ಕೊಡಗಿನಲ್ಲಿ ಮಳೆ ಕೊರತೆ: ಕಾಫಿ, ಮೆಣಸು ಇಳುವರಿ ಕುಂಠಿತ, ರೈತರಿಗೆ ಆರ್ಥಿಕ ನಷ್ಟ

Date:

ಮುಂಗಾರು ಆರಂಭವಾಗಿದ್ದರೂ ಕೊಡಗು ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದ ಮಳೆ ಆಗದಿರುವುದು ಕೃಷಿ ಆಧಾರಿತ ರೈತರಲ್ಲಿ ಆತಂಕವನ್ನು ಹೆಚ್ಚಿಸಿದೆ. ಕಾಫಿ, ಮೆಣಸು, ಭತ್ತ ಮುಂತಾದ ಪ್ರಮುಖ ಬೆಳೆಗಳಿಗೆ ಸಕಾಲದ ಮಳೆ ಅತ್ಯಗತ್ಯವಾಗಿರುವುದರಿಂದ ಈ ಕೊರತೆಯು ಇಳುವರಿ ಕುಸಿತ, ನೀರಾವರಿ ಸಮಸ್ಯೆ ಮತ್ತು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು.

ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿರುವುದು ಅಂಕಿ-ಅಂಶಗಳಿಂದ ಸ್ಪಷ್ಟವಾಗಿದೆ. ಮುಂಗಾರು ಆರಂಭಗೊಂಡಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದಿರುವುದು ಕೃಷಿಕರು ಸೇರಿದಂತೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

- Advertisement -

ಸಾಮಾನ್ಯವಾಗಿ ಈ ವೇಳೆಗೆ ಜಿಲ್ಲೆಯಲ್ಲಿ ವ್ಯಾಪಕ ಹಾಗೂ ನಿರಂತರ ಮಳೆಯಾಗಬೇಕಾಗಿದ್ದರೂ, ಈ ಬಾರಿ ಅಲ್ಲಲ್ಲಿ ಸಾಧಾರಣ ಮಳೆಯಷ್ಟೇ ದಾಖಲಾಗುತ್ತಿದೆ. ಕೆಲ ಭಾಗಗಳಲ್ಲಿ ಉತ್ತಮ ಮಳೆಯಾದರೂ ಜಿಲ್ಲಾದ್ಯಂತ ಸಮಾನ ಪ್ರಮಾಣದಲ್ಲಿ ಮಳೆ ಸುರಿಯದ ಕಾರಣ ಒಟ್ಟಾರೆ ಮಳೆಯ ಪ್ರಮಾಣದಲ್ಲಿ ಕೊರತೆ ಕಂಡುಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಈ ವರ್ಷದ ಮುಂಗಾರು ಕೇರಳಕ್ಕೆ ತಡವಾಗಿ ಪ್ರವೇಶಿಸಿದ ಪರಿಣಾಮ ಅದರ ಪ್ರಭಾವ ಕೊಡಗು ಜಿಲ್ಲೆಯ ಮೇಲೂ ಕಂಡುಬಂದಿದೆ. ಮುಂಗಾರು ಚುರುಕುಗೊಳ್ಳುವ ನಿರೀಕ್ಷೆ ಇದ್ದರೂ ಈವರೆಗೆ ಮಳೆಯ ಪ್ರಮಾಣದಲ್ಲಿ ಗಮನಾರ್ಹ ಚೇತರಿಕೆ ಕಂಡಿಲ್ಲ. ಇದರಿಂದ ನದಿ, ಹೊಳೆ ಹಾಗೂ ಜಲಾಶಯಗಳಿಗೆ ನಿರೀಕ್ಷಿತ ಪ್ರಮಾಣದ ನೀರಿನ ಹರಿವು ಇನ್ನೂ ಆರಂಭವಾಗಿಲ್ಲ.

