ಕ್ರಿಮಿನಲ್ ಲಾಯರ್ ಮಗ ಕೊಹ್ಲಿ, ರೈತನ ಮಗ ಶುಭ್ ಮನ್ ಗಿಲ್, ಆಟೋಡ್ರೈವರ್ ಮಗ ಸಿರಾಜ್!

Date:

Advertisements

ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಟಗಾರರಾಗಬೇಕು ಎಂದರೆ, ಶ್ರೀಮಂತರ ಮಕ್ಕಳಿಗೆ ಮಾತ್ರ ಸಾಧ್ಯ ಎನ್ನುವ ಅನಿಸಿಕೆ ಕೆಲವರಲ್ಲಿದೆ. ಅದು ಒಂದು ಹಂತದವರೆಗೆ ನಿಜವೂ ಕೂಡ. ಆದರೆ, ಎಲ್ಲ ಕಾಲದಲ್ಲೂ ಡಾರ್ಕ್ ಹಾರ್ಸ್ ಗಳಂತೆ ಬಡವರ ಮನೆಗಳ ಮಕ್ಕಳು, ಕೆಳಮಧ್ಯಮ ವರ್ಗದ ಮನೆಗಳ ಮಕ್ಕಳು ಕ್ರಿಕೆಟ್ ಲೋಕದಲ್ಲಿ ಮಿಂಚಿದ್ದಾರೆ, ಮಿಂಚುತ್ತಲೇ ಇದ್ದಾರೆ. ಹಾಲಿ ಭಾರತದ ಕ್ರಿಕೆಟ್ ಟೀಮ್ ನಲ್ಲೂ ಇಂಥ ಕೆಲವು ಆಟಗಾರರಿದ್ದಾರೆ. ಅವರ ಪೈಕಿ ವಿರಾಟ್ ಕೊಹ್ಲಿ, ಸಿರಾಜ್ ಹಾಗೂ ಶುಭ್ ಮನ್ ಗಿಲ್ ಮುಖ್ಯರಾದವರು.

ವಿರಾಟ್ ಕೊಹ್ಲಿ ದೆಹಲಿಯವರು. ಅವರ ತಂದೆ ಪ್ರೇಮ್ ಕೊಹ್ಲಿ ಕ್ರಿಮಿನಲ್ ಲಾಯರ್. ಅವರದ್ದು ಒಂದು ಮಧ್ಯಮ ವರ್ಗದ ಕುಟುಂಬ. ತನ್ನ ತಂದೆ ಹೇಗೆ ಕಷ್ಟಪಟ್ಟು ತಮ್ಮ ಕುಟುಂಬವನ್ನು ಬಡತನದಿಂದ ಪಾರು ಮಾಡಿದರು ಎನ್ನುವುದನ್ನು ಕೊಹ್ಲಿ ಹಲವು ಕಡೆ ಹೇಳಿಕೊಂಡಿದ್ದಾರೆ.

ಪ್ರೇಮ್ ಕೊಹ್ಲಿ ತಮ್ಮ ಮಗನ ಕ್ರಿಕೆಟ್ ಆಸಕ್ತಿಯನ್ನು ಗುರುತಿಸಿ, ಚಿಕ್ಕವಯಸ್ಸಿನಲ್ಲೇ ಆತನನ್ನು ವೆಸ್ಟ್ ದೆಹಲಿ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು. ಒಂದು ದಿನವೂ ತಪ್ಪಿಸಿಕೊಳ್ಳದಂತೆ ತರಬೇತಿಗೆ ಹಾಜರಾಗುತ್ತಿದ್ದ ಕೊಹ್ಲಿ ನಿಧಾನಕ್ಕೆ ಕ್ರಿಕೆಟ್ ಆಟದ ಪಟ್ಟುಗಳನ್ನು ಕರಗತ ಮಾಡಿಕೊಳ್ಳುತ್ತಾ ಹೋದರು.

