- ಮೂರು ಟಿ20, ಮೂರು ಏಕದಿನ ಪಂದ್ಯ, ಎರಡು ಟೆಸ್ಟ್ ಸರಣಿ
- ಗಾಂಧಿ-ಮಂಡೇಲಾ ಹೆಸರಿನಲ್ಲಿ ಫ್ರೀಡಮ್ ಸರಣಿ ಟೆಸ್ಟ್
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ)ವು 2023ರ ಡಿಸೆಂಬರ್ ಮತ್ತು 2024ರ ಜನವರಿಯಲ್ಲಿ ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಲಿರುವ ಎಲ್ಲ ಮಾದರಿಯ ಪ್ರವಾಸದ ವೇಳಾಪಟ್ಟಿಯನ್ನು ಪ್ರಕಟಿಸಿದೆ.
“ಟೀಮ್ ಇಂಡಿಯಾದ ಈ ಪ್ರವಾಸವು ಮೂರು ಪಂದ್ಯಗಳ T20 ಸರಣಿಯೊಂದಿಗೆ ಪ್ರಾರಂಭವಾಗುತ್ತದೆ. ನಂತರ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಎರಡು ಟೆಸ್ಟ್ ಪಂದ್ಯವು ಗಾಂಧಿ-ಮಂಡೇಲಾ ಟ್ರೋಫಿಗಾಗಿ ಫ್ರೀಡಮ್ ಸರಣಿಯೊಂದಿಗೆ ಮುಕ್ತಾಯಗೊಳ್ಳುತ್ತದೆ” ಎಂದು ಬಿಸಿಸಿಐ ಮತ್ತು ಕ್ರಿಕೆಟ್ ಸೌತ್ ಆಫ್ರಿಕಾ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.
“ಫ್ರೀಡಂ ಸರಣಿಯು ಎರಡು ಅತ್ಯುತ್ತಮ ಟೆಸ್ಟ್ ತಂಡಗಳನ್ನು ಒಳಗೊಂಡಿರುವುದು ಮಾತ್ರವಲ್ಲ, ನಮ್ಮ ರಾಷ್ಟ್ರಗಳನ್ನು ಮತ್ತು ಸುತ್ತಮುತ್ತಲಿನ ಜಗತ್ತನ್ನು ರೂಪಿಸಿದ ಇಬ್ಬರು ಮಹಾನ್ ನಾಯಕರಾದ ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರನ್ನು ಗೌರವಿಸುವುದರಿಂದಲೂ ಮಹತ್ವದ್ದಾಗಿದೆ” ಎಂದು ಬಿಸಿಸಿಐನ ಗೌರವ ಕಾರ್ಯದರ್ಶಿ ಜಯ್ ಷಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೂರು T20 ಪಂದ್ಯಗಳು ಡಿ.10ರಂದು ಡರ್ಬನ್‌ನಲ್ಲಿ, ಡಿ. 12ರಂದು ಗೆಬರ್ಹಾದಲ್ಲಿ ಮತ್ತು ಡಿ. 14ರಂದು ಜೋಹಾನ್ಸ್‌ಬರ್ಗ್ ನಲ್ಲಿ ನಡೆಯಲಿವೆ.
ಮೂರು ಏಕದಿನ ಪಂದ್ಯದ ಸರಣಿ ಕೂಡ ನಡೆಯಲಿದೆ. ಮೊದಲ ಏಕದಿನ ಪಂದ್ಯವು ಡಿ.17ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದ್ದು, ಎರಡನೇ ಪಂದ್ಯವು ಡಿ. 19ರಂದು ಗೆಬರ್ಹಾದಲ್ಲಿ ಮತ್ತು ಡಿ.21ರಂದು ಪಾರ್ಲ್‌ನಲ್ಲಿ ನಡೆಯಲಿದೆ.
ಎರಡು ಪಂದ್ಯಗಳ ಗಾಂಧಿ-ಮಂಡೇಲಾ ಟೆಸ್ಟ್ ಸರಣಿಯ ಪೈಕಿ ಮೊದಲ ಟೆಸ್ಟ್ ಡಿ.26ರಿಂದ 30ರವರೆಗೆ ಸೆಂಚುರಿಯನ್‌ನಲ್ಲಿ ಹಾಗೂ ಎರಡನೇ ಟೆಸ್ಟ್ 2024ರ ಜನವರಿ ಮೂರರಿಂದ ಏಳರವರೆಗೆ ಕೇಪ್ ಟೌನ್‌ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.