ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ಮಂಡಳಿ ಬಿಸಿಸಿಐನ, ಹಿರಿಯರ ಆಯ್ಕೆ ಸಮಿತಿಯ ಮುಖ್ಯಸ್ಥರ ಸ್ಥಾನ ಕಳೆದ ಐದು ತಿಂಗಳಿನಿಂದ ಖಾಲಿಯಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿದ, ಹತ್ತು ಹಲವು ದಾಖಲೆಗಳನ್ನು ಬರೆದ ಅತಿರಥ ಮಹಾರಥ ಮಾಜಿ ಆಟಗಾರರಿದ್ದರೂ ಸಹ, ಅಂತಾರಾಷ್ಟ್ರೀಯ ಟೂರ್ನಿಗಳಿಗೆ ಭಾರತ ತಂಡವನ್ನು ಆಯ್ಕೆ ಮಾಡುವ ಸಮಿತಿಗೆ ಮುಖ್ಯಸ್ಥರೇ ಇಲ್ಲ ಎಂಬುದು ಬಿಸಿಸಿಐ ಪಾಲಿಗೆ ಅವಮಾನವೇ ಸರಿ.
2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಭಾರತ ತಂಡದ ಪಾಲಿಗೆ ಐಸಿಸಿ ಪ್ರಶಸ್ತಿ ಎನ್ನುವದು ಮರೀಚಿಕೆಯಾಗಿಯೇ ಉಳಿದಿದೆ. ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ಭಾರತದಲ್ಲೇ ನಡೆಯಲಿದೆ. ತವರಿನಲ್ಲೇ ಮಹತ್ವದ ಟೂರ್ನಿ ನಡೆಯುವುದರಿಂದ ಸಹಜವಾಗಿಯೇ ತಂಡದ ಮೇಲೆ ಗೆಲುವಿನ ಒತ್ತಡ ಹೆಚ್ಚಿದೆ. ಇದಕ್ಕಾಗಿ ಬಲಿಷ್ಠ ತಂಡ ಕಟ್ಟಬೇಕಾಗಿದೆ. ಆದರೆ ಹಿರಿಯರ ಆಯ್ಕೆ ಸಮಿತಿಯು ಮುಖ್ಯಸ್ಥರೇ ಇಲ್ಲದೆ ʻಅನಾಥʼವಾಗಿದೆ.
ವಿಶ್ವಕಪ್‌ಗೂ ಮುನ್ನ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ, ಏಷ್ಯಾ ಕಪ್ ಮತ್ತು ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿಯನ್ನಾಡಲಿದೆ.
ಚೇತನ್ ಶರ್ಮಾ ಬಳಿಕ ನೇಮಕವಾಗಿಲ್ಲ!
ಬಿಸಿಸಿಐನ, ಹಿರಿಯರ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದ ಚೇತನ್ ಶರ್ಮಾ, ತಮ್ಮ ಸ್ಥಾನಕ್ಕೆ ಫೆಬ್ರವರಿ 17ರಂದು ರಾಜೀನಾಮೆ ನೀಡಿದ್ದರು.
ಮಾಧ್ಯಮವೊಂದರ ಕುಟುಕು ಕಾರ್ಯಾಚರಣೆಯಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ನಡುವಣ ಸಂಬಂಧದ ಬಗ್ಗೆ ಹಲವು ಪ್ರಮುಖ ಅಂಶಗಳನ್ನು ಬಹಿರಂಗಪಡಿಸಿದ್ದ ಕಾರಣದಿಂದಾಗಿ ಶರ್ಮಾ, ಅನಿವಾರ್ಯವಾಗಿ ಹುದ್ದೆ ತ್ಯಜಿಸುವಂತಾಗಿತ್ತು.
ಚೇತನ್ ಶರ್ಮಾ ರಾಜೀನಾಮೆ ನೀಡಿ ಅದಾಗಲೇ ಐದು ತಿಂಗಳು ಕಳೆದಿದೆ. ಸುಬ್ರೋತೊ ಬ್ಯಾನರ್ಜಿ, ಸಲೀಲ್ ಅಂಕೋಲಾ, ಶ್ರೀಧರನ್ ಶರತ್ ಸದ್ಯಸರಾಗಿರುವ ಆಯ್ಕೆ ಸಮಿತಿಯಲ್ಲಿ ಶಿವಸುಂದರ್ ದಾಸ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಐಪಿಎಲ್ ಕಾರಣ!
24 ಟೆಸ್ಟ್ ಪಂದ್ಯಗಳನ್ನಾಡಿರುವ ಯಾರು ಬೇಕಾದರೂ ಹಿರಿಯರ ಆಯ್ಕೆ ಸಮಿತಿಯ ಮುಖ್ಯಸ್ಥರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಬಿಸಿಸಿಐ ಅರ್ಜಿಯನ್ನೂ ಆಹ್ವಾನಿಸಿದೆ. ಆದರೆ ಈ ಅರ್ಹತೆಯಿರುವ ಹತ್ತು ಹಲವು ಮಾಜಿ ಆಟಗಾರರಿದ್ದರೂ ಸಹ, ಪ್ರಮುಖರು ಯಾರೂ ಕೂಡ ಅಧ್ಯಕ್ಷ ಹುದ್ದೆಗೆ ಅರ್ಜಿ ಸಲ್ಲಿಸುವ ಉತ್ಸಾಹ ತೋರಿಲ್ಲ. ಇದು ಬಿಸಿಸಿಐಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಹತ್ತಾರು ಮಾಜಿ ದಿಗ್ಗಜ ಆಟಗಾರರು ಕ್ರಿಕೆಟ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಇವರಾರಿಗೂ ʻಅಧ್ಯಕ್ಷʼ ಹುದ್ದೆ ಬೇಕಾಗಿಲ್ಲ. ಇದಕ್ಕೆ ಕಾರಣ ಐಪಿಎಲ್ ಎಂಬ ಚಿನ್ನದ ಮೊಟ್ಟೆ ಇಡುವ ಕೋಳಿ!