Advertisements

ಭಾರತದ ಕ್ರಿಕೆಟ್ ನಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ತಂಡಗಳಿಗೆ ಆಯ್ಕೆಯಾಗಬೇಕು ಎಂದರೆ, ಹಣ ಅಥವಾ ಪ್ರಭಾವ ಇರಬೇಕು ಎನ್ನುವ ಮಾತಿದೆ. ಅದು ತೀರಾ ಸುಳ್ಳೇನೂ ಅಲ್ಲ. ಕೊಹ್ಲಿ ಬದುಕಿನಲ್ಲೂ ಅಂಥದ್ದೊಂದು ಸಂದರ್ಭ ಬಂದಿತ್ತು. ದೆಹಲಿ ತಂಡಕ್ಕೆ ಕೊಹ್ಲಿಯನ್ನು ಆಯ್ಕೆ ಮಾಡಬೇಕೆಂದರೆ, ಪ್ರತಿಭೆಯೊಂದೇ ಸಾಲದು, ಹಣವನ್ನೂ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರಂತೆ. ಅದಕ್ಕೆ ಕೊಹ್ಲಿ ತಂದೆ ಪ್ರೇಮ್ ಕೊಹ್ಲಿ, ‘ಪ್ರತಿಭೆಯೊಂದೇ ಮಾನದಂಡ ಆಗಿದ್ದರೆ ನನ್ನ ಮಗನನ್ನು ಆಯ್ಕೆ ಮಾಡಿ, ಇಲ್ಲದಿದ್ದರೆ ನನ್ನ ಮಗನಿಗೆ ಕ್ರಿಕೆಟ್ ಆಟವೇ ಬೇಡ’ ಎಂದಿದ್ದರು. ಅವತ್ತು ರಾತ್ರಿ ವಿರಾಟ್ ಕೊಹ್ಲಿ ಅತ್ತುಬಿಟ್ಟಿದ್ದರು. ಯಾರೂ ತನ್ನನ್ನು ಯಾವ ಕಾರಣಕ್ಕೂ ನಿರಾಕರಿಸಲು ಸಾಧ್ಯವಾಗದಂತೆ ಆಡಬೇಕು ಎಂದು ಅಂದೇ ನಿಶ್ಚಯಿಸಿದ್ದರು.

ವಿರಾಟ್‌ ಕೊಹ್ಲಿ 500
Virat kohli 500 1

2006ರಲ್ಲಿ ಕೊಹ್ಲಿ ಅವರ ತಂದೆ ಹೃದಯಾಘಾತಕ್ಕೆ ಬಲಿಯಾಗಿದ್ದರು. ಆಗ ಕೊಹ್ಲಿಗೆ ಕೇವಲ 18 ವರ್ಷ. ಕೊಹ್ಲಿ ಆಗ ದೆಹಲಿ ತಂಡದ ಪರವಾಗಿ ಕರ್ನಾಟಕದ ವಿರುದ್ಧ ರಣಜಿ ಪಂದ್ಯ ಆಡುತ್ತಿದ್ದರು. ಕೊಹ್ಲಿಗೆ ಅಪ್ಪನ ಅಂತ್ಯಸಂಸ್ಕಾರಕ್ಕೆ ಹೋಗುವುದಕ್ಕಿಂತ ಅಪ್ಪ ಕಂಡಿದ್ದ ಕನಸನ್ನು ನನಸು ಮಾಡುವುದು ಮುಖ್ಯವಾಗಿತ್ತು. ತಂದೆಯ ಅಂತ್ಯಸಂಸ್ಕಾರಕ್ಕೂ ಹೋಗದ ಕೊಹ್ಲಿ, ಮೈದಾನಕ್ಕಿಳಿದಿದ್ದರು. ಕರ್ನಾಟಕದ ವಿರುದ್ಧ 90 ರನ್ ಬಾರಿಸಿ ದೆಹಲಿ ತಂಡವನ್ನು ರಕ್ಷಿಸಿದ್ದರು.

ಇವತ್ತು ಜಾಗತಿಕ ಕ್ರಿಕೆಟ್ ನಲ್ಲಿ ಕೊಹ್ಲಿ ದೊಡ್ಡ ಹೆಸರು. ಅವರ ಆಟಕ್ಕೆ ಮಾರುಹೋಗದವರೇ ಇಲ್ಲ. ವಿಶ್ವ ಕ್ರಿಕೆಟ್ ದಿಗ್ಗಜರು ಕೂಡ ಅವರ ಆಟದ ಶೈಲಿಯನ್ನು ಮನಸಾರೆ ಹೊಗಳುತ್ತಾರೆ.

