ವೆಸ್ಟ್ ಇಂಡೀಸ್ ನೀಡಿದ ಕೇವಲ 115 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ 22.5 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ಗೆಲುವು ದಾಖಲಿಸಿ ಮೊದಲ ಏಕದಿನ ಪಂದ್ಯದಲ್ಲಿ ಶುಭಾರಂಭ ಮಾಡಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಎರಡು ವಿಶಿಷ್ಟ ದಾಖಲೆಗಳನ್ನು ಕೂಡ ಮುಡಿಗೇರಿಸಿಕೊಂಡಿತು.
ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಶಾಯ್ ಹೋಪ್ ನೇತೃತ್ವದ ವೆಸ್ಟ್ ಇಂಡೀಸ್, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಸ್ಪಿನ್ ದಾಳಿಗೆ ಕುಸಿತ ಕಂಡಿತು. ಕೇವಲ 23 ಓವರ್‌ಗಳಲ್ಲಿ 114 ರನ್‌ಗಳಿಗೆ ವಿಂಡೀಸ್ ಆಲೌಟ್ ಆಯಿತು. ಕಡಿಮೆ ಗುರಿ ಬೆನ್ನಟ್ಟಿದ ಭಾರತ 22.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಇದರೊಂದಿಗೆ ಮೂರು ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಈ ಸುದ್ದಿ ಓದಿದ್ದೀರಾ? ಇಂದಿನಿಂದ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ : ಟೀಮ್ ಇಂಡಿಯಾದ ಪ್ರಮುಖ ಬೌಲರ್ ಸಿರಾಜ್ ಔಟ್!
ನಾಯಕ ರೋಹಿತ್ ಶರ್ಮಾ ಬದಲಿಗೆ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಿದರು. ಕಿಶನ್ ಜೊತೆಗೆ ಬಂದ ಶುಭಮನ್ ಗಿಲ್ 7 ರನ್ ಗಳಿಸಿ ಪೆವಿಲಿಯನ್‌ಗೆ ತೆರಳಿದರು. ಇದರೊಂದಿಗೆ ಟೆಸ್ಟ್ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ಗಿಲ್, ಏಕದಿನ ಸರಣಿಯಲ್ಲೂ ತಮ್ಮ ಕಳಪೆ ಪ್ರದರ್ಶನ ಮುಂದುವರೆಸಿದರು.
ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ 19 ರನ್ ಗಳಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದುಲ್ ಠಾಕೂರ್ ಕೂಡ ಹೆಚ್ಚು ಹೊತ್ತು ನಿಲ್ಲದೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ನಾಯಕ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ತಂಡವನ್ನು ಗೆಲುವಿನ ದಡ ಸೇರಿಸಿದರು.
ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ಇಶಾನ್ ಕಿಶನ್ ಅರ್ಧ ಶತಕ ಸಿಡಿಸಿದರು. ಇವರ 46 ಎಸೆತಗಳ 52 ರನ್‌ಗಳ ಬ್ಯಾಟಿಂಗ್‌ನಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 52 ರನ್‌ಗಳು ಮೂಡಿ ಬಂದವು.
ವಿಂಡೀಸ್ ಎರಡನೇ ಅತಿ ಕಡಿಮೆ ಮೊತ್ತ
ಇದಕ್ಕೂ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್, ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಸ್ಪಿನ್ ದಾಳಿಗೆ 23 ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟ್ ಆಯಿತು. ನಾಯಕ ಶಾಯ್ ಹೋಪ್ (43), ಅಲಿಕ್ ಅಥಾನಾಜೆ (22), ಬ್ರಾಡನ್ ಕಿಂಗ್ (17) ಒಂಚೂರು ಪ್ರತಿರೋಧ ತೋರಿದ್ದು ಬಿಟ್ಟರೆ ಉಳಿದವರೆಲ್ಲ ಬಂದ ದಾರಿಯಲ್ಲಿಯೇ ಹಿಂತಿರುಗಿದರು. ಕುಲದೀಪ್ ಯಾದವ್ 6/4 ಹಾಗೂ 37/3 ವಿಕೆಟ್ ಕಬಳಿಸಿ ಜಯದ ರೂವಾರಿಯಾದರು. 4 ವಿಕೆಟ್ ಪಡೆದ ಕುಲದೀಪ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು
114 ರನ್ ದಾಖಲಿಸಿದ ವೆಸ್ಟ್ ಇಂಡೀಸ್ ತಂಡ ಭಾರತದ ವಿರುದ್ಧ ಎರಡನೇ ಅತಿ ಕಡಿಮೆ ಮೊತ್ತವನ್ನು ದಾಖಲಿಸಿತು. 2018ರಲ್ಲಿ ತಿರುವನಂತಪುರಂನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 104 ರನ್‌ಗಳಿಗೆ ಭಾರತ ಆಲೌಟ್ ಮಾಡಿತ್ತು.
ಈ ಪಂದ್ಯದಲ್ಲಿ ಭಾರತದ ಸ್ಪಿನ್ ಜೋಡಿ ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಅಪರೂಪದ ದಾಖಲೆಯೊಂದನ್ನು
ಬರೆದರು. ಪಂದ್ಯದಲ್ಲಿ ಒಟ್ಟು ಏಳು ವಿಕೆಟ್ ಕಿತ್ತ ಈ ಜೋಡಿ ಪಂದ್ಯವೊಂದರಲ್ಲಿ ಏಳು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಕಿತ್ತ ಭಾರತದ ಮೊದಲ ಎಡಗೈ ಸ್ಪಿನ್ನರ್‌ಗಳು ಎಂಬ ದಾಖಲೆ ಬರೆದರು. ಈ ದಾಖಲೆ 49 ವರ್ಷಗಳಲ್ಲಿ ಇದೇ ಮೊದಲಾಗಿದೆ.