ಹೌದು, ಹಿರಿಯರ ಆಯ್ಕೆ ಸಮಿತಿಯ ಮುಖ್ಯಸ್ಥರಿಗೆ ಬಿಸಿಸಿಐ ವಾರ್ಷಿಕ ಒಂದು ಕೋಟಿ ರೂಪಾಯಿ ವೇತನ ಪಾವತಿಸುತ್ತದೆ. ಸದಸ್ಯರ ಸಂಬಳ 90 ಲಕ್ಷ. ಆದರೆ ಐಪಿಎಲ್ ಟೂರ್ನಿಯಲ್ಲಿ ಕೇವಲ ಎರಡು ತಿಂಗಳ ಅವಧಿಗೆ ವೀಕ್ಷಕ ವಿವರಣೆಗಾರನಾಗಿ ಅಥವಾ ಕೋಚ್, ಸಲಹೆಗಾರನಾಗಿ ಫ್ರಾಂಚೈಸಿಗಳ ಜೊತೆಗಿದ್ದು ಮಾಜಿ ಆಟಗಾರರು ಬಹುದೊಡ್ಡ ಮೊತ್ತವನ್ನು ಜೇಬಿಗಿಳಿಸುತ್ತಾರೆ. ಹೀಗಾಗಿಯೇ ಮಾಜಿ-ಹಾಲಿ ಆಟಗಾರರ ಮೊದಲ ಪ್ರಾಶಸ್ತ್ಯ ಐಪಿಎಲ್ ಟೂರ್ನಿಯಾಗಿದೆ.
ಆಯ್ಕೆ ಸಮಿತಿಯವರಿಗೆ ನೀಡಲಾಗುವ ವೇತನ ಪ್ಯಾಕೇಜ್ ಅನ್ನು ಭಾರತ ತಂಡದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಮತ್ತು ಸ್ಪಿನ್ನರ್ ಹರ್ಭಜನ್ ಸಿಂಗ್ ಈ ಹಿಂದೆ ಬಹಿರಂಗವಾಗಿಯೇ ಟೀಕಿಸಿದ್ದರು.

ಹಿರಿಯರ ಆಯ್ಕೆ ಸಮಿತಿಯ ಮುಖ್ಯಸ್ಥ ಹುದ್ದೆ ಅತ್ಯಂತ ಜವಾಬ್ಧಾರಿಯುತ ಹುದ್ದೆ. ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಜೊತೆ ಸಾಕಷ್ಟು ಸಮಾಲೋಚನೆಯ ಬಳಿಕವಷ್ಟೇ ಅಂತಾರಾಷ್ಟ್ರೀಯ ಟೂರ್ನಿಗಳಿಗೆ ತಂಡವನ್ನು ಅಂತಿಮಗೊಳಿಸಬೇಕಾಗುತ್ತದೆ. ಹೀಗಾಗಿ ಅನನುಭವಿಗಳಿಗೆ ಈ ಹುದ್ದೆ ಸಾಕಷ್ಟು ಸವಾಲಿನಿಂದ ಕೂಡಿದೆ.
ಹಿರಿಯರ ಆಯ್ಕೆ ಸಮಿತಿಯ ಮುಖ್ಯಸ್ಥ ಹುದ್ದೆಯಲ್ಲಿರುವವರು ಐಪಿಎಲ್‌ನ ಭಾಗವಾಗುವಂತಿಲ್ಲ ಮತ್ತು ತಮ್ಮದೇ ಆದ ಕ್ರಿಕೆಟ್ ಅಕಾಡಮಿಗಳನ್ನು ಹೊಂದಿರುವಂತಿಲ್ಲ. ಜೊತೆಗೆ ಹಿತಾಸಕ್ತಿ ಸಂಘರ್ಷದ ಸಮಸ್ಯೆಗೆ ಸಿಲುಕುವ ಸಾಧ್ಯತೆ ಇರುವುದರಿಂದಲೂ ಹಲವು ಮಾಜಿ ದಿಗ್ಗಜ ಆಟಗಾರರು ಈ ಸ್ಥಾನದಿಂದ ದೂರ ಸರಿಯುತ್ತಾರೆ.
ಬಿಸಿಸಿಐ ಹಿರಿಯರ ಆಯ್ಕೆ ಸಮಿತಿಯ ಹಾಲಿ ಸದಸ್ಯರು
- ಶಿವಸುಂದರ್ ದಾಸ್, ಹಂಗಾಮಿ ಅಧ್ಯಕ್ಷ (ಟೆಸ್ಟ್: 23, ಏಕದಿನ: 4)
- ಸುಬ್ರೋತೊ ಬ್ಯಾನರ್ಜಿ, (ಟೆಸ್ಟ್: 1, ಏಕದಿನ: 6)
- ಸಲೀಲ್ ಅಂಕೋಲಾ, (ಟೆಸ್ಟ್: 1, ಏಕದಿನ: 20)
- ಶ್ರೀಧರನ್ ಶರತ್, (139 ಪ್ರಥಮ ದರ್ಜೆ ಪಂದ್ಯ, ಎ ಲಿಸ್ಟ್ 116 ಪಂದ್ಯ)