ಈ ಸುದ್ದಿ ಓದಿದ್ದೀರಾ? ಏಕದಿನ ವಿಶ್ವಕಪ್ 2023 | ಜಯ್ ಶಾ ಪ್ರತಿಷ್ಠೆಯಿಂದ ಪ್ರೇಕ್ಷಕರಿಲ್ಲದ ಕ್ರೀಡಾಂಗಣಗಳು, ಕಳೆಗುಂದಿದ ಕ್ರಿಕೆಟ್

ವಿರಾಟ್ ಕೊಹ್ಲಿ ಪಂಜಾಬಿ ಖತ್ರಿ ಸಮುದಾಯಕ್ಕೆ ಸೇರಿದವರು. ಪಂಜಾಬ್ ನ ಸಿಖ್ ಸಮುದಾಯಕ್ಕೆ ಸೇರಿದ ಶುಭ್ ಮನ್ ಗಿಲ್ ಹಿನ್ನೆಲೆ ಕೂಡ ಆಸಕ್ತಿಕರವಾಗಿದೆ. ಆತನ ತಂದೆ ಲಖ್ವಿಂದರ್ ಸಿಂಗ್ ಒಬ್ಬ ರೈತ. ಲಖ್ವಿಂದರ್ ಸಿಂಗ್ ಗೆ ತಾನೊಬ್ಬ ಕ್ರಿಕೆಟರ್ ಆಗಬೇಕೆನ್ನುವ ಆಸೆಯಿತ್ತು. ಆದರೆ, ಅದು ಕೈಗೂಡಲಿಲ್ಲ. ತನ್ನ ಮಗನನ್ನಾದರೂ ಕ್ರಿಕೆಟರ್ ಮಾಡಬೇಕೆಂದು ಲಖ್ವಿಂದರ್ ಸಿಂಗ್ ನಿಶ್ಚಯಿಸಿದರು. ತಾವೇ ಮಗನ ಮೊದಲ ಕೋಚ್ ಆದರು. ಮಗನ ಕೈಗೆ ಒಂದು ಬ್ಯಾಟ್ ಕೊಟ್ಟು ತಾವೇ ಅತನ ಮುಂದೆ ಬಾಲ್ ಎಸೆಯುತ್ತಿದ್ದರು. ಶುಭ್ ಮನ್ ಬಾಲ್ ಹೊಡೆಯುವುದನ್ನು ಕಲಿತ ಮೇಲೆ ತನ್ನ ಹೊಲದಲ್ಲೇ ಒಂದು ಪಿಚ್ ಮಾಡಿಸಿದರು. ತಮ್ಮ ಊರಿನ ಯುವಕರನ್ನು ಕರೆದು ತನ್ನ ಮಗನಿಗೆ ಬೌಲಿಂಗ್ ಮಾಡುವಂತೆ ಹೇಳುತ್ತಿದ್ದರು. ಶುಭ್ ಮನ್ ನನ್ನು ಔಟ್ ಮಾಡಿದವರಿಗೆ 100 ರೂಪಾಯಿ ಬಹುಮಾನ ಕೊಡುವುದಾಗಿ ಘೋಷಿಸುತ್ತಿದ್ದರು. ಶುಭ್ ಮನ್ ಬ್ಯಾಟಿಂಗ್ ನಲ್ಲಿ ಯಾವ ಮಟ್ಟಿಗೆ ಪಳಗಿದನೆಂದರೆ, ಒಮ್ಮೊಮ್ಮೆ ಇಡೀ ದಿನ ಔಟಾಗದೇ ಬ್ಯಾಟಿಂಗ್ ಮಾಡುತ್ತಿದ್ದ. ಆಗ ಶುಭ್ ಮನ್ ದಿನವೂ 500ರಿಂದ 700 ಬಾಲ್ ಗಳನ್ನು ಆಡುತ್ತಿದ್ದ.

