ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೇ 22ರಂದು ನಡೆದ 2024ರ ಇಂಡಿಯನ್ ಐಪಿಎಲ್‌ನ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ‘ಎಲಿಮಿನೇಟರ್’ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಐತಿಹಾಸಿಕ 8000 ರನ್ ಗಳಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧ 29 ರನ್ ಗಳಿಸುತ್ತಿದ್ದಂತೆಯೇ ನೂತನ ಮೈಲಿಗಲ್ಲು ಸ್ಥಾಪಿಸಿದರು. ಒಂದೇ ತಂಡದ ಪರ ಎಂಟು ಸಾವಿರ ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024ರ ಆವೃತ್ತಿಯಲ್ಲಿ ಬಲಗೈ ಅನುಭವಿ ಬ್ಯಾಟರ್ ಅತಿ ಹೆಚ್ಚು ರನ್ ಗಳಿಸಿ ‘ಆರೆಂಜ್ ಕ್ಯಾಪ್’ ಹೋಲ್ಡರ್ ಆಗಿದ್ದಾರೆ. ಅನುಭವಿ ಬಲಗೈ ಬ್ಯಾಟರ್ ವಿರಾಟ್ ಕೊಹ್ಲಿ, 17 ವರ್ಷಗಳ ಇತಿಹಾಸ ಹೊಂದಿರುವ ಐಪಿಎಲ್‌ನಲ್ಲಿ 8000 ರನ್‌ಗಳ ಮೈಲಿಗಲ್ಲನ್ನು ತಲುಪಿದ ಮೊದಲ ಬ್ಯಾಟರ್ ಎಂಬ ಐತಿಹಾಸಿಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ನಿರ್ಣಾಯಕ ಪಂದ್ಯದಲ್ಲಿ 24 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 33 ರನ್ ಗಳಿಸಿದ್ದಾಗ 8ನೇ ಓವರ್ ಎಸೆದ ಯುಜ್ವೇಂದ್ರ ಚಹಾಲ್ ಅವರ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರು.
ವಿರಾಟ್ ಕೊಹ್ಲಿ ಐಪಿಎಲ್ 2024ರಲ್ಲಿ ಆಡಿದ 15 ಇನ್ನಿಂಗ್ಸ್‌ಗಳಲ್ಲಿ 61.75ರ ಸರಾಸರಿ ಮತ್ತು 154.70ರ ಸ್ಟ್ರೈಕ್ ರೇಟ್‌ನಲ್ಲಿ 741 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಬಾರಿಸಿದ್ದಾರೆ.
ಇದನ್ನು ಓದಿದ್ದೀರಾ? ಐಪಿಎಲ್ | ರಾಜಸ್ಥಾನಕ್ಕೆ ಜಯ: ಆರ್‌ಸಿಬಿ ಕಪ್ ಕನಸು ಮತ್ತೆ ಭಗ್ನ
ಈಗಾಗಲೇ ಆರ್‌ಸಿಬಿ ಅನುಭವಿ ಬ್ಯಾಟರ್ ಐಪಿಎಲ್ ಪಂದ್ಯಾವಳಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. 8 ಶತಕಗಳು ಮತ್ತು 55 ಅರ್ಧಶತಕಗಳು ಒಳಗೊಂಡಂತೆ 8004 ರನ್ ಕಳೆಹಾಕಿದ್ದಾರೆ. ಇನ್ನು 222 ಪಂದ್ಯಗಳಲ್ಲಿ 35.25ರ ಸರಾಸರಿಯಲ್ಲಿ 6769 ರನ್ ಕಲೆಹಾಕಿರುವ ಶಿಖರ್ ಧವನ್ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ರೋಹಿತ್ ಶರ್ಮಾ, ಡೇವಿಡ್ ವಾರ್ನರ್ ಮತ್ತು ಸುರೇಶ್ ರೈನಾ ಇದ್ದಾರೆ.
