್ರೇಕ್ ಹಾಕಿದೆ. 5 ಟೆಸ್ಟ್ ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 3-1 ರಿಂದ ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ.
ಇದನ್ನು ಓದಿದ್ದೀರಾ?: ಹೋಗಿ ರಣಜಿ ಕ್ರಿಕೆಟ್ ಆಡಿ: ವಿರಾಟ್, ರೋಹಿತ್ ವಿರುದ್ಧ ರವಿ ಶಾಸ್ತ್ರಿ ಕಿಡಿ
ಬಾರ್ಡರ್- ಗವಾಸ್ಕರ್ ಟ್ರೋಫಿ ಸೋಲಿನ ಬಗ್ಗೆ ಭಾರತದ ಕ್ರಿಕೆಟ್ ಅಭಿಮಾನಿಗಳು ಆಕ್ರೋಶಗೊಳ್ಳಲು ಮುಖ್ಯವಾಗಿ ಎರಡು ಕಾರಣಗಳು ಇವೆ. ಮೊದಲನೆಯದು, ಈ ಟೂರ್ನಿ ಗೆದ್ದಿದ್ದರೆ ಭಾರತ ಸತತ ಮೂರನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪುತ್ತಿತ್ತು. ಆದರೆ ಹೀನಾಯ ಸೋಲಿನ ಬಳಿಕ ‘ಹ್ಯಾಟ್ರಿಕ್’ ಕನಸು ಭಗ್ನಗೊಂಡಿದೆ. ಮತ್ತೊಂದು ಕಾರಣ ಪ್ಯಾಟ್ ಕಮಿನ್ಸ್!

ಹೌದು, ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಭಾರತದ ಕ್ರಿಕೆಟ್ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. 2021ರ ನವೆಂಬರ್‍ನಲ್ಲಿ ಕಮಿನ್ಸ್ ನಾಯಕತ್ವ ವಹಿಸಿಕೊಂಡ ಬಳಿಕ ಆಸ್ಟ್ರೇಲಿಯಾ ಅಮೋಘ ಪ್ರದರ್ಶನ ನೀಡುತ್ತಿದೆ. ಅದರಲ್ಲೂ ಅವರ ಹೆಚ್ಚಿನ ಸಾಧನೆಗಳು ಭಾರತದ ವಿರುದ್ಧವೇ ಮೂಡಿಬಂದಿವೆ ಎಂಬುದು ವಿಶೇಷ. ಇದೇ ಕಾರಣಕ್ಕೆ ಟೀಮ್ ಇಂಡಿಯಾ ಪಾಲಿಗೆ ಪ್ಯಾಟ್ ಕಮಿನ್ಸ್ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ.
ಆಸ್ಟ್ರೇಲಿಯಾದ ಇತರ ಆಟಗಾರರಂತೆ ಪ್ಯಾಟ್ ‘ಸ್ಲೆಡ್ಜಿಂಗ್’ ಮಾಡುವುದಿಲ್ಲ. ಮೈದಾನದಲ್ಲಿ ಎದುರಾಳಿಗಳು ಕೆಣಕಿದಾಗಲೂ ಅದಕ್ಕೆ ಗಮನ ಕೊಡುವುದಿಲ್ಲ. ಬದಲಿಗೆ ಆಟದ ಮೂಲಕವೇ ಉತ್ತರ ಕೊಡಲು ನೋಡುತ್ತಾರೆ. ತಮ್ಮ ವೇಗದ ಬೌಲಿಂಗ್‌ನಲ್ಲಿ ವಿಕೆಟ್ ಕಬಳಿಸುವುದರ ಜೊತೆಗೆ ಬ್ಯಾಟಿಂಗ್‌ನಲ್ಲೂ ಉಪಯುಕ್ತ ಕಾಣಿಕೆ ನೀಡುತ್ತಾ ಬಂದಿದ್ದಾರೆ. ಇತರರಂತೆ ಎದುರಾಳಿ ತಂಡದ ಆಟಗಾರರನ್ನು ಹೊಗಳಿದ್ದು ಬಹಳ ಕಡಿಮೆ. ವ್ಯಂಗ್ಯಮಿಶ್ರಿತ ಮಾತುಗಳಲ್ಲೇ ಟೀಂ ಇಂಡಿಯಾ ಮತ್ತು ಕ್ರಿಕೆಟ್ ಪ್ರೇಮಿಗಳನ್ನು ಕೆಣಕುತ್ತಲೇ ಇರುತ್ತಾರೆ.