ಆದಾಗ್ಯೂ, ಹವಾಮಾನ ತಜ್ಞರು ಹಾಗೂ ಕೃಷಿ ವಲಯದವರು ಮುಂದಿನ ದಿನಗಳಲ್ಲಿ ಮುಂಗಾರು ಚಟುವಟಿಕೆಗಳು ಬಲಗೊಳ್ಳುವ ಸಾಧ್ಯತೆ ಇದೆ ಎಂದು ಆಶಾಭಾವ ವ್ಯಕ್ತಪಡಿಸಿದ್ದಾರೆ. ಮುಂಗಾರು ಸಂಪೂರ್ಣವಾಗಿ ಸಕ್ರಿಯಗೊಂಡರೆ ಮಳೆಯ ಕೊರತೆ ಭಾಗಶಃ ನೀಗುವ ನಿರೀಕ್ಷೆಯಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಹಲವೆಡೆ ಸಾಧಾರಣ ಮಳೆಯಾಗುತ್ತಿದೆ. ಮುಂದಿನ ವಾರಗಳಲ್ಲಿ ಉತ್ತಮ ಮಳೆಯಾಗುವ ಮೂಲಕ ಮಳೆಯ ಕೊರತೆ ಸರಿದೂಗುವ ವಿಶ್ವಾಸವನ್ನು ರೈತರು ಮತ್ತು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ, ಜಿಲ್ಲೆಯಲ್ಲಿ ಜನವರಿಯಿಂದ ಈವರೆಗಿನ ಒಟ್ಟು ಮಳೆಯ ಪ್ರಮಾಣ 223.62 ಮಿ.ಮೀ. ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 785.60 ಮಿ.ಮೀ. ಮಳೆಯಾಗಿತ್ತು. ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲಾದ್ಯಂತ ಸರಾಸರಿ 19.52 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ಜಿಲ್ಲೆಯ ಸರಾಸರಿ ಮಳೆ 4.61 ಮಿ.ಮೀ. ದಾಖಲಾಗಿತ್ತು.

ತಾಲೂಕುವಾರು ಮಳೆಯ ವಿವರಗಳನ್ನು ಗಮನಿಸಿದರೆ, ಮಡಿಕೇರಿ ತಾಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 26.53 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ದಿನ 23.05 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಈವರೆಗೆ 303.93 ಮಿ.ಮೀ. ಮಳೆ ದಾಖಲಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 1158.06 ಮಿ.ಮೀ. ಮಳೆಯಾಗಿತ್ತು.

ಪೊನ್ನಂಪೇಟೆ ತಾಲೂಕಿನಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 23.27 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ದಿನ ಮಳೆಯಾಗಿರಲಿಲ್ಲ. ಈ ವರ್ಷ ಜನವರಿಯಿಂದ ಈವರೆಗೆ 178.54 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 724.40 ಮಿ.ಮೀ. ಮಳೆಯಾಗಿತ್ತು.

ವಿರಾಜಪೇಟೆ ತಾಲೂಕಿನಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 25.70 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ದಿನ ಮಳೆಯಾಗಿರಲಿಲ್ಲ. ಜನವರಿಯಿಂದ ಈವರೆಗೆ 287.17 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 819.75 ಮಿ.ಮೀ. ದಾಖಲಾಗಿತ್ತು.

ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 14.90 ಮಿ.ಮೀ. ಮಳೆಯಾಗಿದ್ದು, ಜನವರಿಯಿಂದ ಈವರೆಗೆ 204.47 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 679.14 ಮಿ.ಮೀ. ಮಳೆಯಾಗಿತ್ತು.

ಕುಶಾಲನಗರ ತಾಲೂಕಿನಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 7.20 ಮಿ.ಮೀ. ಮಳೆಯಾಗಿದ್ದು, ಜನವರಿಯಿಂದ ಈವರೆಗೆ 143.85 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 546.64 ಮಿ.ಮೀ. ಮಳೆಯಾಗಿತ್ತು.

