ಮಹಿಳಾ ಅಂಡರ್-19 ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಮಹಿಳೆಯರ ತಂಡ ಭರ್ಜರಿ ಗೆಲುವು ಸಾಧಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಕ್ವಾಲಾಲಂಪುರದ ಬೇಯುಮಾಸ್ ಓವಲ್‌ನ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 9 ವಿಕೆಟ್‌ಗಳ ಅಮೋಘ ಗೆಲುವನ್ನು ದಾಖಲಿಸಿಕೊಂಡು, ಎರಡನೇ ಬಾರಿಯು ಅಂಡರ್-19 ಟಿ20 ವಿಶ್ವಕಪ್ ತನ್ನಲ್ಲೇ ಉಳಿಸಿಕೊಂಡಿದೆ.
ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಭಾರತ ಅಜೇಯ ತಂಡಗಳಾಗಿ ಫೈನಲ್ ಪ್ರವೇಶ ಮಾಡಿದ್ದವು. ಅಂತಿಮ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಭಾರತೀಯರ ಬೌಲಿಂಗ್ ದಾಳಿಗೆ ತತ್ತರಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾದ ಆಟಗಾರ್ತಿಯರು ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸುವಲ್ಲಿ ವಿಫಲರಾದರು. ಬ್ಯಾಟರ್‌ಗಳಾದ ಗೊಂಗಡಿ ತ್ರಿಷಾ, ವೈಷ್ಣವಿ ಶರ್ಮಾ, ಆಯುಷಿ ಶುಕ್ಲಾ ಹಾಗೂ ಪರುಣಿಕಾ ಸಿಸೋಡಿಯಾ ಅವರ ಮಾರಕ ಬೌಲಿಂಗ್ ದಾಳಿಗೆ ಹೆಚ್ಚು ಕಾಲ ಕ್ರಿಸ್‌ನಲ್ಲಿ ನಿಲ್ಲದೆ ಪೆವಿಲಿಯನ್‌ನತ್ತ ಮುಖ ಮಾಡಿದರು.
ಈ ಸುದ್ದಿ ಓದಿದ್ದೀರಾ? ಟೀಂ ಇಂಡಿಯಾ ಸೋತರೂ ವರುಣ್ ಚಕ್ರವರ್ತಿಯಿಂದ ವಿನೂತನ ದಾಖಲೆ
ಮೈಕೆ ವ್ಯಾನ್ ವೂರ್ಸ್ಟ್ ದಾಖಲಿಸಿದ 23 ರನ್ ಹೊರತುಪಡಿಸಿದರೆ ಉಳಿದ ಆಟಗಾರರು ರನ್ಗಳಿಸಲು ಪರದಾಡಿದರು. ಒಂದಾದ
ಮೇಲೊಂದು ವಿಕೆಟ್ ಒಪ್ಪಿಸಿದರು.
20 ಓವರ್‌ನಲ್ಲಿ ಎಲ್ಲ ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ ಕೇವಲ 82 ರನ್ ಪೇರಿಸಿ, ಭಾರತ ತಂಡಕ್ಕೆ ಸುಲಭ ಗುರಿಯನ್ನು
ಬಿಟ್ಟುಕೊಟ್ಟಿತು.
ಎರಡನೇ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ, ಆರಂಭದಲ್ಲಿ ಜಿ ಕಮಲಿನಿ ಅವರ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಗೊಂಗಡಿ
ತ್ರಿಷಾ (44 ರನ್), ಸಾನಿಕಾ ಚಲ್ಕೆ (26 ರನ್) ಜತೆಗೂಡಿ 11.2 ಓವರ್‌ನಲ್ಲಿ 84 ರನ್ ಪೇರಿಸಿ ಗೆಲುವಿನ ದಡ ಸೇರಿಸಿದರು.
ಭಾರತದ ಪರ ಗೊಂಗಡಿ ತ್ರಿಷಾ ಪ್ರಮುಖ 3 ವಿಕೆಟ್ ಪಡೆದರು. ವೈಷ್ಣವಿ ಶರ್ಮಾ, ಆಯುಷಿ ಶುಕ್ಲಾ ಹಾಗೂ ಪರುಣಿಕಾ ಸಿಸೋಡಿಯಾ 2 ವಿಕೆಟ್ ಪಡೆದು ಮಿಂಚಿದರು. ಶಬ್ನಮ್ ಶಕೀಲ್ 1 ವಿಕೆಟ್ ಪಡೆದರು.
ಈ ಬಾರಿ ಭಾರತ ತಂಡವನ್ನು ಕರ್ನಾಟಕದ ನಿಕ್ಕಿ ಪ್ರಸಾದ್ ಮುನ್ನಡೆಸಿದ್ದರು. 19 ವರ್ಷದೊಳಗಿನವರ ಮಹಿಳಾ ಏಷ್ಯಾಕಪ್‌ನಲ್ಲಿ ಸಹ ಭಾರತ ತಂಡದ ನಾಯಕತ್ವ ವಹಿಸಿದ್ದರು.
