ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 20 ರನ್‌ಗಳ ಅಮೋಘ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟರ್ ಮಹೇಂದ್ರ ಸಿಂಗ್ ಧೋನಿ ಕೇವಲ 4 ಎಸೆತಗಳಲ್ಲಿ ಮೂರು ಸಿಕ್ಸರ್ ಸಹಿತ 20 ರನ್ ಗಳಿಸಿದ್ದು, ಚೆನ್ನೈ ಗೆಲುವಿಗೆ ಪ್ರಮುಖ ಕಾರಣವಾಯಿತು.
ಧೋನಿ 500 ಸ್ಟ್ರೈಕ್ ರೇಟ್‌ನಲ್ಲಿ ಮೂರು ಸಿಕ್ಸರ್ ಸಹಿತ 20 ರನ್ ಬಾರಿಸಿದರು. ಬಿರುಸಿನ ಬ್ಯಾಟಿಂಗ್ ಮೂಲಕ ಸಿಎಸ್‌ಕೆ ಮಾಜಿ ನಾಯಕ ಚೆನ್ನೈ ಪರ 5000 ರನ್ ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿ ವೈಯಕ್ತಿಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಮೂಲಕ ಸುರೇಶ್ ರೈನಾ ನಂತರ ಸಿಎಸ್‌ಕೆ ಪರ ಈ ದಾಖಲೆ ಮಾಡಿದ 2ನೇ ಬ್ಯಾಟರ್ ಎಂಬ ಮೈಲಿಗಲ್ಲು ತಲುಪಿದ್ದಾರೆ.
ಮೈದಾನಕ್ಕೆ ಬಂದು ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಧೋನಿ ಈ ಮೈಲಿಗಲ್ಲನ್ನು ದಾಟಿದರು. ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಟಿ20 ಸೇರಿದಂತೆ ಚೆನ್ನೈ ಪರ 250 ಪಂದ್ಯಗಳ 218 ಇನಿಂಗ್ಸ್‌ಗಳಲ್ಲಿ ಧೋನಿ 5016 ರನ್ ಗಳಿಸಿದ್ದಾರೆ. ಶತಕ ಗಳಿಸದಿದ್ದರೂ, 23 ಅರ್ಧಶತಕ ಗಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಯಲಾಗುತ್ತಿರುವ ಸುಳ್ಳುಗಳು, ಬೆತ್ತಲಾಗುತ್ತಿರುವ ಬಿಜೆಪಿ
ಧೋನಿ ಚೆನ್ನೈ ಪರ 348 ಬೌಂಡರಿ, 241 ಸಿಕ್ಸರ್ ಬಾರಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡಿದ್ದಾರೆ. ಧೋನಿ 256 ಐಪಿಎಲ್ ಪಂದ್ಯಗಳಲ್ಲಿ 222 ಇನಿಂಗ್ಸ್‌ಗಳಲ್ಲಿ 5141 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಧೋನಿ ಎರಡೂ ತಂಡಗಳಿಗೆ ಒಟ್ಟು 353 ಬೌಂಡರಿ, 245 ಸಿಕ್ಸರ್ ಪೇರಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಚಾಂಪಿಯನ್ಸ್ ಲೀಗ್ ಟಿ20ಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಸುರೇಶ್ ರೈನಾ ಅತಿ ಹೆಚ್ಚು ರನ್ ಗಳಿಸಿದ್ದು, ಧೋನಿಗಿಂತ ಮೊದಲ ಸ್ಥಾನದಲ್ಲಿದ್ದಾರೆ. ಚೆನ್ನೈ ಪರ 200 ಪಂದ್ಯಗಳಲ್ಲಿ 195 ಇನ್ನಿಂಗ್ಸ್‌ಗಳಲ್ಲಿ 5529 ರನ್ ಗಳಿಸಿದ್ದಾರೆ. ಸಿಎಸ್‌ಕೆ ಪರ ರೈನಾ 2 ಶತಕ, 38 ಅರ್ಧಶತಕ ಬಾರಿಸಿದ್ದಾರೆ. ಚೆನ್ನೈ ಪರ ರೈನಾ 494 ಬೌಂಡರಿ, 219 ಸಿಕ್ಸರ್ ಸ್ಫೋಟಿಸಿದ್ದಾರೆ.
ಸುರೇಶ್ ರೈನಾ ಮತ್ತು ಧೋನಿ ನಂತರ ಚೆನ್ನೈ ಪರ ಅತಿ ಹೆಚ್ಚು ರನ್ ಗಳಿಸಿದ 3ನೇ ಆಟಗಾರ ಆರ್‌ಸಿಬಿಯ ನಾಯಕ ಫಾಫ್ ಡು ಪ್ಲೆಸಿಸ್. 100 ಪಂದ್ಯಗಳ 93 ಇನಿಂಗ್ಸ್‌ಗಳಲ್ಲಿ ಒಟ್ಟು 2932 ರನ್ ಗಳಿಸಿದ್ದಾರೆ. ಫಾಫ್ ಯಾವುದೇ ಶತಕ ಗಳಿಸದಿದ್ದರೂ 21 ಅರ್ಧಶತಕ ಗಳಿಸಿದ್ದಾರೆ.