ಶುಭಮನ್ ಗಿಲ್
Shubman gill 3

ಲಖ್ವಿಂದರ್ ಸಿಂಗ್ ಅವರದ್ದು ಪಾಕಿಸ್ತಾನದ ಗಡಿಗೆ ಸಮೀಪದ ಚಕ್ ಖೇರೆ ವಾಲಾ ಎನ್ನುವ ಪುಟ್ಟ ಹಳ್ಳಿ. ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಲಖ್ವಿಂದರ್ ಸಿಂಗ್ ಜಲಾಲಾಬಾದ್ ಗೆ ಕುಟುಂಬವನ್ನು ಸ್ಥಳಾಂತರಿಸಿದರು. ಅಲ್ಲಿ ಶುಭ್ ಮನ್ ನನ್ನು ಕೋಚಿಂಗ್ ಗೆ ಸೇರಿಸಿದರು. ಒಂದಷ್ಟು ದಿನಗಳ ನಂತರ ಜಿಲ್ಲಾ ಕೆಂದ್ರ ತನ್ನ ಮಗನ ತರಬೇತಿಗೆ ಸಾಕಾಗದು ಎನಿಸಿತು. ಮರುಯೋಚನೆಯನ್ನೇ ಮಾಡದೆ ಲಖ್ವಿಂದರ್ ಸಿಂಗ್ ಕುಟುಂಬವನ್ನು ಚಂಡೀಗಢಕ್ಕೆ ಬದಲಿಸಿದರು. ಮೊಹಾಲಿಯ ಕ್ರಿಕೆಟ್ ಸ್ಟೇಡಿಯಂ ಕೂಗಳತೆಯಲ್ಲೇ ಒಂದು ಬಾಡಿಗೆ ಮನೆ ಹಿಡಿದರು ಮಗನಿಗೆ ಕೋಚಿಂಗ್ ಕೊಡಿಸಿದರು.

ಅಲ್ಲೇ ಹತ್ತಿರದ ಮತ್ತೊಂದು ಅಕಾಡೆಮಿಯಲ್ಲಿ ಬೌಲಿಂಗ್ ತರಬೇತಿ ಕೊಡಲಾಗುತ್ತಿತ್ತು. ಬೌಲರ್ ಗಳ ಎದುರು ಬ್ಯಾಟಿಂಗ್ ಮಾಡುವವರು ಯಾರು ಎಂದು ಹುಡುಕಾಡಿದಾಗ ಅವರಿಗೆ ಸಿಕ್ಕವರು ಶುಭ್ ಮನ್. ಅಲ್ಲಿ ಶುಭ್ ಮನ್ ನ ಬ್ಯಾಟಿಂಗ್ ಸಾಮರ್ಥ್ಯ ನೋಡಿದವರು ಮೂಕವಿಸ್ಮಿತರಾದರು. ನಿಧಾನಕ್ಕೆ ಟೂರ್ನಮೆಂಟ್ ಗಳನ್ನು ಆಡಲು ಆರಂಭಿಸಿದ ಶುಭ್ ಮನ್, 2014ರಲ್ಲಿ ಪಂಜಾಬ್ ನ ಅಂತರ ಜಿಲ್ಲಾ ಪಂದ್ಯಾವಳಿಯ ಒಂದು ಮ್ಯಾಚ್ ನಲ್ಲಿ 351 ರನ್ ಬಾರಿಸಿದ್ದರು. ನಂತರ 16ರ ವಯಸ್ಸಿನ ಒಳಗಿನವರ ತಂಡದಲ್ಲಿ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ದ್ವಿಶತಕ ಬಾರಿಸಿದ್ದರು. ತನ್ನ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿಯಿಂದ ಬೆಸ್ಟ್ ಜೂನಿಯರ್ ಕ್ರಿಕೆಟರ್ ಪ್ರಶಸ್ತಿ ಪಡೆದಿದ್ದರು. ಇವತ್ತು ಶುಭ್ ಮನ್ ಅದೇ ಕೊಹ್ಲಿ ಜೊತೆ ವಿಶ್ವಕಪ್ ಪಂದ್ಯಗಳನ್ನು ಆಡುತ್ತಿದ್ದಾರೆ. ತನ್ನ ಮಗನ ಪಂದ್ಯಗಳನ್ನು ತಪ್ಪದೇ ನೋಡುವ ಲಖ್ವಿಂದರ್ ಸಿಂಗ್ ಈಗಲೂ ಮಗನಿಗೆ ಬ್ಯಾಟಿಂಗ್ ಟಿಪ್ಸ್ ಕೊಡುತ್ತಾರೆ ಎನ್ನುವುದು ವಿಶೇಷ.

