2017ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಅಂತಿಮ ಪಂದ್ಯದಲ್ಲಿ ಪಾಕ್ ವಿರುದ್ಧ ಸೋಲು ಕಂಡಿದ್ದ ಭಾರತ ಭಾನುವಾರ (ಫೆ.23) ನಡೆಯುವ ಪಂದ್ಯದಲ್ಲಿ ಗೆದ್ದು ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ಪಂದ್ಯ ಭಾನುವಾರ ನಡೆಯಲಿದೆ. ಗುರುವಾರ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಭಾರತ ತಂಡ ಆತ್ಮವಿಶ್ವಾಸದಲ್ಲಿದೆ. ಗೆಲ್ಲಲು ಯೋಜನೆ ರೂಪಿಸಿಕೊಂಡಿದ್ದು, ಈ ಹಿನ್ನೆಲೆ ತಂಡದಲ್ಲಿ ಪ್ರಮುಖ ಬೌಲರ್ ಬದಲಾವಣೆ ಮಾಡುವ ಪ್ರಯೋಗಕ್ಕೆ ಮುಂದಾಗಿದೆ.
ಸ್ಟಾರ್ ಸ್ಪಿನ್ ಬೌಲರ್ ಕುಲ್ದೀಪ್ ಯಾದವ್ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ತವರಿನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ 2 ಪಂದ್ಯಗಳನ್ನು ಆಡಿದ್ದ ಕುಲ್ದೀಪ್ ಕೇವಲ 2 ವಿಕೆಟ್ ಪಡೆಯವಲ್ಲಿ ಮಾತ್ರ ಯಶಸ್ವಿ ಆಗಿದ್ದರು. ಅಲ್ಲದೇ ಬಾಂಗ್ಲಾ ವಿರುದ್ಧ ಮೊದಲ ಪಂದ್ಯದಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು.
ಪಾಕ್ ವಿರುದ್ಧ ಪಂದ್ಯ ಗೆಲ್ಲಲೇಬೇಕು ಎಂಬ ಯೋಜನೆ ರೂಪಿಸಿರುವ ಭಾರತ ಕುಲ್ದೀಪ್ ಬದಲಿಗೆ ಅವರ ಸ್ಥಾನಕ್ಕೆ ವರುಣ್ ಚಕ್ರವರ್ತಿ ಅವರನ್ನು ಕರೆತರಲು ಪ್ಲಾನ್ ರೂಪಿಸಿದೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ವರುಣ್ 5 ಪಂದ್ಯಗಳಿಂದ 14 ವಿಕೆಟ್ ಪಡೆದಿದ್ದರು. ನಂತರ ಏರಡನೇ ಏಕದಿನ ಪಂದ್ಯದಲ್ಲೂ ಬೌಲಿಂಗ್ ಮಾಡಿ 1 ವಿಕೆಟ್ ಉರುಳಿಸಿದ್ದರು.
ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿರುವ ರೋಹಿತ್ ಸೈನ್ಯ ಇದೀಗ ಪಾಕ್ ವಿರುದ್ಧದ ಪಂದ್ಯದಲ್ಲೂ ಅದೇ ಫಾರ್ಮ್ ಮುಂದುವರಿಸಿ ಗೆಲುವು ಸಾಧಿಸಲು ಯೋಜನೆ ರೂಪಿಸಿಕೊಂಡಿದೆ. ಆದರೆ, ಈ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಲು ಭಾರತ ನಿರ್ಧರಿಸಿದೆ. ಬೌಲಿಂಗ್ ಸ್ವಲ್ಪ ಬದಲಾವಣೆ ಇರಲಿದೆ.
ಇತಿಹಾಸದತ್ತ ತಿರುಗಿ ನೋಡಿದಾಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಟ್ಟು ಐದು ಬಾರಿ ಮುಖಾಮುಖಿಯಾಗಿವೆ. ಆದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಎರಡು ಬಾರಿಯ ಚಾಂಪಿಯನ್ (2002, 2013) ಭಾರತದ ವಿರುದ್ಧ ಪಾಕಿಸ್ತಾನ ಮೇಲುಗೈ ಸಾಧಿಸಿದ್ದು, 3-2ರ ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಸಂಭಾವ್ಯ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆ ಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ ಅಥವಾ ಕುಲ್ದೀಪ್ ಯಾದವ್.