ಹಲವು ಪ್ರಮುಖ ಪಂದ್ಯಗಳಲ್ಲಿ ಸೋಲನ್ನಪ್ಪುವ ಮೂಲಕ ‘ಚೋಕರ್ಸ್’ ಪಟ್ಟವನ್ನು ಕಟ್ಟಿಕೊಂಡಿದ್ದ ಸೌತ್ ಆಫ್ರಿಕಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಕಳೆದ ಬಾರಿಯ ಚಾಂಪಿಯನ್ ಬಲಿಷ್ಠ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
‘ಕ್ರಿಕೆಟ್ ಕಾಶಿ’ ಇಂಗ್ಲೆಂಡ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನ ನಾಲ್ಕನೇ ದಿನದಾಟದ ಆರಂಭಕ್ಕೂ ಮುನ್ನ ಗೆಲ್ಲಲು ಕೇವಲ 69 ರನ್‌ಗಳ ಅಗತ್ಯವಿತ್ತು. ನಾಲ್ಕನೇ ದಿನದಾಟದಲ್ಲಿ ಕೇವಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ತೆಂಬಾ ಬವುಮಾ ನೇತೃತ್ವದ ಹರಿಣಗಳ ಪಡೆ, ಗೆಲ್ಲಲು ಬೇಕಿದ್ದ 282 ರನ್‌ಗಳ ಗುರಿಯನ್ನು ತಲುಪುವ ಮೂಲಕ ಸುಮಾರು 27 ವರ್ಷಗಳ ಬಳಿಕ ಐಸಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಮೂರನೇ ದಿನದಾಟದ ಕೊನೆಯಲ್ಲಿ ಅರ್ಧಶತಕ ದಾಖಲಿಸಿದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಹಾಗೂ ಚೆಂದದ ಶತಕ ಬಾರಿಸಿದ್ದ ಏಡನ್ ಮಾರ್ಕರಂ ನಾಲ್ಕನೇ ದಿನದಾಟದ ಆರಂಭವನ್ನು ಮಾಡಿದ್ದರು. ಆದರೆ, ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಅವರು ತೆಂಬಾ ಬವುಮಾ ಅವರನ್ನು ಹೆಚ್ಚು ಹೊತ್ತು ನಿಲ್ಲಲು ಬಿಡಲಿಲ್ಲ. ನಿನ್ನೆಯ ರನ್‌ಗೆ ಕೇವಲ ಒಂದು ರನ್(66 ರನ್) ಸೇರಿಸಿದ ಬಳಿಕ ಔಟ್ ಮಾಡಿದರು.
ಆಸೀಸ್‌ನ ಪ್ರಚಂಡ ವೇಗಿಗಳನ್ನು ದಿಟ್ಟವಾಗಿ ಎದುರಿಸಿದ್ದ ತೆಂಬಾ ಬವುಮಾ ಹಾಗೂ ಏಡನ್ ಮಾರ್ಕರಂ ಜೋಡಿ 3ನೇ ವಿಕೆಟ್‌ಗೆ 147 ರನ್ ಸೇರಿಸುವಲ್ಲಿ ಯಶಸ್ವಿಯಾದರು.
ಸತತ ಎರಡನೇ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟಕ್ಕೇರುವ ಆಸ್ಟ್ರೇಲಿಯಾ ತಂಡದ ಕನಸಿಗೆ ದಕ್ಷಿಣ ಆಫ್ರಿಕಾದ ಏಡನ್ ಮಾರ್ಕರಂ ಅಡ್ಡಿಯಾದರು. ಶುಕ್ರವಾರ ಶತಕ ಬಾರಿಸಿ ಬ್ಯಾಟಿಂಗ್ ಮುಂದುವರಿಸಿದ್ದ ಬಲಗೈ ಬ್ಯಾಟರ್, ತಮ್ಮ ತಂಡವನ್ನು ಗೆಲುವಿನ ದಡವನ್ನು ತಲುಪಿಸುವಲ್ಲಿ ಯಶಸ್ವಿಯಾದರು.
ಟಿ20 ಕ್ರಿಕೆಟ್‌ನಲ್ಲಿ ಬಿರುಸಿನ ಬ್ಯಾಟಿಂಗ್‌ಗೆ ಹೆಸರು ಗಳಿಸಿದ್ದ ಏಡನ್ ಮಾರ್ಕರಂ, ಫೈನಲ್ ಟೆಸ್ಟ್ ಪಂದ್ಯದಲ್ಲಿ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿ ಗಮನ ಸೆಳೆದರು. ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಮಾರ್ಕರಂ, 207 ಎಸೆತಗಳನ್ನು ಎದುರಿಸಿ 136 ರನ್ ಗಳಿಸಿದರು. ಇದರಲ್ಲಿ 14 ಬೌಂಡರಿಗಳು ಒಳಗೊಂಡಿದ್ದವು.