ಕೊಹ್ಲಿ ಹಾಗೂ ಶುಭ್ ಮನ್ ಗಿಲ್ ಗಿಂತ ಬಡ ಕುಟುಂಬದಿಂದ ಬಂದವರು ಬೌಲರ್ ಮೊಹಮದ್ ಸಿರಾಜ್. ಅವರ ತಂದೆ ಮೊಹಮದ್ ಗೌಸ್ ಹೈದರಾಬಾದ್ ನಲ್ಲಿ ಆಟೋ ಓಡಿಸುತ್ತಿದ್ದರು. ತಾಯಿ ಮನೆಗೆಲಸಕ್ಕೆ ಹೋಗುತ್ತಿದ್ದರು. ಅವರಿಗೆ ತಮ್ಮ ಮಗ ಇಂಜಿನಿಯರ್ ಆಗಿ ತಮ್ಮ ಬಡತನಕ್ಕೆ ಮುಕ್ತಿ ಕೊಡಲಿ ಎನ್ನುವ ಆಸೆ. ಆದರೆ, ಸಿರಾಜ್ ಗೆ ಕ್ರಿಕೆಟ್ ಆಟಗಾರನಾಗಬೇಕೆನ್ನುವ ಹಂಬಲ. ಮುತ್ತಿನ ನಗರಿಯ ಗಲ್ಲಿಗಳಲ್ಲಿ ಆಡುತ್ತಲೆ ಕ್ರಿಕೆಟ್ ಆಟದ ಪ್ರಾಥಮಿಕ ಪಾಠಗಳನ್ನು ಕಲಿತರು ಸಿರಾಜ್. ಆತನ ಬೌಲಿಂಗ್ ಕಂಡ ಕೆಲವು ತರಬೇತುದಾರರು, ರಾಜ್ಯ ಮಟ್ಟದ ಪಂದ್ಯಗಳನ್ನು ಆಡುವಂತೆ ಸಲಹೆ ನೀಡಿದರು. ಆದರೆ, ಮ್ಯಾಚ್ ಆಡಲು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಲೂ ಕೂಡ ಸಿರಾಜ್ ಬಳಿ ಹಣವಿರುತ್ತಿರಲಿಲ್ಲ. ತಮ್ಮ ಮನೆಯಲ್ಲಿದ್ದ ಹಳೆಯ ಬೈಕ್ ಅನ್ನೇ ಸಿರಾಜ್ ಓಡಾಟಕ್ಕೆ ಬಳಸುತ್ತಿದ್ದರು.

ಸಿರಾಜ್ ಪರಿಸ್ಥಿತಿ ನೋಡಲಾಗದೇ ಆತನ ಅಣ್ಣ ತನಗೆ ಸಿಗುತ್ತಿದ್ದ 100 ರೂಪಾಯಿಯಲ್ಲಿ 70 ರೂಪಾಯಿಯನ್ನು ಸಿರಾಜ್ ಗೆ ಕೊಡುತ್ತಿದ್ದರು. ಅದರಲ್ಲಿ 40 ರೂಪಾಯಿ ಪೆಟ್ರೋಲ್ ಗೆ ಖರ್ಚಾಗುತ್ತಿತ್ತು. ಉಳಿದದ್ದರಲ್ಲೇ ಆತನ ಎಲ್ಲ ಖರ್ಚು ಸರಿದೂಗಿಸಬೇಕಿತ್ತು.

