ಅಜಿಂಕ್ಯ ರಹಾನೆ, ಶಿವಂ ದುಬೆ, ಡೇವೋನ್ ಕಾನ್ವೇ ಹಾಗೂ ರುತುರಾಜ್ ಗಾಯಕ್ವಾಡ್ ಅವರ ಸ್ಪೋಟಕ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಕರಾರುವಕ್ಕ್ ದಾಳಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 49 ರನ್‌ಗಳಿಂದ ಜಯಗಳಿಸಿತು.
ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಐಪಿಎಲ್ 16ನೇ ಆವೃತ್ತಿಯ 33ನೇ ಪಂದ್ಯದಲ್ಲಿ ಸಿಎಸ್‌ಕೆ ನೀಡಿದ್ದ 235 ರನ್‌ಗಳ ಸವಾಲನ್ನು ಬೆನ್ನಟ್ಟಿದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 53 ರನ್‌ಗಳಷ್ಟೆ ಗಳಿಸಲು ಶಕ್ತವಾಯಿತು. ಜೇಸನ್ ರಾಯ್ ಹಾಗೂ ರಿಂಕು ಸಿಂಗ್ ಅಬ್ಬರಿಸಿದರೂ ಗುರಿ ಮುಟ್ಟಲಾಗಲಿಲ್ಲ. ಇದರೊಂದಿಗೆ ಸಿಎಸ್‌ಕೆ ಟೂರ್ನಿಯಲ್ಲಿ 5ನೇ ಗೆಲುವು ದಾಖಲಿಸಿದರೆ, ಕೆಕೆಆರ್ ಸತತ ನಾಲ್ಕನೇ ಸೋಲು ಕಂಡಿತು.
ಜೇಸನ್ ರಾಯ್ ಕೇವಲ 26 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಯೊಂದಿಗೆ 61 ರನ್ ಚಚ್ಚಿದರು. ರಿಂಕು ಸಿಂಗ್ 32 ಚೆಂಡುಗಳಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿಯೊಂದಿಗೆ ಅಜೇಯ 53 ರನ್ ಪೇರಿಸಿದರು. ಉಳಿದಂತೆ ಇತರ ಆಟಗಾರ್ಯಾರು ಉತ್ತಮ ಪ್ರದರ್ಶನ ತೋರಲಿಲ್ಲ.
ಸಿಎಸ್‌ಕೆ ಪರ ತುಷಾರ್ ದೇಶಪಾಂಡೆ 43/2, ಮಹೀಶ್ ತೀಕ್ಷಣಾ 32/2 ವಿಕೆಟ್ ಪಡೆದು ಯಶಸ್ವಿ ಬೌಲರ್‌ಗಳೆನಿಸಿದರು
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಮೊದಲ ಓವರ್‌ನಿಂದಲೇ ಬೌಂಡರಿ, ಸಿಕ್ಸರ್ ಬಾರಿಸತೊಡಗಿದರು. ಆರಂಭಿಕರಾಗಿ ಕಣಕ್ಕಿಳಿದ ಋತುರಾಜ್ ಗಾಯಕ್ವಾಡ್ ಹಾಗೂ ಡೆವೋನ್ ಕಾನ್ವೆ ಜೋಡಿ ಮೊದಲ ವಿಕೆಟ್‌ಗೆ 73 ರನ್‌ಗಳ ಜೊತೆಯಾಟ ನೀಡಿ ಬೇರ್ಪಟ್ಟಿತು. ಋತುರಾಜ್ 20 ಎಸೆತಗಳಲ್ಲಿ 35 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ಅರ್ಧ ಶಥಕ ಸಿಡಿಸಿದ ಕಾನ್ವೆ 40 ಎಸೆತಗಳಲ್ಲಿ 56 ರನ್‌ಗಳಿಸಿ ಔಟಾದರು. ನಂತರ ಜೊತೆಯಾಗಿದ್ದು ರಹಾನೆ ಹಾಗೂ ದುಬೆ ಜೋಡಿ.
ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಶಿವಂ ದುಬೆ ಕೇವಲ 21 ಎಸೆತಗಳಲ್ಲಿ 5 ಸಿಕ್ಸರ್ 2 ಬೌಂಡರಿಯೊಂದಿಗೆ 50 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಆದರೆ ಅಜಿಂಕ್ಯಾ ರಹಾನೆ ಕೊನೆಯವರೆಗೂ ವಿಕೆಟ್ ಕಳೆದುಕೊಳ್ಳದೆ ಅಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 29 ಎಸೆತಗಳಲ್ಲಿ ಅವರು 71 ರನ್ ಬಾರಿಸಿ ಅಜೇಯವಾಗುಳಿದರು. ಇವರ ಅಮೋಘ ಆಟದಲ್ಲಿ 5 ಸಿಕ್ಸರ್ ಹಾಗೂ 6 ಬೌಂಡರಿಗಳಿದ್ದವು.
ಇನ್ನು ಕೊನೆಯ ಕ್ಷಣದಲ್ಲಿ ರವೀಂದ್ರ ಜಡೇಜಾ 8 ಎಸೆತಗಳನ್ನು ಎದುರಿಸಿ 18 ರನ್ ಬಾರಿಸಿ ವಿಕೆಟ್ ಕಳೆದುಕೊಂಡರು. ಎಂಎಸ್ ಧೋನಿ 2 ರನ್‌ಗಳಿಸಿ ಅಜೇಯವಾಗುಳಿದರು. ಈ ಮೂಲಕ ಸಿಎಸ್‌ಕೆ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 235 ರನ್‌ಗಳಿಸಿದೆ.
ಇದು ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ದಾಖಲಿಸಿದ 3ನೇ ಅತೀದೊಡ್ಡ ಮೊತ್ತವಾಗಿದೆ. 2010ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ 5 ವಿಕೆಟ್ ಕಳೆದುಕೊಂಡು 246 ರನ್ ಸಿಡಿಸಿತ್ತು.