ಶ್ರೀಲಂಕಾದಲ್ಲಿ ನಡೆದ ವಿಶೇಷಚೇತನ ಚಾಂಪಿಯನ್ಸ್ ಟ್ರೋಫಿಯ ಕ್ರಿಕೆಟ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು, ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಲಂಕಾದ ಕೊಲಂಬೊದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಫೈನಲ್ ಪಂದ್ಯ ನಡೆದಿದ್ದು, ಇಂಗ್ಲೆಂಡ್‌ಅನ್ನು ಮಣಿಸಿ ಟೀಮ್ ಇಂಡಿಯಾ ಗೆಲುವಿನ ಗರಿಯನ್ನು ಮುಡಿಗೇರಿಸಿಕೊಂಡಿದೆ.
ಇದೇ ಮೊದಲ ಬಾರಿಗೆ ವಿಶೇಷಚೇತನ ಚಾಂಪಿಯನ್ಸ್ ಟ್ರೋಫಿಯ ಪಂದ್ಯಾವಳಿಗಳು ನಡೆದಿದ್ದು, ಚೊಚ್ಚಲ ಟೂರ್ನಿಯಲ್ಲಿ ಭಾರತೀಯ ತಂಡ ಗೆದ್ದು ಬೀಗಿದೆ.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 10 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 197 ರನ್ ಕಲೆ ಹಾಕಿತ್ತು. ಭಾರತೀಯ ತಂಡದಲ್ಲಿ ಆಡಿದ ಯೋಗೇಂದ್ರ ಬಧೋರಿಯಾ 40 ಎಸೆತಗಳಲ್ಲಿ 73 ರನ್ ಬಾರಿಸಿ, ಗರಿಷ್ಟ ರನ್ ಗಳಿಸಿದರು.
ಟೀಮ್ ಇಂಡಿಯಾ ನೀಡಿದ್ದ ಬೃಹತ್ ರನ್‌ಗಳ ಬೆನ್ನತ್ತಿದ ಇಂಗ್ಲೆಂಡ್ ತಂಡ 19.2 ಓವರ್‌ಗಳಲ್ಲಿ 118 ರನ್ ಗಳಿಸಿ ಆಲೌಟ್ ಆಯಿತು. ಇಂಗ್ಲೆಂಡ್ ತಂಡವನ್ನು ಕಟ್ಟಿ ಹಾಕಿದ ಭಾರತದ ತಂಡ ಟ್ರೋಫಿ ಗೆದ್ದುಕೊಂಡಿದೆ.
ಭಾರತ ತಂಡದಲ್ಲಿ ವಿಕ್ರಾಂತ್ ರವೀಂದ್ರ ಕೆನ್ನಿ (ನಾಯಕ), ರವೀಂದ್ರ ಗೋಪಿನಾಥ್ ಸಂತೆ (ಉಪನಾಯಕ), ದೇವೇಂದ್ರ ಸಿಂಗ್ (ವಿಕೆಟ್ ಕೀಪರ್), ಯೋಗೇಂದರ್ ಬಧೋರಿಯಾ, ಅಖಿಲ್ ರೆಡ್ಡಿ, ರಾಧಿಕ ಪ್ರಸಾದ್, ಆಕಾಶ್ ಅನಿಲ್ ಪಾಟೀಲ್, ಸನ್ನಿ ಗೋಯತ್, ಪವನ್ ಕುಮಾರ್, ಜಿತೇಂದ್ರ, ರಾಜೇಶ್ ನಿಖಿಲ್ ಮನ್ಹಾಸ್, ಅಮೀರ್ ಹಾಸನ್, ಮಜಿದ್ ಮಗರೆ, ಕುನಾಲ್ ದತ್ತಾತ್ರೇಯ ಫಣಸಾಯ್ ಆಡಿದ್ದಾರೆ.