ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 158 ಕೋಟಿ ರೂ. ಬಾಕಿ ಪಾವತಿಗೆ ಸಂಬಂಧಿಸಿದಂತೆ ಬೈಜೂಸ್ ಕಂಪನಿಯ ವಿರುದ್ಧ ದಿವಾಳಿತನದ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಂಪನಿ ಕಾನೂನುಗಳ ನ್ಯಾಯಮಂಡಳಿ(ಎನ್‌ಸಿಎಲ್‌ಟಿ)ಗೆ ಅರ್ಜಿ ಸಲ್ಲಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 28 ರಂದು, ನ್ಯಾಯಾಂಗ ಸದಸ್ಯರಾದ ಕೆ ಬಿಶ್ವಾಲ್ ಮತ್ತು ತಾಂತ್ರಿಕ ಸದಸ್ಯ ಮನೋಜ್ ಕುಮಾರ್ ದುಬೆ ಅವರ ನ್ಯಾಯ ಪೀಠ ಬೈಜೂಸ್ ಸಂಸ್ಥೆಯ ಪ್ರತಿಕ್ರಿಯೆ ಕೇಳಿತು.
ಟಿಡಿಎಸ್ ಹೊರತು ಪಡಿಸಿ 158 ಕೋಟಿ ರೂ. ಮೊತ್ತವನ್ನು ಪಾವತಿಸುವಂತೆ ಈ ವರ್ಷದ ಜನವರಿ 6 ರಂದು ಬೈಜೂಸ್‌ಗೆ ಎನ್‌ಸಿಎಲ್‌ಟಿ ನೋಟಿಸ್ ಕಳುಹಿಸಲಾಗಿದೆ. ಈ ನೋಟಿಸ್‌ಗೆ ಸಂಬಂಧಿಸಿದಂತೆ ನ್ಯಾಯಪೀಠ, ಎರಡು ವಾರಗಳಲ್ಲಿ ಉತ್ತರವನ್ನು ಸಲ್ಲಿಸುವಂತೆ ಕಂಪನಿಗೆ ಸೂಚಿಸಿತು. ಡಿಸೆಂಬರ್ 22 ರಂದು ಮುಂದಿನ ವಿಚಾರಣೆ ನಡೆಯಲಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸಿನ ಚಳಿ ಬಿಡಿಸಲಿದೆಯೇ ಬಿಜೆಪಿ?
ವರದಿಗಳ ಪ್ರಕಾರ, ಭಾರತೀಯ ಕ್ರಿಕೆಟ್ ತಂಡದ ಜೆರ್ಸಿಗಳನ್ನು ಪ್ರಾಯೋಜಿಸುವ ಒಪ್ಪಂದಕ್ಕೆ ಸಂಬಂಧಿಸಿದಂತೆ ಉಲ್ಲೇಖಿಸಲಾದ ಬಾಕಿಗಳನ್ನು ಪಾವತಿಸಬೇಕಾಗಿತ್ತು. 2019 ರಲ್ಲಿ ಬಿಸಿಸಿಐ ಮತ್ತು ಬೈಜೂಸ್ ನಡುವೆ ಪ್ರಾಯೋಜಕತ್ವದ ಒಪ್ಪಂದವಾಗಿತ್ತು.
ಈ ಒಪ್ಪಂದವು 2022 ರಲ್ಲಿ ಕೊನೆಗೊಂಡಿತು. ಆದರೆ ನಂತರ ಅದನ್ನು 2023 ಕ್ಕೆ ವಿಸ್ತರಿಸಲಾಯಿತು. ಆದರೆ 2023ರ ಜನವರಿಯಲ್ಲಿ, ಕಂಪನಿಗೆ ಇತರ ಹಣಕಾಸು ತೊಂದರೆಗಳುಂಟಾಯಿತು. ಈ ಹಿನ್ನಲೆಯಲ್ಲಿ ಬೈಜೂಸ್ ಪ್ರಾಯೋಜಕತ್ವದ ಒಪ್ಪಂದವನ್ನು ಬಿಸಿಸಿಐ ಮತ್ತು ಐಸಿಸಿ ನಡುವೆ ರದ್ದುಗೊಳಿಸಿತು.
ಈ ನಡುವೆ, ದಿವಾಳಿತನದ ಪ್ರಕರಣವನ್ನು ಇತ್ಯರ್ಥಗೊಳಿಸಲು ಬೈಜುಸ್ ಹಾಗೂ ಬಿಸಿಸಿಐ ಜೊತೆ ಎನ್‌ಸಿಎಲ್‌ಟಿ ಮಾತುಕತೆ ನಡೆಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.