2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು 209 ರನ್‌ಗಳಿಂದ ಸೋಲಿಸುವ ಮೂಲಕ ಕಮಿನ್ಸ್ ಬಳಗ ರೋಹಿತ್ ಪಡೆಯ ಆಸೆಗೆ ತಣ್ಣೀರೆರಚಿತು. ಈ ಟ್ರೋಫಿ ಗೆಲ್ಲುವ ಮೂಲಕ ಎಲ್ಲ ಮಾದರಿಯಲ್ಲಿ ವಿಶ್ವ ಚಾಂಪಿಯನ್ ಎನಿಸಿಕೊಂಡ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ಆಸ್ಟ್ರೇಲಿಯಾ ಪಾತ್ರವಾಯಿತು. ಈ ಚಾಂಪಿಯನ್‌ಶಿಪ್ ಗೆದ್ದ ಕೆಲವು ತಿಂಗಳುಗಳಲ್ಲೇ ಕಮಿನ್ಸ್ ಇದಕ್ಕಿಂತಲೂ ದೊಡ್ಡ ಆಘಾತವನ್ನು ಭಾರತಕ್ಕೆ ನೀಡಿದರು.
ನವೆಂಬರ್ 19, 2023ರಂದು ನಡೆಯಲಿದ್ದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಹಿಂದಿನ ದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ ಮಾತುಗಳು, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕಿವಿಯಲ್ಲಿ ಈಗಲೂ ರಿಂಗಣಿಸುತ್ತಿವೆ. ‘ದೊಡ್ಡ ಪ್ರಮಾಣದ ಪ್ರೇಕ್ಷಕರನ್ನು ಮೌನಕ್ಕೆ ಶರಣಾಗಿಸುವುದಕ್ಕಿಂತ ಮಿಗಿಲಾದ ಸಾಧನೆ ಮತ್ತೊಂದಿಲ್ಲ’ (Nothing more satisfying than hearing big crowd go silent) ಎನ್ನುವ ಮೂಲಕ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳನ್ನು ಕೆಣಕಿದ್ದರು.
ಇದನ್ನು ಓದಿದ್ದೀರಾ?: ಬಾರ್ಡರ್-ಗವಾಸ್ಕರ್ ಟ್ರೋಫಿ | ಟೀಮ್ ಇಂಡಿಯಾಕ್ಕೆ ಸೋಲು; ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕನಸು ಭಗ್ನ
ಕಮಿನ್ಸ್ ಮಾತುಗಳನ್ನು ಬಹಳಷ್ಟು ಜನರು ಗಂಭೀರವಾಗಿ ಪರಿಗಣಿಸಲಿಲ್ಲ. ಕೆಲವರು ಇದೊಂದು ಜೋಕ್ ಎಂದು ಕರೆದರೆ, ಮತ್ತೆ ಕೆಲವರು ಇದನ್ನು ದುರಂಹಕಾರದ ಪರಮಾವಧಿ ಎಂದು ಜರಿದರು. ಇದಕ್ಕೆ ಕಾರಣವೂ ಇತ್ತು. ಈ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪ್ರದರ್ಶನ ಅದ್ಭುತವಾಗಿತ್ತು. ಫೈನಲ್‌ಗೂ ಮುನ್ನ ಆಡಿದ ಎಲ್ಲ 10 ಪಂದ್ಯಗಳಲ್ಲಿ ಜಯಭೇರಿ ಭಾರಿಸಿತ್ತು. ಬಹುತೇಕ ಪಂದ್ಯಗಳು ಏಕಪಕ್ಷೀಯವಾಗಿ ಅಂತ್ಯಗೊಂಡಿದ್ದವು. ಆದರೆ, ಇತ್ತ ಆಸ್ಟ್ರೇಲಿಯಾ ತಂಡದ ವಿಶ್ವಕಪ್ ಫೈನಲ್ ಹಾದಿ ಅಷ್ಟೇನೂ ಸುಲಭವಾಗಿರಲಿಲ್ಲ. ಆಡಿದ ಮೊದಲ ಎರಡು ಪಂದ್ಯಗಳಲ್ಲಿ (ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ) ಹೀನಾಯವಾಗಿ ಸೋತು ಟೂರ್ನಿಯಿಂದಲೇ ಹೊರಬೀಳುವ ಆತಂಕ ಎದುರಿಸಿತ್ತು. ನಂತರ ಹಲವು ಅಡೆತಡೆಗಳನ್ನು ಎದುರಿಸಿ, ಸತತ ಏಳು ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿತ್ತು. ಹೀಗಾಗಿ ಇಡೀ ಟೂರ್ನಿಯಲ್ಲಿ ಪಾರಮ್ಯ ಮೆರೆದಿದ್ದ ಭಾರತವೇ ವಿಶ್ವಕಪ್ ಗೆಲ್ಲುವ ಫೇವರೀಟ್ ಟೀಮ್ ಆಗಿತ್ತು.

