ಮುಂದಿನ ಮೂರು ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯಗಳಿಗೆ ಇಂಗ್ಲೆಂಡ್ ಆತಿಥ್ಯ ವಹಿಸಲಿದೆ. ಭಾನುವಾರ ಮುಕ್ತಾಯವಾದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಾರ್ಷಿಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. 2027, 2029 ಮತ್ತು 2031ರಲ್ಲಿ ಫೈನಲ್ಗಳು ನಡೆಯಲಿವೆ.
ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಇಲ್ಲಿಯವರೆಗೆ ನಡೆದ ಮೂರು ಡಬ್ಲ್ಯುಟಿಸಿ ಫೈನಲ್ಗಳ ಆತಿಥ್ಯವನ್ನು ವಹಿಸಿತ್ತು. 2021ರಲ್ಲಿ ಸೌತಾಂಪ್ಟನ್ (ಭಾರತ–ನ್ಯೂಜಿಲೆಂಡ್), 2023ರಲ್ಲಿ ಓವಲ್, ಲಂಡನ್ (ಭಾರತ –ಆಸ್ಟ್ರೇಲಿಯಾ) ಮತ್ತು 2025ರಲ್ಲಿ ಲಾರ್ಡ್ಸ್ (ದಕ್ಷಿಣ ಆಫ್ರಿಕಾ–ಆಸ್ಟ್ರೇಲಿಯಾ) ಕ್ರೀಡಾಂಗಣದಲ್ಲಿ ಫೈನಲ್ಗಳು ನಡೆದಿದ್ದವು.
‘ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ ಮುಂದಿನ ಮೂರು ಡಬ್ಲ್ಯುಟಿಸಿ ಫೈನಲ್ಗಳ ಆತಿಥ್ಯದ ಹಕ್ಕುಗಳನ್ನು ನೀಡಲಾಗಿದೆ. ಮೊದಲ ಮೂರು ಆವೃತ್ತಿಗಳ ಫೈನಲ್ಗಳನ್ನು ಇಂಗ್ಲೆಂಡ್ ಯಶಸ್ವಿಯಾಗಿ ಆಯೋಜಿಸಿದೆ’ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಡಬ್ಲ್ಯುಟಿಸಿ ಫೈನಲ್ಗಳು ಹೆಚ್ಚಾಗಿ ಜೂನ್ ತಿಂಗಳಲ್ಲಿಯೇ ಆಯೋಜನೆಗೊಳ್ಳುತ್ತವೆ. ಆ ಸಂದರ್ಭದಲ್ಲಿ ಇಂಗ್ಲೆಂಡ್ನಲ್ಲಿ ಮಾತ್ರ ಉತ್ತಮ ಹವಾಮಾನ ಇರುತ್ತದೆ. ಇನ್ನು ಕೆಲವು ದೇಶಗಳಲ್ಲಿ ಆ ತಿಂಗಳು ಮಳೆಗಾಲ ಇರುತ್ತದೆ. ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಋತುವು ಅಕ್ಟೋಬರ್ನಿಂದ ಮಾರ್ಚ್ವರೆಗೆ ಇರುತ್ತದೆ. ಆದ್ದರಿಂದ ಸಭೆಯಲ್ಲಿ ಫೈನಲ್ ಆಯೋಜನೆಗೆ ಇಂಗ್ಲೆಂಡ್ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಯಿತು.
ಇದನ್ನು ಓದಿದ್ದೀರಾ? IND vs ENG ODI | ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್ ಅಮೋಘ ಆಟ; ಭಾರತ ವನಿತೆಯರಿಗೆ ಗೆಲುವು
‘ಮುಂದಿನ ಮೂರು ಡಬ್ಲ್ಯುಟಿಸಿ ಫೈನಲ್ ಪಂದ್ಯಗಳ ಆಯೋಜನೆಯ ಅವಕಾಶ ಲಭಿಸಿರುವುದು ನಮಗೆ ತುಂಬ ಸಂತಸ ತಂದಿದೆ’ ಎಂದು ಇ.ಸಿ.ಬಿ. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಿಚರ್ಡ್ ಗೌಲ್ಡ್ ಹೇಳಿದ್ದಾರೆ.
‘ಚಾರಿತ್ರಿಕವಾದ ಟೆಸ್ಟ್ ಕ್ರಿಕೆಟ್ ಮಾದರಿಯೊಂದಿಗೆ ನಮ್ಮ ದೇಶದ ಜನರು ಹೊಂದಿರುವ ಅವಿನಾವಭಾವ ನಂಟಿಗೆ ಲಭಿಸಿರುವ ಗೌರವ ಇದಾಗಿದೆ. ಡಬ್ಲ್ಯುಟಿಸಿ ಫೈನಲ್ಗಳನ್ನು ಆಯೋಜಿಸುವುದು ಹೆಮ್ಮೆಯ ಮತ್ತು ಗೌರವದ ಸಂಗತಿಯಾಗಿದೆ. ಐಸಿಸಿಯೊಂದಿಗೆ ಬೆರೆತು ಯಶಸ್ವಿ ಆಯೋಜನೆ ಮಾಡುತ್ತೇವೆ’ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅಫ್ಗನ್ ಮಹಿಳಾ ತಂಡಕ್ಕೆ ಐಸಿಸಿ ನೆರವು
ತಾಲಿಬಾನ್ ಆಡಳಿತಕ್ಕೆ ಬೆದರಿ ದೇಶ ತೊರೆದಿರುವ ಅಫ್ಗಾನಿಸ್ತಾನ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಐಸಿಸಿಯು ಸಂತಸದ ಸುದ್ದಿ ಪ್ರಕಟಿಸಿದೆ. ಇದೇ ವರ್ಷ ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಮತ್ತು ಮುಂದಿನ ವರ್ಷ ಇಂಗ್ಲೆಂಡ್ನಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಫ್ಗಾನಿಸ್ತಾನ ಮಹಿಳಾ ತಂಡವನ್ನು ಒಳಗೊಳ್ಳಲು ಭಾನುವಾರ ನಡೆದ ವಾರ್ಷಿಕ ಸಭೆಯಲ್ಲಿ ನಿರ್ಣಯಿಸಲಾಯಿತು. ಮೂರು ಶ್ರೀಮಂತ ಕ್ರಿಕೆಟ್ ಮಂಡಳಿಗಳಾದ ಭಾರತ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಜಂಟಿಯಾಗಿ ಅಫ್ಗನ್ ಮಹಿಳಾ ಕ್ರಿಕೆಟಿಗರಿಗೆ ನೆರವು ನೀಡಲು ಈ ಹಿಂದೆ ಹರಾರೆಯಲ್ಲಿ ನಡೆದಿದ್ದ ಸಭೆಯಲ್ಲಿ ನಿರ್ಧರಿಸಲಾಗಿತ್ತು.