ಲಂಡನ್‌ನ ಓವಲ್ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯ ಕಂಡ ಆ್ಯಂಡರ್ಸನ್–ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ ಸರಣಿಯ ಕೊನೆಯ ಪಂದ್ಯದಲ್ಲಿ ಶುಭಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಕೇವಲ 6 ರನ್‌ಗಳಿಂದ ರೋಚಕವಾಗಿ ಜಯಿಸಿದ್ದಲ್ಲದೇ, ಆತಿಥೇಯ ಇಂಗ್ಲೆಂಡ್ ತಂಡದ ಸರಣಿ ಗೆಲುವಿನ ಕನಸನ್ನು ಕೊನೆಯ ಕ್ಷಣದಲ್ಲಿ ಭಗ್ನಗೊಳಿಸಿತ್ತು.
ಟೀಮ್ ಇಂಡಿಯಾದ ಸ್ಟಾರ್ ಬೌಲರ್ 31 ವರ್ಷ ವಯಸ್ಸಿನ, ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಸ್ವಿಂಗ್ ದಾಳಿಯ ಚಾಕಚಕ್ಯತೆಯಿಂದ ಇಂಗ್ಲೆಂಡ್ ಕೈಯ್ಯಲ್ಲಿದ್ದ ಪಂದ್ಯವನ್ನು ಟೀಮ್ ಇಂಡಿಯಾ ಕಡೆಗೆ ವಾಲಿಸಿದ್ದಲ್ಲದೇ, ಸರಣಿಯಲ್ಲಿ 2-2 ಅಂತರದಿಂದ ಸಮಬಲಗೊಳ್ಳುವಂತೆ ಮಾಡಿದ್ದರು.
ಇಂಗ್ಲೆಂಡ್ ತಂಡವು 3–1 ಅಂತರದಿಂದ ಸರಣಿ ಜಯಿಸಲು 5ನೇ ಟೆಸ್ಟ್‌ನ ಕೊನೆಯ ದಿನವಾದ ಸೋಮವಾರ 35 ರನ್‌ಗಳ ಅಗತ್ಯವಿತ್ತು. ಜೊತೆಗೆ ನಾಲ್ಕು ವಿಕೆಟ್‌ಗಳೂ ಇದ್ದವು. ಆದರೆ ಸಿರಾಜ್ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣ ನಡೆಸಿದ ಸಂಘಟಿತ ಬೌಲಿಂಗ್ ದಾಳಿಯಿಂದಾಗಿ ಭಾರತ ತಂಡವು ಪಂದ್ಯ ಗೆದ್ದಿದ್ದು ಮಾತ್ರವಲ್ಲದೇ, ಯಾರ ಊಹೆಗೂ ಕೂಡ ನಿಲುಕಲು ಸಾಧ್ಯವಿಲ್ಲದಂತೆ ಸರಣಿಯನ್ನು 2–2ರಿಂದ ಸಮಬಲ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಸೋಮವಾರ ಇಂಗ್ಲೆಂಡ್ ಕಳೆದುಕೊಂಡ 4 ವಿಕೆಟ್‌ಗಳ ಪೈಕಿ 3 ವಿಕೆಟ್ ಪಡೆದು ಓವಲ್‌ನಲ್ಲಿ ಐದು ವಿಕೆಟ್ ಪಡೆದು ಮೊಹಮ್ಮದ್ ಸಿರಾಜ್ ಇತಿಹಾಸ ಬರೆದರು. ಈ ಪಂದ್ಯದಲ್ಲಿ ಮೊನಚಾದ ದಾಳಿ ಸಂಘಟಿಸಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ 4 ವಿಕೆಟ್ ಕಬಳಿಸಿದರು. ಮೊಹಮ್ಮದ್ ಸಿರಾಜ್ ಅವರು ಅರ್ಹವಾಗಿಯೇ ಈ ಶ್ರೇಷ್ಠ ಪ್ರದರ್ಶನಕ್ಕೆ ‘ಪಂದ್ಯ ಶ್ರೇಷ್ಠ ಪ್ರಶಸ್ತಿ’ಯನ್ನೂ ಪಡೆದುಕೊಂಡರು.
ಐದು ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡ ಎರಡರಲ್ಲಿ ಜಯ ಸಾಧಿಸಿತ್ತು. ಭಾರತ ಒಂದನ್ನು ಗೆದ್ದಿತ್ತು. ಮತ್ತೊಂದು ಪಂದ್ಯ ಡ್ರಾ ಆಗಿತ್ತು. ಕೊನೆಯ ಟೆಸ್ಟ್ ಪಂದ್ಯವನ್ನು ಶುಭಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಗೆದ್ದ ಹಿನ್ನೆಲೆಯಲ್ಲಿ ಸರಣಿ 2-2 ಸಮಬಲ ಆಗಿದೆ.
ಅಭಿನಂದನೆಗಳ ಸುರಿಮಳೆ
ಟೀಮ್ ಇಂಡಿಯಾ 6 ರನ್‌ಗಳಿಂದ ರೋಚಕವಾಗಿ ಗೆದ್ದ ಬಳಿಕ ಮೊಹಮ್ಮದ್ ಸಿರಾಜ್ ಹಾಗೂ ಟೀಮ್ ಇಂಡಿಯಾಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಮಾಜಿ ಆಟಗಾರರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಸೇರಿದಂತೆ ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ ಸೇರಿದಂತೆ ಹಲವು ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆಯರು ಅಭಿನಂದನೆಗಳ ಮಹಾಪೂರವೇ ಹರಿಸಿದ್ದಾರೆ. ಜೊತೆಗೆ ರಾಜಕೀಯ, ಸಿನಿಮಾ ನಟರು ಕೂಡ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸೋಷಿಯಲ್ ಮೀಡಿಯಾಗಳಲ್ಲೂ ಕೂಡ ಜನರು ಟೀಮ್ ಇಂಡಿಯಾದ ‘ಪರ್ಫಾಮೆನ್ಸ್’ಗೆ ಫಿದಾ ಆಗಿ, ಸಿರಾಜ್ ಅವರನ್ನು ನ್ಯಾಷನಲ್ ಹೀರೋ ಎಂದು ಬಣ್ಣಿಸಿದ್ದಾರೆ.
ಇದನ್ನು ಓದಿದ್ದೀರಾ? 5ನೇ ಟೆಸ್ಟ್ | ಸಿರಾಜ್ ಮ್ಯಾಜಿಕ್: ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾಗೆ 6 ರನ್‌ಗಳ ರೋಚಕ ಜಯ
ತೆಲಂಗಾಣದ ಹೈದರಾಬಾದ್‌ನವರಾದ ಮೊಹಮ್ಮದ್ ಸಿರಾಜ್, ತೆಲಂಗಾಣ ಪೊಲೀಸ್ ಇಲಾಖೆಯಲ್ಲಿ ಗೌರವ ಡಿಎಸ್‌ಪಿಯಾಗಿಯೂ ಈ ಹಿಂದೆ ನೇಮಕಗೊಂಡಿದ್ದರು. ಟೀಮ್ ಇಂಡಿಯಾದ ಗೆಲುವಿನ ಬೆನ್ನಲ್ಲೇ ತೆಲಂಗಾಣ ಪೊಲೀಸರು ಅಭಿನಂದನೆ ಸಲ್ಲಿಸಿದ್ದಾರೆ.