ಜಿಲ್ಲೆಯ ಪ್ರಮುಖ ಹೋಬಳಿಗಳ ಪೈಕಿ ಭಾಗಮಂಡಲದಲ್ಲಿ ಅತ್ಯಧಿಕ 38 ಮಿ.ಮೀ. ಹಾಗೂ ಪೊನ್ನಂಪೇಟೆಯಲ್ಲಿ 35 ಮಿ.ಮೀ. ಮಳೆಯಾಗಿದೆ. ಶಾಂತಳ್ಳಿ 32 ಮಿ.ಮೀ., ವಿರಾಜಪೇಟೆ 28.40 ಮಿ.ಮೀ., ಸಂಪಾಜೆ 27.50 ಮಿ.ಮೀ., ನಾಪೋಕ್ಲು 23.60 ಮಿ.ಮೀ., ಅಮ್ಮತ್ತಿ ಹಾಗೂ ಹುದಿಕೇರಿಯಲ್ಲಿ ತಲಾ 23 ಮಿ.ಮೀ., ಶ್ರೀಮಂಗಲದಲ್ಲಿ 22 ಮಿ.ಮೀ. ಮಳೆಯಾಗಿರುವುದಾಗಿ ವರದಿಯಾಗಿದೆ.

ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2,859 ಅಡಿಗಳು ಆಗಿದ್ದು, ಮಂಗಳವಾರದಂದು ಜಲಾಶಯದಲ್ಲಿ 2823.57 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 2851.71 ಅಡಿಗಳು ದಾಖಲಾಗಿತ್ತು.

ಹಾರಂಗಿ ಪ್ರದೇಶದಲ್ಲಿ 6.20 ಮಿ.ಮೀ. ಮಳೆಯಾಗಿದ್ದು, ಜಲಾಶಯಕ್ಕೆ 266 ಕ್ಯುಸೆಕ್ ನೀರು ಒಳಹರಿವಾಗಿದೆ. ಕಳೆದ ವರ್ಷ ಇದೇ ದಿನ 1491 ಕ್ಯುಸೆಕ್ ಒಳಹರಿವು ದಾಖಲಾಗಿತ್ತು. ಪ್ರಸ್ತುತ ಜಲಾಶಯದಿಂದ ನದಿಗೆ 180 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಕಳೆದ ವರ್ಷ ಇದೇ ದಿನ 1029 ಕ್ಯುಸೆಕ್ ನೀರನ್ನು ಹೊರಹರಿಸಲಾಗಿತ್ತು.

ಹೋರಾಟಗಾರ ಕೆ ಬಿ ರಾಜು ಈ ದಿನ.ಕಾಮ್ ಜತೆಗೆ ಮಾತನಾಡಿ, “ಕಳೆದ ವರ್ಷ ಏಪ್ರಿಲ್ 15ರ ವೇಳೆಗೆ ಮೆಕ್ಕೆಜೋಳ ಬಿತ್ತನೆ ಮಾಡಲಾಗಿತ್ತು. ಆದರೆ ಈ ವರ್ಷ ಮೇ ತಿಂಗಳು ಕಳೆದರೂ ಸಮರ್ಪಕ ಮಳೆಯಾಗದ ಕಾರಣ ಬಿತ್ತನೆ ಕಾರ್ಯ ಆರಂಭಿಸಲು ಸಾಧ್ಯವಾಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ರೈತರು ಈಗಾಗಲೇ ಹೆಚ್ಚಿನ ವೆಚ್ಚ ಭರಿಸಿ ಡಿಸ್ಕ್ ಹಾಗೂ ಕಲ್ಟಿವೇಟರ್ ಮೂಲಕ ಜಮೀನು ಉಳುಮೆ ಮಾಡಿ ಬಿತ್ತನೆಗೆ ಸಿದ್ಧಗೊಳಿಸಿದ್ದಾರೆ. ಬಿತ್ತನೆ ಬೀಜಗಳನ್ನು ಖರೀದಿಸಿ ಇಟ್ಟುಕೊಂಡಿದ್ದರೂ ಮಳೆಯ ಕೊರತೆಯಿಂದ ಬಿತ್ತನೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಅವರು ಹೇಳಿದರು.