siraj ಬೌಲರ್

ಸಿರಾಜ್ ಹಲವು ವರ್ಷಗಳ ಕಾಲ ಚಪ್ಪಲಿ ಹಾಕಿಕೊಂಡು ಕ್ರಿಕೆಟ್ ಆಡುತ್ತಿದ್ದರು. ಒಮ್ಮೆ ಟೂರ್ನಮೆಂಟ್ ನಲ್ಲಿ ಅಡುವಾಗ ಆಯೋಜಕರೆ ಸಿರಾಜ್ ಗೆ ಶೂ ಕೊಡಿಸಿದ್ದರು. ಒಮ್ಮೆ ನಿರ್ಣಾಯಕ ಟೂರ್ನಮೆಂಟ್ ಆಡುವಾಗ ಸಿರಾಜ್ ಗೆ ಡೆಂಗ್ಯೂ ಬಂದಿತ್ತು. ಜ್ವರದ ನಡುವೆಯೂ ಮೈದಾನಕ್ಕಿಳಿದಿದ್ದ ಸಿರಾಜ್, ತಮ್ಮ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ನಿಂದ ನೆರೆದಿದ್ದವರನ್ನು ಮಂತ್ರಮುಗ್ಧಗೊಳಿಸಿದ್ದರು.

ಇಂದು ಸಿರಾಜ್ ವಿಶ್ವಕಪ್ ಆಡುತ್ತಿರುವ ಭಾರತ ತಂಡದ ಪ್ರಮುಖ ಬೌಲರ್. ಕೆಲವೇ ವಾರಗಳ ಮುಂಚೆ ಭಾರತ ಏಷ್ಯಾ ಕಪ್ ಗೆಲ್ಲಲು ಸಿರಾಜ್ ಬೌಲಿಂಗ್ ಕಾರಣವಾಗಿತ್ತು. ಅವತ್ತು ತನಗೆ ಸಿಕ್ಕ ಪ್ರಶಸ್ತಿ ಮೊತ್ತವನ್ನು ಸಿರಾಜ್ ಮೈದಾನದ ಕೆಲಸಗಾರರಿಗೆ ಕೊಟ್ಟಿದ್ದರು. ಆತ ತನ್ನಹಿಂದಿನ ಕಷ್ಟದ ದಿನಗಳನ್ನು ಮರೆತಿಲ್ಲ ಎನ್ನುವುದಕ್ಕೆ ಅದು ನಿದರ್ಶನ. ಚೆನ್ನಾಗಿ ಆಡಿದಾಗ ಇಂದ್ರ ಚಂದ್ರ ಎಂದು ಹೊಗಳುವ ಅಭಿಮಾನಿಗಳು, ತಾನು ಚೆನ್ನಾಗಿ ಆಡದೇ ಇದ್ದಾಗ ಆಟೋ ಓಡಿಸು ಹೋಗು, ನೀನು ಅದಕ್ಕೇ ಲಾಯಕ್ಕು ಎಂದಿದ್ದನ್ನು ಸಿರಾಜ್ ಅತ್ಯಂತ ನೋವಿನಿಂದ ನೆನಪಿಸಿಕೊಳ್ಳುತ್ತಾರೆ.

ಕ್ರಿಕೆಟ್ ಶ್ರೀಮಂತರ ಮಕ್ಕಳ ಆಟ. ಕೋಚಿಂಗ್ ಇತ್ಯಾದಿಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು ಎನ್ನುವುದು ನಿಜ. ಆದರೆ, ಹಣ ಇದ್ದ ಮಾತ್ರಕ್ಕೆ ಆಟ ಬರುವುದಿಲ್ಲ. ಹಣ ಚೆಲ್ಲಿದರೆ ಪ್ರತಿಭೆ ಸಿಗುವುದಿಲ್ಲ. ಬಡವರು, ಕೆಳಮಧ್ಯಮವರ್ಗದವರು ಕೂಡ ಶ್ರಮಿಸಿದರೆ ಕ್ರಿಕೆಟ್ ನಲ್ಲಿ ಅತ್ಯುನ್ನತ ಮಟ್ಟ ತಲುಪಲು ಸಾಧ್ಯವಿದೆ ಎನ್ನುವುದನ್ನು ವಿರಾಟ್ ಕೊಹ್ಲಿ, ಶುಭ್ ಮನ್ ಗಿಲ್, ಮೊಹಮದ್ ಸಿರಾಜ್ ಸಾಬೀತುಪಡಿಸಿದ್ದಾರೆ.

222 e1692343004458
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಮಹಿಳಾ ವಿಶ್ವಕಪ್‌, ಆಸೀಸ್‌ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ ಪ್ರಕಟ

ಮುಂದಿನ ತಿಂಗಳು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್‌ಗೆ...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X