ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ – ಗವಾಸ್ಕರ್ ಟ್ರೋಫಿ ಸೋಲಿನ ನಂತರ ಭಾರತ ತಂಡ ಟೆಸ್ಟ್ ನಾಯಕತ್ವ ಬದಲಾಗುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮುಂದಿನ ಐದಾರು ತಿಂಗಳಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯಲಿದೆ. ಆ ಸರಣಿಯಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸುವ ಸಾಧ್ಯತೆಗಳಿಲ್ಲ. ಇದೀಗ, ವಿರಾಟ್ ಕೊಹ್ಲಿ ಅವರೇ ಮತ್ತೆ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ನಾಯಕರಾಗಬಹುದು ಎಂದು ಹೇಳಲಾಗುತ್ತಿದೆ.
ರೋಹಿತ್ ಶರ್ಮಾ ನಾಯಕತ್ವ ತೊರೆದರೆ, ಸದ್ಯ ತಂಡದಲ್ಲಿರುವ ಉಳಿದ ಆಟಗಾರರಿಗೆ ನಾಯಕತ್ವವನ್ನು ನಿಭಾಯಿಸುವ ಸಾಮರ್ಥ್ಯವಿಲ್ಲ. ಅವರೆಲ್ಲರೂ ‘ಜೂನಿಯರ್’ಗಳಾಗಿದ್ದಾರೆ. ಅವರಾರು ನಾಯಕತ್ವ ಪಡೆಯಲು ಸಿದ್ದರಿಲ್ಲ. ಆಟದ ಒತ್ತಡದಿಂದಾಗಿ ಜಸ್ಪ್ರೀತ್ ಬುಮ್ರಾ ಅವರನ್ನು ನಾಯಕತ್ವಕ್ಕೆ ಪರಿಗಣಿಸಲಾಗುತ್ತಿಲ್ಲ ಎಂದು ಹೇಳಲಾಗಿದೆ.
ಹೀಗಾಗಿ, ಕೊಹ್ಲಿಯನ್ನು ಭಾರತೀಯ ಟೆಸ್ಟ್ ತಂಡದ ನಾಯಕರನ್ನಾಗಿ ನೇಮಿಸಲು ಕೋಚ್ ಗೌತಮ್ ಗಂಭೀರ್ ಚರ್ಚೆ ನಡೆಸಿದ್ದಾರೆ. ಕೊಹ್ಲಿ ಜೊತೆಗೆ ಮಾತನಾಡಿದ್ದಾರೆ. ಆದರೆ, ಕೊಹ್ಲಿ ತಮ್ಮ ನಿಲುವು ತಿಳಿಸಿಲ್ಲ ಎಂದು ವರದಿಯಾಗಿದೆ.
“ವಿರಾಟ್ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಉತ್ತಮವಾಗಿ ಪ್ರದರ್ಶನ ನೀಡಿದೆ. ವಿಶೇಷವಾಗಿ ವಿದೇಶಿ ಮೈದಾನದಲ್ಲಿಯೂ ಅತ್ಯುತ್ತಮವಾಗಿ ಆಟವಾಡಿದೆ. ತಂಡಕ್ಕೆ ಕೊಹ್ಲಿಯಂತಹ ನಾಯಕನ ಅಗತ್ಯವಿದೆ. ಮುಂದಿನ ಟೆಸ್ಟ್ ಸರಣಿಗಳಿಗೆ ಹೊಸ ನಾಯಕರಾಗಲು ಆಟಗಾರರು ಸಜ್ಜಾಗಿಲ್ಲದ ಕಾರಣ, ಕೊಹ್ಲಿ ಸೂಕ್ತ ಆಯ್ಕೆಯಾಗಿದ್ದಾರೆ” ಎಂದು ಗಂಭೀರ್ ಹೇಳಿದ್ದಾರೆ ಎನ್ನಲಾಗಿದೆ.