ಕ್ರಿಕೆಟ್ ಪ್ರಿಯರ ಕುತೂಹಲ ಕೆರಳಿಸಿರುವ ಐಸಿಸಿ ಚಾಂಪಿಯನ್ ಟ್ರೋಫಿ ಟೂರ್ನಿಯ 9ನೇ ಆವೃತ್ತಿಗೆ ಇಂದು ಚಾಲನೆ ಸಿಗಲಿದೆ. ಮಿನಿ ವಿಶ್ವಕಪ್ ಎಂದೆ ಕರೆಯಲ್ಪಡುವ ಈ ಪಂದ್ಯಾವಳಿಯನ್ನು ಸುಮಾರು ಎಂಟು ವರ್ಷಗಳ ನಂತರ ಆರಂಭಿಸಲಾಗುತ್ತಿದೆ.
ಐಸಿಸಿ ಈ ಟೂರ್ನಿಯನ್ನು 1998ರಲ್ಲಿ ಪ್ರಾರಂಭಿಸಿತು. ಚಾಂಪಿಯನ್ಸ್ ಟ್ರೋಫಿಯನ್ನು ಕೊನೆಯ ಬಾರಿಗೆ 2017ರಲ್ಲಿ ಆಡಲಾಗಿತ್ತು. ಆಗ ಪಾಕಿಸ್ತಾನ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಅದೇ ತಂಡ ಈ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುತ್ತಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಈ ಪಂದ್ಯವು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ, ಪಂದ್ಯ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ.
‘ಎ’ ಗುಂಪಿನಲ್ಲಿ ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ, ಬಾಂಗ್ಲಾದೇಶ ಇದ್ದರೆ, ‘ಬಿ’ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳಿವೆ. ಭಾರತ ತನ್ನ ಮೊದಲ ಪಂದ್ಯವನ್ನು ದುಬೈನಲ್ಲಿ ಫೆ.20ರಂದು ಬಾಂಗ್ಲಾದೇಶದ ವಿರುದ್ಧ ಆಡಲಿದೆ.
ಪಾಕಿಸ್ತಾನ ಸಂಭಾವ್ಯ ತಂಡ: ಫಖರ್ ಜಮಾನ್, ಬಾಬರ್ ಅಜಮ್, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ನಾಯಕ ಮತ್ತು ವಿಕೆಟ್ ಕೀಪರ್), ಸಲ್ಮಾನ್ ಆಘಾ, ತಯ್ಯಬ್ ತಾಹಿರ್, ಖುಶ್ದಿಲ್ ಶಾ, ಶಾಹೀನ್ ಅಫ್ರಿದಿ, ನಸೀಮ್ ಶಾ, ಅಬ್ರಾರ್ ಅಹ್ಮದ್ ಮತ್ತು ಹ್ಯಾರಿಸ್ ರೌಫ್.
ನ್ಯೂಜಿಲೆಂಡ್ ಸಂಭಾವ್ಯ ತಂಡ: ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮ್ಯಾಟ್ ಹೆನ್ರಿ, ಜಾಕೋಬ್ ಡಫಿ ಮತ್ತು ವಿಲ್ ಒ’ರೂರ್ಕ್.
ನೇರ ಪ್ರಸಾರ:
ಸ್ಟಾರ್ ಸ್ಫೋಟ್ಸ್ ವಾಹಿನಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ನೇರ ಪ್ರಸಾರ ಮಾಡಲಿದೆ. ಜಿಯೋ ಹಾಟ್‌ಸ್ಟಾರ್ (ಆಪ್) ಚಾಂಪಿಯನ್ಸ್ ಟ್ರೋಫಿ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಮಾಡಲಿದೆ.
ಎಲ್ಲ ಪಂದ್ಯಗಳ ಸಮಯ ಆರಂಭ: ಮಧ್ಯಾಹ್ನ 2.30ಕ್ಕೆ
ಟೀಂ ಇಂಡಿಯಾದ ಮೂವರಿಗೆ ಮಹತ್ವದ ಸರಣಿ
ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಏಕದಿನ ಸರಣಿ ಟೀಂ ಇಂಡಿಯಾಗೆ ಮಹತ್ವದ ಸರಣಿಯಾಗಲಿದೆ. ಮೂವರು ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ಕೊನೆಯ ಟೂರ್ನಿಯಾಗುವ ಸಾಧ್ಯತೆಗಳಿವೆ. ಕಳೆದ ವರ್ಷದ ಅಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ – ಗವಾಸ್ಕರ್ ಟೆಸ್ಟ್ ಟ್ರೋಫಿಯಲ್ಲಿ ಭಾರತ ಹೀನಾಯ ಸೋಲು ಕಂಡ ಬಳಿಕ ರೋಹಿತ್ ಟೆಸ್ಟ್, ಏಕದಿನ ಕ್ರಿಕೆಟ್‌ಗೂ ವಿದಾಯ ಹೇಳುವುದಕ್ಕೆ ಮುಂದಾಗಿದ್ದರು.