“ಮಳೆ ಸರಿಯಾಗಿ ಆಗದಿದ್ದರೆ ಬೆಳೆ ಬೆಳೆಯುವುದಿಲ್ಲ. ಬೆಳೆ ಇಲ್ಲದಿದ್ದರೆ ರೈತರು ಮಾಡಿದ ಖರ್ಚು ಕೂಡ ವಾಪಸ್ ಬರುವುದಿಲ್ಲ. ಇದರಿಂದ ರೈತರಿಗೆ ನಷ್ಟವೇ ಹೊರತು ಲಾಭವಾಗುವುದಿಲ್ಲ” ಎಂದು ಆತಂಕ ವ್ಯಕ್ತಪಡಿಸಿದರು.

“ಈಗಾಗಲೇ ರೈತರು ಬೆಲೆ ಏರಿಕೆ, ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಂಬಲ ಬೆಲೆ ಸಿಗದಿರುವುದು, ರಸಗೊಬ್ಬರಗಳ ಕೊರತೆ ಹಾಗೂ ಅವುಗಳ ಬೆಲೆ ಹೆಚ್ಚಳ, ಉಳುಮೆ ವೆಚ್ಚದ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಳೆಯೂ ಕೈಕೊಟ್ಟರೆ ರೈತರ ಬದುಕು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಲಿದೆ” ಎಂದು ಹೇಳಿದರು.

“ಜಿಲ್ಲಾಡಳಿತವು ರೈತರ ಸಮಸ್ಯೆಗಳತ್ತ ವಿಶೇಷ ಗಮನ ಹರಿಸಬೇಕು. ಜನಪ್ರತಿನಿಧಿಗಳು ಹಾಗೂ ಶಾಸಕರು ರೈತರಿಗೆ ಅನುಕೂಲವಾಗುವ ಕ್ರಮಗಳನ್ನು ಕೈಗೊಂಡು ಅಗತ್ಯ ನೆರವು ಒದಗಿಸಬೇಕು” ಎಂದು ಮನವಿ ಮಾಡಿದರು.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸೋಮವಾರಪೇಟೆ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ ಎಂದು ಕೊಡ್ಲಿಪೇಟೆಯ ಬಿ ಎಂ ಲತೀಫ್ ಕಳವಳ ವ್ಯಕ್ತಪಡಿಸಿದರು.

“ಕಳೆದ ವರ್ಷ ಇದೇ ಅವಧಿಯಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ಈ ಬಾರಿ ಮಳೆ ಬಂದು ಹೋಗುವ ಸ್ಥಿತಿ ಇದ್ದು, ನಿರಂತರ ಹಾಗೂ ಗಟ್ಟಿಯಾದ ಮಳೆಯಾಗುತ್ತಿಲ್ಲ. ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವಷ್ಟು ಮಳೆ ಸಿಗದಿರುವುದು ರೈತರನ್ನು ಸಂಕಷ್ಟಕ್ಕೆ ತಳ್ಳುವ ಸಾಧ್ಯತೆಯಿದೆ” ಎಂದು ಹೇಳಿದರು.

“ಮಳೆ ಸರಿಯಾಗಿ ಆಗದಿದ್ದರೆ ಮುಂದಿನ ದಿನಗಳಲ್ಲಿ ಕೃಷಿ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀಳಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಸಂದರ್ಭದಲ್ಲಿ, ಮಳೆಯ ಕೊರತೆಯಿಂದ ಬೆಳೆ ಉತ್ಪಾದನೆ ಕಡಿಮೆಯಾದರೆ ಆಹಾರ ಧಾನ್ಯಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ” ಎಂದು ಅವರು ಆತಂಕ ವ್ಯಕ್ತಪಡಿಸಿದರು.

