ಸೇಂಟ್ ವಿನ್ಸೆಂಟ್ ಕ್ರೀಡಾಂಗಣದಲ್ಲಿ ಇಂದು ನಡೆದ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಬಾಂಗ್ಲಾದೇಶ ಸೋಲು ಅನುಭವಿಸಿ ಆಸೀಸ್ ವಿಶ್ವಕಪ್ನಿಂದ ನಿರ್ಗಮಿಸಿದ ನಂತರ ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ 37 ವರ್ಷದ ಡೇವಿಡ್ ವಾರ್ನರ್ ತಮ್ಮ 15 ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.
ಭಾರತದ ವಿರುದ್ಧ ಜೂ.24 ರಂದು ನಡೆದ ಪಂದ್ಯದಲ್ಲಿ 6 ರನ್ ಗಳಿಸಿದ್ದು ಡೇವಿಡ್ ವಾರ್ನರ್ ಅವರ ಕೊನೆಯ ಪಂದ್ಯವಾಗಿದೆ. 6 ರನ್ ಗಳಿಸಿದ ವಾರ್ನರ್ ಅರ್ಷದೀಪ್ ಬೌಲಿಂಗ್ನಲ್ಲಿ ಸೂರ್ಯಕುಮಾರ್ ಯಾದವ್ಗೆ ಕ್ಯಾಚ್ ನೀಡಿ ಔಟಾಗಿದ್ದರು.
ಡೇವಿಡ್ ವಾರ್ನರ್ ಬಗ್ಗೆ ಮಾತನಾಡಿದ ಆಸೀಸ್ನ ಆರಂಭಿಕ ಆಟಗಾರ ಟ್ರಾವಿಸ್ ಹೆಡ್, ವಾರ್ನರ್ ಅವರು ಮುಂದೆ ಮತ್ತೊಂದು ಪಂದ್ಯವಾಡುತ್ತಿಲ್ಲವಾದ ಕಾರಣ ಬೇಸರವಾಗುತ್ತಿದೆ. ಆಸ್ಟ್ರೇಲಿಯಾಕ್ಕೆ ಎಲ್ಲ ಮಾದರಿಯ ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ತುಂಬಾ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಾಡಾದಿಂದ ಬಜರಂಗ್ ಪುನಿಯಾಗೆ ಮತ್ತೆ ಅಮಾನತು ಶಿಕ್ಷೆ
ಆಸೀಸ್ ಮತ್ತೊಬ್ಬ ಆಟಗಾರ ಜೋಷ್ ಹ್ಯಾಜಲ್ವುಡ್ ಮಾತನಾಡಿ, ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಅದ್ಭುತವಾಗಿ ಆಟವಾಡಿರುವ ಅವರನ್ನು ನಾವು ಮೈದಾನದಲ್ಲಿ ಹಾಗೂ ತಂಡದೊಳಗೆ ಕಳೆದುಕೊಳ್ಳುತ್ತಿದ್ದೇವೆ. ಅವರಿಲ್ಲದೆ ಕ್ರಿಕೆಟ್ ಜೀವನವಿಲ್ಲ. ಹಲವು ವರ್ಷಗಳ ಕಾಲ ತಂಡದಲ್ಲಿ ಆಡಿದ ಆಟಗಾರನನ್ನು ಕಳೆದುಕೊಳ್ಳುವುದು ನೋವಿನ ಸಂಗತಿಯಾಗಿದೆ ಎಂದು ತಿಳಿಸಿದರು.
ಬಲಗೈ ಬ್ಯಾಟರ್ ಡೇವಿಡ್ ವಾರ್ನರ್ ಅವರು 112 ಟೆಸ್ಟ್ಗಳಲ್ಲಿ 8786 ರನ್, 161 ಏಕದಿನ ಪಂದ್ಯಗಳಲ್ಲಿ 6932 ರನ್ ಹಾಗೂ 110 ಟಿ20 ಪಂದ್ಯಗಳಲ್ಲಿ 3277 ರನ್ ಪೇರಿಸಿದ್ದಾರೆ. ಏಕದಿನದಲ್ಲಿ 22 ಶತಕ, 33 ಅರ್ಧ ಶತಕ, ಟೆಸ್ಟ್ನಲ್ಲಿ 26 ಶತಕ, 37 ಅರ್ಧ ಶತಕ ಹಾಗೂ ಟಿ20ಯಲ್ಲಿ ಒಂದು ಶತಕ ಹಾಗೂ 28 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್ನಲ್ಲಿ ಇವರ ಅತ್ಯುತ್ತಮ ಸ್ಕೋರ್ 335 ಇದ್ದರೆ, ಏಕದಿನದಲ್ಲಿ 179 ಹಾಗೂ ಟಿ20ಯಲ್ಲಿ 100 ಅತೀ ಹೆಚ್ಚಿನ ವೈಯಕ್ತಿಕ ಸ್ಕೋರ್ ಆಗಿದೆ.
ಡೇವಿಡ್ ವಾರ್ನರ್ 2015 ಹಾಗೂ 2023ರಲ್ಲಿ ಏಕದಿನ ವಿಶ್ವಕಪ್ ಹಾಗೂ 2021ರಲ್ಲಿ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಜಯಿಸಿದಾಗ ತಂಡದ ಸದಸ್ಯರಾಗಿದ್ದರು.
