ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿರುವ ಆರ್‌ಸಿಬಿ ತಂಡದ ಬೌಲರ್ ಯಶ್ ದಯಾಳ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಗಾಜಿಯಾಬಾದ್ ಪೊಲೀಸರು ತಿಳಿಸಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿದ್ದ ಯಶ್ ದಯಾಳ್, ದೈಹಿಕ ಸಂಪರ್ಕ ಬೆಳೆಸಿದ ನಂತರ ಇದೀಗ ಮದುವೆಯಾಗಲು ಹಿಂದೇಟು ಹಾಕುತ್ತಿದ್ದು, ಈ ಮೂಲಕ ವಂಚಿಸಿದ್ದಾರೆ ಎಂದು ಗಾಜಿಯಾಬಾದ್ ಮಹಿಳೆಯೊಬ್ಬರು ದೂರು ನೀಡಿದ್ದರು. ಇದಾಗಿ 10 ದಿನಗಳ ಬಳಿಕ ಎಫ್‌ಐಆರ್ ದಾಖಲಾಗಿದೆ.
ಯಶ್ ದಯಾಳ್ ಪೊಲೀಸರ ಮುಂದೆ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಅದನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಗಾಜಿಯಾಬಾದ್‌ನ ಪೊಲೀಸ್ ಉಪ ಆಯುಕ್ತ ಪಾಟೀಲ್ ನಿಮಿಶ್ ದಶರತ್ ಅವರು ಹೇಳಿದ್ದಾರೆ. ‘ನಾವು ಯಶ್ ದಯಾಳ್ ಅವರ ವಿರುದ್ಧ ಬಿಎನ್ಎಸ್ ಸೆಕ್ಷನ್ 69 (ಲೈಂಗಿಕ ಸಂಪರ್ಕ, ವಿವಾಹದ ಸುಳ್ಳು ಭರವಸೆ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮತ್ತಷ್ಟು ತನಿಖೆ ನಡೆಸುತ್ತಿದ್ದೇವೆ,” ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಯ ಆನ್‌ಲೈನ್ ಕುಂದುಕೊರತೆ ಪೋರ್ಟಲ್ ಐಜಿಆರ್‌ಎಸ್‌ನಲ್ಲಿ ಕ್ರಿಕೆಟಿಗನ ವಿರುದ್ಧ ಮಹಿಳೆ ಮೊದಲ ಬಾರಿಗೆ ದೂರು ದಾಖಲಿಸಿದ್ದರು. ಇದರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ಎಫ್‌ಐಆರ್‌ನಲ್ಲಿ, ಐದು ವರ್ಷಗಳಿಂದ ಇಬ್ಬರೂ ಒಟ್ಟಿಗೆ ಇದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ENG TEST | ಗಿಲ್ ನಿರ್ಮಿಸಿದ 10 ದಾಖಲೆಗಳು; 93 ವರ್ಷಗಳ ಬಳಿಕ ಟೀಂ ಇಂಡಿಯಾ ಸಾಧನೆ
ಈ ಸಮಯದಲ್ಲಿ ಯಶ್ ದಯಾಳ್ ಮಹಿಳೆಯನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಸಿಕೊಂಡಿದ್ದರು. ಇದಕ್ಕೆ ಚಾಟ್ ರೆಕಾರ್ಡ್ಸ್, ಸ್ಕ್ರೀನ್‌ಶಾಟ್‌ಗಳು, ವಿಡಿಯೋ ಕರೆಗಳು ಮತ್ತು ಫೋಟೋಗಳ ಸಾಕಷ್ಟು ಪುರಾವೆಗಳನ್ನೂ ನೀಡಿದ್ದಾರೆ.
“ಮದುವೆಯಾಗುವ ಭರವಸೆ ನೀಡಿ ನನ್ನೊಂದಿಗೆ ಪದೇ ಪದೇ ದೈಹಿಕ ಸಂಬಂಧ ಬೆಳೆಸಿದ್ದರು. ಅವರ ಕುಟುಂಬಕ್ಕೂ ನನ್ನನ್ನು ಪರಿಚಯಿಸಿದ್ದರು. ನಾನು ಅವರ ಸೊಸೆ ಎಂದು ಭರವಸೆ ನೀಡಿದ್ದರು. ಇದನ್ನೇ ನಂಬಿ ನಾನು ಸಂಬಂಧ ಉಳಿಸಿಕೊಂಡಿದ್ದೆ,” ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.
ಆದರೆ, ಈಗ ಮದುವೆಯಾಗಲು ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ನಾನು ಖಿನ್ನತೆಯಿಂದ ಬಳಲುತ್ತಿದ್ದು, ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ಕೂಡ ಯತ್ನಿಸಿದ್ದೆ ಎಂದು ತಿಳಿಸಿದ್ದಾರೆ.
ಯಶ್ ದಯಾಳ್ ಈ ವರ್ಷ ಆರ್‌ಸಿಬಿ ಪರ 15 ಪಂದ್ಯಗಳನ್ನು ಆಡಿದ್ದರು. ಇದರಲ್ಲಿ 13 ವಿಕೆಟ್‌ಗಳನ್ನು ಗಳಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆಲ್ಲಲು ಪ್ರಮುಖ ಕಾರಣರಾಗಿದ್ದರು.