ಫೈನಲ್ ಪಂದ್ಯದ ದಿನ ಅಹ್ಮದಾಬಾದ್ ಸ್ಟೇಡಿಯಂ ನೀಲಿಮಯವಾಗಿತ್ತು. ಭಾರತದ ಬ್ಯಾಟರ್‌ಗಳು ಹೊಡೆಯುವ ಒಂದೊಂದು ಬೌಂಡರಿ, ಸಿಕ್ಸರ್‌ಗಳಿಗೂ ಕೇಳಿಬರುತ್ತಿದ್ದ ಕಿವಿಗಡಚಿಕ್ಕುವ ಚಪ್ಪಾಳೆ, ಹರ್ಷೋದ್ಘಾರ ಆಸೀಸ್ ಆಟಗಾರರ ಎದೆಯನ್ನೇ ನಡುಗಿಸುತ್ತಿದ್ದವು. ಆದರೆ ನಡೆದದ್ದೇ ಬೇರೆ. ಎಲ್ಲ ಲೆಕ್ಕಾಚಾರ, ಒತ್ತಡಗಳನ್ನು ಮೆಟ್ಟಿ ನಿಂತ ಪ್ಯಾಟ್ ಕಮಿನ್ಸ್ ಬಳಗ ರೋಹಿತ್ ಪಡೆಯನ್ನು ಮಣಿಸಿ ಟ್ರೋಫಿಗೆ ಮುತ್ತಿಟ್ಟಿತು. ಕಮಿನ್ಸ್ ಹೇಳಿದಂತೆ ನಡೆದುಕೊಂಡರು. ಭಾರತೀಯರನ್ನು ಮೌನಕ್ಕೆ ಶರಣಾಗಿಸುವಲ್ಲಿ ಯಶಸ್ವಿಯಾದರು.

ಆದರೆ, 2024ರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನದ ವಿರುದ್ಧ ಸೋಲುವ ಮೂಲಕ ಆಸ್ಟ್ರೇಲಿಯಾ ಸೂಪರ್- 8ರಲ್ಲೇ ಮುಗ್ಗರಿಸಿತ್ತು. ಆಗ ಪ್ಯಾಟ್ ಕಮಿನ್ಸ್ ಬದಲು ಮಿಚ್ ಮಾರ್ಷ್ ತಂಡವನ್ನು ಮುನ್ನಡೆಸಿದ್ದರು. ಪ್ಯಾಟ್ ಅವರಿಗೆ ನಾಯಕತ್ವ ನೀಡದ ಬಗ್ಗೆ ಸಾಕಷ್ಟು ಟೀಕೆಗಳು ಎದುರಾಗಿದ್ದವು.
ಈಗ, ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲ್ಲುವ ಮೂಲಕ ತಾವೊಬ್ಬ ಅಪ್ರತಿಮ ನಾಯಕ ಎಂಬುದನ್ನು ಪ್ಯಾಟ್ ಕಮಿನ್ಸ್ ಸಾಬೀತು ಮಾಡಿದ್ದಾರೆ. ರಿಕಿ ಪಾಂಟಿಂಗ್ ನಂತರ ಅತ್ಯಂತ ಯಶಸ್ವಿ ಮತ್ತು ಪ್ರಭಾವಿ ನಾಯಕರಲ್ಲಿ ಒಬ್ಬರಾಗಿ ತಮ್ಮನ್ನು ತಾವು ದೃಢವಾಗಿ ಸ್ಥಾಪಿಸಿಕೊಂಡಿದ್ದಾರೆ.
2021ರ ನವೆಂಬರ್‌ನಲ್ಲಿ ಟೆಸ್ಟ್ ತಂಡಕ್ಕೆ ನಾಯಕತ್ವ ವಹಿಸಿಕೊಂಡ ಕಮಿನ್ಸ್ ಮೂರು ವರ್ಷಗಳಲ್ಲಿ ಆಶಸ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್, ಏಕದಿನ ವಿಶ್ವಕಪ್ ಗೆದ್ದಿದ್ದಾರೆ. ಸದ್ಯ ಅವರ ಮುಂದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿದೆ. ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಗೆಲುವಿನ ನಾಗಾಲೋಟ ಮುಂದುವರಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.
Good writing..
ಚೆನ್ನಾಗಿ ಬರೆದಿದ್ದೀಯ ಗೆಳೆಯ