ಪ್ರತಿ ಐಪಿಎಲ್ನಲ್ಲೂ ಸಿಎಸ್ಕೆ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿ ವಿಚಾರ ಮತ್ತೆ ಮತ್ತೆ ಚರ್ಚೆಗೆ ಬರುತ್ತಿದೆ. ಚೆನ್ನೈನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದ ವೇಳೆ ಮಹೇಂದ್ರ ಸಿಂಗ್ ಧೋನಿ ಅವರ ಪೋಷಕರು ಕಾಣಿಸಿಕೊಂಡಿದ್ದರು. ಆಗ ಇಂದೇ ನಿವೃತ್ತಿ ತೆಗೆದುಕೊಳ್ಳುತ್ತಾರೆ ಎಂದು ವದಂತಿ ಹರಡಿತ್ತು. ಆದರೀಗ ಈ ಎಲ್ಲ ಸುದ್ದಿಗಳಿಗೆ ಖುದ್ದು ಧೋನಿಯೇ ತೆರೆ ಎಳೆದಿದ್ದಾರೆ.
ಪಾಡ್ಕಾಸ್ಟ್ವೊಂದರಲ್ಲಿ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, ‘ಸದ್ಯಕ್ಕೆ ನಿವೃತ್ತಿ ನೀಡುವ ಯೋಚನೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಇನ್ನೂ ಸಹ ಐಪಿಎಲ್ ಆಡುತ್ತಿದ್ದೇನೆ. ಹೀಗಾಗಿ ನಿವೃತ್ತಿ ವಿಚಾರವನ್ನು ತುಂಬಾ ಸರಳವಾಗಿ ಇಟ್ಟುಕೊಂಡಿದ್ದೇನೆ. ಈಗ ನನಗೆ 43 ವರ್ಷ. ಐಪಿಎಲ್ 2025 ಮುಗಿಯುವ ಹೊತ್ತಿಗೆ ನನಗೆ 44 ವರ್ಷ ವಯಸ್ಸಾಗಿರುತ್ತದೆ. ಆನಂತರ, ನಾನು ಆಡಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಲು ನನಗೆ 10 ತಿಂಗಳುಗಳಿವೆ. ಹೀಗಾಗಿ ಸದ್ಯ ನಿವೃತ್ತಿ ಬಗ್ಗೆ ಯೋಚಿಸುತ್ತಿಲ್ಲ’ ಎಂದು ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
44 ನೇ ವಯಸ್ಸಿನಲ್ಲಿಯೂ ಆಡಲು ಸಾಧ್ಯವಾಗುತ್ತದೆಯೇ ಎಂಬುದನ್ನು ಎದುರು ನೋಡುತ್ತೇನೆ. ಐಪಿಎಲ್ ಮುಗಿದ ಬಳಿಕ ಎಂಟು ತಿಂಗಳು ಕಾಲಾವಕಾಶವಿದೆ. ಅದರ ನಡುವೆ ನನ್ನ ದೇಹ ಹೇಗಿರುತ್ತದೆ ಎಂಬುದರ ಆಧಾರದ ಮೇಲೆ ನಾನು ನನ್ನ ಭವಿಷ್ಯವನ್ನು ನಿರ್ಧರಿಸುತ್ತೇನೆ ಎಂದು ತಿಳಿಸಿದ್ದಾರೆ.
ಅಂದರೆ ನನ್ನ ನಿವೃತ್ತಿ ನಿರ್ಧರಿಸುವುದು ನನ್ನ ದೇಹ. ಆದ್ದರಿಂದ, ಒಂದೊಂದೇ ವರ್ಷ ಕಳೆಯಲಿ, ಆ ಬಳಿಕ ಅದರ ಬಗ್ಗೆ ಯೋಚಿಸೋಣ ಎಂದು ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ. ಹೀಗಾಗಿ ಐಪಿಎಲ್ 2026 ರಲ್ಲೂ ಧೋನಿ ಕಣಕ್ಕಿಳಿದರೂ ಯಾವುದೇ ಅಚ್ಚರಿಯಿಲ್ಲ.
ಈ ಸುದ್ದಿ ಓದಿದ್ದೀರಾ? CSK vs DC | ಸ್ಟೇಡಿಯಂನಲ್ಲಿ ಕಾಣಿಸಿಕೊಂಡ ಧೋನಿ ಪೋಷಕರು; ಎಂಎಸ್ಡಿ ನಿವೃತ್ತಿ ಕುರಿತು ಭಾರೀ ಚರ್ಚೆ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಮಹೇಂದ್ರ ಸಿಂಗ್ ಧೋನಿ ಐಪಿಎಲ್ನಲ್ಲಿ ಇನ್ನೂ ಬಲಿಷ್ಠವಾಗಿ ಆಡುತ್ತಿದ್ದು, ಅವರ ವೃತ್ತಿಜೀವನವನ್ನು ಕೊನೆಗೊಳಿಸುವ ಪಾತ್ರವನ್ನು ಅವರಿಗೆ ನೀಡಲಾಗಿಲ್ಲ. ಅವರ ಪ್ರಯಾಣವನ್ನು ಕೊನೆಗೊಳಿಸುವುದು ನನ್ನ ಕೆಲಸವಲ್ಲ. ನಾನು ಅವರೊಂದಿಗೆ ಕೆಲಸ ಮಾಡುವುದನ್ನು ಆನಂದಿಸುತ್ತೇನೆ. ಧೋನಿ ಇನ್ನೂ ಬಲಶಾಲಿಯಾಗಿದ್ದಾರೆ. ನಾನು ಅವರಲ್ಲಿ ವಿದಾಯದ ಬಗ್ಗೆ ಕೇಳುವುದೇ ಇಲ್ಲ. ಇದರ ಬಗ್ಗೆ ಕೇಳುವವರು ನೀವುಗಳೇ’’ ಎಂದು ಹೇಳಿದ್ದರು.
ಐಪಿಎಲ್ ಸೀಸನ್-18 ರಲ್ಲಿ 43 ವರ್ಷದ ಧೋನಿಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ವಿಕೆಟ್ ಕೀಪಿಂಗ್ನಲ್ಲಿ ಚಾಕಚಕ್ಯತೆ ಮರೆದರೂ ಬ್ಯಾಟಿಂಗ್ನಲ್ಲಿ ಸ್ಪೋಟಕ ಇನಿಂಗ್ಸ್ ಕಂಡು ಬಂದಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮಹೇಂದ್ರ ಸಿಂಗ್ ಧೋನಿ 26 ಚೆಂಡುಗಳಲ್ಲಿ 30 ರನ್ಗಳ ನಿಧಾನಗತಿಯ ಇನಿಂಗ್ಸ್ ಆಡಿದರು. ಇನಿಂಗ್ಸ್ನ 11 ನೇ ಓವರ್ನಿಂದ ಕೊನೆಯವರೆಗೂ ಧೋನಿ ಸಿಎಸ್ಕೆ ಪರ ಬ್ಯಾಟಿಂಗ್ ಮಾಡಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. 26 ಚೆಂಡುಗಳಲ್ಲಿ 1 ಸಿಕ್ಸರ್, ಒಂದು ಬೌಂಡರಿಯೊಂದಿಗೆ ಅಜೇಯ 30 ರನ್ ಮಾತ್ರ ಕಲೆ ಹಾಕಿದರು. ಅಭಿಮಾನಿಗಳ ನಿರೀಕ್ಷೆಗಳಂತೆ ಧೋನಿ ಆಡಲಿಲ್ಲ.