ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನ್ಶುಮಾನ್ ಗಾಯಕ್ವಾಡ್ ಅವರ ಕ್ಯಾನ್ಸರ್ ಚಿಕಿತ್ಸೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ 1 ಕೋಟಿ ರೂ. ಪ್ರಕಟಿಸಿದ್ದಾರೆ. ಗಾಯಕ್ವಾಡ್ ಕುಟುಂಬದೊಂದಿಗೆ ಸ್ವತಃ ಮಾತನಾಡಿರುವ ಜಯ್ ಶಾ ಕಾಯಿಲೆಯಿಂದ ಚೇತರಿಸಿಕೊಳ್ಳಲು ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜಯ್ ಶಾ, ಗಾಯಕ್‌ವಾಡ್ ಅವರು ಈ ಕಷ್ಟದ ಸಮಯದಿಂದ ಹೊರಬರಲು ಅವರ ಕುಟುಂಬಕ್ಕೆ ಎಲ್ಲ ರೀತಿಯ ನೆರವಿನ ಜೊತೆ ಆತ್ಮವಿಶ್ವಾಸ ತುಂಬಲಾಗುವುದು ಎಂದು ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಟಿಂ ಇಂಡಿಯಾ ಮಾಜಿ ಕ್ರಿಕೆಟಿಗ ಗಾಯಕ್ವಾಡ್ ಅವರ ಅನಾರೋಗ್ಯದ ಬಗ್ಗೆ ಮೊದಲ ಬಾರಿಗೆ ಮತ್ತೊಬ್ಬ ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ ಮಾತನಾಡಿದ್ದರು. ಲಂಡನ್‌ನಲ್ಲಿ ಅನ್ಶುಮಾನ್ ಗಾಯಕ್ವಾಡ್ ಅವರು ಕಳೆದ ಒಂದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಹಣಕಾಸಿನ ನೆರವು ಅಗತ್ಯವಿದೆ ಎಂದು ತಿಳಿಸಿದ್ದರು.
ಮಾಜಿ ಆಟಗಾರ ದಿಲೀಪ್ ವೆಂಗಸರ್ಕರ್ ಕೂಡ ಬಿಸಿಸಿಐ ಖಜಾಂಜಿ ಅಶೀಸ್ ಸೆಲಾರ್ ಅವರಿಗೆ ಈ ವಿಷಯದ ಬಗ್ಗೆ ತಿಳಿಸಿ ನೆರವಿಗೆ ಮನವಿ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ಚಾಂಪಿಯನ್ಸ್ ಟ್ರೋಫಿಯ ಪಾಕ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಯಾಣ ಅಸಂಭವ; ಹೈಬ್ರಿಡ್ ಮಾದರಿ ಸರಣಿ ಸಾಧ್ಯತೆ
ಇತ್ತೀಚಿಗೆ 1983ರ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕರಾದ ಕಪಿಲ್ ದೇವ್ 71 ವರ್ಷದ ಗಾಯಕ್ವಾಡ್ ಅವರಿಗೆ ಆರ್ಥಿಕ ನೆರವು ನೀಡುವಂತೆ ಬಿಸಿಸಿಐಗೆ ಆಗ್ರಹಿಸಿದ್ದರು.
ಸೂಕ್ತ ನೆರವಿಲ್ಲದೆ ತೊಂದರೆ ಅನುಭವಿಸುತ್ತಿರುವ ಮಾಜಿ ಕ್ರಿಕೆಟಿಗರಿಗೆ ಬಿಸಿಸಿಐ ಸೂಕ್ತ ವ್ಯವಸ್ಥೆ ಒದಗಿಸಬೇಕು. ಬಿಸಿಸಿಐ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿ ಹೊರಹೊಮ್ಮಿದೆ. ಪ್ರಸ್ತುತ ಆಟಗಾರರ ಜೊತೆ ಹಿಂದೆ ಸೇವೆ ಸಲ್ಲಿಸಿರುವ ಆಟಗಾರರತ್ತಲೂ ಗಮನಹರಿಸಬೇಕು ಎಂದು ಹೇಳಿದ್ದರು.
71 ವರ್ಷದ ಗಾಯಕ್ವಾಡ್ ಅವರು 70 ಹಾಗೂ 80ರ ದಶಕದ ಕ್ರಿಕೆಟಿಗರಾಗಿದ್ದು, 40 ಟೆಸ್ಟ್‌ಗಳಲ್ಲಿ 1985 ರನ್ ಪೇರಿಸಿದ್ದಾರೆ. ದ್ವಿಶಕದೊಂದಿಗೆ 2 ಶತಕ ಬಾರಿಸಿದ್ದು, ಅವರ ಅತ್ಯುತ್ತಮ ಸ್ಕೋರ್ 201 ಇದೆ. ಇದರ ಜೊತೆ 15 ಏಕದಿನ ಪಂದ್ಯಗಳನ್ನು ಗಾಯಕ್ವಾಡ್ ಆಡಿದ್ದಾರೆ. ಅಲ್ಲದೆ ಟೀಂ ಇಂಡಿಯಾಕ್ಕೆ ಎರಡು ಬಾರಿ ಹೆಡ್ ಕೋಚ್ ಆಗಿದ್ದರು.
