ಚೆನ್ನೈನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯಗೊಂಡಿದೆ. ದಿನದಾಟದಂತ್ಯಕ್ಕೆ ಟಾಸ್ ಸೋತು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡಿದ್ದು, ಆರ್ ಅಶ್ವಿನ್ ಅವರ ಶತಕ ಹಾಗೂ ಜಡೇಜಾ ಅರ್ಧಶತಕದ ನೆರವಿನಿಂದ 339 ರನ್ ಕಲೆಹಾಕಿದೆ.
195 ರನ್ಗಳ ಜೊತೆಯಾಟ ನಡೆಸಿದ ಅಶ್ವಿನ್ ಹಾಗೂ ಜಡೇಜಾ ಮೊದಲ ದಿನದಾಟದ ಅಂತ್ಯದ ವೇಳೆಗೆ ಹೀರೋಗಳೆನಿಸಿಕೊಂಡರೆ, ಬಾಂಗ್ಲಾ ಪರ ಬೌಲಿಂಗ್‌ನಲ್ಲಿ ಯುವ ಆಟಗಾರ ಹಸನ್ ಮಹಮೂದ್ ಅವರು ಪ್ರಮುಖ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಮಿಂಚಿದ್ದಾರೆ.
ಮೊದಲ ದಿನದಾಟದ ಅಂತ್ಯದ ವೇಳೆಗೆ ರವಿಚಂದ್ರನ್ ಅಶ್ವಿನ್ 112 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 10 ಬೌಂಡರಿಗಳ ನೆರವಿನಿಂದ 102 ರನ್ ಗಳಿಸಿ ಔಟಾಗದೆ ಉಳಿದಿದ್ದು, ಮೊದಲ ದಿನವೇ ಮೂಲಕ ತಮ್ಮ ತವರು ರಾಜ್ಯದಲ್ಲಿ ಮಿಂಚಿದ್ದಾರೆ. 117 ಎಸೆತಗಳಲ್ಲಿ 86 ರನ್(2 ಸಿಕ್ಸರ್ ಹಾಗೂ 10 ಬೌಂಡರಿ) ಗಳಿಸಿರುವ ರವೀಂದ್ರ ಜಡೇಜಾ, ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಭಾರತಕ್ಕೆ ಆರಂಭಿಕ ಆಘಾತ ನೀಡಿದ್ದ ಯುವ ಬೌಲರ್ ಹಸನ್ ಮಹಮೂದ್
ಮೊದಲು ಟೆಸ್ಟ್‌ನಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಫೀಲ್ಡಿಂಗ್ ಮಾಡಲು ಮುಂದಾಯಿತು. ಮೊದಲಾವಧಿಯ ಸಂಪೂರ್ಣ ಲಾಭ ಪ್ರವಾಸಿ ತಂಡದ ಪಾಲಾಗಿತ್ತು. ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಬಾಂಗ್ಲಾ ಬೌಲರ್‌ಗಳ ಕರಾರುವಕ್ಕಾದ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು.

ಚೆನ್ನೈನ ಕೆಂಪು ಮಣ್ಣಿನ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಆರಂಭದಲ್ಲಿ ಒತ್ತಡಕ್ಕೆ ಒಳಗಾಯಿತು. ಬಾಂಗ್ಲಾ ವೇಗಿಗಳ ಶಿಸ್ತು ಬದ್ಧ ದಾಳಿಯನ್ನು ಎದುರಿಸುವಲ್ಲಿ ವಿಫಲರಾದ ಟೀಮ್ ಇಂಡಿಯಾ ಬ್ಯಾಟರ್‌ಗಳು 96 ರನ್ ಗಳಿಸುಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿದ್ದರು. ಇದಕ್ಕೆ ಕಾರಣವಾದದ್ದು ಬಾಂಗ್ಲಾದ ಯುವ ಬೌಲರ್ ಹಸನ್ ಮಹಮೂದ್.
ಇದನ್ನು ಓದಿದ್ದೀರಾ? ಬೆಂಗಳೂರು | ಮುಸ್ಲಿಮರು ವಾಸಿಸುವ ಪ್ರದೇಶವನ್ನು ‘ಪಾಕಿಸ್ತಾನ’ ಎಂದ ಹೈಕೋರ್ಟ್ ನ್ಯಾಯಾಧೀಶ
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ(6 ರನ್), ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(6 ರನ್), 39 ರನ್ ಗಳಿಸಿದ್ದ ರಿಷಭ್ ಪಂತ್ ಹಾಗೂ ಶುಭ್‌ಮನ್ ಗಿಲ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕೀಳುವ ಮೂಲಕ ಮಿಂಚಿದರು.
ಉಳಿದಂತೆ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಅರ್ಧಶತಕ(56 ರನ್) ಗಳಿಸಿದರೆ, ಕೆ ಎಲ್ ರಾಹುಲ್ 16 ರನ್ ಗಳಿಸಿದರು. ಜೈಸ್ವಾಲ್ ನಹೀದ್ ರಾಣಾಗೆ ವಿಕೆಟ್ ಒಪ್ಪಿಸಿದರೆ, ರಾಹುಲ್ ಹಸನ್ ಮಿರಾಝ್‌ಗೆ ವಿಕೆಟ್ ಒಪ್ಪಿಸಿದರು.