“ಉತ್ತಮ ಮಳೆಯಾದರೆ ರೈತರು ಸಮರ್ಪಕವಾಗಿ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಆದರೆ ಮಳೆ ಕೈಕೊಟ್ಟರೆ ಅದರ ನೇರ ಪರಿಣಾಮ ರೈತರಿಗೆ ಮಾತ್ರವಲ್ಲ, ಗ್ರಾಹಕರಿಗೂ ತಟ್ಟಲಿದೆ. ಕೃಷಿ ಉತ್ಪಾದನೆ ಕುಸಿದರೆ ಆಹಾರ ಭದ್ರತೆ ಮತ್ತು ಮಾರುಕಟ್ಟೆ ಸ್ಥಿರತೆ ಎರಡಕ್ಕೂ ಸವಾಲು ಎದುರಾಗಲಿದೆ” ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡು ಕೃಷಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಬೇಕೆಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ದೇಶದಲ್ಲಿ ಈ ವರ್ಷದ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಇರಬಹುದೆಂಬ ಆತಂಕ ಮತ್ತಷ್ಟು ಗಟ್ಟಿಯಾಗಿದೆ. ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುಂಗಾರು ಮಳೆಯ ಮುನ್ಸೂಚನೆಯನ್ನು ಪರಿಷ್ಕರಿಸಿದ್ದು, ಹಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯನ್ನು ಸೂಚಿಸಿದೆ.

ದೀರ್ಘಾವಧಿ ಸರಾಸರಿ(ಎಲ್‌ಪಿಎ) ಎಂದರೆ ಒಂದು ಪ್ರದೇಶದಲ್ಲಿ 30 ರಿಂದ 50 ವರ್ಷಗಳ ಅವಧಿಯಲ್ಲಿ ದಾಖಲಾಗಿರುವ ಮಳೆಯ ಸರಾಸರಿ ಪ್ರಮಾಣ. 1971ರಿಂದ 2020ರವರೆಗಿನ ಅಂಕಿ-ಅಂಶಗಳ ಪ್ರಕಾರ ದೇಶದ ಮುಂಗಾರು ಹಂಗಾಮಿನ ಎಲ್‌ಪಿಎ 87 ಸೆಂಟಿಮೀಟರ್ ಆಗಿದೆ. ಮುಂಗಾರು ಅವಧಿಯಲ್ಲಿ ಈ ಸರಾಸರಿಯ ಶೇ.90ಕ್ಕಿಂತ ಕಡಿಮೆ ಮಳೆಯಾದರೆ ಅದನ್ನು ‘ಮಳೆ ಕೊರತೆ’ ಎಂದು ಪರಿಗಣಿಸಲಾಗುತ್ತದೆ.

ಈಗಾಗಲೇ ದೇಶದ ಹಲವೆಡೆ ಮುಂಗಾರು ಆರಂಭದಲ್ಲಿ ಮಳೆಯ ಕೊರತೆ ಕಂಡುಬಂದಿದ್ದು, ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ಜಲಾಶಯಗಳ ನೀರಿನ ಮಟ್ಟ, ಕುಡಿಯುವ ನೀರಿನ ಲಭ್ಯತೆ ಹಾಗೂ ಬೆಳೆಗಳ ಬೆಳವಣಿಗೆಯ ಮೇಲೂ ಮಳೆ ಕೊರತೆಯ ಪರಿಣಾಮ ಉಂಟಾಗುವ ಸಾಧ್ಯತೆಯಿದೆ.

ತಜ್ಞರ ಪ್ರಕಾರ, ಈ ಬಾರಿ ಕಡಿಮೆ ಮಳೆಗೆ ಎಲ್ ನಿನೋ ಪರಿಣಾಮ ಪ್ರಮುಖ ಕಾರಣವಾಗಿದೆ. ಪೆಸಿಫಿಕ್ ಮಹಾಸಾಗರದ ಭೂಮಧ್ಯರೇಖೆ ಭಾಗದಲ್ಲಿ ಉಂಟಾಗುವ ಈ ಹವಾಮಾನ ವಿದ್ಯಮಾನವು ಭಾರತದಲ್ಲಿ ಮುಂಗಾರು ಮಳೆಯನ್ನು ದುರ್ಬಲಗೊಳಿಸುವ ಸಾಧ್ಯತೆ ಹೊಂದಿದೆ. ಜೂನ್ ತಿಂಗಳಲ್ಲಿ ಇದರ ಪ್ರಭಾವ ಕಡಿಮೆ ಇದ್ದರೂ, ಸೆಪ್ಟೆಂಬರ್ ವೇಳೆಗೆ ಮಧ್ಯಮದಿಂದ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಸುದ್ದಿ ಓದಿದ್ದೀರಾ?ಮರ್ಯಾದೆಗೇಡು ಹತ್ಯೆ | ಪ್ರಬಲ ಜಾತಿ ಯುವತಿ ಜೊತೆ ಸ್ನೇಹ ಬೆಳೆಸಿದ್ದಕ್ಕೆ ದಲಿತ ಯುವಕನ ಬರ್ಬರ ಕೊಲೆ