ಆದರೆ ಬಿಸಿಸಿಐ ಒತ್ತಾಯದ ಮೇರೆಗೆ ನಿವೃತ್ತಿ ಸಮಯವನ್ನು ಮುಂದಕ್ಕೆ ಹಾಕಿದ್ದಾರೆ ಎಂದು ವರದಿಯಾಗಿದೆ. 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಟ್ರೋಫಿ ಎತ್ತಿ ಹಿಡಿದಾಗಲೂ ಈ ಮೂವರು ಆಟಗಾರರು ಟೂರ್ನಿಯಲ್ಲಿದ್ದರು. ಈ ಬಾರಿ ಟ್ರೋಫಿ ಗೆದ್ದು ಗೆಲುವಿನ ವಿದಾಯ ಹೇಳುವರೇ ಎಂಬುದನ್ನು ಕಾದುನೋಡಬೇಕಿದೆ.
ಫಾರ್ಮ್ ಕಂಡುಕೊಳ್ಳದ ಕೊಹ್ಲಿ, ರೋಹಿತ್
2024ರ ಟಿ20 ವಿಶ್ವಕಪ್ ಟೂರ್ನಿ ಟೀಂ ಇಂಡಿಯಾ ಗೆದ್ದ ಬಳಿಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಆದರೆ ಏಕದಿನ, ಟೆಸ್ಟ್ ಮಾದರಿಯ ಕ್ರಿಕೆಟ್‌ನಲ್ಲಿ ಮುಂದುವರೆದಿದ್ದರು. ರವೀಂದ್ರ ಜಡೇಜಾ ಎಂದಿನಂತೆ ತಮ್ಮ ಬೌಲಿಂಗ್, ಬ್ಯಾಟಿಂಗ್‌ನಲ್ಲಿ ಸಾಮರ್ಥ್ಯ ಪ್ರದರ್ಶನ ತೋರಿದ್ದಾರೆ. ಆದರೆ ಕಳೆದ ವರ್ಷಾಂತ್ಯದಲ್ಲಿ ಆಸೀಸ್ ವಿರುದ್ಧ ನಡೆದ ಬಾರ್ಡರ್ – ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕೊಹ್ಲಿ ಬಳಿಕ ಕಳಪೆ ಫಾರ್ಮ್ ಮುಂದುವರಿಸಿದರು. ರಣಜಿ ಕ್ರಿಕೆಟ್‌ನಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದರು.
ಈ ಸುದ್ದಿ ಓದಿದ್ದೀರಾ? ಐಸಿಸಿ ಚಾಂಪಿಯನ್ಸ್ ಟ್ರೋಫಿ | 8 ತಂಡಗಳು, 15 ಪಂದ್ಯಗಳು: ವಿವರ ಇಲ್ಲಿದೆ ನೋಡಿ
ಮತ್ತೊಂದೆಡೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಿಂದ ನಿರಂತರ ಕಳಪೆ ಫಾರ್ಮ್ ಮುಂದುವರಿಸಿದ್ದರು. ಆದರೆ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದರು, ಅದೇ ರೀತಿ ಸರಣಿಯ 3ನೇ ಪಂದ್ಯದಲ್ಲಿ ಕೊಹ್ಲಿ ಕೂಡ ಅರ್ಧಶತಕ ಸ್ಫೋಟಿಸಿ ಟೀಕೆಗಳಿಗೆ ಉತ್ತರ ನೀಡಿದ್ದರು. ಸದ್ಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಅದೇ ಫಾರ್ಮ್ ಕಂಡುಕೊಳ್ಳುತ್ತಾರೆಯೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.
ಟೀಂ ಇಂಡಿಯಾ ಕೋಚ್‌ಗೂ ಮಹತ್ವದ ಸರಣಿ
2024ರ ಟಿ20 ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಂಡರು. ಅವರು ಮುಖ್ಯ ಕೋಚ್ ಆದ ನಂತರ ಭಾರತ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿತ್ತು. ಶ್ರೀಲಂಕಾ ವಿರುದ್ಧ ಏಕದಿನ ಸರಣಿ, ನ್ಯೂಜಿಲೆಂಡ್, ಆಸೀಸ್ ವಿರುದ್ಧದ ಸರಣಿಗಳಲ್ಲಿ ಸೋಲು ಕಂಡಿತ್ತು. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಹಾಗೂ ಏಕದಿನ ಸರಣಿಯನ್ನು ಗೆಲ್ಲುವ ಮೂಲಕ ಒಂದಿಷ್ಟು ವಿಶ್ವಾಸ ಮೂಡಿಸಿದೆ. ಗೌತಮ್ ಗಂಭೀರ್ ನೇತೃತ್ವದಲ್ಲಿ ಭಾರತ ತಂಡ ಎದುರಿಸುತ್ತಿರುವ ಮೊದಲ ಐಸಿಸಿ ಟೂರ್ನಿ ಇದಾಗಿದ್ದು, ಅವರ ಕೋಚಿಂಗ್ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