ತಂಡಕ್ಕೆ ಗೆಲ್ಲಲು 6 ರನ್‌ಗಳ ಅವಶ್ಯಕತೆ ಇದ್ದಾಗ ಜೋಶ್ ಹ್ಯಾಝಲ್‌ವುಡ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ, ಟ್ರಾವಿಸ್ ಹೆಡ್‌ಗೆ ಕ್ಯಾಚಿತ್ತು ಔಟಾದರು. ಕೊನೆಯಲ್ಲಿ ಬೀಡಿಂಗ್ ಹ್ಯಾಮ್ ಔಟಾಗದೇ 19 ರನ್(50 ಎಸೆತ), ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವೆರಾಯನ್ನೇ ಔಟಾಗದೇ 4 ರನ್ ಗಳಿಸಿದರು.

ಕೊನೆಗೂ ಕಳಚಿದ ‘ಚೋಕರ್ಸ್ ಪಟ್ಟ’
ದಕ್ಷಿಣ ಆಫ್ರಿಕಾ ತಂಡ ಇಲ್ಲಿಯವರೆಗೆ ವಿಶ್ವಕಪ್, ಟಿ20 ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಆಫ್ರಿಕಾ ಸೆಮಿಫೈನಲ್ ಪ್ರವೇಶಿಸುತ್ತಿತ್ತು. ಆದರೆ ಸೆಮಿಫೈನಲ್‌ನಲ್ಲಿ ಪ್ರತಿ ಬಾರಿಯೂ ಸೋಲು ಕಾಣುತ್ತಿತ್ತು.
ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಐದು ಬಾರಿ ಸೆಮಿಫೈನಲ್‌ನಲ್ಲೇ ಸೋತಿತ್ತು. 1992, 1999, 2007, 2015, 2023 ರಲ್ಲಿ ಸೋಲು ಕಂಡಿತ್ತು. ವಿಶ್ವಕಪ್‌ನ ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರಿ ಪದೇ ಪದೆ ನಾಕೌಟ್ ಪಂದ್ಯಗಳಲ್ಲಿ ಎಡವುತ್ತಿದ್ದ ಕಾರಣ ಆಫ್ರಿಕಾಗೆ ‘ಚೋಕರ್ಸ್’ ಪಟ್ಟ ಅಂಟಿಕೊಂಡಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಿಮಾನಯಾನದ ವಿಶ್ವಾಸ ಕುಂದುತ್ತಿದೆ – ಗಂಭೀರ ಚಿಂತನೆ, ಕ್ರಮಗಳ ಅಗತ್ಯವಿದೆ!
2024ರ ಜೂನ್ 29ರಂದು ಬಾರ್ಬಡೋಸ್ ಮೈದಾನದಲ್ಲಿ ಟೀಮ್ ಇಂಡಿಯಾ ವಿರುದ್ಧ ನಡೆದಿದ್ದ ಐಸಿಸಿ ಟಿ20 ಫೈನಲ್ ಪಂದ್ಯದಲ್ಲೂ ಕೂಡ ದಕ್ಷಿಣ ಆಫ್ರಿಕಾ ತಂಡಕ್ಕೆ 30 ಎಸೆತಗಳಲ್ಲಿ 30 ರನ್ ಬೇಕಿತ್ತು. ಕೈಯಲ್ಲಿ 6 ವಿಕೆಟ್ ಇತ್ತು. ಆದರೂ 7 ರನ್‌ಗಳ ಅಂತರದಿಂದ ಸೋಲನ್ನಪ್ಪುವ ಮೂಲಕ ಚಾಂಪಿಯನ್ ಆಗುವ ಅವಕಾಶವನ್ನು ಕಳೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕಳೆದ ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಸೋಲಿಸಿ, ದಕ್ಷಿಣ ಆಫ್ರಿಕಾ ಚಾಂಪಿಯನ್ ಆದ ಈ ಕ್ಷಣಕ್ಕೆ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರರಾದ ಶಾನ್ ಪೊಲಾಕ್, ಎ ಬಿ ಡಿವಿಲಿಯರ್ಸ್, ಸ್ಟೀವ್ ಸ್ಮಿತ್ ಸೇರಿದಂತೆ ಹಲವರು ಸಾಕ್ಷಿಯಾದರು.
