ರಿಲಯನ್ಸ್ ಇಂಡಿಯಾ ಲಿಮಿಟೆಡ್ (ಆರ್‌ಐಎಲ್) ಜೊತೆ ಪಿಟಿ ಉಷಾ ಅಧ್ಯಕ್ಷರಾಗಿರುವ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ನಡೆಸಿದ ದೋಷಪೂರಿತ ಒಪ್ಪಂದದಿಂದಾಗಿ ಸಂಸ್ಥೆಗೆ ಬರೋಬ್ಬರಿ 24 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಭಾರತದ ನಿಯಂತ್ರಕರು ಮತ್ತು ಮಹಾ ಲೇಖಪಾಲರ (ಸಿಎಜಿ) ವರದಿಯಿಂದ ಬಹಿರಂಗವಾಗಿದೆ.
2022ರ ಆಗಸ್ಟ್ 1ರಂದು ಆರ್‌ಐಎಲ್ ಪರವಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಈ ಒಪ್ಪಂದವು 2022 ಮತ್ತು 2026ರ ಏಷ್ಯನ್ ಗೇಮ್ಸ್, 2022 ಮತ್ತು 2026 ಕಾಮನ್‌ವೆಲ್ತ್ ಗೇಮ್ಸ್, 2024 ಪ್ಯಾರಿಸ್ ಒಲಿಂಪಿಕ್ಸ್ ಮತ್ತು 2028 ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಅಧಿಕೃತ ಪ್ರಧಾನ ಪಾಲುದಾರ ಸ್ಥಾನಮಾನವನ್ನು ರಿಲಯನ್ಸ್ ಸಂಸ್ಥೆಗೆ ನೀಡಿದೆ.
ಅದಾದ ಬಳಿಕ 2023ರ ಡಿಸೆಂಬರ್ 5ರಂದು ಒಪ್ಪಂದದ ಮೊತ್ತವನ್ನು ಹೆಚ್ಚಿಸದೆಯೇ ಒಪ್ಪಂದವನ್ನು ತಿದ್ದುಪಡಿ ಮಾಡಲಾಗಿದೆ. 2026 ಮತ್ತು 2030ರ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟಗಳು, ಹಾಗೆಯೇ 2026 ಮತ್ತು 2030 ಯೂತ್ ಒಲಿಂಪಿಕ್ ಕ್ರೀಡಾಕೂಟಗಳ ಪಾಲುದಾರಿಯನ್ನು ಕೂಡಾ ಒಪ್ಪಂದದಲ್ಲಿ ಸೇರಿಸಲಾಗಿದೆ.
ಇದನ್ನು ಓದಿದ್ದೀರಾ? ಒಪ್ಪಿಗೆಯಿಲ್ಲದೆ ಆಸ್ಪತ್ರೆಯಲ್ಲಿ ಫೋಟೋ ತೆಗೆದಿದ್ದಾರೆ, ಬೆಂಬಲ ಮಾತ್ರ ನೀಡಿಲ್ಲ: ಪಿಟಿ ಉಷಾ ವಿರುದ್ಧ ವಿನೇಶ್ ಕಿಡಿ
ಸಿಎಜಿ ವರದಿಯ ಪ್ರಕಾರ ಇನ್ನೂ ನಾಲ್ಕು ಪಂದ್ಯಗಳ ಪಾಲುದಾರಿಕೆಯನ್ನು ನೀಡಲಾಗಿದ್ದರೂ ಕೂಡಾ ಒಪ್ಪಂದದ ಮೊತ್ತ ಮಾತ್ರ ಬದಲಾಗಿಲ್ಲ, 35 ಕೋಟಿ ರೂಪಾಯಿಯೇ ಆಗಿದೆ. ಪ್ರತಿ ಪಂದ್ಯಕ್ಕೆ ಆರು ಕೋಟಿ ರೂಪಾಯಿಯಂತೆ ಲೆಕ್ಕ ಹಾಕಿದರೂ 59 ರೂಪಾಯಿಗೆ ಒಪ್ಪಂದದ ಮೊತ್ತವನ್ನು ಪರಿಷ್ಕರಣೆ ಮಾಡಬೇಕಾಗಿತ್ತು. ಇದರಿಂದಾಗಿ 24 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸಿಎಜಿ ವರದಿ ಉಲ್ಲೇಖಿಸಿದೆ.
ಇನ್ನು ಒಪ್ಪಂದಕ್ಕೆ ಸಂಬಂಧಿಸಿದಂತೆ ಸಿಎಜಿ ವರದಿ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಐಒಎ ಅಧ್ಯಕ್ಷೆ ಪಿಟಿ ಉಷಾ ಅವರಿಗೆ ತಿಳಿಸಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿಟಿ ಉಷಾ ಅವರ ಕಾರ್ಯನಿರ್ವಾಹಕ ಸಹಾಯಕ ಅಜಯ್ ಕುಮಾರ್ ನಾರಂಗ್, ಮೂಲ ಟೆಂಡರ್‌ನಲ್ಲಿನ ದೋಷದಿಂದಾಗಿ ಮರು ಒಪ್ಪಂದ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಐಒಎ ಖಜಾಂಚಿ ಸಹದೇವ್ ಯಾದವ್ ಅವರು ಒಪ್ಪಂದದ ತಿದ್ದುಪಡಿಯ ಸಮಯದಲ್ಲಿ ಕಾರ್ಯಕಾರಿ ಮಂಡಳಿ ಮತ್ತು ಪ್ರಾಯೋಜಕತ್ವ ಸಮಿತಿಯೊಂದಿಗೆ ಸಮಾಲೋಚನೆ ಸರಿಯಾಗಿ ನಡೆದಿಲ್ಲ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ. ಆರ್‌ಐಎಲ್‌ಗೆ ಲಾಭವಾಗುವಂತೆ ಬದಲಾವಣೆಗಳನ್ನು ಮಾಡಿರುವುದು ಯಾರು ಎಂದು ಪ್ರಶ್ನಿಸಿದ್ದಾರೆ.