ಮುಂಗಾರು ಮಳೆಯ ಮೇಲೆಯೇ ಕೃಷಿ ಹಾಗೂ ಗ್ರಾಮೀಣ ಆರ್ಥಿಕತೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿರುವುದರಿಂದ, ಮುಂದಿನ ವಾರಗಳಲ್ಲಿ ಮಳೆಯ ಸ್ಥಿತಿಗತಿಗಳ ಮೇಲೆ ರೈತರು ಹಾಗೂ ಸಾರ್ವಜನಿಕರು ಕಣ್ಣಿಟ್ಟಿದ್ದಾರೆ.

ಮುಂಗಾರು ಆರಂಭವಾಗಿದ್ದರೂ ಕೊಡಗು ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದ ಮಳೆ ಆಗದಿರುವುದು ಕೃಷಿ ಆಧಾರಿತ ರೈತರಲ್ಲಿ ಆತಂಕವನ್ನು ಹೆಚ್ಚಿಸಿದೆ. ಕಾಫಿ, ಮೆಣಸು, ಭತ್ತ ಮುಂತಾದ ಪ್ರಮುಖ ಬೆಳೆಗಳಿಗೆ ಸಕಾಲದ ಮಳೆ ಅತ್ಯಗತ್ಯವಾಗಿರುವುದರಿಂದ ಈ ಕೊರತೆಯು ಇಳುವರಿ ಕುಸಿತ, ನೀರಾವರಿ ಸಮಸ್ಯೆ ಮತ್ತು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು.

ಜಿಲ್ಲಾಡಳಿತ, ಕೃಷಿ ಇಲಾಖೆ ಮತ್ತು ರೈತರು ಸಂಯೋಜಿತವಾಗಿ ಕೆಲಸ ಮಾಡುವ ಮೂಲಕ ಮಳೆ ಕೊರತೆ ಸವಾಲನ್ನು ಎದುರಿಸಬಹುದು. ಕೃತಕ ನೀರಾವರಿ, ಜಲ ಸಂರಕ್ಷಣೆ, ಬೆಳೆವಿಮೆ ಮತ್ತು ವೈವಿಧ್ಯಕರ ಬೆಳೆಗಳತ್ತ ಗಮನಹರಿಸುವುದರಿಂದ ಪರಿಹಾರವಾಗಬಹುದು. ಮಳೆಯ ವ್ಯತ್ಯಾಸಗಳು ಹವಾಮಾನ ಬದಲಾವಣೆಯ ಪರಿಣಾಮವಾಗಿರಬಹುದು. ಆದ್ದರಿಂದ ಎಲ್ಲರೂ ಜಾಗೃತರಾಗಿ, ಸಕಾಲದಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಜಿಲ್ಲೆಯ ಕೃಷಿ ಮತ್ತು ಜನಜೀವನವನ್ನು ರಕ್ಷಿಸುವುದು ಅತ್ಯಂತ ಮುಖ್ಯವಾಗಿದೆ.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಟೆಕ್ನೋ ಆಯುರ್ವೇದ ಅಭಿವೃದ್ಧಿಗೆ ಪೂರಕ: ಗುಂಡಪ್ಪಗೌಡ

ಭಾರತದ ಸಾಂಪ್ರದಾಯಿಕ ವೈದ್ಯ ಪದ್ಧತಿಯಾದ ಆಯುರ್ವೇದಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡುವುದರಿಂದ...

ಮೈಸೂರಿನಲ್ಲಿ ಆನೆ ದಂತ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ

ಆನೆ ದಂತವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಅರಣ್ಯ...

‘SIR’ ರದ್ದುಗೊಳಿಸಿ, ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಿಗೊಳಿಸಿ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು, ಮುಖ್ಯ...