ಮಿಚೆಲ್ ಸ್ಟಾರ್ಕ್ ಮ್ಯಾಜಿಕ್ ಬೌಲಿಂಗ್ ನೆರವಿನಿಂದ ಸೂಪರ್ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು. ಆರಂಭಿಕ ಆಟಗಾರ ಜೇಕ್ ಫ್ರೇಸರ್ ಮೆಕ್ಗುರ್ಕ್ 9 ರನ್ ಗಳಿಸಿದಾಗ ಜೈಸ್ವಾಲ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಅಭಿಷೇಕ್ ಪೊರೆಲ್ 1 ಸಿಕ್ಸರ್, 5 ಬೌಂಡರಿಗಳೊಂದಿಗೆ 37 ಎಸೆತಗಳಲ್ಲಿ 49 ರನ್ ಗಳಿಸಿದಾಗ ಹಸರಂಗ ಬೌಲಿಂಗ್ ನಲ್ಲಿ ಪರಾಗ್ ಗೆ ಕ್ಯಾಚ್ ನೀಡುವ ಮೂಲಕ ಅರ್ಧ ಶತಕದಿಂದ ವಂಚಿತರಾದರು. ಕರುಣ್ ನಾಯರ್ ಶೂನ್ಯಕ್ಕೆ ರನ್ ಔಟಾಗುವ ಮೂಲಕ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.
ನಂತರ ಬಂದ ಕೆ ಎಲ್ ರಾಹಲ್ ಎರಡು ಸಿಕ್ಸರ್,ಎರಡು ಬೌಂಡರಿಗಳೊಂದಿಗೆ 32 ಎಸೆತಗಳಲ್ಲಿ 38 ಮತ್ತು ನಾಯಕ ಅಕ್ಸರ್ ಪಟೇಲ್ 34 ರನ್ ಗಳಿಸಿದರು. ನಂತರ ತ್ರಿಸ್ಟನ್ ಸ್ಟುಬ್ಸ್ ಹಾಗೂ ಅಶುತೋಷ್ ಶರ್ಮಾ ಔಟಾಗದೆ ಕ್ರಮವಾಗಿ 34 ಮತ್ತು 15 ರನ್ ಗಳಿಸುವುದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 188 ರನ್ ಕಲೆ ಹಾಕಿತು. ರಾಜಸ್ಥಾನ ರಾಯಲ್ಸ್ ಪರ ಜೋಪ್ರಾ ಅರ್ಚರ್ 2 ವಿಕೆಟ್ ಪಡೆದರೆ, ಮಹೀಶ್ ತೀಕ್ಷ್ಣ ಮತ್ತು ವನಿದು ಹಸರಂಗ ತಲಾ ಒಂದೊಂದು ವಿಕೆಟ್ ಪಡೆದರು.
ಈ ಸುದ್ದಿ ಓದಿದ್ದೀರಾ? IPL 2025: ಬ್ಯಾಟರ್‌ಗಳು ಅಳತೆ ಮೀರಿದ ಬ್ಯಾಟ್ ಬಳಸುತ್ತಿದ್ದಾರೆಯೇ? ಅಂಪೈರ್‌ಗಳು ಪರಿಶೀಲಿಸುವುದೇಕೆ?
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 189 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ರಾಜಸ್ಥಾನ ರಾಯಲ್ಸ್ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 4 ಸಿಕ್ಸರ್, 3 ಬೌಂಡರಿಗಳೊಂದಿಗೆ 37 ಎಸೆತಗಳಲ್ಲಿ 51 ರನ್ ಗಳಿಸಿ, ಕುಲದೀಪ್ ಯಾದವ್ ಬೌಲಿಂಗ್ ನಲ್ಲಿ ಔಟಾದರು. ನಾಯಕ ಸಂಜು ಸ್ಯಾಮ್ಸನ್ 31 ರನ್ ಗಳಿಸಿದಾಗ ಗಾಯಗೊಂಡು ಅರ್ಧಕ್ಕೆ ಪಂದ್ಯದಿಂದ ಹೊರಗೆ ಹೋದರು. ಬಳಿಕ ಬಂದ ರಿಯಾನ್ ಪರಾಗ್ 8, ನಿತೀಶ್ ರಾಣಾ 51, ಧ್ರುವ ಜುರೆಲ್ 26 ಮತ್ತು ಶಿಮ್ರಾನ್ ಹೆಟ್ಮೆಯರ್ ಔಟಾಗದೇ 15 ರನ್ ಗಳಿಸುವ ಮೂಲಕ ರಾಜಸ್ಥಾನ ರಾಯಲ್ಸ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿ ಪಂದ್ಯ ಟೈ ಆಯಿತು.ನಂತರ ನಡೆದ ಸೂಪರ್ ಓವರ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿತು.
ಸೂಪರ್ ಓವರ್ ಗೆಲುವು
ರಾಜಸ್ಥಾನ ಪರ ಹೆಟ್ಮೇಯರ್ ಮತ್ತು ಪರಾಗ್ ಕ್ರೀಸ್‌ಗೆ ಆಗಮಿಸಿದರು. ಸ್ಟಾರ್ಕ್ ಎಸೆದ ಮೊದಲ ಎಸೆತದಲ್ಲಿ ಯಾವುದೇ ರನ್ ಬಂದಿಲ್ಲ, ಎರಡನೇ ಎಸೆತದಲ್ಲಿ ಬೌಂಡರಿ ಹೊಡೆದ ಹೆಟ್ಮೇಯರ್ ಮೂರನೇ ಎಸೆತದಲ್ಲಿ ಒಂದು ರನ್ ತೆಗೆದರು. 4 ಎಸೆತವನ್ನು ಪರಾಗ್ ಬೌಂಡರಿಗೆ ಅಟ್ಟಿದ್ದರು. ಆದರೆ ಈ ಎಸೆತ ನೋಬಾಲ್ ಆಗಿತ್ತು. ಮರು ಎಸೆತದಲ್ಲಿ ಯಾವುದೇ ರನ್ ಬಂದಿಲ್ಲ. ಆದರೆ ಹೆಟ್ಮೇಯರ್ ಓಡಿದ್ದರಿಂದ ಪರಾಗ್ ರನೌಟ್ ಆದರು. 5ನೇ ಎಸತದಲ್ಲಿ ಹೆಟ್ಮೆಯರ್ 2 ರನ್ ಕದಿಯಲು ಮುಂದಾಗಿದ್ದರು. ಆದರೆ 2 ರನ್ ಓಡುವ ವೇಳೆ ಜೈಸ್ವಾಲ್ ರನೌಟ್ ಆದರು. ಎರಡು ವಿಕೆಟ್ ಪತನಗೊಂಡ ಪರಿಣಾಮ ರಾಜಸ್ಥಾನದ ಇನಿಂಗ್ಸ್ 11 ರನ್‌ಗಳಿಗೆ ಅಂತ್ಯವಾಯಿತು.